ADVERTISEMENT

ಶಹಾಪುರ | ವೀರಶೈವ ಲಿಂಗಾಯತ ಮಹಾಸಭೆ: ಪ್ರಥಮ ಬಾರಿಗೆ ಚುನಾವಣೆ

ಟಿ.ನಾಗೇಂದ್ರ
Published 15 ಜುಲೈ 2024, 6:09 IST
Last Updated 15 ಜುಲೈ 2024, 6:09 IST
ಸಿದ್ದಣ್ಣ ಅರಬೋಳ
ಸಿದ್ದಣ್ಣ ಅರಬೋಳ   

ಶಹಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲ್ಲೂಕು ಘಟಕದ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ. ಸಂಪ್ರದಾಯದಂತೆ ಹಲವಾರು ವರ್ಷದಿಂದ ಒಮ್ಮತದ ಮೂಲಕ ಅಧ್ಯಕ್ಷರನ್ನು ನೇಮಿಸಿಕೊಂಡು ಬರಲಾಗುತ್ತಿತ್ತು. ಪ್ರಸಕ್ತ ಬಾರಿ ತಾಲ್ಲೂಕಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ವೀರಶೈವ ಲಿಂಗಾಯತ ಮಹಾಸಭೆ ಅಸ್ತಿತ್ವಕ್ಕೆ ಬಂದ ನಂತರ ಚುನಾವಣೆ ಏರ್ಪಟ್ಟಿರುವುದು ವಿಶೇಷವಾಗಿದೆ.

ಜು.8ರಂದು ನಾಮಪತ್ರ ಹಿಂಪಡೆಯುವ ಕೊನೆ ದಿನವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಹೊರತುಪಡಿಸಿ ತಾಲ್ಲೂಕು ಘಟಕದ 20 ಕಾರ್ಯಕಾರಣಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಚುನಾವಣೆ ಅಧಿಕಾರಿ ಕಲ್ಲಯ್ಯಸ್ವಾಮಿ ತಿಳಿಸಿದರು.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಸಿದ್ದಪ್ಪ ಆರಬೋಳ ಹಾಗೂ ಮಹೇಶಚಂದ್ರ ಆನೇಗುಂದಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ತಾಲ್ಲೂಕಿನಲ್ಲಿ ವೀರಶೈವ ಲಿಂಗಾಯತ ಸಮುದಾಯ ವ್ಯಾಪ್ತಿಯ ಒಳಗಡೆ ಲಿಂಗಾಯತ ಕುಂಬಾರ, ಲಿಂಗಾಯತ ಮಡಿವಾಳ, ಲಿಂಗಾಯತ ಹಡಪದ, ರೆಡ್ಡಿ ಲಿಂಗಾಯತ, ಪಂಚಮಸಾಲಿ, ಬಣಜಿಗ, ಸಿಂಪಗೇರ, ಹೂಗಾರ ಮುಂತಾದ ಸಮುದಾಯಗಳನ್ನು ಒಳಗೊಂಡ 924 ಸದಸ್ಯ ಮತದಾರರು ಇದ್ದಾರೆ’ ಎಂದು ಚುನಾವಣೆ ಅಧಿಕಾರಿ ಕಲ್ಲಯ್ಯಸ್ವಾಮಿ ಮಾಹಿತಿ ನೀಡಿದರು.

ADVERTISEMENT

‘ಹಿಂದೆ ಹಿರಿತನಕ್ಕೆ ಹಾಗೂ ಜವಾಬ್ದಾರಿ ಸ್ಥಾನದ ಗಣ್ಯ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿಕೊಂಡು ಬಂದಿದ್ದರು. ದಿ.ಸಂಗನಗೌಡ ಪಾಟೀಲ ಹಳಿಸಗರ, ದಿ.ಬಸವರಾಜೇಂದ್ರ ದೇಶಮುಖ ಹಾಗೂ ಮಲ್ಲಣ್ಣ ಮಡ್ಡಿ ಸಾಹು ಅವರು ಅವಿರೋಧವಾಗಿ ಅಧ್ಯಕ್ಷರಾಗಿ ನೇಮಕಗೊಂಡು ಸಮಾಜದ ಸೇವೆ ಸಲ್ಲಿಸಿದ್ದರು’ ಎಂದು ನೆನಪಿಸುತ್ತಾರೆ ಲಿಂಗಾಯತ ಸಮುದಾಯದ ಮುಖಂಡರು.

