ADVERTISEMENT

ರಾಜ್ಯ ಸರ್ಕಾರ ಎಲ್ಲ ರಂಗದಲ್ಲೂ ವಿಫಲ: ಅಮೀನರೆಡ್ಡಿ ಯಾಳಗಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 15:29 IST
Last Updated 2 ಮಾರ್ಚ್ 2024, 15:29 IST
<div class="paragraphs"><p>ಅಮೀನರೆಡ್ಡಿ ಯಾಳಗಿ</p></div>

ಅಮೀನರೆಡ್ಡಿ ಯಾಳಗಿ

   

ಯಾದಗಿರಿ: ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹತ್ತು ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ವೈಫಲ್ಯಗಳದ್ದೇ ದೊಡ್ಡ ಸರಮಾಲೆಯಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅಮೀನರೆಡ್ಡಿ ಯಾಳಗಿ ಆರೋಪಿಸಿದರು.

‘ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಬರ ಪರಿಹಾರ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. 875ಕ್ಕೂ ಹೆಚ್ಚು ರೈತರು ಅತ್ಮಹತ್ಯೆ ಮಾಡಿಕೊಂಡಿದ್ದು, ಜನರು ಗುಳೆ ಹೋಗುತ್ತಿದ್ದಾರೆ. ಆದರೆ, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ’ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ರಾಜ್ಯ ಸರ್ಕಾರ ಕೊಡುವ ಪರಿಹಾರ ಮೊತ್ತದ ಆಸೆಗಾಗಿ ರೈತರ ಆತ್ಮಹತ್ಯೆಗಳಾಗುತ್ತಿವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳುತ್ತಾರೆ. ಇದು ರೈತವಿರೋಧಿ ಹೇಳಿಕೆಯಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಅಭಿವೃದ್ಧಿಗೆ ಸಂಬಂಧಿಸಿದ (ಎಸ್‌ಸಿಎಸ್‌ಪಿ, ಎಸ್‌ಟಿಪಿ) ₹11 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ಬೇರೆ ಉದ್ದೇಶಕ್ಕೆ ಗ್ಯಾರಂಟಿಗಳಿಗೆ ಬಳಸಿಕೊಂಡಿದೆ. ದಲಿತರು, ಶೋಷಿತ ವರ್ಗದವರ ಕುರಿತು ಸಿದ್ದರಾಮಯ್ಯನವರ ಮೊಸಳೆಕಣ್ಣೀರಿಗೆ ಇದು ಸಾಕ್ಷಿ’ ಎಂದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದಕ್ಕೆ ಸಾಕ್ಷಿ ವಿಧಾನಸೌಧದ ಆವರಣದಲ್ಲಿ ಶತ್ರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು. ಇವೆಲ್ಲವೂ ಕಾಂಗ್ರೆಸ್ಸಿನ ಓಲೈಕೆ ರಾಜಕಾರಣದ ಫಲ’ ಎಂದರು.

ಈ ವೇಳೆ ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ವೆಂಕಟರೆಡ್ಡಿ ಮುದ್ನಾಳ, ವಕ್ತಾರ ಎಚ್‌.ಸಿ.ಪಾಟೀಲ, ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ, ರಾಜ್ಯ ನಾಯಕಿ ನಾಗರತ್ನ ಕುಪ್ಪಿ, ವಿರೂಪಾಕ್ಷಿ ಸ್ವಾಮಿ ಹೆಡಗಿಮುದ್ರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.