ADVERTISEMENT

ಸಚಿವ ಸಂಪುಟ ಸಭೆ: ಗರಿಗೆದರಿದ ನಿರೀಕ್ಷೆಗಳು

ಪ್ರಸ್ತಾವನೆಗೆ ಸಿಗುವುದೇ ಮನ್ನಣೆ? ನೂತನ ಜಿಲ್ಲೆಗೆ ಬೇಕಿದೆ ಪ್ಯಾಕೇಜ್‌ ಅನುದಾನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 5:16 IST
Last Updated 15 ಸೆಪ್ಟೆಂಬರ್ 2024, 5:16 IST
ಯಾದಗಿರಿ ನಗರ ಹೊರವಲಯದ ಭೀಮಾ ನದಿ (ಸಾಂದರ್ಭಿಕ ಚಿತ್ರ)
ಯಾದಗಿರಿ ನಗರ ಹೊರವಲಯದ ಭೀಮಾ ನದಿ (ಸಾಂದರ್ಭಿಕ ಚಿತ್ರ)   

ಯಾದಗಿರಿ: ದಶಕದ ಹಿಂದೆ ಕಲಬುರಗಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಯಾಗಿ ಘೋಷಣೆಯಾಗಿದ್ದ ಯಾದಗಿರಿಗೆ ಈ ಬಾರಿ ನಿರೀಕ್ಷೆಗಳ ‘ಭಾರ’ಹೆಚ್ಚಿದ್ದು, ಪ್ರಸ್ತಾವನೆಗೆ ಸಿಗುವುದೇ ಮನ್ನಣೆ ಸಿಗುವುದೇ ಕಾದು ನೋಡಬೇಕಿದೆ.

ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 17ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ವಿವಿಧ ಇಲಾಖೆಗಳ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಆದರೆ, ಇವುಗಳು ಮನ್ನಣೆಗೆ ಸಿಕ್ಕು ಜಾರಿಗೆ ಬರಲಿದೆಯಾ ಎನ್ನುವುದು ಪ್ರಶ್ನೆಯಾಗಿ ಕಾಡುತ್ತದೆ.

ಜಿಲ್ಲೆಯಾಗಿ 14 ವರ್ಷಗಳಾಗಿದ್ದರೂ ಸೂಕ್ತ ಅಭಿವೃದ್ಧಿ ಆಗಿಲ್ಲ. ಕೃಷ್ಣಾ ಮತ್ತು ಭೀಮಾ ನದಿ ಹರಿಯುತ್ತಿದ್ದರೂ ಸಮರ್ಪಕ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ಅಲ್ಲದೇ ಹೊಸ ತಾಲ್ಲೂಕುಗಳಲ್ಲಿ ಘೋಷಣೆಗಿರುವ ಕಾಳಜಿ ನಿರ್ಮಾಣಕ್ಕಿಲ್ಲದಾಗಿದೆ. ಇಂದಿಗೂ ಹಲವಾರು ಇಲಾಖೆಗಳು ಹಳೆ ಕಚೇರಿಯಿಂದಲೇ ನಡೆಯುತ್ತಿವೆ. ಇದು ಕೂಡ ಆಡಳಿತ ತೊಡಕಿಗೆ ಕಾರಣವಾಗಿದೆ. ನೂತನ ಜಿಲ್ಲೆಗೆ ಬೇಕಿದೆ ಪ್ಯಾಕೇಜ್‌ ಅನುದಾನ ಬರಲಿದೆ ಎನ್ನುವುದು ಜಿಲ್ಲೆಯ ಜನತೆಯ ಆಶಯವಾಗಿದೆ.

ADVERTISEMENT

ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಇದ್ದು, ಆರು ತಾಲ್ಲೂಕುಗಳಿವೆ. ಆದರೆ, ಇಂದಿಗೂ ಮೂಲಸೌಲಭ್ಯಗಳಿಂದ ಜಿಲ್ಲಾ ಕೇಂದ್ರ ಹಿಡಿದು ಎಲ್ಲ ಕಡೆ ಅದೇ ಪರಿಸ್ಥಿತಿ ಇದೆ.

ಕಾಲುವೆ ಜಾಲ ಇರುವ ಕಾರಣ ಐದು ತಾಲ್ಲೂಕುಗಳಲ್ಲಿ ನೀರಾವರಿ ಸೌಲಭ್ಯ ಇದ್ದು, ಗುರುಮಠಕಲ್‌ ಮಳೆಯಾಶ್ರಿತ ಪ್ರದೇಶವಿದೆ. ಕೆರೆ ತುಂಬಿಸುವ ಯೋಜನೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ.

