ADVERTISEMENT

ಯಾದಗಿರಿ | ಶೇ 7.5 ಮೀಸಲಾತಿ ನಿಶ್ಚಿತ: ರಾಜೂಗೌಡ

‘ರಾಜಕೀಯ ಸಂನ್ಯಾಸದ ಮಾತು ಬೇಡ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 7:30 IST
Last Updated 19 ಏಪ್ರಿಲ್ 2022, 7:30 IST
ರಾಜೂಗೌಡ
ರಾಜೂಗೌಡ   

ಯಾದಗಿರಿ: ‘ವಾಲ್ಮೀಕಿ ಸಮುದಾಯಕ್ಕೆ‌ ಶೇ 7.5 ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ’ ಎಂದು ಶಾಸಕ ರಾಜೂಗೌಡ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಮೀಸಲಾತಿ ಕುರಿತಂತೆ ಖಂಡಿತ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿ ಮೇಲೆ‌ ನಮಗೆ ವಿಶ್ವಾಸವಿದೆ. ಮೀಸಲಾತಿ ಕೊಡಿಸದಿದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಮಂತ್ರಿ ಮಂಡಲದಲ್ಲಿ ಅವರು ಚರ್ಚಿಸಬೇಕು ಅದು ಬಿಟ್ಟು ಈ‌ ತರಹದ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ತನ್ನ‌ ಬದ್ಧತೆ ತೋರಿಸುತ್ತಿದೆ. ಶೀಘ್ರದಲ್ಲಿಯೇ ವಾಲ್ಮೀಕಿ ಸಮುದಾಯದ ಬೇಡಿಕೆ‌ ಈಡೇರಿಸಲಿದೆ. ಆದರೆ, ಸಚಿವ ಶ್ರೀರಾಮುಲು ಅವರು ಭಾವವೇಶಕ್ಕೆ ಒಳಗಾಗಿ ಹೇಳಿಕೆ ನೀಡುವುದು ಬೇಡ’ ಎಂದು ಹೇಳಿದರು.

ADVERTISEMENT

‘ಕಲಬುರಗಿಯ ಬಿಜೆಪಿ‌ ನಾಯಕಿ ದಿವ್ಯಾ ಹಾಗರಗಿ ಭಾಗಿಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜೂಗೌಡ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಅವರನ್ನು ರಕ್ಷಿಸುವ ಹಾಗಿದ್ದರೆ ಸಿಐಡಿ ಪೊಲೀಸರು ಅವರ ವಿಚಾರಣೆ ಯಾಕೆ ನಡೆಸುತ್ತಿದ್ದರು ಎಂದು ಪ್ರಶ್ನಿಸಿ, ಸಿಐಡಿ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಸತ್ಯಾಂಶವನ್ನು ಹೊರಗೆಳೆಯಲಿದ್ದಾರೆ’ ಎಂದು ಅವರು ಹೇಳಿದರು.

‘ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಕುರಿತು ಪ್ರತಿಕ್ರಿಯಿಸಿ, ಸರ್ಕಾರ ಮತ್ತಷ್ಟು ಬಲಿಷ್ಠರಾಗಬೇಕು. ಯಾರು ತಪ್ಪು ಮಾಡುತ್ತಾರೋ ಅವರನ್ನ ಬೆಂಡೆತ್ತಲಿ. ಶಾಲೆ ಶಿಕ್ಷಕರು ಅದೇ ಕೆಲಸ ಮಾಡಬೇಕು, ಗೃಹ ಸಚಿವರು ಗೃಹ ಸಚಿವರೇ ಆಗಿರಬೇಕು. ಶಾಲಾ ಶಿಕ್ಷಕ ಸರ್ಕಲ್ ಇನ್ಸ್‌ಪೆಕ್ಟರ್ ಆಗಬಾರದು ಎಂದು ಮಾರ್ಮಿಕವಾಗಿ ನುಡಿದು ಅರಗ ಜ್ಞಾನೇಂದ್ರ ಮತ್ತಷ್ಟು ಗಟ್ಟಿಯಾಗಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಅವರು ಈ ವೇಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.