ADVERTISEMENT

ಯಾದಗಿರಿ: ಮಿತಿಗಿಂತ ಹೆಚ್ಚು ಮಕ್ಕಳನ್ನು ಕರೆತರುವ ಆಟೊ, ಓಮ್ನಿ

ಬಿ.ಜಿ.ಪ್ರವೀಣಕುಮಾರ
Published 30 ಸೆಪ್ಟೆಂಬರ್ 2024, 4:48 IST
Last Updated 30 ಸೆಪ್ಟೆಂಬರ್ 2024, 4:48 IST
<div class="paragraphs"><p>ಯಾದಗಿರಿ ನಗರದಲ್ಲಿ ಆಟೋದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರುವುದು &nbsp;&nbsp; </p></div>

ಯಾದಗಿರಿ ನಗರದಲ್ಲಿ ಆಟೋದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರುವುದು   

   

ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ್

ಯಾದಗಿರಿ: ಓಮಿನಿ ವಾಹನಗಳ ಟಾಪ್‌ ಮೇಲೆ ಗುಡ್ಡೆಗಟ್ಟಿಲೇ ಬ್ಯಾಗುಗಳು, ಒಬ್ಬರ ಮೇಲೆ ಒಬ್ಬರು ಕುಳಿತುಕೊಳ್ಳುವ ಮಕ್ಕಳು, ಆಟೊದಲ್ಲಿ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳ ಸಂಚಾರ, ಮಿನಿಬಸ್‌ಗಳ ತುಂಬೆಲ್ಲ ನಿಂತು ಮಕ್ಕಳು ಶಾಲೆ ಹಾಗೂ ಮರಳಿ ಮನೆಗೆ ಬರಬೇಕಾದ ಸ್ಥಿತಿ...

ADVERTISEMENT

ನಗರವೂ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳ ವಾಹನಗಳು ಮಕ್ಕಳನ್ನು ಕರೆತರುವ ದೃಶ್ಯಗಳಿಗೆ ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕರೆ ತರುವ ವಾಹನಗಳಿಗೆ ಸರಿಯಾದ ದಾಖಲೆಗಳು ಇರುವುದಿಲ್ಲ. ಅದರಲ್ಲಿ ಟಂಟಂನಲ್ಲಿ ಹೆಚ್ಚಿನ ಮಕ್ಕಳನ್ನು ಕೂಡಿಸಿಕೊಂಡು ಶಾಲೆಗೆ ಕರೆ ತರುವುದು ಸಾಮಾನ್ಯವಾಗಿದೆ.

ವ್ಯಾನ್‌ಗಳಲ್ಲಿ ಹೆಚ್ಚಿನ ಮಕ್ಕಳನ್ನು ಕರೆ ತರುವುದು. ಬೇಕಾಬಿಟ್ಟಿಯಾಗಿ ವಾಹನ ಚಲಾವಣೆ ಮಾಡುವುದು ಮಕ್ಕಳ ಜೀವಕ್ಕೆ ಸಂಚಕಾರ ತರುವ ಅಪಾಯವಿದೆ. ಪಾಲಕರು ವಾಹನಗಳ ಸಂಚಾರದ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ಮಾತು ಪೊಲೀಸರಿಂದ ಕೇಳಿ ಬರುತ್ತಿವೆ. ಯಾವುದೇ ವಾಹನದಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎಂಬುದು ನಿಯಮವಿದೆ. ಆದರೆ, ಇಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಾರೆ. ನಗರದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವ ಈ ಆಟೊಗಳು ನಿಧಾನವಾಗಿ ಹೋಗುವುದಿಲ್ಲ. ಚಾಲಕರು ಯಾವಾಗಲೂ ತರಾತುರಿಯಲ್ಲೇ ಇರುತ್ತಾರೆ. ಮಕ್ಕಳಿಗೆ ತೊಂದರೆ ಆಗುವುದನ್ನು ಗಮನಿಸುವುದಿಲ್ಲ.‌

ಆಟೊದಲ್ಲಿ 10ಕ್ಕೂ ಹೆಚ್ಚು ಮಕ್ಕಳು, ಓಮ್ನಿಗಳಲ್ಲಿ 15ಕ್ಕೂ ಹೆಚ್ಚು ಮಕ್ಕಳು ಇರುತ್ತಾರೆ. ಮಕ್ಕಳು ಒಳಗಡೆ ಇದ್ದರೆ, ಅವರ ಬ್ಯಾಗ್‌ಗಳು ಹೊರಗಡೆ ನೇತು ಹಾಕಲಾಗುತ್ತದೆ. ಆಟೊಗಳಂತೂ ಒಂದು ಕಡೆಗೆ ವಾಲುತ್ತಿರುತ್ತವೆ. ಯಾವಾಗ ಏನಾಗಬಹುದು ಎಂಬ ಕಾಳಜಿ ಇಲ್ಲದೆ ಚಾಲಕರು ವಾಹನ ಚಲಾಯಿಸುತ್ತಾರೆ.

