ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಆಯುಧ ಪೂಜೆ, ಶನಿವಾರ ವಿಜಯದಶಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಮನೆಯಲ್ಲಿ ಸಿಹಿಯೂಟ ತಯಾರಿಸಿ ಬಂಧು ಬಳಗವನ್ನು ಹಬ್ಬಕ್ಕೆ ಆಹ್ವಾನಿಸಿದ್ದರು. ಅಕ್ಕಪಕ್ಕದವರನ್ನು ಊಟಕ್ಕೆ ಆಹ್ವಾನಿಸುವುದರ ಮೂಲಕ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದರು. ಹಬ್ಬದ ಅಂಗವಾಗಿ ಶನಿವಾರ ರಸ್ತೆಯಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಅಲ್ಲದೆ ಜನರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಇದರಿಂದ ಹಲವಾರು ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು.
ನಗರದ ವಿವಿಧೆಡೆ ನವರಾತ್ರಿ ಹಬ್ಬದ ಅಂಗವಾಗಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ರೈಲ್ವೆ ಸ್ಟೇಷನ್ ಏರಿಯಾ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಬಾಬು ಜಗಜೀವನರಾಂ ನಗರ, ಶಹಾಪುರಪೇಟ್, ಬೋವಿವಾಡ ನಗರ, ಗಾಂಧಿ ನಗರ ತಾಂಡಾ, ಹೊಸಳ್ಳಿ ಕ್ರಾಸ್, ಆತ್ಮಲಿಂಗ ದೇವಸ್ಥಾನ, ಮೈಲಾಪುರ ಅಗಸಿ, ಕೋಟೆ ಬಳಿ ಭುವನೇಶ್ವರಿ ದೇವಿಮೂರ್ತಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯೂ ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿದಿನವೂ ಪೂಜೆ ನಡೆದವು.
ರೈಲ್ವೆ ಸ್ಟೇಷನ್ ಏರಿಯಾದ ಶಿವಾಜಿನಗರದ ಬಳಿ ಹಿಂದೂ ಸೇವಾ ಸಮಿತಿ ವತಿಯಿಂದ ಅಂಭಾ ಭವಾನಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ತಾಲ್ಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಅಲ್ಲದೇ ಜಿಲ್ಲೆಯ ವಿವಿಧೆಡೆಯಿಂದ ದೇವಿಯನ್ನು ದರ್ಶನ ಪಡೆಯಲು ಭಕ್ತರು ತಂಡೋಪ ತಂಡವಾಗಿ ಆಗಮಿಸಿದ್ದರು.
ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದಿಂದ ದೇವಸ್ಥಾನದ ವರೆಗೆ ವಿವಿಧ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ರಾತ್ರಿ ವೇಳೆ ದೀಪಾಂಲಕಾರ ಆಕರ್ಷವಾಗಿತ್ತು. ಹಲವರು ಫೋಟೋ ತೆಗೆದು ಸಂಭ್ರಮಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಂಭ್ರಮಿಸಿದರು.
ದಾಂಡಿಯಾ ನೃತ್ಯ ಆಕರ್ಷಣೆ: ಜಿಲ್ಲೆಯ ವಿವಿಧೆಡೆ ನವರಾತ್ರಿ ಅಂಗವಾಗಿ ಮಠ, ದೇಗುಲಗಳಲ್ಲಿ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದಾಂಡಿಯಾ ನೃತ್ಯ ಆಕರ್ಷಣೆಯಾಗಿತ್ತು. ದೇವಿ ಪ್ರತಿಷ್ಠಾಪಿಸಿದ ದಿನದಿಂದ 9 ದಿನಗಳ ಕಾಲ ರಾತ್ರಿ 9 ಗಂಟೆಯಿಂದ 12ರ ತನಕ ನೃತ್ಯ ನಡೆಯಿತು. ಯುವತಿಯರು, ಮಹಿಳೆಯರು ನೃತ್ಯದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಶಿವಾಜಿ ನಗರ, ಗಾಂಧಿ ನಗರ ತಾಂಡಾ, ಮುದ್ನಾಳ ಲೇಔಟ್, ಶಹಾಪುರಪೇಟ್, ಹೊಸಳ್ಳಿ ಕ್ರಾಸ್, ಆತ್ಮಲಿಂಗ ದೇವಸ್ಥಾನ ಸೇರಿದಂತೆ ನಗರದ ವಿವಿಧೆಡೆ ಈ ಬಾರಿ ದಾಂಡಿಯಾ ನೃತ್ಯ ಅಯೋಜಿಸಲಾಗಿತ್ತು.
