ಹೆಡಗಿಮದ್ರ (ಯರಗೋಳ): ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ 260 ವಿದ್ಯಾರ್ಥಿಗಳಿಗೆ ಪಾಠ ಮಾಡಲೂ ಒಬ್ಬರೂ ಕಾಯಂ ಶಿಕ್ಷಕರಿಲ್ಲ. ಶಾಲೆಯಲ್ಲಿದ್ದ ಐವರು ಕಾಯಂ ಶಿಕ್ಷಕರ ಪೈಕಿ ನಾಲ್ವರಿಗೆ ವರ್ಗಾವಣೆಯಾಗಿದ್ದು, ಉಳಿದ ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ಮಕ್ಕಳಿಗೆ ಪಾಠ ಬೋಧನೆಯೇ ಇಲ್ಲದಂತಾಗಿದೆ.
ಶಾಲೆಗೆ 12 ಜನ ಕಾಯಂ ಶಿಕ್ಷಕರ ಬೇಡಿಕೆಯಿದೆ. ಆದರೆ ಕರ್ತವ್ಯ ನಿರ್ವಹಿಸುತ್ತಿದ್ದ 6 ಮಂದಿಯಲ್ಲಿ ಒಬ್ಬರಿಗೆ 2023ರಲ್ಲಿ ವರ್ಗಾವಣೆಯಾಗಿದೆ. ಉಳಿದ ಐವರಲ್ಲಿ ಮುಖ್ಯಶಿಕ್ಷಕ ಸೇರಿ ನಾಲ್ವರಿಗೆ 2024ರ ಜೂನ್ ತಿಂಗಳಲ್ಲಿ ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಮೂವರು ಶಿಕ್ಷಕರನ್ನು ಶಾಲೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಶಾಲೆಯಲ್ಲಿ ವರ್ಗಾವಣೆಯಾದ ಪ್ರಭಾರ ಮುಖ್ಯಶಿಕ್ಷಕ ಮದ್ರಪ್ಪ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ದೇವಿಂದ್ರಪ್ಪ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮುಖ್ಯ ಶಿಕ್ಷಕರು ಕಚೇರಿ ಕೆಲಸಗಳಿಗೆ ಜಿಲ್ಲಾ ಕೇಂದ್ರಕ್ಕೆ ತೆರಳಿದರೆ, ಶಾಲೆಯ ಸಂಪೂರ್ಣ ಜವಾಬ್ದಾರಿ ದೈಹಿಕ ಶಿಕ್ಷಣ ಶಿಕ್ಷಕರದ್ದಾಗಿದೆ. 6 ಜನ ಅತಿಥಿ ಶಿಕ್ಷಕರ ಬೇಡಿಕೆ ಇದ್ದರೂ, ಸ್ಥಳೀಯವಾಗಿ ಅರ್ಹ ಅಭ್ಯರ್ಥಿಗಳು ಸಿಗದ ಕಾರಣ ನಾಲ್ವರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರಿಂದ ಶಾಲೆ ನಡೆಸಲಾಗುತ್ತಿದೆ. ಕಾಯಂ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸಂಪೂರ್ಣ ಜವಾಬ್ದಾರಿ ಅತಿಥಿ ಶಿಕ್ಷಕರದ್ದಾಗಿದೆ.
ಜಿಲ್ಲಾ ಕೇಂದ್ರ ಯಾದಗಿರಿಯಿಂದ 15 ಕಿ.ಮೀ ದೂರದಲ್ಲಿರುವ ಹೆಡಗಿಮದ್ರ, ಠಾಣಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. 2,500 ಜನಸಂಖ್ಯೆ ಇದ್ದು, 6 ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಿದ್ದಾರೆ.
'ಇತ್ತೀಚೆಗೆ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿದಾಗ ಪಾಲಕರು ಶಿಕ್ಷಕರನ್ನು ನಿಯೋಜಿಸುವಂತೆ ಮನವಿ ಸಲ್ಲಿಸಿದ್ದಾರೆ. ಶಿಕ್ಷಕರು ಇಲ್ಲದಿರುವುದರಿಂದ ಪಾಲಕರು ಮಕ್ಕಳಿಗೆ ಹತ್ತಿ ಬಿಡಿಸಲು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ' ಎಂದು ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಂಗಾರಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.
‘ಶಾಲೆಯಲ್ಲಿ ಮಕ್ಕಳಿಗೆ ಪಾಠ ಪ್ರವಚನಗಳು ನಡೆಯುತ್ತಿಲ್ಲ. ಶಾಲೆಗೆ ತೆರಳುವ ಮಕ್ಕಳು ಆಟೋಟಗಳಲ್ಲಿ ತೊಡಗಿ ಸಂಜೆ ಬಳಿಕ ಮನೆಗೆ ಬರುತ್ತಿದ್ದಾರೆ’ ಎಂದು ಪಾಲಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ನನಗೂ ವರ್ಗಾವಣೆಯಾಗಿದ್ದು. ಇನ್ನು ಶಾಲೆಯಿಂದ ಬಿಡುಗಡೆಯಾಗಿಲ್ಲ. ಕಳೆದ ಎರಡು ತಿಂಗಳಿಂದ ಈ ಸಮಸ್ಯೆ ಇದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವೆ. ಅರ್ಜಿ ಕರೆದರೂ ಅತಿಥಿ ಶಿಕ್ಷಕರು ಬರುತ್ತಿಲ್ಲಮದ್ರಪ್ಪ ಪ್ರಭಾರ ಮುಖ್ಯಶಿಕ್ಷಕ ಹೆಡಗಿಮದ್ರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ
ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಶಾಲೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಗುರುವಾರ ಯಾದಗಿರಿಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ (ಡಿಡಿಪಿಐ) ಕಚೇರಿ ಎದುರು ಪ್ರತಿಭಟನೆ ನಡೆಸಿದರು ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಕೈಯಲ್ಲಿ ಭಿತ್ತಿ ಪತ್ರ ಹಿಡಿದು ಘೋಷಣೆ ಕೂಗಿದರು. ಕಾಯಂ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಎಐಡಿವೈಒ ಸಂಘಟನೆ ಪದಾಧಿಕಾರಿಗಳು ಪಾಲ್ಗೊಂಡು ಬೆಂಬಲ ಸೂಚಿಸಿದರು. ನಂತರ ಡಿಡಿಪಿಐ ಕಚೇರಿಯ ಸಿಬ್ಬಂದಿಗೆ ಮನವಿ ಸಲ್ಲಿಸಲಾಯಿತು. ಎಐಡಿವೈಒ ಸಂಘಟನೆ ಜಿಲ್ಲಾ ಸಂಚಾಲಕಿ ಶಿಲ್ಪಾ ಕೆ. ಸದಸ್ಯ ಜಮಲ್ ಸಾಬ್ ಬಂಗಾರಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.