‘ವಾಹನ ಚಾಲಕರು ಕಡ್ಡಾಯವಾಗಿ ಚಾಲನಾ ಪತ್ರ, ವಿಮೆ, ನಿಗದಿಪಡಿಸಿದ ಸಂಖ್ಯೆಯಲ್ಲಿ ಮಕ್ಕಳನ್ನು ಕರೆ ತರಬೇಕು. ವಾಹನ ಚಲಾವಣೆ ಮಾಡುವಾಗ ಅತ್ಯಂತ ಜಾಗೂರಕರಾಗಿ ಚಲಾಯಿಸಬೇಕು. ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಟೇಪ್ ರಿಕಾರ್ಡ್ ನಿಷೇಧಿಸಬೇಕು. ಸಮವಸ್ತ್ರ ಧರಿಸಬೇಕು. ಆಯಾ ಶಾಲೆಗಳ ಮುಖ್ಯಸ್ಥರು ವಾಹನಗಳ ಚಾಲಕರ ಸಂಪೂರ್ಣ ಮಾಹಿತಿಯನ್ನು ಶಾಲೆಯಲ್ಲಿ ಅಂಟಿಸಿರಬೇಕು’ ಎನ್ನುತ್ತಾರೆ ಪೊಲೀಸರು.

ಜಿಲ್ಲಾಡಳಿತ, ಸಾರಿಗೆ, ಪೊಲೀಸ್‌ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆಟೊಗಳಿಗೆ, ಶಾಲಾ ವಾಹನಗಳಿಗೆ ಸರ್ಕಾರ ಅನೇಕ ಮಾರ್ಗಸೂಚಿಗಳನ್ನು ನೀಡಿದೆ. ಆದರೆ, ನಗರದಲ್ಲಿ ಆಟೊ, ಖಾಸಗಿ ವಾಹನಗಳಲ್ಲಿ ಮಿತಿಗಿಂತ ಹೆಚ್ಚು ಮಕ್ಕಳನ್ನು ಶಾಲೆಗೆ ಕರೆದೊಯ್ಯಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಬಹುತೇಕ ಶಿಕ್ಷಣ ಸಂಸ್ಥೆಗಳು ಪಾಲಿಸುತ್ತಿಲ್ಲ ಎನ್ನುವ ಆರೋಪಗಳಿವೆ.

ಯಾದಗಿರಿ ನಗರದಲ್ಲಿ ಆಟೋದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರುವುದು    ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ್

‘ಟಂಟಂದಲ್ಲಿ ನಿಗದಿಪಡಿಸಿದ ಸಂಖ್ಯೆಯಷ್ಟೇ ಮಕ್ಕಳನ್ನು ಶಾಲೆಗೆ ಕರೆ ತಂದರೆ ದುಬಾರಿಯಾಗುತ್ತದೆ. ಡಿಸೇಲ್ ಬೆಲೆ ಹೆಚ್ಚಳವಿದೆ. ಹೆಚ್ಚಿನ ಹಣ ಯಾರು ಕೊಡುತ್ತಾರೆ. ಪಾಲಕರು ಇಂತಿಷ್ಟೇ ಮಕ್ಕಳನ್ನು ತೆಗೆದುಕೊಂಡು ಹೋಗಿ ನಾವು ಹೆಚ್ಚಿನ ಫೀ ಕೊಡುತ್ತೇವೆ ಎಂದರೆ ಮಕ್ಕಳನ್ನು ಹೆಚ್ಚಾಗಿ ಕೂಡಿಸಿಕೊಂಡು ನಾವೇಕೆ ಬರುತ್ತೇವೆ’ ಎಂದು ಟಂಟಂ ಚಾಲಕರು ಮರು ಪ್ರಶ್ನಿಸುತ್ತಾರೆ.

