ಗುರುಮಠಕಲ್: ತಾಲ್ಲೂಕಿನ ಕಾಕಲವಾರ ಗ್ರಾಮದಲ್ಲಿ ಜುಲೈ11ರಿಂದ ವಾಂತಿ-ಭೇದಿ ಪ್ರಕರಣಗಳು ಕಾಣಿಸಿಕೊಂಡಿದ್ದು, ಅಧಿಕಾರಿಗಳ ದಂಡು ಗ್ರಾಮಕ್ಕೆ ದೌಡಾಯಿಸುತ್ತಿದೆ. ಇದಕ್ಕೆ ‘ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಬಾವಿ ತೋಡಿದಂತಿದೆ’ ಎಂದು ಸಾರ್ವಜನಿಕರು ಅಸಮಾಧಾನ ತೋಡಿಕೊಂಡರು.
ವಾಂತಿ-ಭೇದಿಯಿಂದಾಗಿ 2023ರ ಫೆಬ್ರವರಿ ತಿಂಗಳಲ್ಲಿ ತಾಲ್ಲೂಕಿನ 90ಕ್ಕೂ ಅಧಿಕ ಜನ ಅಸ್ವಸ್ಥರಾಗಿ, ಮೂವರು ಮೃತಪಟ್ಟಿದ್ದರು. ಘಟನೆಯ ಬೆನ್ನಲ್ಲೇ ಫೆ.28ಕ್ಕೆ ತಾಲ್ಲೂಕಿನ ಚಿನ್ನಾಕಾರ ಗ್ರಾಮದಲ್ಲಿ 8 ಜನ ಅಸ್ವಸ್ಥರಾದರೆ, ಮತ್ತೊಂದು ತಿಂಗಳ ಅಂತರದಲ್ಲಿ ದಂತಾಪುರ ಗ್ರಾಮದಲ್ಲಿ ವಾಂತಿ-ಭೇದಿ ವಕ್ಕರಿಸಿತ್ತು.
ಅದೇ ವರ್ಷ ಜೂನ್ 24ರಂದು ತಾಲ್ಲೂಕಿನ ಹಿಮಾಲಪುರ ಗ್ರಾಮದಲ್ಲಿ ಬಂದು 100ಕ್ಕೂ ಅಧಿಕ ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿತು. 2023ರ ಅಗಸ್ಟ್ 21ರಂದು ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ 27ಕ್ಕೂ ಅಧಿಕ ಜನರಿಗೆ ವಾಂತಿ-ಭೇದಿ ಕಾಡಿತ್ತು.
ಇದೀಗ ಗುರುವಾರದಿಂದ ಮತ್ತೆ ತಾಲ್ಲೂಕಿನಲ್ಲಿ ವಾಂತಿ-ಭೇದಿ ಮರುಕಳಿಸಿದ್ದು, ‘ಸಂಬಂಧಿತ ಅಧಿಕಾರಿಗಳು ಯಾಕೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ? ಪುನಾರಾವರ್ತನೆಯ ನಂತರವೂ ನಿರ್ಲಕ್ಷ್ಯ ವಹಿಸುವವರನ್ನು ಏನೆನ್ನಬೇಕು? ಸಾಮಾನ್ಯ ಜನರ ಜೀವವೆಂದರೆ ಯಾರಿಗೂ ಬೇಡವೆನ್ನುವಂತಿದೆ. ಸಮಸ್ಯೆ ಉಂಟಾದ ನಂತರ ಕಾಳಜಿ ತೋರುವ ಬದಲು, ಸಮಸ್ಯೆಯೇ ಬಾರದಂತೆ ಎಚ್ಚರ ವಹಿಸಿದರೆ ಉತ್ತಮ ಎನ್ನುವ ಆಕ್ರೋಶ ತಾಲ್ಲೂಕಿನ ಜನತೆಯದ್ದು.
ಕಾಕಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಹಾಗೂ ಎಂ.ಟಿ.ಪಲ್ಲಿ ಗ್ರಾಮಗಳಲ್ಲಿನ ತಲಾ ಏಳು ಜಲ ಮೂಲಗಳಲ್ಲಿ ಎರಡರಲ್ಲಿ ಕುಡಿಯಲು ನೀರು ಯೋಗ್ಯವಿಲ್ಲ. ಕಾಕಲವಾರದ ನಾಲ್ಕು ಜಲ ಮೂಲಗಳಲ್ಲಿ 3 ಯೋಗ್ಯವಿಲ್ಲ ಎನ್ನುವ ಕುರಿತು ಜುಲೈ 7ರಂದೇ ಗ್ರಾಮ ಪಂಚಾಯಿತಿಗೆ ವರದಿ ನೀಡಲಾಗಿತ್ತು. ಕ್ಲೋರಿನೇಶನ್ ಸಹ ಸೂಚಿಸಲಾಗಿತ್ತು ಎಂದು ಆರೊಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಎರಡು- ಮೂರು ದಿನಗಳಿಂದ ಊರಿನಲ್ಲಿರುವ ಬೋರ್, ಬಾವಿಗಳ ನೀರಿನಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಣೆ, ಕ್ಲೋರಿನೇಶನ್ ಮಾಡುತ್ತಿದ್ದರು. ಆದರೆ, ಮಾಡಬೇಕಾದ ರೀತಿ ಇವರಿಗೆ ಗೊತ್ತಿರಲಿಲ್ಲ ಎನ್ನಿಸುತ್ತದೆ. ಸರಿಯಾಗಿ ಮಾಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಜತೆಗೆ, ಜಲಮೂಲಗಳ ಕ್ಲೋರಿನೇಶನ್ ಆದರೂ ಕೂಡ ಚರಂಡಿಗಳಲ್ಲಿ ಹಾದು ಹೋದ ಪೈಪ್‌ಗಳಲ್ಲಿನ ಸೋರಿಕೆ ಮಾತ್ರ ಹಾಗೇ ಇತ್ತು. ಸಮಸ್ಯೆ ತಲೆಯೆತ್ತುತ್ತಲೇ ದುರಸ್ಥಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.
ನಾನು ಇಂದೇ ಪಂಚಾಯಿತಿಗೆ ನಿಯೋಜನೆಗೊಂಡಿರುವೆ. ಸ್ವಚ್ಛತೆ, ಕ್ಲೋರಿನೇಶನ್, ಪೈಪ್‌ಲೈನ್ ದುರಸ್ಥಿ ಸೇರಿದಂತೆ ಅವಶ್ಯಕ ಕೆಲಸಗಳನ್ನು ಮಾಡಲಾಗುತ್ತಿದೆ. ಸಮಸ್ಯೆ ಉಲ್ಬಣವಾಗದಂತೆ ಮೇಲಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಕ್ರಮವಹಿಸಲಾಗುವುದು ಎಂದು ಪಿಡಿಒ ಭೀಮರಾಯ ಹೇಳಿದರು.
ಐವರು ಗುಣಮುಖ, 16 ಜನ ಆರೈಕೆಯಲ್ಲಿ: ತಾಲ್ಲೂಕಿನ ಕಾಕಲವಾರ ಗ್ರಾಮದಲ್ಲಿ ಜುಲೈ 11ರಿಂದ ಬೆಳಕಿಗೆ ಬಂದ ವಾಂತಿ-ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 21 ಜನ ಅಸ್ವಸ್ಥರಾಗಿದ್ದು, 5 ಜನ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದು, ಸದ್ಯ 16 ಜನ ವಿವಿಧ ಆಸ್ಪತ್ರೆಗಳಲ್ಲಿ ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಪಟ್ಟಣದ ರಕ್ಷಾ ಆಸ್ಪತ್ರೆಯಲ್ಲಿ 10 ಜನ, ಸರ್ಕಾರಿ ಆಸ್ಪತ್ರೆಯಲ್ಲಿ 6 ಜನ ಆರೈಕೆಯಲ್ಲಿದ್ದರು. ಉಳಿದವರ ಆರೋಗ್ಯ ಸ್ಥಿರವಾಗಿದೆ. ಗಂಭೀರ ಪ್ರಕರಣಗಳಿಲ್ಲ ಎಂದು ತಿಳಿಸಿದೆ.
ಕಳೆದ ವರ್ಷದಿಂದ ನಮ್ಮ ತಾಲ್ಲೂಕಿನಲ್ಲಿ ವಾಂತಿ-ಭೇದಿ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಪ್ರತಿ ಬಾರಿಯೂ ಕಠಿಣ ಕ್ರಮವಹಿಸುವ ಭರವಸೆ ನೀಡುತ್ತಾರೆ. ಆದರೆ ಅದು ಮಾತಿನಲ್ಲೇ ಉಳಿಯುತ್ತಿದೆ. ಆಡಳಿತದ ನಿರ್ಲಕ್ಷದಿಂದ ಸಾಮಾನ್ಯ ಜನ ಬೆಲೆ ತೆರುವಂತಾಗಿದೆ- ಶರಣಬಸಪ್ಪ ಎಲ್ಲೆರಿ ಕರವೇ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.