ADVERTISEMENT

ಪಡಿತರ ಅಕ್ಕಿ ನಾಪತ್ತೆ ಪ್ರಕರಣ: ದೋಷಾರೋಪ ಪಟ್ಟಿ ನ್ಯೂನತೆ ಸರಿಪಡಿಸದ ಎಡಿಪಿ

ಟಿಎಪಿಸಿಎಂಎಸ್ ಉಗ್ರಾಣದಲ್ಲಿನ ಪಡಿತರ ಅಕ್ಕಿ ನಾಪತ್ತೆ ಪ್ರಕರಣ

ಟಿ.ನಾಗೇಂದ್ರ
Published 13 ಅಕ್ಟೋಬರ್ 2024, 6:08 IST
Last Updated 13 ಅಕ್ಟೋಬರ್ 2024, 6:08 IST
<div class="paragraphs"><p>&nbsp;ಪಡಿತರ ಅಕ್ಕಿ ಚೀಲಗಳು (ಸಂಗ್ರಹ ಚಿತ್ರ)</p></div>

 ಪಡಿತರ ಅಕ್ಕಿ ಚೀಲಗಳು (ಸಂಗ್ರಹ ಚಿತ್ರ)

   

ಶಹಾಪುರ: ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ(ಟಿಎಪಿಸಿಎಂಎಸ್)ದ ಉಗ್ರಾಣದಲ್ಲಿನ ಪಡಿತರ ಅಕ್ಕಿ ನಾಪತ್ತೆ ಪ್ರಕರಣ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಾಗ ದೋಷಾರೋಪ ಪಟ್ಟಿಯಲ್ಲಿನ ನ್ಯೂನತೆಯನ್ನು ಸರಿಪಡಿಸಿ ಸಲ್ಲಿಸಲು ಸಹಾಯಕ ನಿರ್ದೇಶಕ ಅಭಿಯೋಜಕರಿಗೆ (ಎಡಿಪಿ) ಅಧಿಕಾರವಿರುತ್ತದೆ. ಆದರೆ ಎಡಿಪಿ ಅವರು ಯಾವುದೇ ಬದಲಾವಣೆ ಮಾಡದೇ ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿಗೆ ಅನುಮತಿ ಸೂಚಿಸಿರುವುದು ಪೊಲೀಸರು ಹಾಗೂ ಸರ್ಕಾರದ ನಡೆ ಪ್ರಶ್ನಿಸುವಂತೆ ಆಗಿದೆ.

ವಂಚನೆಯಂತಹ ಗಂಭೀರ ಸ್ವರೂಪದ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಎಡಿಪಿ ಅವರು ಪೊಲೀಸರು ತನಿಖೆ ನಡೆಸಿ ಸಲ್ಲಿಸಿದ ಪಟ್ಟಿಯು ಕಾನೂನು ಚೌಕಟ್ಟಿನ ಒಳಗೆ ಸಿದ್ಧವಾಗಿದೆ ಅಥವಾ ಇಲ್ಲ ಎಂಬುವುದು ಪರಿಶೀಲಿಸುವುದು,  ಬದಲಾವಣೆ, ಲೋಪಗಳನ್ನು ಎತ್ತಿ ತೋರಿಸಿ ಸರಿಪಡಿಸಿ ಸಲ್ಲಿಸುವಂತೆ ಸೂಚಿಸುವ ಅಧಿಕಾರ ಎಡಿಪಿಗೆ ಇರುತ್ತದೆ. ನ್ಯಾಯಾಲಯಕ್ಕೆ ಸಲ್ಲಿಸಲು ದೋಷಾರೋಪ ಪಟ್ಟಿಗೆ ಎಡಿಪಿ ಷರಾ ಕಡ್ಡಾಯವಾಗಿರುತ್ತದೆ. ವಿಚಿತ್ರವೆಂದರೆ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಎಡಿಪಿ ಅವರು ಸೂಕ್ತ ನಿರ್ದೇಶನ ಹಾಗೂ ಸೂಚನೆ ನೀಡದೆ ಪೊಲೀಸರು ಸಿದ್ಧಪಡಿಸಿದ ಪಟ್ಟಿಗೆ ಒಪ್ಪಿಗೆ ಸೂಚಿಸಿರುವುದು ಗೊಂದಲ ಹಾಗೂ ಅನುಮಾನಕ್ಕೆ ಎಡೆ ಮಾಡಿದೆ ಎನ್ನುತ್ತಾರೆ ಹಿರಿಯ ವಕೀಲರೊಬ್ಬರು.