ಸುರಪುರದಲ್ಲಿ ಶಾಲಾ ಮಕ್ಕಳನ್ನು ವ್ಯಾನ್‌ನಲ್ಲಿ ತುಂಬಿಕೊಂಡು ಹೊರಟಿರುವುದು

‘ಆಸನ ಸಾಮರ್ಥ್ಯದಷ್ಟೇ ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎನ್ನುವುದು ನಿಯಮ. ಆದರೆ, ಅಷ್ಟೇ ಮಕ್ಕಳನ್ನು ಕರೆದೊಯ್ಯಬೇಕಾದರೆ ಪೋಷಕರು ಹೆಚ್ಚು ಹಣ ಕೊಡಬೇಕು. ಆದರೆ, ಅವರು ಹಣ ಕೊಡಲು ಸಿದ್ಧರಿರುವುದಿಲ್ಲ. ಇದರಿಂದಾಗಿ ನಮ್ಮ ಉಪಜೀವನ ಕಷ್ಟವಾಗುತ್ತದೆ. ಅನಿವಾರ್ಯವಾಗಿ ಹೆಚ್ಚು ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಆಟೊ ಚಾಲಕರೊಬ್ಬರು ತಿಳಿಸಿದರು.

ಜಿಲ್ಲೆಯಲ್ಲಿ ಸಾರಿಗೆ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಕೆಂಭಾವಿಯಲ್ಲಿ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಇತರ ಕಡೆಯೂ ಜಾಗೃತಿ ಮೂಡಿಸಲಾಗುತ್ತಿದೆ
ಮಿಲಿಂದ್‌ ಕುಮಾರ ಪ್ರಾದೇಶಿಕ ಸಾರಿಗೆ ಅಧಿಕಾರಿ
ವಾಹನದಲ್ಲಿ ನಿಗದಿಪಡಿಸಿದ ಸಂಖ್ಯೆಯಷ್ಟು ಮಕ್ಕಳನ್ನು ಕರೆ ತರಬೇಕು. ವಾಹನ ಚಾಲಕರ ಪೂರ್ಣ ಮಾಹಿತಿ ಠಾಣೆಗೆ ನೀಡುವಂತೆ ಖಾಸಗಿ ಶಾಲೆಯ ಮುಖ್ಯಸ್ಥರಿಗೆ ಕಟ್ಟುನಿಟ್ಟಾಗಿ ಸೂಚಿಸಿದೆ.
ಎಸ್.ಎಂ.ಪಾಟೀಲ ಪಿ.ಐ ಶಹಾಪುರ ಠಾಣೆ
ಮಕ್ಕಳಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗುವುದು. ಅಪಘಾತ ಸಂಭವಿಸಿದರೆ ಶಾಲಾ ಮುಖ್ಯಸ್ಥರನ್ನು ಹೊಣೆ ಮಾಡುವ ಚಿಂತನೆ ಇಲಾಖೆ ಮಟ್ಟದಲ್ಲಿ ನಡೆಯುತ್ತಿದೆ
ಯಲ್ಲಪ್ಪ ಕಾಡ್ಲೂರು ಬಿಇಒ ಸುರಪುರ
ಶಕ್ತಿ ಯೋಜನೆ ಜಾರಿಯಾದ ನಂತರ ಬೇಡಿಕೆಯಿರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ ಸಂಚಾರ ಮಾಡುತ್ತಿವೆ. ಬಾಗಿಲಲ್ಲಿ ನೇತಾಡುವ ಸ್ಥಿತಿ ಸದ್ಯ ನಮ್ಮ ವ್ಯಾಪ್ತಿಯಲ್ಲಿಲ್ಲ
ಪ್ರವೀಣಕುಮಾರ ಯರನಾಳ ಗುರುಮಠಕಲ್‌ ಬಸ್‌ ಡಿಪೋ ವ್ಯವಸ್ಥಾಪಕ
ಗುರುಮಠಕಲ್‌ ತಾಲ್ಲೂಕಿನ ಬೂದೂರು ಗೇಟ್‌ ಹತ್ತಿರ ವರ್ಷದ ಹಿಂದೆ ಖಾಸಗಿ ಗೂಡ್ಸ್‌ ವಾಹನದಲ್ಲಿ ವಿದ್ಯಾರ್ಥಿಗಳು ಹೋಗುವಾಗ ಅಪಘಾತವಾಗಿತ್ತು. ವಾಹನ ಚಲಾಯಿಸುವರು ಜಾಗೃತವಾಗಿರಬೇಕು
ಮರಗಪ್ಪ ಕೂಲಿ ಕಾರ್ಮಿಕ
ಆಯಾ ಶಾಲಾಡಳಿತಗಳು ತಮ್ಮ ವಾಹನ ಮತ್ತು ಚಾಲಕನ ಕುರಿತು ಒಂದು ಕಣ್ಣಿಟ್ಟಿರಬೇಕು. ಸರ್ಕಾರದ ಮಾರ್ಗಸೂಚಿ ಅನುಸರಿಸುವಂತೆ ಸಂಬಂಧಿತ ಅಧಿಕಾರಿಗಳು ಆಗಾಗ ಪರಿಶೀಲಿಸಬೇಕು
ಮಹೇಶ ಬಿ. ಯುವಕ
ಕಕ್ಕೇರಾದಲ್ಲಿ ಖಾಸಗಿ ಶಾಲೆಗಳ ವಾಹನಗಳಲ್ಲಿ ನಿಗದಿತ ಮಕ್ಕಳ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುವುದು ಸಾಮಾನ್ಯವಾಗಿದ್ದು ಅದಕ್ಕೆ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗಬೇಕು
ಗುಡದಪ್ಪ ಬಿಳೇಭಾವಿ ಸ್ಥಳೀಯ ನಿವಾಸಿ
ಸಾರಿಗೆ ಇಲಾಖೆ ಜಿಲ್ಲಾಡಳಿತ ರೂಪಿಸಿರುವ ನಿಯಮಗಳನ್ನು ಪಾಲನೆ ಮಾಡಬೇಕು. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಆರ್‌ಟಿಒ ನೇತೃತ್ವದಲ್ಲಿ ಸಭೆ ನಡೆಸಲಾಗುವುದು
ಮಂಜುನಾಥ ಡಿಡಿಪಿಐ

