ADVERTISEMENT

ಅಮಾನತ್ತಾಗಿದ್ದ ಸಿಬ್ಬಂದಿ ಮತ್ತೆ ಅದೇ ಸ್ಥಾನಕ್ಕೆ ನೇಮಕ: ಚೆನ್ನಪ್ಪ ಆರೋಪ

ಪಡಿತರ ಅಕ್ಕಿ ನಾಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಮೇ 2024, 14:05 IST
Last Updated 16 ಮೇ 2024, 14:05 IST
16ಎಸ್ಎಚ್ಪಿ 2:: ಚೆನ್ನಪ್ಪ ಆನೇಗುಂದಿ
16ಎಸ್ಎಚ್ಪಿ 2:: ಚೆನ್ನಪ್ಪ ಆನೇಗುಂದಿ   

ಶಹಾಪುರ: ನಗರದ ಟಿಎಪಿಸಿಎಂಎಸ್‌ನ ಆಹಾರ ಧಾನ್ಯ ಉಗ್ರಾಣದಲ್ಲಿ ಸುಮಾರು ₹ 2.6 ಕೋಟಿ ಮೌಲ್ಯದ 6,077 ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಡಿ.14ರಂದು ಆಹಾರ ನಿರೀಕ್ಷಕ ಜಂಬಯ್ಯ ಗಣಚಾರಿ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ವಿಚಿತ್ರವೆಂದರೆ ನಾಲ್ಕು ತಿಂಗಳ ಬಳಿಕ ಮತ್ತೆ ಅಮಾನತುಗೊಂಡಿದ್ದ ಜಂಬಯ್ಯ ಗಣಚಾರಿ ಅವರು, ಅದೇ ಸ್ಥಾನಕ್ಕೆ ಮರಳಿದ್ದಾರೆ ಎಂದು ಸಿಪಿಐ(ಎಂ) ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಆನೇಗುಂದಿ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಜಂಬಯ್ಯ ಗಣಚಾರಿ ಅವರ ಮಾತೃ ಇಲಾಖೆ ದೋರನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಅಧಿಕಾರಿ. ರಾಜಕೀಯ ಪ್ರಭಾವ ಬಳಸಿಕೊಂಡು ಅನ್ಯ ಇಲಾಖೆಗಳಿಗೆ ಜಂಪ್ ಮಾಡುವ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಲಾಭದಾಯಕ ಹುದ್ದೆಯ ಮೇಲೆ ಸದಾ ಕಣ್ಣೀಟ್ಟಿರುವ ಅವರು ಮತ್ತೆ ಆಹಾರ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಮಾನತುಗೊಂಡರೂ ಅದೇ ಹುದ್ದೆಗೆ ಮತ್ತೆ ನೇಮಕಗೊಂಡಿದ್ದಾರೆ. ಇದು ಯಾವ ಪುರಷಾರ್ಥ? ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿ ಕೇವಲ 15 ದಿನದಲ್ಲಿ ಪಡಿತರ ಅಕ್ಕಿ ಅಕ್ರಮ ಸಂಗ್ರಹದ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಇಂತಹ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಪಡಿತರ ಅಕ್ಕಿ ಅಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ. ಜಂಬಯ್ಯ ಗಣಚಾರಿ ಅವರನ್ನು ಮಾತೃ ಇಲಾಖೆಗೆ ಕಳುಹಿಸಬೇಕು. ಈಗಾಗಲೇ ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇರುವಾಗ ಆಹಾರ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬಾರದು. ಈಗಾಗಲೇ ಅವರು ಬೇರೆ ಬೇರೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತ ಬಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಮತ್ತೆ ನಾಲ್ಕು ತಿಂಗಳ ಹಿಂದೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವೆ. ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪ್ರಕರಣ ದಾಖಲಾಗಿದೆ

ADVERTISEMENT

-ಜಂಬಯ್ಯ ಗಣಚಾರಿ, ಆಹಾರ ಉಪ ನೀರಿಕ್ಷಕ ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.