ADVERTISEMENT

ಶಹಾಪುರ: ತಾಂಡಾದಲ್ಲಿ ಸಾಂಪ್ರದಾಯಿಕ ಉಡುಪಿನ ಜೀವಂತಿಕೆ

ಟಿ.ನಾಗೇಂದ್ರ
Published 26 ಮೇ 2024, 4:48 IST
Last Updated 26 ಮೇ 2024, 4:48 IST
ನೀಲಾಬಾಯಿ ರಾಠೋಡ
ನೀಲಾಬಾಯಿ ರಾಠೋಡ   

ಶಹಾಪುರ: ಇಂದಿನ ಆಧುನಿಕತೆಯ ಹೊಡೆತಕ್ಕೆ ಗ್ರಾಮೀಣ ಪ್ರದೇಶದ ಕಲೆ, ವೇಷಭೂಷಣ ಅವನತಿಯ ಅಂಚಿಗೆ ತಲುಪಿದೆ. ಅದಕ್ಕೆ ಅಪವಾದ ಎನ್ನುವಂತೆ ತಾಂಡಾಗಳಲ್ಲಿ ಬಂಜಾರ(ಲಂಬಾಣಿ) ಸಮುದಾಯದ ಮಹಿಳೆಯರು ತಮ್ಮ ಹಳೆ ಸಂಪ್ರದಾಯದ ಉಡುಗೆಯನ್ನು ಉಪಯೋಗಿಸಿಕೊಂಡು ಬರುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎನ್ನುವಂತೆ ತಾಲ್ಲೂಕಿನ ಗಂಗುನಾಯಕ ತಾಂಡಾದಲ್ಲಿ ಲಂಬಾಣಿ ಸಮುದಾಯದ ಮಹಿಳೆ ನೀಲಾಬಾಯಿ ಕಸೂತಿ ಹಾಕುತ್ತಿದ್ದಾರೆ.

ಲಂಬಾಣಿ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಉಡುಪಿನಲ್ಲಿ ತನ್ನದೇ ಆದ ಮಹತ್ವ ಇದೆ. ಅದರಲ್ಲಿ ಕಾಚಾಳ, ಪೆಟಿಯಾ, ಗುಂಗುಟೊ, ಪೋಡಿಯಾ, ಬುರಿಯಾ, ಚೋಟ್ಲಾ, ವಾಕಡಿ, ಚೂಡಿ ಹೀಗೆ ಒಂದೊಂದು ವಸ್ತುವಿಗೆ ಹೆಸರಿವೆ.

ADVERTISEMENT

‘ದೊಡ್ಡ ಪ್ರದೇಶದ ತಾಂಡಾದಲ್ಲಿ ವಾರದ ಸಂತೆಯಲ್ಲಿ ಇಂತಹ ಸಾಮಗ್ರಿಗಳನ್ನು ಖರೀದಿಸುತ್ತೇವೆ. ಬೇಸಿಗೆಯ ಕಾಲದಲ್ಲಿ ಕೃಷಿ ಚಟುವಟಿಕೆ ಹಾಗೂ ಕೂಲಿ ಕೆಲಸ ಕಡಿಮೆ ಇರುತ್ತದೆ. ಆಗ ನಮ್ಮ ಕಸೂತಿಯ ಮೂಲಕ ನಮ್ಮ ಉಡುಪುಗಳನ್ನು ಸಿದ್ಧಪಡಿಸಿಕೊಳ್ಳುತ್ತೇವೆ’ ಎನ್ನುತ್ತಾರೆ ಗುಂಗುನಾಯಕ ತಾಂಡಾದ ನಿವಾಸಿ ನೀಲಾಬಾಯಿ.

‘ಲಂಬಾಣಿಯ ಉಡುಪಿನಲ್ಲಿ ಎದೆಯ ಭಾಗದ ಎರಡು ಕಡೆ ಚಿಕ್ಕದಾದ ಕನ್ನಡಿ ಹಾಕಿರುತ್ತೇವೆ. ಅದರ ಮೂಲ ಉದ್ದೇಶ ಏನೆಂದರೆ, ನಮ್ಮ ಸಮುದಾಯ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದರು. ಕಾಡು ಪ್ರಾಣಿಗಳು ಬಂದಾಗ ನಾವು ಧರಿಸಿದ ಕನ್ನಡಿಯ ಪ್ರತಿಬಿಂಬ ಕಂಡು ಹೆದರಿ ಹೋಗುತ್ತಿದ್ದವು ಎಂಬ ಪ್ರತೀತಿ ಇದೆ’ ಎನ್ನುತ್ತಾರೆ ಲಂಬಾಣಿ ಸಮುದಾಯದ ಮುಖಂಡ ಚಂದ್ರಶೇಖರ ಜಾಧವ.