ಮಕ್ಕಳ ಸುರಕ್ಷತೆಗೆ ಒತ್ತು ನೀಡಲು ಆಗ್ರಹ

ಸುರಪುರ: ನಗರದಲ್ಲಿ ಖಾಸಗಿ ಶಾಲೆಗಳು ಅಧಿಕವಾಗಿವೆ. ದೂರದಲ್ಲಿರುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಪಾಲಕರು ಆಟೋ ವ್ಯಾನ್‌ಗಳಲ್ಲಿ ಕಳಿಸುತ್ತಾರೆ. ಆದರೆ ಈ ವಾಹನಗಳು ಕೇವಲ ಸಂಪಾದನೆ ದೃಷ್ಟಿಕೋನ ಹೊಂದಿರುತ್ತಾರೆ. ಮಕ್ಕಳನ್ನು ಮಿತಿ ಮೀರಿ ತುಂಬಿಕೊಂಡು ಶಾಲೆಗೆ ಬಿಟ್ಟು ಬರುತ್ತಾರೆ. ಶಾಲೆ ಬಿಟ್ಟ ನಂತರ ಮತ್ತೆ ಮನೆಗೆ ತಂದು ಬಿಡುತ್ತಾರೆ. ಕೆಲವರು ಇದನ್ನೆ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ತುಂಬುತ್ತಾರೆ. ಕೆಲ ವಾಹನಗಳಲ್ಲಿ ಮಕ್ಕಳು ಒಬ್ಬರ ಮೇಲೆ ಒಬ್ಬರು ಕುಳಿತು ಇಲ್ಲವೇ ಜೋತು ಬಿದ್ದು ಪಯಣಿಸುತ್ತಾರೆ.

ನಗರದ ಬೆಟ್ಟ ಪ್ರದೇಶವಾಗಿರುವುದರಿಂದ ಅಲ್ಲಲ್ಲಿ ಘಟ್ಟ ಪ್ರದೇಶ ಅಪಾಯಕಾರಿ ಇಳಿಜಾರು ಇದೆ. ವಾಹನ ದಟ್ಟಣೆಯೂ ಅಧಿಕವಾಗಿದೆ. ಇದರಿಂದ ಅಪಘಾತದ ಸಾಧ್ಯತೆ ಹೆಚ್ಚಾಗಿದೆ. ಬಹುತೇಕ ಶಾಲೆಗಳಲ್ಲಿ ವಾಹನ ವ್ಯವಸ್ಥೆ ಇಲ್ಲ. ಕೆಲ ಶಾಲೆಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇವೆ. ಹೀಗಾಗಿ ಆಟೋ ಮತ್ತು ವ್ಯಾನ್‌ಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವ ಅನಿವಾರ್ಯತೆ ಇದೆ.

