ADVERTISEMENT

ಗ್ಯಾರಂಟಿ ಭಾಗ್ಯದಿಂದ ಅನಿಯಮಿತ ಲೋಡ್‌ ಶೆಡ್ಡಿಂಗ್‌: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 8:30 IST
Last Updated 14 ಅಕ್ಟೋಬರ್ 2023, 8:30 IST
ಶೋಭಾ ಕರಂದ್ಲಾಜೆ 
ಶೋಭಾ ಕರಂದ್ಲಾಜೆ    

ಯಾದಗಿರಿ: ‘ರಾಜ್ಯದಲ್ಲಿ ಗ್ಯಾರಂಟಿ ಭಾಗ್ಯಗಳನ್ನು ಕೊಟ್ಟ ಪರಿಣಾಮ ಎಲ್ಲಾ ಎಸ್ಕಾಂಗಳು ಲೋಡ್ ಶೆಡ್ಡಿಂಗ್ ಮಾಡುತ್ತಿವೆ. 200 ಯೂನಿಟ್ ಉಚಿತ ವಿದ್ಯುತ್ ಕೊಟ್ಟ ಎಸ್ಕಾಂಗಳಿಗೆ ವಿದ್ಯುತ್ ಖರೀದಿಸಲು ಹಣವಿಲ್ಲದಂತಾಗಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಜಿಲ್ಲೆಯ ಸುರಪುರ ತಾಲ್ಲೂಕಿನ ಕವಡಿಮಟ್ಟಿಯಲ್ಲಿ ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಭವನ ಮತ್ತು ರೈತ ವಸತಿನಿಲಯ ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬಳ್ಳಾರಿ, ರಾಯಚೂರು ಥರ್ಮಲ್ ಘಟಕಗಳಿಂದ ಎಸ್ಕಾಂಗಳು ವಿದ್ಯುತ್ ಖರೀದಿ ಮಾಡಬೇಕು. ಆದರೆ, ವಿದ್ಯುತ್ ಖರೀದಿ ಮಾಡಲು ಸರ್ಕಾರದ ಬಳಿ ದುಡ್ಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಈಗ ಲೋಡ್ ಶೆಡ್ಡಿಂಗ್ ಶುರು ಮಾಡಿದ್ದಾರೆ’ ಎಂದು ದೂರಿದರು.

ADVERTISEMENT

‘ಹಲವು ಭಾಗ್ಯಗಳನ್ನು ಕೊಟ್ಟಿರುವ ಕಾರಣಕ್ಕೆ ಕಳೆದ ತಿಂಗಳು ರಾಜ್ಯದ ನ್ಯಾಯಾಧೀಶರಿಗೆ, ಶಿಕ್ಷಕರು ಹಾಗೂ ಸರ್ಕಾರಿ ನೌಕರರಿಗೆ ವೇತನ ತಡವಾಗಿ ನೀಡಿದ್ದಾರೆ. ಕೇವಲ 4–5 ತಿಂಗಳಲ್ಲಿ ಹಣಕಾಸಿನ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿದೆ. ಮುಂದಿನ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದ ಸ್ಥಿತಿ ಏನಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಅಧಿಕಾರಿಗಳ ವಿರುದ್ಧ ಸಿಡಿಮಿಡಿ

ಆಡಳಿತ ಭವನ ಮತ್ತು ರೈತ ವಸತಿ ನಿಲಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪಂವಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ಗೈರಾಗಿದ್ದರು. ಶಿಷ್ಟಾಚಾರ ಉಲ್ಲಂಘನೆಯಾಗಿರುವ ಬಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಸಿಡಿಮಿಡಿ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಏಕೆ ಬಂದಿಲ್ಲ ಎಂಬ ಬಗ್ಗೆ ಮಾಹಿತಿಯನ್ನು ಸರ್ಕಾರವೇ ತರಿಸಿಕೊಳ್ಳಬೇಕು. ಅಧಿಕಾರಿಗಳಿಗೆ ಇದಕ್ಕಿಂತ ದೊಡ್ಡ ಕೆಲಸ ಏನಿತ್ತು? ಈ ಬಗ್ಗೆ ನಾನು ಹಕ್ಕುಚ್ಯುತಿ ಮಂಡನೆ ಮಾಡುವುದಿಲ್ಲ. ಇಲ್ಲಿ ಉದ್ಘಾಟಿಸಿದ ಕಟ್ಟಡ ಬಿಜೆಪಿ ಕಾರ್ಯಕರ್ತರಿಗಾಗಿ ಅಲ್ಲ. ಇದು ರೈತರಿಗಾಗಿ ಇರುವ ಕಟ್ಟಡ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.