ಹುಣಸಗಿ: ‘ನೀರಾವರಿ ಪ್ರದೇಶದ ಬೆಳೆಗಳು ಕಟಾವು ಹಂತದಲ್ಲಿದ್ದು ರೈತರಿಂದ ಉತ್ಪನ್ನ ಖರೀದಿಸುವ ಎಲ್ಲ ಖರೀದಾರರು ಕಡ್ಡಾವಾಗಿ ರಸೀದಿ ನೀಡಬೇಕು. ಈ ಕುರಿತು ದೂರು ಬಂದರೆ ಪರವಾನಿಗೆದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ರೈತರ, ರೈತ ಸಂಘದ ಪದಾಧಿಕಾರಿಗಳ, ವರ್ತಕರ, ಖರೀದಿದಾರರ ಸಭೆಯಲ್ಲಿ ಮಾತನಾಡಿದ ಅವರು, ‘ಸಭೆಯಲ್ಲಿ ತೆಗದುಕೊಂಡ ಎಲ್ಲ ತೀರ್ಮಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸೂಚಿಸಿದರು.
‘ರೈತರು ಹೆಚ್ಚಿನ ಬೆಲೆಗಾಗಿ ಅಪರಿಚಿತ, ಅನಾಮಧೇಯ ದಲ್ಲಾಳಿಗಳು ಹಾಗೂ ವರ್ತಕರೊಂದಿಗೆ ವ್ಯವಹಾರ ಮಾಡಬಾರದು’ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಭೀಮರಾಯ ಹವಾಲ್ದಾರ್ ಮಾತನಾಡಿ, ‘ತಾಲ್ಲೂನಲ್ಲಿರುವ ಎಲ್ಲ ರೈತರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳಿ’ ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ಮುಖಂಡ ಮಹಾದೇವಿ ಬೇನಾಳಮಠ ಮಾತನಾಡಿ, ‘ಕೆಲ ಖರೀದಿದಾರರು ಭತ್ತ ಖರೀದಿ ಸಂದರ್ಭದಲ್ಲಿ ಸೂಟ್ ಹಾಗೂ ಹಮಾಲಿ ಹೆಸರಿನಲ್ಲಿ ಹೆಚ್ಚಿನ ದರ ಹಾಗೂ ತೂಕ ಪಡೆಯುತ್ತಿದ್ದಾರೆ. ಇದರಿಂದ ರೈತರಿಗೆ ಶೋಷಣೆಯಾಗುತ್ತಿದೆ. ಇದನ್ನು ತಪ್ಪಿಸಿ ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಿ’ ಎಂದು ಕೋರಿದರು.
ಮಲ್ಲನಗೌಡ ಹಗರಟಗಿ ಮಾತನಾಡಿ, ‘ಈ ಭಾಗದಲ್ಲಿ 2018ರಿಂದ ಸಾಕಷ್ಟು ರೈತರಿಂದ ಬೆಳೆ ವಿಮೆ ಮಾಡಿಸಿಕೊಳ್ಳಲಾಗುತ್ತಿದೆ. ಆದರೆ ಬರ ಇದ್ದರೂ ಯಾವುದೇ ರೈತರಿಗೆ ಬೆಳೆ ವಿಮೆ ಜಮೆಯಗಿಲ್ಲ. ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಸರ್ಕಾರ ಎಲ್ಲ ರೈತರಿಗೆ ವಿಮೆ ಹಣ ಜಮೆ ಮಾಡಿಸಬೇಕು’ ಎಂದು ಆಗ್ರಹಿಸಿದರು.
ರೈತ ಮಾಳಿಂಗರಾಯ ವಜ್ಜಲ ಮಾತನಾಡಿ, ‘ಭತ್ತ ಖರೀದಿದಾರರು ಖರೀದಿಸಿದ ಉತ್ಪನ್ನಕ್ಕೆ ದಾಖಲೆ ನೀಡುವುದಿಲ್ಲ. ಕೊನೆ ಹಂತದಲ್ಲಿ ನಾಪತ್ತೆಯಾಗುತ್ತಾರೆ. ಇದರಿಂದ ಪ್ರತಿ ವರ್ಷ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರಸೀದಿ ಕೇಳಿದರೇ ನಮ್ಮ ಭತ್ತವನ್ನೇ ಖರೀದಿಸುವುದಿಲ್ಲ’ ಎಂದು ಗಮನ ಸೆಳೆದರು.
ಸಭೆಯಲ್ಲಿ ಮುದ್ದಣ್ಣ ಅಮ್ಮಾಪುರ, ಶರಣಮ್ಮ ಬೂದಿಹಾಳ, ನಿಂಗನಗೌಡ ಸದಬ, ಮಲಕರಡ್ಡಿ ಮುದನೂರು, ರುದ್ರೇಶ ಪಡಶೆಟ್ಟಿ, ಹಣಮತ್ರಾಯ ಚಂದಲಾಪುರ ರೈತರ ಸಮಸ್ಯೆ ಸೇರಿ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು.
ಎಪಿಎಂಸಿ ಕಾರ್ಯದರ್ಶಿ ಚಬನೂರು, ರಸಗೊಬ್ಬರ ಹಾಗೂ ಕ್ರಿಮಿನಾಷಕ ವಿತರಕರ ಸಂಘದ ಆರ್.ವೆಂಕಟರಾವ್, ಶರಣು ಅಂಗಡಿ, ಮಲ್ಲೇಶಪ್ಪ ಬಾಲಾಜಿ, ಮಹಾಂತೇಶ, ರಾಜು ಖಾಜಿ, ವೆಂಕಟೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.