ADVERTISEMENT

ಮೊಬೈಲ್ ಸ್ವಿಚ್ ಆಫ್ ಮಾಡದಿರಲು ಅಧಿಕಾರಿಗಳಿಗೆ ಸೂಚನೆ

ಸುರಪುರ: ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 14:17 IST
Last Updated 29 ಅಕ್ಟೋಬರ್ 2024, 14:17 IST
ಸುರಪುರದಲ್ಲಿ ಮಂಗಳವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು
ಸುರಪುರದಲ್ಲಿ ಮಂಗಳವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು   

ಸುರಪುರ: ‘ಗ್ರಾಮಗಳ ಮೂಲ ಸೌಕರ್ಯಗಳಿಗೆ ಒತ್ತು ನೀಡಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ದಿನದ 24 ಗಂಟೆ ಮೊಬೈಲ್ ಚಾಲು ಇಟ್ಟು ಸಾರ್ವಜನಿಕರಿಗೆ ಸೇವೆ ನೀಡಬೇಕು. ಗ್ರಾಮಗಳಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಎಂಬುದರ ಬಗ್ಗೆ ವರದಿ ಸಲ್ಲಿಸಬೇಕು. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುರಪುರ-ಹುಣಸಗಿ ತಾಲ್ಲೂಕುಗಳ ಗ್ರಾಮೀಣ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೋಗಸ್ ಬಿಲ್ ಆಗ ಕೂಡದು. ಕಾಮಗಾರಿ ಪರಿಶೀಲಿಸಿದ ನಂತರವಷ್ಟೇ ಬಿಲ್ ನೀಡಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಎಲ್ಲಿ ಹೊಸ ಬೋರ್‌ವೆಲ್ ಅವಶ್ಯಕತೆ ಇದೆಯೋ ಅಲ್ಲಿ ಕೊರೆಯಿಸಿ. ಇದಕ್ಕಾಗಿ ಕ್ರಿಯಾ ಯೋಜನೆ ತಯಾರಿಸಿ ವರದಿ ನೀಡಬೇಕು’ ಎಂದು ಸೂಚಿಸಿದರು.

ADVERTISEMENT

‘ಶಾಲಾ ಮೈದಾನ, ಶಾಲಾ ಕಾಂಪೌಂಡ್ ಮತ್ತು ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಬೇಕು. ನರೇಗಾ ಕಾಮಗಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಅಭಿವೃದ್ಧಿ ಕಾರ್ಯಗಳ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಏನೇ ಸಮಸ್ಯೆ ಇದ್ದರೆ ನನಗೆ ತಿಳಿಸಬೇಕು. ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗಬೇಕು. ಪಿಡಿಒಗಳು ಮತ್ತು ಸಂಬಂಧಪಟ್ಟ ಇಲಾಖೆಯವರು ಸರಿಯಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್ ಮಾತನಾಡಿ,  ‘ಕ್ಷೇತ್ರದ ಅಭಿವೃದ್ಧಿಯಾಗಬೇಕು ಎಂಬುದು ಶಾಸಕರ ಗುರಿಯಾಗಿದೆ. ಸಿವಿಲ್ ಕಾಮಗಾರಿ ಮತ್ತು ಕುಡಿಯುವ ನೀರಿನ ಬಗ್ಗೆ ಅಪಾರ ಕಾಳಜಿ ವಹಿಸಿದ್ದಾರೆ. ಸುದೀರ್ಘವಾಗಿ ನಾಲ್ಕು ಗಂಟೆಗಳವರೆಗೂ ಇಂದು ಸಭೆ ನಡೆಸಿ ಪ್ರತಿಯೊಬ್ಬ ಪಿಡಿಒಗಳನ್ನು ಮಾತನಾಡಿಸಿ ಸಮಸ್ಯೆ ತಿಳಿದು ಅಭಿವೃದ್ಧಿಗೆ ಹಲವು ಸಲಹೆ ಸೂಚನೆಗಳನ್ನು ಕೊಟ್ಟಿರುತ್ತಾರೆ. ಹೀಗಾಗಿ ನಾವು ಅರ್ಥಮಾಡಿಕೊಂಡು ಕಡ್ಡಾಯವಾಗಿ ಕೆಲಸ ಮಾಡಬೇಕು’ ಎಂದರು.

ಸುರಪುರ ಮತ್ತು ಹುಣಸಗಿ ತಾಲ್ಲೂಕುಗಳ ಪಿಡಿಒಗಳು ತಮ್ಮ ಪಂಚಾಯಿತಿಗಳ ಪ್ರಗತಿ ಮಂಡಿಸಿದರು.

ಸಹಾಯಕ ನಿರ್ದೇಶಕ ಬಸಣ್ಣ ನಾಯಕ ಮತ್ತು ಆರ್‌ಡಿಪಿಐ ಎಇಇ ಹಣಮಂತ್ರಾಯ ಪಾಟೀಲ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.