‘ಈಗ ನಮ್ಮ ಸಂಪ್ರದಾಯದ ಉಡುಪು ಸಿನಿಮಾ ರಂಗಕ್ಕೆ ಪ್ರವೇಶ ಕೊಟ್ಟಿದೆ. ಹಿಂದಿ ಹಾಗೂ ಇನ್ನಿತರ ಚಿತ್ರಗಳಲ್ಲಿ ಸಿನಿಮಾ ನಾಯಕಿಯರು ಉಡುಪು ಧರಿಸಿಕೊಂಡು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಲು ಖುಷಿಯಾಗುತ್ತಿದೆ’ ಎನ್ನುತ್ತಾರೆ ಅವರು.

‘ನಮ್ಮ ಹೆಣ್ಣು ಮಕ್ಕಳಲ್ಲಿಯೂ ಅಕ್ಷರದ ಬೆಳಕು ವಿಸ್ತರಿಸುತ್ತಿದೆ. ಈಗ ಅವರು ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟುಕೊಳ್ಳಲು ನಿರಾಕರಿಸುತ್ತಿದ್ದಾರೆ. ಯಾವುದೋ ಶುಭ ಕಾರ್ಯಗಳಲ್ಲಿ ಹಾಗೂ ಮದುವೆ ಸಂದರ್ಭದಲ್ಲಿ ಇಂತಹ ಉಡುಪು ಧರಿಸಿ ಮತ್ತೆ ತೆಗೆದು ಇಡುತ್ತೇವೆ’ ಎನ್ನುತ್ತಾರೆ ಲಂಬಾಣಿ ಸಮುದಾಯದ ಹಿರಿಯ ಮುಖಂಡ ಮಾನಸಿಂಗ್ ಚವ್ಹಾಣ.

‘ನಾವು ಎಷ್ಟೇ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿ ಇದ್ದರೂ ನಮ್ಮ ಹಳೆ ಬೇರಿನ ಉಡುಪಿನ ಸಂಪ್ರದಾಯ ಮರೆಯಬಾರದು. ಉಡುಪು ನಮ್ಮ ಜೀವನಾಸಕ್ತಿಯ ಚಿಲುಮೆಯಾಗಿದೆ. ಮುಂದಿನ ಪೀಳಿಗೆಗೆ ಉಳಿಸಿ ಬೆಳೆಯಿಸಿಕೊಂಡು ಹೋಗುವುದು ಪ್ರತಿಯೊಬ್ಬ ತಾಂಡಾದ ಜನತೆಯ ಹೊಣೆಗಾರಿಕೆಯಾಗಿದೆ’ ಎನ್ನುತ್ತಾರೆ ತಾಂಡಾದ ನಿವಾಸಿಗರು.

ಇಳಿ ವಯಸ್ಸಿನಲ್ಲಿಯೂ ಮೂಗುತಿ ಹಾಕಿಕೊಂಡಿರುವ ಸೂರತಿಬಾಯಿ
ಬಂಜಾರ ಮಹಿಳೆಯರಿಗೆ ತಗಡಿನ ಶೆಡ್ಡೇ ಅರಮನೆ
ಬೇಸಿಗೆ ಕಾಲದಲ್ಲಿ ಮನೆಯಲ್ಲಿರುವುದರಿಂದ ನಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಸಿದ್ಧಪಡಿಸಿಕೊಳ್ಳುತ್ತೇವೆ. ಇಂತಹ ಉಡುಪು ನಮಗೆ ನೆಮ್ಮದಿ ಹಾಗೂ ಖುಷಿ ನೀಡುತ್ತದೆ.
ನೀಲಾಬಾಯಿ ರಾಠೋಡ ಗಂಗುನಾಯಕ ತಾಂಡಾದ ನಿವಾಸಿ
ಆಧುನಿಕತೆಯ ಭರಾಟೆಯಲ್ಲಿ ಸಂಪ್ರದಾಯ ಮರೆತಿಲ್ಲ. ಎಷ್ಟೇ ಉನ್ನತ ಹುದ್ದೆಯಲ್ಲಿ ಇರುವ ನಮ್ಮ ಸಮುದಾಯದ ವ್ಯಕ್ತಿ ಸಿಕ್ಕರೆ ನಾವು ಮೊದಲು ನಮ್ಮ ಲಂಬಾಣಿ ಭಾಷೆಯಲ್ಲೇ ಮಾತನಾಡಿಸುತ್ತೇವೆ. ಅಧಿಕಾರಿಗಳೂ ಸ್ಪಂದಿಸುತ್ತಾರೆ
ಮಾನಸಿಂಗ್ ಚವ್ಹಾಣ ಬಂಜಾರಿ ಸಮುದಾಯದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.