‘ಈ ಬಾರಿ ಚುನಾವಣೆ ನಡೆಯುವುದರಿಂದ ಮನಸ್ತಾಪ, ಗುಂಪುಗಾರಿಕೆ ಹಾಗೂ ಒಗ್ಗಟ್ಟಿನ ಕೊರತೆ ಎದುರಾಗಿ ಮಹಾಸಭೆ ಕವಲುದಾರಿಯತ್ತ ಸಾಗುವ ಅಪಾಯವಿದೆ. ಕಾಲಚಕ್ರ ಬದಲಾದಂತೆ ಎಲ್ಲ ಕ್ಷೇತ್ರದಲ್ಲಿ ಬದಲಾವಣೆಯಾಗುತ್ತಿದ್ದಂತೆ ನಮ್ಮಲ್ಲಿಯೂ ಬದಲಾವಣೆಗೆ ನಾವೆಲ್ಲರೂ ಮಾನಸಿಕವಾಗಿ ಸಜ್ಜಾಗಬೇಕಾಗಿದೆ. ಅಪ್ಪ ಹಾಕಿದ ಆಲದ ಮರಕ್ಕೆ ಎಷ್ಟು ವರ್ಷ ನೆರಳಿನ ಆಸರೆಯಾಗಿ ನಾವು ಕಾಯಬೇಕು. ಯುವಕರಿಗೆ ಅವಕಾಶ ಸಿಗುವುದು ಯಾವಾಗ?. ನಮ್ಮಲ್ಲಿಯೇ ಆತ್ಮಿಯವಾಗಿ ಚುನಾವಣೆ ನಡೆಯುವುದರಿಂದ ಯಾವುದೇ ಸಂಘರ್ಷ ಉಂಟಾಗುವುದಿಲ್ಲ. ಚುನಾವಣೆ ಮೂಲಕ ಗೆಲವು ಸಾಧಿಸಿದರೆ ಖದರ್‌ ಬೇರೆಯೇ ಆಗಿರುತ್ತದೆ. ಜಡ್ಡುಗಟ್ಟಿದ ವ್ಯವಸ್ಥೆಗೆ ಮೊದಲ ಹೆಬ್ಬಾಗಲು ಚುನಾವಣೆಯಾಗಿದೆ’ ಎನ್ನುತ್ತಾರೆ ಮತದಾರ ಸದಸ್ಯರೊಬ್ಬರು.

ಚುನಾವಣೆ ಸಮಾಜದ ಕೆಲವು ಮುಖಂಡರಿಗೆ ಇರಿಸು ಮುರಿಸು ಉಂಟು ಮಾಡಿದ್ದು ಸುಳ್ಳಲ್ಲ. ಯಾರು ಗೆಲ್ಲುತ್ತಾರೆ ಎಂಬುದು ಜುಲೈ 21ರಂದು ನಿರ್ಧಾರವಾಗಲಿದೆ.

ತಾಲ್ಲೂಕಿನಲ್ಲಿ 924 ಸದಸ್ಯ ಮತದಾರರು ಇದ್ದಾರೆ. ಚುನಾವಣೆ ವೇಳಾ ಪಟ್ಟಿಯಂತೆ ಜುಲೈ 21ರಂದು ಮತದಾನ ನಡೆಯಲಿದೆ
–ಕಲ್ಲಯ್ಯ ಸ್ವಾಮಿ ಚುನಾವಣಾ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.