ಯಾದಗಿರಿ: ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಇದಾದ ನಂತರ ವಿವಿಧ ಪೊಲೀಸ್ ಪಡೆಯಿಂದ ಗೌರವ ವಂದನೆ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ಸ್ವಾತಂತ್ರ್ಯ ಗಳಿಸಿದ್ದು, ಇದು ಪ್ರತಿಯೊಬ್ಬ ಭಾರತೀಯರ ಪಾಲಿಗೆ ಮಹತ್ವ ದಿನ ಎಂದರು.
ದೊಡ್ಡ ಪ್ರಜಾಪ್ರಭುತ್ವ ದೇಶದ ದೊಡ್ಡ ರಾಷ್ಟ್ರೀಯ ಹಬ್ಬ ಸಂಭ್ರಮದಲ್ಲಿದ್ದೇವೆ. ಈ ಸಂಭ್ರಮದ ದಿನಕ್ಕೆ ಕಾರಣರಾದ ಮಹಾನ್ ವ್ಯಕ್ತಿಗಳನ್ನು ಮತ್ತು ಅವರ ಬಲಿದಾನ, ತ್ಯಾಗಗಳನ್ನು, ನೆನಪಿಸಿಕೊಳ್ಳುವುದು ಸ್ವತಂತ್ರ ಭಾರತದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವೂ ಹೌದು. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್, ಬಾಲಗಂಗಾಧರ ತಿಲಕ್, ಸರ್ದಾರ್ ವಲ್ಲಭಭಾಯ್ ಪಟೇಲ್, ಮೌಲಾನಾ ಅಬ್ದುಲ್‌ಕಲಾಂ ಆಜಾದ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಸಂಗೋಳ್ಳಿ ರಾಯಣ್ಣ ಸೇರಿದಂತೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆಗೈದ ಸಾವಿರಾರು ಕ್ರಾಂತಿಕಾರಿಗಳು, ಅನೇಕ ಮಹನೀಯರು ನಮ್ಮ ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಿ ಸ್ವತಂತ್ರ ದೇಶವನ್ನಾಗಿಸಿದ್ದಾರೆ ಎಂದು ಹೇಳಿದರು.
ಶಾಂತಿ ಮತ್ತು ಐಕ್ಯತೆ ನಮ್ಮ ಪ್ರಗತಿಯ ಮಂತ್ರ ಹಾಗೂ ಸೂತ್ರ. ಪ್ರತಿಯೊಬ್ಬರು ಈ ದೇಶಕ್ಕಾಗಿ ಕರ್ತವ್ಯ ನಿರ್ವಹಿಸಬೇಕು. ಜಗತ್ತಿನಲ್ಲಿಯೇ ಭಾರತ ವೈವಿಧ್ಯತೆಯಿಂದ ಕೂಡಿದ ದೇಶವಾಗಿದೆ. ಭೌಗೋಳಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ವೈವಿಧ್ಯತೆಯಿಂದ ಕೂಡಿದೆ ಎಂದು ಹೇಳಿದರು.
ರಾಜ್ಯದ ಬಡ ಕುಟುಂಬಗಳಲ್ಲಿ ಆರ್ಥಿಕ ಶಕ್ತಿ ತುಂಬಲು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಲಕ್ಷಾಂತರ ಕುಟುಂಬಗಳು ಇದರ ಲಾಭ ಪಡೆಯುತ್ತಿವೆ. ಈ ಪಂಚ ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳ ಸ್ವಾವಲಂಬಿ ಜೀವನಕ್ಕೆ ನೆರವಾಗಿವೆ. ಅದರಂತೆ ಉದ್ಯೋಗ, ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಕ್ಷೇತ್ರ ಗಳಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ವಿನಾಯಕ ಮಾಲಿಪಾಟೀಲ, ತಹಶೀಲ್ದಾರ್ ಸುರೇಶ ಅಂಕಲಗಿ, ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ, ಜಿಲ್ಲಾ ಪಂಚಾಯಿತಿ ಸಿಇಒ ಗರೀಮಾ ಪಂವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಸರ್ಕಾರಿ ಪ್ರೌಢಶಾಲೆ ಸ್ಟೇಷನ್ ಬಜಾರ್ ನವನಂದಿ ಪ್ರೌಢ ಶಾಲೆ ಸರ್ಕಾರಿ ಕನ್ಯಾ ಪ್ರೌಢ ಶಾಲೆ ವಿದ್ಯಾರಣ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಎಂಜೆ ಡಾನ್ಸ್ ಫಿಟ್ನೆಸ್ ಅಕಾಡೆಮಿ ಯಾದಗಿರಿಯಿಂದ ದೇಶ ಭಕ್ತಿ ರೂಪಕಗಳು ಮನ ಸೆಳೆದವು. ಬಣ್ಣ ಬಣ್ಣದ ಆಕರ್ಷಕ ತೊಡುಗೆಗಳಿಂದ ವಿದ್ಯಾರ್ಥಿಗಳು ಆಕರ್ಷಿಸಿದರು. ಇದೇ ವೇಳೆ ಯುವಕ ಯುವತಿಯರಿಂದ ಭಾರ ಎತ್ತುವ ಸ್ಪರ್ಧೆ ನಡೆಯಿತು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ‍್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಪ ಸಂಖ್ಯಾತರ ಸಮುದಾಯ ವಿದ್ಯಾರ್ಥಿಗಳು ಮೌಲಾನಾ ಅಬ್ದುಲ್ ಕಲಾಂ ಅಜಾದ್ ಪ್ರತಿಭಾ ಪುರಸ್ಕಾರಕ್ಕಾಗಿ ಆಯ್ಕೆಯಾದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 2023–24ನೇ ಸಾಲಿನ ವಿಜಯಪುರ ಮಹಿಳಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ರಸಾಯನಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಅನುಷಾ ಅವಿನಾಶ ಕಣ್ಮಸ್ಕರ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೂಲಿ ಕೆಲಸಕ್ಕೆ ಹೋಗಿ ಬೆಂಗಳೂರಿನಲ್ಲಿ ಅಪಘಾತದಲ್ಲಿ ಮೃತಪಟ್ಟ ದೇವರಾಜ್ ಎಸ್. ಅಂಗಾಂಗ ದಾನ ಮಾಡಿದ ಕುಟುಂಬ ವರ್ಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಪ್ರಶಂಸೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.