ADVERTISEMENT

ಬಿಜೆಪಿ ಮುಖಂಡ ಮಣಿಕಂಠ ರಾಠೋಡ (9ನೇ ಆರೋಪಿ) ಅವರನ್ನು ಬಂಧಿಸುವಲ್ಲಿ ಪೊಲೀಸರು ತೋರಿದ ಉತ್ಸಾಹ ದೋಷಾರೋಪ ಪಟ್ಟಿಯಲ್ಲಿ ಅಕ್ರಮ ಎಸಗಿದ ಬಗ್ಗೆ ಬಲವಾದ ಕಾರಣಗಳನ್ನು ಎತ್ತಿ ತೋರಿಸುವಲ್ಲಿ ಪೊಲೀಸರು ಮುಗ್ಗರಿಸಿದ್ದಾರೆ. ಮಣಿಕಂಠ ರಾಠೋಡ ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ಹಣ ವರ್ಗಾವಣೆಯ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಲಗತ್ತಿಸಿದ್ದಾರೆ. ಆದರೆ ಮಣಿಕಂಠ ಅವರ ಬ್ಯಾಂಕ್ ಖಾತೆಯಲ್ಲಿ ₹ 50 ಸಾವಿರಕ್ಕಿಂತ ಹೆಚ್ಚು ಹಣ ಇಲ್ಲದೇ ಇರುವುದು ಬಯಲಾಗಿದೆ.

ಅಲ್ಲದೇ ಪೊಲೀಸರು ಮಣಿಕಂಠ ರಾಠೋಡ ಅವರನ್ನು ವಶಕ್ಕೆ ಪಡೆಯಲು ಜಿದ್ದಿಗೆ ಬಿದ್ದು ಮೂರು ಸಲ ನ್ಯಾಯಾಂಗ ಬಂಧನದಿಂದ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು. ತನಿಖೆಯ ಪ್ರಗತಿಯಲ್ಲಿನ ಪಾತ್ರ ನಿರೀಕ್ಷೆಯಷ್ಟು ಕಂಡಿಲ್ಲ. ಕೊನೆಗೆ ಮಣಿಕಂಠ ಅವರು ಪೊಲೀಸರು ಬರೆದ ಸ್ವಖುಷಿ ಹೇಳಿಕೆಗೆ ಸಹಿ ಹಾಕಲು ನಿರಾಕರಿಸಿರುತ್ತಾರೆ ಎಂದು ಹೇಳುವ ಮೂಲಕ ಪೊಲೀಸರು ತಮ್ಮ ಹೊಣೆಗಾರಿಕೆಯಿಂದ ನುಣಚಿಕೊಳ್ಳುವ ಯತ್ನಕ್ಕೆ ಕೈ ಹಾಕಿರುವುದು ದೋಷಾರೋಪ ಪಟ್ಟಿಯಲ್ಲಿ ಎದ್ದು ಕಾಣುತ್ತಿದೆ ಎನ್ನುತ್ತಾರೆ ಕೃಷಿಕೂಲಿಕಾರರ ಸಂಘದ ಮುಖಂಡ ದಾವಲಸಾಬ್ ನದಾಫ್.

ಬಡ ಜನರಿಗೆ ಹಂಚಿಕೆಯಾಗಬೇಕಾದ ಅನ್ನಭಾಗ್ಯದ ಅಕ್ಕಿ ಅನ್ಯರ ಪಾಲಾಗಿರುವುದು ಆಹಾರ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ಇದ್ದರೂ ಅಕ್ಕಿ ನಾಪತ್ತೆಯಲ್ಲಿ ಭಾಗಿಯಾಗಿದ್ದ ವ್ಯಕಿಗಳ ರಕ್ಷಣೆಗೆ ಪೊಲೀಸರು ಮುಂದಾಗಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಸರ್ಕಾರ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಲಿ ಎಂದು ಕೃಷಿಕೂಲಿಕಾರ ಸಂಘದ ಮುಖಂಡ ದಾವಲಸಾಬ್ ನದಾಫ್ ಮನವಿ ಮಾಡಿದ್ದಾರೆ.

ದೋಷಾರೋಪ ಪಟ್ಟಿಯಲ್ಲಿನ ನ್ಯೂನತೆಯನ್ನು ಸರಿಪಡಿಸಿ ಕಾನೂನು ಚೌಕಟ್ಟಿನಲ್ಲಿ ಪಟ್ಟಿಯನ್ನು ಸಿದ್ಧಪಡಿಸಿ ಷರಾ ಹಾಕಬೇಕಾದ ಎಡಿಪಿ ನಿಷ್ಕಾಳಜಿ ವಹಿಸಿದ್ದು ಎದ್ದು ಕಾಣುತ್ತಿದೆ. ಸಮಗ್ರ ತನಿಖೆ ಆಗಲಿ
ದಾವಲಸಾಬ್ ನದಾಫ್ಕೃಷಿ ಕೂಲಿಕಾರರ ಸಂಘದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.