ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಐವರು ಮೃತಪಟ್ಟ ದುರ್ಘಟನೆ ತಾಲ್ಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಮಂಗಳವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸಂಭವಿಸಿದೆ.
ದುರ್ಘಟನೆಯಲ್ಲಿ 3 ಗಂಡು, 2 ಹೆಣ್ಣು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ 13 ಜನರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಮೃತರು ಹಾಗೂ ಗಾಯಾಳುಗಳು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಿಂದ ಕಲಬುರಗಿ ಖ್ವಾಜಾ ಬಂದೇ ನವಾಜ್ ದುರ್ಗಾದ ಉರುಸ್‌ಗೆ ಹೊರಟ್ಟಿದ್ದರು. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಲಾರಿಗೆ ಹಿಂಬದಿಯಿಂದ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಕ್ರೂಸರ್‌ನಲ್ಲಿ 18 ಜನರಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಸೈದಾಪುರ ಪೊಲೀಸ್ ಠಾಣೆಯ ಪಿಐ ಕಾಳಪ್ಪ ಬಡಿಗೇರ ಹಾಗೂ ಡಿವೈಎಸ್ಪಿ ಬಸವೇಶ್ವರ ಹೀರಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣ ಸೈದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತರ ವಿವರ: ಮುನೀರ್, ನಯಾಮತ್ ಉಲ್ಲಾ (40), ಮುದಾಸಿರ್ (12), ರಮೀಜಾ (50), ಸುಮಿ ಮೌಶುಮ್ (12) ಮೃತಪಟ್ಟವರು.
ಗಾಯಗೊಂಡವರು: ಅಯಿಷಾ, ಅನಾಸ್ ಭಾಷಾ, ಸುಹಾನ ಭಾಷಾ, ರಮೀಜಾ ಶೇಕ್, ಮಸಿ ಉಲ್ಲಾ, ಸೀಮಾ, ರಿಯಾಜ್, ಮುಜ್ಜಿ ಮುನೀರ್, ನಸೀಮ್ ಉಲ್ಲಾ, ಮಶೌಮ್ ಭಾಷಾ, ಮುಜಾಕೀರ್, ಹನೀಫ್, ಸೋಹೆಲ್ ಖಲೀಲ್ ಗಾಯಗೊಂಡಿದ್ದಾರೆ.
ನಂದಾಲ್ಯ ಜಿಲ್ಲೆಯ ಅತ್ಮಕೂರು ತಾಲ್ಲೂಕಿನ ವೆನುಗೋಡು, ತಾಂಡ್ರಾಪಾಡು, ಬಂಡೆ ಅತ್ಮಕೂರು ಗ್ರಾಮದವರು ಮೃತರು, ಗಾಯಾಳುಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.