ವಾಹನಗಳು ಶಾಲಾ ಮುಖ್ಯಸ್ಥರ ಮಾರ್ಗಸೂಚಿಯ ಪ್ರಕಾರ ಸಂಚರಿಸುತ್ತವೆ. ದೂರದ ಮಕ್ಕಳು ಬೆಳಿಗ್ಗೆ 7 ಗಂಟೆಗೆ ಮನೆ ಬಿಡಬೇಕು. ವಾಹನಗಳು ಎಲ್ಲ ಬಡಾವಣೆಗಳಲ್ಲಿ ಸುತ್ತಾಡಿ 9.30 ಕ್ಕೆ ಶಾಲೆಗೆ ಮಕ್ಕಳನ್ನು ತಂದು ಬಿಡುತ್ತವೆ. ಸಮಯ ಉಳಿಸಲು ಪಾಲಕರು ಆಟೋ ವ್ಯಾನ್‌ಗಳಿಗೆ ಮೊರೆ ಹೋಗುತ್ತಾರೆ.

Cut-off box - ‘ಶಾಲಾ ವಾಹನಗಳ ಓಟದ ವೇಗಕ್ಕೆ ಮಿತಿಯಿರಲಿ’ ಗುರುಮಠಕಲ್‌: ಶಾಲಾ ಬಸ್‌ ಅಥವಾ ಶಾಲಾ ವಾಹನಗಳ ಕುರಿತಾಗಿ ಹೆಚ್ಚಿನ ಮಕ್ಕಳ ಪ್ರಯಾಣದ ಸಮಸ್ಯೆಯಿಲ್ಲ. ಆದರೆ ಆಗಾಗ ಚಾಲನಾ ವೇಗ ಹೆಚ್ಚಾಗಿರುತ್ತದೆ. ಶಾಲಾ ಬಸ್‌ಗಳ ವೇಗವು ಮಿತಿಯಾಗಿರಲಿ ಎನ್ನುವ ಅಭಿಪ್ರಾಯ ಜನರು ವ್ಯಕ್ತಪಡಿಸಿದರು. ಶಾಲೆಗೆ ನಮ್ಮ ಮಕ್ಕಳು ಹೋಗಿ ಬರುವುದು ಸುಲಭ ಮತ್ತು ಸುರಕ್ಷೆಯ ದೃಷ್ಟಿಯಿಂದ ಆಯಾ ಶಾಲೆಯ ವಾಹನಗಳಲ್ಲಿ ಕಳುಹಿಸಲಾಗುತ್ತದೆ. ಆಯಾ ಶಾಲಾ ಆಡಳಿತ ಮಂಡಳಿಗಳು ಚಾಲಕರಿಗೆ ಸೂಕ್ತ ನಿರ್ದೇಶನ ಮತ್ತು ವಾಹನಗಳ ಸ್ಥಿತಿಯ ಕುರಿತು ನಿರಂತರ ಪರಿಶೀಲಿಸಬೇಕು ಎಂದು ಪೋಷಕರಾದ ದೇವರಾಜ ವಿನೋದ ಸುಮಾ ಸಲಹೆ ನೀಡಿದರು. ಸದ್ಯದವರೆಗೂ ಶಾಲಾ ವಾಹನಗಳಲ್ಲಿ ಸಮಸ್ಯೆಗಳಾಗಿಲ್ಲ. ಆದರೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಬಾಗಿಲಲ್ಲಿ ನೇತಾಡುತ್ತಾ ಸಂಚರಿಸುವುದು ನೋಡಿದರೆ ಭಯವೆನಿಸುತ್ತದೆ. ಕೆಲ ಮಾರ್ಗಗಳಲ್ಲಿ ಬಸ್‌ ಓಡಟದ ಸಮಸ್ಯೆಯೋ ಅಥವಾ ಮಕ್ಕಳು ಶಾಲೆ-ಕಾಲೇಜುಗಳಿಗೆ ಹೋಗುವ ಮತ್ತು ಮನೆಗೆ ಹಿಂತಿರುಗುವ ವೇಳೆಯಲ್ಲಿ ಬಸ್‌ಗಳ ಕೊರತೆಯೋ ತಿಳಿಯದು. ಸೋಮವಾರ ಸಂತೆಯ ದಿನದಂದು ಮಕ್ಕಳ ಪಾಡು ಅವರಿಗೇ ಗೊತ್ತು. ಮಕ್ಕಳ ಹಿತದ ಮತ್ತು ರಕ್ಷಣೆಯ ದೃಷ್ಟಿಯಿಂದ ಅಂತಹ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ ವ್ಯವಸ್ಥೇ ಮಾಡಬಹುದಲ್ಲವೇ ಎಂದು ಹಿರಿಯರೊಬ್ಬರು ಆಗ್ರಹಿಸಿದರು.

