ಸುರಪುರ: ತಂದೆ, ಮಾಜಿ ಶಾಸಕ ರಾಜಾ ಕುಮಾರನಾಯಕ ಅವರ ರಾಜಕೀಯ ಗರಡಿಯಲ್ಲಿ ಪಳಗಿದ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತ, ಸಾಮಾನ್ಯರೊಂದಿಗೆ ಸಾಮಾನ್ಯರಂತೆ, ಕಾರ್ಯಕರ್ತರ ಜತೆ ನಗುತ್ತಾ, ಜನರೊಂದಿಗೆ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಶಾಸಕ ರಾಜಾ ವೆಂಕಟಪ್ಪನಾಯಕ (67) ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ರಾಜಕೀಯದಲ್ಲಿ ಏಳು ಬೀಳುಗಳನ್ನು ಕಂಡರೂ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದರು. ಜನರ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿದ್ದರು.
ವಾಲ್ಮೀಕಿ ನಾಯಕ ಸಮುದಾಯದ ವೆಂಕಟಪ್ಪನಾಯಕ ನವೆಂಬರ್ 23, 1957 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸುರಪುರದ ಆನಂದ ವಿದ್ಯಾಲಯದಲ್ಲಿ, ಪ್ರೌಢ ಶಿಕ್ಷಣವನ್ನು ಹೈದರಾಬಾದ್‍ನಲ್ಲಿ, ಪಿಯುಸಿಯನ್ನು ಕಲಬುರಗಿಯ ನೂತನ ವಿದ್ಯಾಲಯದಲ್ಲಿ ಮುಗಿಸಿದರು. ಕಲಬುರಗಿಯ ಎಂ.ಆರ್. ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೇರಿದ್ದರೂ ಪೂರ್ಣಗೊಳಿಸಿರಲಿಲ್ಲ.
ತಂದೆ ರಾಜಾ ಕುಮಾರನಾಯಕ 1957 ಮತ್ತು 1978 ರಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದರು. ತಂದೆಯ ಗರಡಿಯಲ್ಲಿ ಪಳಗಿ 1987ರಲ್ಲಿ ಪೇಠ ಅಮ್ಮಾಪುರ ಮಂಡಲ ಪಂಚಾಯಿತಿ ಪ್ರಧಾನರಾದರು. 1988ರಲ್ಲಿ ಅವರ ತಂದೆ ನಿಧನರಾದರು.
ಅಷ್ಟೊತ್ತಿಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವ ರಾಜಾ ಮದನಗೋಪಾಲನಾಯಕ ಗುರುತಿಸಿಕೊಂಡಿದ್ದರು. 1994ರಲ್ಲಿ ಬಂಗಾರಪ್ಪನವರ ಕೆಸಿಪಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪುನರಾಯ್ಕೆಯಾದರು. 2004 ಮತ್ತು 2009 ರಲ್ಲಿ ಸೋತರು. 2013ರಲ್ಲಿ ಮತ್ತೆ ಶಾಸಕರಾದರು. 2018ರಲ್ಲಿ ಸೋಲುಂಡು, 2023ರಲ್ಲಿ ಪ್ರಚಂಡ ಬಹುಮತದಿಂದ ಚುನಾಯಿತರಾದರು.
ನೆಚ್ಚಿನ ನಾಯಕನ ಅಗಲಿಕೆಯ ಸುದ್ದಿ ತಿಳಿದ ಅವರ ಬೆಂಬಲಿಗರ ದುಃಖದ ಕಟ್ಟೆಯೊಡೆದಿತ್ತು. ಅವರ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ಈ ಮೊದಲು ಅವರ ಮೂವರು ಕಿರಿಯ ಸಹೋದರರು, ಸಹೋದರನ ಮಗನ ನಿಧನದಿಂದ ಕೆಂಗೆಟ್ಟ ಕುಟುಂಬಕ್ಕೆ ವೆಂಕಟಪ್ಪನಾಯಕ ಅವರ ಸಾವು ಬರಸಿಡಿಲಿನಂತೆ ಬಡಿದಿದೆ.
ವೆಂಕಟಪ್ಪನಾಯಕ ಅವರಿಗೆ ಪತ್ನಿ ರಾಣಿ ಲತಾನಾಯಕ, ಪುತ್ರರಾದ ರಾಜಾ ವೇಣುಗೋಪಾಲನಾಯಕ, ರಾಜಾ ಸಂತೋಷನಾಯಕ ಇದ್ದಾರೆ. ಇಬ್ಬರೂ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ.
ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 4 ಗಂಟೆಗೆ ಸುರಪುರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಫೆ.1ರಂದು ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಜಾ ವೆಂಕಟಪ್ಪನಾಯಕ ಅವರು ಕ್ಷೇತ್ರಕ್ಕೆ ಮರಳಿ ಬರಲೇ ಇಲ್ಲ. ಕಿಡ್ನಿ ಸ್ಟೋನ್ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಚೇತರಿಸಿಕೊಂಡಿದ್ದರು. ಆದರೆ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ವೈದ್ಯರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.