ADVERTISEMENT

ಗುರುಮಠಕಲ್‌: ಕ್ಷೇತ್ರದಲ್ಲಿ 1,586 ಪದವೀಧರ ಮತದಾರರು

ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ ಕುರಿತ ಸಭೆ

​ಪ್ರಜಾವಾಣಿ ವಾರ್ತೆ
Published 31 ಮೇ 2024, 15:43 IST
Last Updated 31 ಮೇ 2024, 15:43 IST
ಗುರುಮಠಕಲ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀದರರ ಕ್ಷೇತ್ರದ ಚುನಾವಣೆ ಕುರಿತು ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ತಹಶೀಲ್ದಾರ್ ಶ್ರೀನಿವಾಸ ಚಾಪೇಲ್ ಮಾತನಾಡಿದರು
ಗುರುಮಠಕಲ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀದರರ ಕ್ಷೇತ್ರದ ಚುನಾವಣೆ ಕುರಿತು ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ತಹಶೀಲ್ದಾರ್ ಶ್ರೀನಿವಾಸ ಚಾಪೇಲ್ ಮಾತನಾಡಿದರು   

ಗುರುಮಠಕಲ್: ‘ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಗುರುಮಠಕಲ್ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,084 ಪುರುಷ ಹಾಗೂ 502 ಮಹಿಳಾ ಮತದಾರರು ಸೇರಿ ಒಟ್ಟು 1,586  ಮತದಾರರಿದ್ದಾರೆ’ ಎಂದು ತಹಶಿಲ್ದಾರ್ ಶ್ರೀನಿವಾಸ ಚಾಪೇಲ್ ಮಾಹಿತಿ ನೀಡಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀದರರ ಕ್ಷೇತ್ರದ ಚುನಾವಣೆ ಕುರಿತು ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, 1 ಸಾವಿರಕ್ಕಿಂತಲೂ ಹೆಚ್ಚಿನ ಮತದಾರರಿರುವ ಹಿನ್ನೆಲೆಯಲ್ಲಿ ಒಂದು ಹೆಚ್ಚುವರಿ ಮತಗಟ್ಟೆ ಸೇರಿ ಒಟ್ಟು ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಎಡ ಭಾಗದ ಮತಗಟ್ಟೆಯಲ್ಲಿ 733 ಹಾಗೂ ಕಾಲೇಜಿನ ಬಲಭಾಗದ ಮತಗಟ್ಟೆಯಲ್ಲಿ 733 ಜನ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜೂನ್‌ 3ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.

ADVERTISEMENT

ಈಗಾಗಲೇ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ಪದವೀಧರ ಮತದಾರರಿಗೆ ಪೋಲಿಂಗ್ ಸ್ಲಿಪ್ ಹಂಚಿಕೆ ಮಾಡಲಾಗಿದೆ. ಮತದಾನಕ್ಕೆ ಬರುವಾಗ ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್) ಅಥವಾ ಆಧಾರ್, ಪಾಸ್ ಪೋರ್ಟ್, ಶಾಸಕ-ಸಂಸದರಿಗೆ ನೀಡಿದ ಗುರುತಿನ ಚೀಟಿ, ಶಾಲಾ-ಕಾಲೇಜುಗಳಲ್ಲಿ ನೀಡಿದ ಗುರುತಿನ ಚೀಟಿ, ಚಾಲನಾ ಪರವಾನಗಿ ಸೇರಿದಂತೆ ಒಟ್ಟು ಒಂಬತ್ತು ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾಯಿಸಬಹುದು ಎಂದು ಹೇಳಿದರು.

ಸಾಮಾನ್ಯ ಸಾರ್ವಾತ್ರಿಕ ಚುನಾವಣೆಗಳಂತೆ ಇಲ್ಲಿ ಇವಿಎಂ ಇರುವುದಿಲ್ಲ, ಮತ ಪತ್ರದ ಮೇಲೆ ಸ್ವಸ್ಥಿಕ್ ಮಾದರಿಯ ಗುರುತು ಹಾಕುವಂತಿಲ್ಲ. ಪೆನ್ ಮೂಲಕ ಟಿಕ್ ಮಾಡುವಂತಿಲ್ಲ. ಬದಲಿಗೆ ಚುನಾವಣಾ ಆಯೋಗದಿಂದ ಮತಗಟ್ಟೆ ಅಧಿಕಾರಿ ನೀಡುವ ನೆರಳೆ ಬಣ್ಣದ ಮಾರ್ಕರ್ ಪೆನ್ ಬಳಸಿ, ನಿಮ್ಮ ಪ್ರಾಶಸ್ತ್ಯದ ಆಂಗ್ಲ ಭಾಷಾ ಅಂಕಿಯನ್ನು ಅಭ್ಯರ್ಥಿಯ ಹೆಸರಿನ ಮುಂದೆ ನೀಡಲಾದ ಸ್ಥಳದಲ್ಲಿ ಬರೆಯಬೇಕು ಎಂದರು.

ಮೊದಲ ಪ್ರಾಶಸ್ತ್ಯದ ಮತ (1) ನೀಡದೆ ಉಳಿದ ಅಂಕಿಗಳ ಮೂಲಕ ಪ್ರಾಶಸ್ತ್ಯದ ಮತಗಳನ್ನು ನೀಡಿದರೆ ಅಂತಹ ಮತವೂ ಅಸಿಂಧುಗೊಳ್ಳಲಿದೆ. ಮತದಾರರು 1 ರಿಂದ 15 ಪ್ರಾಶಸ್ತ್ಯದ ಮತಗಳನ್ನು ನೀಡಲು ಅವಕಾಶವಿದ್ದು, ಮೊದಲ ಪ್ರಾಶಸ್ತ್ಯದ ಮತ ಕಡ್ಡಾಯವಾಗಿ ನೀಡಿದ ನಂತರ ಉಳಿದ ಪ್ರಾಶಸ್ತ್ಯದ ಮತಗಳನ್ನು ಬರೆಯಬೇಕಿದೆ ಎಂದು ವಿವರಿಸಿದರು.

ಪಕ್ಷಗಳ ಪ್ರತಿನಿಧಿಗಳಾದ ಅಕ್ಬರ್ ಸೇಟ್, ಜಗದೀಶ ಮೇಂಗಜೀ, ಹುಸೇನ ಪುಲಿ, ರವಿ, ಲಾಲಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.