Cut-off box - ಅಧಿಕಾರಿಗಳಿಂದ ಜಾಗೃತಿ  ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಖಾಸಗಿ ಶಾಲೆಗಳ ಮುಖ್ಯಸ್ಥರನ್ನು ಪೊಲೀಸ್ ಠಾಣೆಗೆ ಕರೆಯಿಸಿ ಪೊಲೀಸ್ ಅಧಿಕಾರಿಗಳು ಜಾಗೃತಿ ಮೂಡಿಸಿದರು. ಕಳೆದ ಕೆಲವು ದಿನಗಳ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿದ ಖಾಸಗಿ ಬಸ್ ಅಪಘಾತದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿಯೂ ಕೂಡ ಪೊಲೀಸ್‌ ಇಲಾಖೆ ಹಾಗೂ ಆರ್‌ಟಿಒ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತು ಕಳೆದ ಎರಡು ದಿನಗಳ ಹಿಂದೆ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಭಾಗಣ್ಣ ಅವರ ನೇತೃತ್ವದಲ್ಲಿ ಮುಖ್ಯಸ್ಥರನ್ನು ಕರೆದು ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮಕ್ಕಳ ಸುರಕ್ಷತೆ ಹಾಗೂ ಶಾಲೆಗಳಲ್ಲಿ ಅಳವಡಿಸಿಕೊಳ್ಳುವ ಸುರಕ್ಷಿತ ಕ್ರಮಗಳು ಹಾಗೂ ಮಕ್ಕಳ ಹಕ್ಕುಗಳ ಕುರಿತು ಚರ್ಚಿಸಲಾಯಿತು. ಯಾವುದೇ ಕಾರಣಕ್ಕೂ ಟಂಟಂ ಸೇರಿದಂತೆ ತ್ರಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗದೆ ಶಾಲಾ ವಾಹನದಲ್ಲಿ ಮಾತ್ರ ಶಾಲಾ ಅವಧಿಗೂ ಮುನ್ನ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಎಲ್ಲ ಶಿಕ್ಷಣ ಸಂಸ್ಥೆ ಅವರಿಗೆ ತಿಳಿವಳಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ವಾರ ಯಾದಗಿರಿ ಆರ್‌ಟಿಒ ಅಧಿಕಾರಿಗಳು ತಾಲ್ಲೂಕಿನ ವಿವಿಧ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡು ಸೂಕ್ತ ಸಲಹೆಗಳನ್ನು ಸೂಚನೆಗಳನ್ನು ನೀಡಿದ್ದಾಗಿ ತಿಳಿದು ಬಂದಿದೆ. ‘20 ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಬಸ್ ಸೌಲಭ್ಯವಿದ್ದು ಆಯಾ ಶಾಲಾ ಬಸ್‌ಗಳಲ್ಲಿ ಹಾಗೂ ನಾಲ್ಕು ಚಕ್ರದ ವಾಹನದಲ್ಲಿ ಮಾತ್ರ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತಿರುವುದಾಗಿ‘ ಶಿಕ್ಷಣ ಸಂಸ್ಥೆಯ ಮಲ್ಲಿಕಾರ್ಜುನ ಗುತ್ತೇದಾರ್ ಮಾಹಿತಿ ನೀಡಿದರು.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಎಂ.ಪಿ. ಚಪೆಟ್ಲಾ, ಭೀಮಶೇನರಾವ ಕುಲಕರ್ಣಿ, ಮಹಾಂತೇಶ ಸಿ. ಹೊಗರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.