ADVERTISEMENT

ಹುಣಸಗಿ | ಪಟ್ಟಣ ಪಂಚಾಯಿತಿಗೆ ಚುನಾವಣೆ: ಟಿಕೆಟ್‌ಗೆ ತೀವ್ರ ಕಸರತ್ತು 

ಭೀಮಶೇನರಾವ ಕುಲಕರ್ಣಿ
Published 12 ಡಿಸೆಂಬರ್ 2023, 7:00 IST
Last Updated 12 ಡಿಸೆಂಬರ್ 2023, 7:00 IST
ಹುಣಸಗಿ ಪಟ್ಟಣ ಪಂಚಾಯಿತಿ
ಹುಣಸಗಿ ಪಟ್ಟಣ ಪಂಚಾಯಿತಿ   

ಹುಣಸಗಿ: ಪಟ್ಟಣ ಪಂಚಾಯಿತಿ ಮೊದಲ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ಭರ್ಜರಿ ತಯಾರಿ ಆರಂಭವಾಗಿದ್ದು, ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ತೀವ್ರ ಕಸರತ್ತು ಆರಂಭವಾಗಿದೆ.

ಪಟ್ಟಣ ಪಂಚಾಯಿತಿಯ 16 ವಾರ್ಡ್‌ಗಳಿಗೆ ಇದೇ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ. ಪಕ್ಷ ಹಾಗೂ ಅಭ್ಯರ್ಥಿಗಳ ವರ್ಚಸ್ಸಿಗೆ ಧಕ್ಕೆಯಾದಗಂತೆ ಈ ಚುನಾವಣೆಯನ್ನು ಎದುರಿಸುವ ಮೂಲಕ ಗೆಲುವಿಗೆ ತಂತ್ರ ರೂಪಿಸಿಕೊಳ್ಳಲು ಎರಡೂ ಪಕ್ಷಗಳಲ್ಲಿ ಸಿದ್ಧತೆ ನಡೆದಿದೆ.

ಸ್ಥಳೀಯ ನಾಯಕರ ನೇತೃತ್ವದಲ್ಲಿ ಬಿಜೆಪಿ ಪಾಳೆಯದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಕಾರ್ಯಕರ್ತರು ಹಾಗೂ ಆಯಾ ವಾರ್ಡ್ ಪ್ರಮುಖರ ಸಭೆ ನಡೆಸಲಾಗಿದ್ದು ಆಕಾಂಕ್ಷಿಗಳ ಪಟ್ಟಿ ಸಿದ್ಧತೆಗೆ ಅಣಿಯಾಗುತ್ತಿದ್ದಾರೆ.

ADVERTISEMENT

ಈ ಕುರಿತು ಬಿಜೆಪಿ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ ಅವರು ‘ಪ್ರಜಾವಾಣಿ’ ಜತೆ ಮಾತನಾಡಿ, ಮಾಜಿ ಸಚಿವ ರಾಜೂಗೌಡ ಅವರು ಅಭ್ಯರ್ಥಿಗಳ ಆಯ್ಕೆಯ ಕುರಿತು ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ಪಟ್ಟಣದ ನಮ್ಮ ಪಕ್ಷದ ಪ್ರಮುಖರ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿಯಿಂದ 11ನೇ ವಾರ್ಡ್ ರಾಮನಗೌಡ್ರ ಕಾಲೊನಿಯಲ್ಲಿ 11 ಜನ ಆಕಾಂಕ್ಷಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ. ಇನ್ನೂ 3ನೇ  ವಾರ್ಡ್‌ ದೇಸಾಯಿ ಕಾಲೊನಿಯಲ್ಲಿ 8 ಜನ, 4ನೇ ವಾರ್ಡಿನ ನೀಲಕಂಠೇಶ್ವರ ನಗರದಲ್ಲಿ ಐವರು,  ಪರಿಶಿಷ್ಟ ಪಂಗಡಕ್ಕೆ ಮೀಸಲಾದ 5ನೇ ವಾರ್ಡಿನ ವಾಲ್ಮೀಕಿನಗರದಲ್ಲಿ 6 ಮಂದಿ, 7 ಸಾಮಾನ್ಯ ಮಹಿಳೆಗೆ ಮೀಸಲಾದ ಪಡಶೆಟ್ಟಿ ಕಾಲೊನಿಯಲ್ಲಿ ಐವರು ಹೀಗೆ ಸಾಕಷ್ಟು ಜನರು ಟಿಕೆಟ್‌ ಪಡೆದುಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಕೆಲ ವಾರ್ಡ್‌ಗಳಲ್ಲಿ ಹೆಚ್ಚು ಪೈಪೋಟಿ ಇದೆ. ಹಾಗಾಗಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಪಟ್ಟಣಕ್ಕೆ ಬಂದ ಬಳಿಕ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಲಾಗುತ್ತಿದೆ. ಅಲ್ಲಿಯವರೆಗೂ ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದೆ ಎಂದು ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ಮತ್ತು ನಾಲ್ಕನೇ ವಾರ್ಡ್, ಏಳು ಮತ್ತು 12ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಹೆಚ್ಚಿನ ಆಕಾಂಕ್ಷಿಗಳಿದ್ದು,  ಎಲ್ಲರನ್ನು ಸಮಾಧಾನ ಪಡಿಸಿ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಒತ್ತು ನೀಡುವುದಾಗಿ ಅವರು ಹೇಳಿದರು

‘ಸೋಮವಾರ 16 ವಾರ್ಡ್‌ಗಳ ಪೈಕಿ ಯಾವುದೇ ಕ್ಷೇತ್ರಕ್ಕೂ ನಾಮಪತ್ರ ಸಲ್ಲಿಕೆಯಾಗಲಿಲ್ಲ’ ಎಂದು ಚುನಾವಣಾಧಿಕಾರಿ ರಮೇಶ ರಾಠೋಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.