ಸುರಪುರ: ಸುರಪುರವು ಏಳು ಸುತ್ತು ಬೆಟ್ಟ ಗುಡ್ಡಗಳಿಂದ ಆವೃತವಾಗಿದೆ. ಎತ್ತರ ಪ್ರದೇಶದಲ್ಲಿ ಇರುವ ಸುರಪುರಕ್ಕೆ ಈ ಬೆಟ್ಟಗಳು ನೈಸರ್ಗಿಕ ಕೋಟೆಗಳಿದ್ದಂತೆ. ಅಂತೆಯೇ ಇಲ್ಲಿನ ಗೋಸಲ ಅರಸರು ಸುರಕ್ಷಿತವಾಗಿ ಮೂರು ಶತಮಾನಗಳ ಕಾಲ ರಾಜ್ಯಭಾರ ಮಾಡಿದರು. ಸುರಪುರದ ಮೇಲೆ ಒಂದು ಬಾರಿಯೂ ದಾಳಿಯಾಗದಂತೆ ತಡೆದ ಶ್ರೇಯಸ್ಸು ಈ ಬೆಟ್ಟಗಳಿಗೂ ಸೇರುತ್ತೆ.
ಈ ಬೆಟ್ಟಗಳು ಹಲವು ವಿಸ್ಮಯಗಳನ್ನು ತನ್ನ ಒಡಲಲ್ಲಿ ಬೆಸೆದುಕೊಂಡಿವೆ. ಒಂದಕ್ಕೊಂದು ವಿಭಿನ್ನವಾಗಿವೆ. ಕುದುರೆಗುಡ್ಡ, ಅಕ್ಕತಂಗೇರ ಕಲ್ಲು, ಬೀಸುವ ಕಲ್ಲು, ಲಗೋರಿ ಬೆಟ್ಟ.. ಹೀಗೆ ಅನೇಕ ಆಕಾರಗಳನ್ನು ಹೊಂದಿ ಮುದ ನೀಡುತ್ತಿವೆ.
ಈ ವಿಸ್ಮಯಗಳಲ್ಲಿ ಈಚೆಗೆ ಸೀತೆಯ ಬೆಟ್ಟ ಸೇರಿಕೊಂಡಿದೆ. ಬೀದರ್ –ಬೆಂಗಳೂರು ಬೈಪಾಸ್ ರಾಜ್ಯ ಹೆದ್ದಾರಿಯ ಕುಂಬಾರಪೇಟೆಯ ಹತ್ತಿರ ಶಿಬಾರಬಂಡಿ ಎಂಬ ಗ್ರಾಮವಿದೆ. ಗ್ರಾಮಕ್ಕೆ ಹೋಗುವ ರಸ್ತೆಯ ಹೆದ್ದಾರಿ ಪಕ್ಕ ‘ರಾಮಬಾಣ’ ಎಂಬ ಫಲಕ ಹಾಕಲಾಗಿದೆ. ಅಲ್ಲಿಂದ ವೀಕ್ಷಿಸಿದರೆ ಸೀತೆ ಬೆಟ್ಟ ಗೋಚರವಾಗುತ್ತದೆ.
ಸಂಶೋಧಕ ಕನಕಪ್ಪ ವಾಗಣಗೇರಿ ಅವರು ಡಾ. ಮಲ್ಲಿಕಾರ್ಜುನ ಕಮತಗಿ, ಭೀಮರಾಯ ಹೆಮನೂರ, ಮೌನೇಶ ಅಸಗಳ್ಳಿ, ಬೂದೆಪ್ಪ ಶೆಟ್ಟಿ ಅವರೊಂದಿಗೆ ವಾಯವಿಹಾರಕ್ಕೆ ಹೊರಟಿದ್ದರು. ‘ರಾಮಬಾಣ’ ಫಲಕದ ಸ್ಥಳದಲ್ಲಿ ಬೆಟ್ಟದ ಮೇಲೆ ದೃಷ್ಟಿ ನೆಟ್ಟಾಗ ಬೆಟ್ಟದ ಸೌಂದರ್ಯ ನೋಡಿ ಬೆರಗಾಗಿದ್ದಾರೆ.