9 ದಿನಗಳವರೆಗೆ ದೇವಿಯನ್ನು ಪ್ರತಿಷ್ಠಾಪಿಸಿ ವಿಜಯದಶಮಿ ದಿನ ಪೂಜೆ, ವಿಜೃಂಭಣೆಯಿಂದ ದೇವಿ ಮೆರವಣಿಗೆ ಮಾಡಲಾಗುತ್ತದೆ. ಕೆಲ ಕಡೆ ದೇವಿ ಮೂರ್ತಿಯನ್ನು ವಿಸರ್ಜನೆ ಮಾಡಿದರು.
ಭುವನೇಶ್ವರಿ ಬೆಟ್ಟ: ನಗರದ ಕೋಟೆ ಪ್ರದೇಶದಲ್ಲಿ ಭುವನೇಶ್ವರಿ ದೇವಿ ಬೆಟ್ಟದಲ್ಲಿ ದಸರಾ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು. ಜಿಲ್ಲಾಧಿಕಾರಿ ಡಾ.ಸುಶೀಲಾ ಸೇರಿದಂತೆ ವಿವಿಧ ಅಧಿಕಾರಿಗಳು ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ತತ್ವಪದ ಗಾಯನ, ವಚನ ಗಾಯನ, ಜಾನಪದ, ಭಕ್ತಿಗೀತೆಗಳ ಗಾಯನ, ಮಕ್ಕಳ ನೃತ್ಯ ಹಮ್ಮಿಕೊಳ್ಳಲಾಗಿತ್ತು.
ಆಯುಧ ಪೂಜೆ: ಆಯುಧ ಪೂಜೆ ಅಂಗವಾಗಿ ಶುಕ್ರವಾರ ತಮ್ಮ ವಾಹನಗಳಿಗೆ ಆಯಾ ವೃತ್ತಿಯವರು ಪೂಜೆ ನಡೆಸಿದರು. ಸಿಬ್ಬಂದಿ ಒಂದೇ ವಿಧದ ಬಟ್ಟೆ ಧರಿಸಿ ಗಮನ ಸೆಳೆದರು. ಬೆಳಿಗ್ಗೆಯಿಂದಲೇ ಆಯಾ ವೃತ್ತಿಯವರು ತಮ್ಮ ಕಾಯಕಕ್ಕೆ ಬಳಸುವ ಸಾಮಗ್ರಿಯನ್ನು ಸ್ವಚ್ಛ ಮಾಡಿ ಪೂಜೆ ಸಲ್ಲಿಸಿದರು. ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿ, ವಾರ್ತಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿದರು.
ಭಜರಂಗಳ ದಳ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ವಿವಿಧ ಆಯುಧಗಳಿಗೆ ಪೂಜೆ ಸಲ್ಲಿಸಿದರು. ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ವಾಹನ ಸವಾರರು ಕುಂಬಳಕಾಯಿ ಒಡೆದು, ವಾಹನಗಳಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಿದ್ದರು. ಆಯುಧ ಪೂಜೆ ಅಂಗವಾಗಿ ಹಲವರು ಮುಂಗಡ ಬುಕ್ಕಿಂಗ್ ಮಾಡಿದ ವಾಹನಗಳನ್ನು ಖರೀದಿಸಿ ಪೂಜೆ ಮಾಡಿ ಸಂಭ್ರಮಿಸಿದರು.
ಎಟಿಎಂ ಬಂದ್: ಸಾಲುಸಾಲು ರಜೆ ಬಂದಿದ್ದರಿಂದ ಆಯುಧ ಪೂಜೆ ದಿನ ಸಾರ್ವಜನಿಕರು ಎಟಿಎಂನಲ್ಲಿ ಹಣವಿಲ್ಲದೆ ಪರದಾಡಿದರು. ಆಯುಧ ಪೂಜೆ, ದಸರಾ ಹಬ್ಬದ ಅಂಗವಾಗಿ ಸತತವಾಗಿ ರಜೆ ಇದ್ದ ಕಾರಣ ಬ್ಯಾಂಕ್‌ಗಳು ಮುಚ್ಚಿದ್ದರಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಟಿಎಂ ಕೇಂದ್ರಗಳ ಮುಂದೆ ‘ನೋ ಕ್ಯಾಶ್’ ಬೋರ್ಡ್ ನೇತು ಹಾಕಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.