ಶಿಕ್ಷಣ, ಸಾರಿಗೆ, ಆರೋಗ್ಯ ಇಲಾಖೆಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿವೆ. ಹಲವಾರು ಕ್ಷೇತ್ರಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. 2017ರ ನಂತರ ಜಿಲ್ಲೆಯಲ್ಲಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಯಾದಗಿರಿ ತಾಲ್ಲೂಕಿನಿಂದ ಗುರುಮಠಕಲ್‌, ಶಹಾಪುರ ತಾಲ್ಲೂಕಿನಿಂದ ವಡಗೇರಾ ಹಾಗೂ ಸುರಪುರ ತಾಲ್ಲೂಕಿನಿಂದ ಹುಣಸಗಿ ತಾಲ್ಲೂಕುಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಆದರೆ, ಅವುಗಳಿಗೆ ಮೂಲಸೌಕರ್ಯ ಒದಗಿಸುವ ಭರವಸೆಗಳು ಮಾತ್ರ ಘೋಷಣೆಗೆ ಸೀಮಿತವಾಗಿದೆ.

ಜಿಲ್ಲೆಯ ಪ್ರಸ್ತಾವನೆಗಳು

ನೀರಾವರಿ ಕ್ಷೇತ್ರ ನಗರಾಭಿವೃದ್ಧಿ ಇಲಾಖೆ ಹಿಂದುಳಿದ ವರ್ಗಗಳ ಇಲಾಖೆ ಮೂರು ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಇವುಗಳಲ್ಲಿ ಯಾವುದು ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಜಿಲ್ಲೆಯ ಶಹಾಪುರ ನಗರದಲ್ಲಿ ಒಳ ಚರಂಡಿ ನಿರ್ಮಾಣಕ್ಕಾಗಿ ₹304.61 ಕೋಟಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಶಹಾಪುರ ತಾಲ್ಲೂಕಿನ ವೀರಶೈವ ಲಿಂಗಾಯತ ಮತ್ತು ಒಳಪಂಗಡಗಳ ಸಂಘಕ್ಕೆ ಐಡಿಎಸ್‌ಎಂಟಿ ಬಡಾವಣೆಯಲ್ಲಿ ಸಾರ್ವಜನಿಕ ದೇಶಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ವೀರಶೈವ ಸಮಾಜದ ವಸತಿ ನಿಲಯ ಹಾಗೂ ಸಾಂಸ್ಕೃತಿಕ ಭವನ ಮಾಡಲು ಉಚಿತವಾಗಿ ಜಾಗ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಮೂರು ತಾಲ್ಲೂಕುಗಳಾದ ವಡಗೇರಾ ಗುರುಮಠಕಲ್ ಹುಣಸಗಿ ತಾಲ್ಲೂಕುಗಳಲ್ಲಿ ತಾಲ್ಲೂಕು ಆಡಳಿತ ಸೌಧ (ಮಿನಿವಿಧಾನಸೌಧ) ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ವಡಗೇರಾ ತಾಲ್ಲೂಕಿನಲ್ಲಿ ₹15 ಕೋಟಿ ಗುರುಮಠಕಲ್ ತಾಲ್ಲೂಕಿನಲ್ಲಿ ₹15 ಕೋಟಿ ಹುಣಸಗಿ ತಾಲ್ಲೂಕಿನಲ್ಲಿ ₹15 ಕೋಟಿ ಹಣ ಮೀಸಲಿಟ್ಟಿದ್ದು ಕೆಲವು ಕಡೆ ಅರ್ಧ ಅನುದಾನ ಮಂಜೂರಾಗಿದೆ. ಉಳಿದ ಅರ್ಧ ಹಣ ಬಿಡುಗಡೆ ಬಾಕಿ ಇದೆ. ಈ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ನೀರಾವರಿ ಕ್ಷೇತ್ರದಲ್ಲಿ ಯಾದಗಿರಿ ತಾಲ್ಲೂಕಿನ ಹಿರೇಆನೂರು ಬಿಸಿಬಿಗೆ ಮೆಕಾನಿಕಲ್ ಟೈಪ್ ವರ್ಟಿಕಲ್ ಗೇಟ್ ಅಳವಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಯಾದಗಿರಿ ತಾಲ್ಲೂಕಿನ ಹಿರೇಆನೂರು ಸಾವೂರು ಮಲ್ಹಾರ ಲಿಂಗೇರಿ ಹಾಗೂ ವಡಗೇರಾ ತಾಲ್ಲೂಕಿನ ಕಂದಳ್ಳಿ ಅರ್ಜುನಗಿ ಕುಮನೂರು ಹಾಗೂ ಗೋಡಿಹಾಳ ಗ್ರಾಮಗಳಿಗೆ ನೀರಾವರಿ ಕಲ್ಪಿಸಬಹುದಾಗಿದೆ. ಮೆಕಾನಿಕಲ್ ವರ್ಟಿಕಲ್ ಗೇಟ್ ಅಳವಡಿಸುವುದರಿಂದ ವಾರ್ಷಿಕ ವೆಚ್ಚ ಕಡಿಮೆಯಾಗಲಿದೆ. ಜೊತೆಗೆ ನೀರಾವರಿ ಸೌಲಭ್ಯವನ್ನು ಕ್ಷೇತ್ರಕ್ಕೆ ವಿಸ್ತರಿಸಬಹುದಾಗಿದೆ. ಇದರ ಜೊತೆಗೆ ಗುರುಮಠಕಲ್‌ ತಾಲ್ಲೂಕಿನ ಚಲ್ಹೇರಿ ಗ್ರಾಮದ ಹತ್ತಿರ ಇರುವ ನಂದೇಪಲ್ಲಿ ನಾಲಾಕ್ಕೆ ಅಡ್ಡಲಾಗಿ ಬಿಸಿಬಿ ನಿರ್ಮಾಣ ಮಾಡಿ ಚಲ್ಹೇರಿ ಅಜಲಾಪುರ ಮತ್ತು ಸಂಕಲಾಪುರ ಗ್ರಾಮದಲ್ಲಿ ನೀರಾವರಿ ಕಲ್ಪಿಸಬಹುದಾಗಿದೆ. ಇದಕ್ಕೆ ₹35 ಕೋಟಿ ಅನುದಾನ ಬೇಕಾಗಿದೆ. ಜಿಲ್ಲಾಡಳಿತ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಯಾವುದು ಅನುಮೋದನೆ ಆಗುತ್ತದೆ ಎನ್ನುವುದು ಸಂಪುಟದತ್ತ ಜಿಲ್ಲೆಯ ಜನರ ಚಿತ್ತ ಇದೆ.