ಪೌರಾಣಿಕ ಕೊಂಡಿ: ತೇತ್ರಾಯುಗದಲ್ಲಿ ಶ್ರೀರಾಮನ ಪೂರ್ವಜ ಇಕ್ಷ್ವಾಕು ವಂಶದ ಸಗರ ಚಕ್ರವರ್ತಿಗೆ ಈ ಭಾಗ ಸೇರಿತ್ತು ಎಂಬ ಪ್ರತೀತಿ ಇದೆ. ಆದ್ದರಿಂದ ಈ ಭಾಗದ ಕೃಷ್ಣೆ ಮತ್ತು ಭೀಮಾನದಿಯ ಪ್ರದೇಶವನ್ನು ಸಗರನಾಡು ಎಂದು ಈಗಲೂ ಕರೆಯುತ್ತಾರೆ. ರಾವಣ ಸೀತಾಪಹರಣ ಮಾಡಿದಾಗ ಶೋಧನೆಗೆಶ್ರೀರಾಮ ಈ ಮಾರ್ಗದಿಂದ ಹೋಗಿದ್ದ ಎಂಬ ಮಾತುಗಳೂ ಇವೆ.
ಶಿಬಾರಬಂಡಿ ಹತ್ತಿರ ಒಬ್ಬ ರಾಕ್ಷಸ ರಾಮನನ್ನು ಅಡ್ಡಗಟ್ಟುತ್ತಾನೆ. ಆ ರಾಕ್ಷಕನನ್ನು ಸಂಹರಿಸಿದ ಶ್ರೀರಾಮ ಮುಂದೆ ಸಾಗುತ್ತಾನೆ. ರಾಮ ಬಿಟ್ಟ ಬಾಣ ಬಂದು ಬಂಡೆಯ ಮೇಲೆ ಬೀಳುತ್ತದೆ. ಬಾಣಕ್ಕೆ ಇಲ್ಲಿಯ ಜನ ‘ಶಿಬಾರ’ ಅಂತಲೂ ಕರೆಯುತ್ತಾರೆ. ಹಾಗಾಗಿ ಈ ಗ್ರಾಮಕ್ಕೆ ‘ಶಿಬಾರಬಂಡಿ’ ಎಂಬ ಅಭಿದಾನವೂ ಇದೆ.
ಈಗಲೂ ರಾಮಬಾಣ ಇದೆ. ಗ್ರಾಮಸ್ಥರು ಅದಕ್ಕೆ ಗುಡಿ ಕಟ್ಟಿ ನಿತ್ಯವೂ ಪೂಜೆ ಸಲ್ಲಿಸುತ್ತಾರೆ. ಸೀತೆಯ ಕುರುಹುಗಳು ಅಲ್ಲಲ್ಲಿ ಸಿಗುತ್ತವೆ. ಹಸನಾಪುರದ ಅಕ್ಕಪಕ್ಕದ ಗುಡ್ಡದಲ್ಲಿ ಕಪ್ಪನೆಯ ಗೆರೆ ಇದೆ. ಜನ ಇದನ್ನು ‘ಸೀತೆಯ ಸೆರಗು’ ಎಂದು ಕರೆಯುತ್ತಾರೆ.
ಈ ಭಾಗ ಇಕ್ಷ್ವಾಕು ವಂಶಕ್ಕೆ ಸೇರಿದ್ದರಿಂದ, ಇಲ್ಲಿ ಶ್ರೀರಾಮ ಬಂದು ಹೋಗಿದ್ದರಿಂದ, ಸೀತೆಯ ಕುರುಹುಗಳು ಇರುವುದರಿಂದ ಮತ್ತು ಸಂಶೋಧಿಸಿದ ಬೆಟ್ಟ ಮಹಿಳೆ ಆಕೃತಿ ಹೊಂದಿರುವುದರಿಂದ ಇದಕ್ಕೆಸಂಶೋಧಕ ಕನಕಪ್ಪ ‘ಸೀತೆಯ ಬೆಟ್ಟ’ ಎಂದು ಕರೆದಿದ್ದಾರೆ.
***
ಸೀತೆಯ ಬೆಟ್ಟವನ್ನು ಅಭಿವೃದ್ಧಿ ಪಡಿಸಬೇಕು. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಜನರಿಗೆ ಬೆಟ್ಟ ವೀಕ್ಷಣೆಗೆ ಅನುಕೂಲ ಕಲ್ಪಿಸಬೇಕು. ಸೌಕರ್ಯಗಳನ್ನು ಒದಗಿಸಬೇಕು
- ಕನಕಪ್ಪ ವಾಗಣಗೇರಿ, ಸಂಶೋಧಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.