ADVERTISEMENT

ವಾಲ್ಮೀಕಿ ನಿಗಮದ ಹಗರಣ ಸಚಿವ ನಾಗೇಂದ್ರ, ಸಿಎಂ ಹೊಣೆ: ಮರೆಪ್ಪ ನಾಯಕ ಆರೋಪ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 14:36 IST
Last Updated 22 ಜೂನ್ 2024, 14:36 IST
ಮರೆಪ್ಪ ನಾಯಕ ಮಗದಂಪುರ
ಮರೆಪ್ಪ ನಾಯಕ ಮಗದಂಪುರ   

ಯಾದಗಿರಿ: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಈಚೆಗೆ ನಡೆದ ₹187 ಕೋಟಿ ಮೊತ್ತದ ಭ್ರಷ್ಟಾಚಾರದಲ್ಲಿ ಸಚಿವ ಬಿ.ನಾಗೇಂದ್ರ ಹಾಗೂ ಸಿಎಂ ಸಿದ್ದರಾಮಯ್ಯ ಅವರು ನೇರ ಹೊಣೆ ಎಂದು ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ಸಂಘದ ರಾಜ್ಯಾಧ್ಯಕ್ಷ ಮರೆಪ್ಪ ನಾಯಕ ಮಗದಂಪುರ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಅವರು ‘ತೆಲಂಗಾಣದ ಹೈದರಾಬಾದ್‌ ನಗರದ ನಕಲಿ ವ್ಯಾಪಾರಸ್ಥರ 18 ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದಕ್ಕೆ ಸಚಿವ ಬಿ.ನಾಗೇಂದ್ರ ಅವರೇ ಕಾರಣ’ ಎಂದು ಸ್ಪಷ್ಟವಾಗಿ ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದಾರೆ’ ಎಂದರು.

‘₹ 1 ಕೋಟಿಗೂ ಅಧಿಕ ಹಣ ಮಂಜೂರಾಗಲು ಸಚಿವ ಸಂಪುಟದ ಅನುಮತಿ ಕಡ್ಡಾಯ ಎಂಬ ನಿಯಮವಿದೆ. ಆದರೆ, ಕಾನೂನು ಬಾಹಿರವಾಗಿ ಬೇರೆ ರಾಜ್ಯಗಳ ಖಾತೆಗಳಿಗೆ ಹಣ ವರ್ಗಾಯಿಸಿ, ಪಡೆದುಕೊಂಡಿದ್ದಾರೆ. ಈ ಹಗರಣದಲ್ಲಿ ಮುಖ್ಯಮಂತ್ರಿ ನೇರವಾಗಿ ಭಾಗಿಯಾಗಿರುವ ಅನುಮಾನವಿದೆ’ ಎಂದು ಆರೋಪಿಸಿದರು.

ADVERTISEMENT

‘2023-24ನೇ ಸಾಲಿನ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ₹ 263 ಕೋಟಿ ಹಣ ಬಳಕೆಯಾಗಿಲ್ಲ. ಅಧಿಕಾರಿಗಳನ್ನು ಕೇಳಿದರೆ ಶಾಸಕರು ಫಲಾನುಭವಿಗಳ ಪಟ್ಟಿ ನೀಡುತ್ತಿಲ್ಲ ಎಂದು ಉತ್ತರಿಸುತ್ತಾರೆ. ರಾಜ್ಯದಲ್ಲಿ ಕೇವಲ ವಾಲ್ಮೀಕಿ ಸಮುದಾಯದ ಜನಸಂಖ್ಯೆಯೇ 70 ಲಕ್ಷವಿದೆ. ಜತೆಗೆ ಇನ್ನೂ ಹಲವು ಸಮುದಾಯಗಳೂ ಪರಿಶಿಷ್ಟ ಪಂಗಡದಲ್ಲಿವೆ. ಇಷ್ಟು ಜನರಲ್ಲಿ ಫಲಾನುಭವಿಗಳು ಸಿಗಲಿಲ್ಲವೇ? ಎಂದು ಆಕ್ರೋಶಗೊಂಡರು.

‘ಕಾಂಗ್ರೆಸ್ ಸರ್ಕಾರ ಕೇವಲ ಹೆಸರಿಗೆ ನಮ್ಮನ್ನು ಅಭಿವೃದ್ಧಿ ಮಾಡುವ ಮಾತಾಡುತ್ತದೆ. ಹಿಂದಿನಿಂದ ನಮ್ಮ ಕತ್ತು ಕೊಯ್ಯುತ್ತಿದೆ. ಈ ರೀತಿಯ ನಿರ್ಲಕ್ಷ್ಯವು ನಾಚಿಕೆಗೇಡು. ಸರ್ಕಾರ ಅದರ ಹೊಣೆ ಹೊರಲಿ. ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಕಾಣುತ್ತದೆ’ ಎಂದು ಹೇಳಿದರು.

ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಕಾರ್ಯದರ್ಶಿ ಶ್ರವಣಕುಮಾರ, ಸಿದ್ದಣ್ಣ ಕೆಂಭಾವಿ, ಸಿದಲಿಂಗಪ್ಪ ನಾಯಕ, ಶರಣಪ್ಪ ವರ್ಕನಳ್ಳಿ, ಮರೆಪ್ಪ ಪ್ಯಾಟಿ, ದೊಡ್ಡಯ್ಯ ನಾಯಕ, ಅಂಬುನಾಯಕ, ಚಂದ್ರಕಾಂತ ಕವಲ್ದಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.