ರಾಜಕೀಯ ಲೆಕ್ಕಾಚಾರ ಶುರು

ಶಹಾಪುರ: ಸೆ.17ರಂದು ಕಲಬುರಗಿಯಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟದ ಸಭೆಯ ಮೇಲೆ ಕ್ಷೇತ್ರದ ಜನತೆಯು ಹಲವು ನಿರೀಕ್ಷೆಯ ಭಾರವನ್ನು ಇಟ್ಟುಕೊಂಡಿದ್ದಾರೆ. ಅದರಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತಾಪಿ ವರ್ಗಕ್ಕೆ ಅನುಕೂಲವಾಗುವ ಶಾಶ್ವತ ಯೋಜನೆ ರೂಪಿಸುವ ಮಹತ್ವದ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗುವುದೇ ಕಾಯ್ದು ನೋಡಬೇಕಾಗಿದೆ. ‘ಯಾದಗಿರಿ ಜಿಲ್ಲೆಯ ಸಮಸ್ಯೆಗಳ ನಾಡಿಮಿಡಿತ ಅರಿತಿರುವ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಮ್ಮ ರಾಜಕೀಯ ಅನುಭವನ್ನು ಧಾರೆ ಎರೆದು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಶ್ರಮಿಸುತ್ತಾರೆ’ ಎಂಬ ರಾಜಕೀಯ ಲೆಕ್ಕಾಚಾರ ಶುರುವಾಗಿದೆ. ‘ಶಹಾಪುರ ನಗರಕ್ಕೆ ಹಲವು ವರ್ಷದಿಂದ ನನೆಗುದಿಗೆ ಬಿದ್ದ ಒಳಚರಂಡಿ ಯೋಜನೆ ಜಾರಿಗೊಳಿಸುವುದು ಅಗತ್ಯವಾಗಿದೆ. ನಗರದ ಪ್ರಥಮ ದರ್ಜೆ ಕಾಲೇಜಿನ ವ್ಯಾಪ್ತಿಯಲ್ಲಿ 70 ಎಕರೆಗೂ ಹೆಚ್ಚು ವಿಶಾಲವಾದ ಜಾಗವಿದೆ. ಅಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಬೇಕು. ತಾಲ್ಲೂಕಿನಲ್ಲಿ ಹಲವು ವರ್ಷದಿಂದ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಮೊರಾರ್ಜಿ ವಸತಿ ಶಾಲೆ ವಸತಿ ನಿಲಯಗಳು ಪ್ರಾಥಮಿಕ ಆಸ್ಪತ್ರೆಗಳ ಕಟ್ಟಡ ಶಾಲಾ ಕೋಣೆಗಳ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ನೀಡುವಂತೆ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲು ಒತ್ತಡ ಹಾಕಬೇಕು’ ಎಂದು ಶಹಾಪುರ ಮತಕ್ಷೇತ್ರದ ಜನತೆ ಒತ್ತಾಯಿಸಿದ್ದಾರೆ. ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ರೈತರು ವಾಣಿಜ್ಯ ಬೆಳೆಯಾದ ಹತ್ತಿಯನ್ನು ಬೆಳೆಯುತ್ತಿದ್ದಾರೆ. ಆದರೆ ಹತ್ತಿ ಖರೀದಿ ಕೇಂದ್ರವಿಲ್ಲ. ಕೇಂದ್ರ ಸರ್ಕಾರದ ಅಡಿಯಲ್ಲಿ ಶಾಶ್ವತವಾಗಿ ಹತ್ತಿ ಖರೀದಿ ಕೇಂದ್ರವನ್ನು ಸ್ಥಾಪಿಸಿದರೆ ರೈತರಿಗೆ ಅನುಕೂಲವಾಗಿದೆ. ಅಲ್ಲದೆ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಹತ್ತಿ ಸಂಶೋಧನಾ ಕೇಂದ್ರ ಸ್ಥಾಪಿಸಿದರೆ ರೈತರಿಗೆ ವೈಜ್ಞಾನಿಕವಾಗಿ ಹತ್ತಿ ಬೆಳೆಯಲು ಸಾಧ್ಯವಾಗಲಿದೆ. ಮೆಣಸಿನಕಾಯಿ ಮಾರಾಟಕ್ಕೆ ಮಾರುಕಟ್ಟೆಯನ್ನು ಸ್ಥಾಪಿಸಬೇಕು’ ಎನ್ನುತ್ತಾರೆ ರೈತ ಮುಖಂಡ ಚೆನ್ನಪ್ಪ ಆನೆಗುಂದಿ. ಯಾದಗಿರಿ ಜಿಲ್ಲೆ ರಚನೆಯ ಸಂದರ್ಭದಲ್ಲಿ ಶಹಾಪುರದಲ್ಲಿ ಉಪ ವಿಭಾಗ ಕಚೇರಿ ಸ್ಥಾಪನೆಯ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಅದು ಇಂದಿಗೂ ಕಾರ್ಯಗತವಾಗಿಲ್ಲ. ಆದರೆ ಸುರಪುರಕ್ಕೆ ಡಿವೈಎಸ್ಪಿ ಕಚೇರಿ ಸ್ಥಾಪನೆಗೆ ತೆಗೆದುಕೊಂಡ ನಿರ್ಧಾರದಂತೆ ಕಚೇರಿ ಸ್ಥಾಪಿಸಿದ್ದಾರೆ. ಆದರೆ ಶಹಾಪುರಕ್ಕೆ ಇಂದಿಗೂ ಉಪ ವಿಭಾಗ ಕಚೇರಿ ಸ್ಥಾಪನೆಯ ಭಾಗ್ಯ ಲಭಿಸಿಲ್ಲ ಎನ್ನುವುದು ಜನತೆಯ ಕೊರಗು ಆಗಿದೆ. ನಗರದಲ್ಲಿ ಪ್ರತ್ಯೇಕ ಸಂಚಾರ ಠಾಣೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಸ್ಥಾಪಿಸುವ ಸಲುವಾಗಿ ಪ್ರತಿ ವರ್ಷ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದರಲ್ಲಿ ಮಗ್ನರಾಗಿದ್ದಾರೆ. ಠಾಣೆ ಸ್ಥಾಪನೆಗೆ ಸರ್ಕಾರದಿಂದ ಹಸಿರು ನಿಶಾನೆ ಬರುತ್ತಿಲ್ಲ. ಹೀಗೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗಾಗಿ ನಿರೀಕ್ಷೆಯ ಇಟ್ಟುಕೊಂಡಿದ್ದಾರೆ ಕಾಯ್ದು ನೋಡಬೇಕಾಗಿದೆ ಅಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.