ಗುರುಮಠಕಲ್: ತಾಲ್ಲೂಕು ವ್ಯಾಪ್ತಿಯಲ್ಲಿ ವಾಂತಿ-ಭೇದಿ ಪ್ರಕರಣಗಳು ಬಿಟ್ಟು-ಬಿಡದೆ ಕಾಡುತ್ತಿವೆ. ತಾಲ್ಲೂಕಿನ ಜನತೆಗೆ ‘ಹೋದೆಯಾ ಪಿಶಾಚಿ ಎಂದರೆ ಬಂದೆ ಗಾವಾಕ್ಷೀಲಿ' ಎನ್ನುವಂತಾಗಿದೆ ವಾಂತಿ-ಭೇದಿಯ ಬಾಧೆ.
ತಾಲ್ಲೂಕಿನ ಕಾಕಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದೂರು ಗ್ರಾಮದಲ್ಲಿ ಭಾನುವಾರ (ಜುಲೈ 21) ರಾತ್ರಿ ಮೂರು ಜನರಲ್ಲಿ ವಾಂತಿ-ಭೇದಿಯ ಸಮಸ್ಯೆ ಕಾಣಿಸಿಕೊಂಡಿದ್ದು, ಸೋಮವಾರ (ಜುಲೈ 22) ಬೆಳಿಗ್ಗೆ ಮತ್ತೆ ಮೂವರಿಗೆ ವಕ್ಕರಿಸಿದ್ದು, ಒಟ್ಟು ಆರು ಜನರು ವಾಂತಿ-ಭೇದಿಗೆ ಅಸ್ವಸ್ಥರಾಗಿದ್ದಾರೆ.
ಒಬ್ಬರು ಗುಣಮುಖರಾಗಿ ಹಿಂದಿರುಗಿದ್ದು, ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಬ್ಬರು, ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಯಾದಗಿರಿ ನಗರದ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಗ್ರಾಮಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್, ಗ್ರಾಮದ ಅಲ್ಲಲ್ಲಿ ಪೈಪ್‌ಲೈನ್ ಸೋರಿಕೆಯಾಗಿ ಕಲುಷಿತ ನೀರು ಮಿಶ್ರಗೊಂಡಿದ್ದು, ನೀರನ್ನು ಕುಡಿದಿದ್ದೇ ಸಮಸ್ಯೆಗೆ ಕಾರಣವಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದರು.
ಪಂಚಾಯಿತಿ ಕೇಂದ್ರ ಸ್ಥಾನವಾದ ಕಾಕಲವಾರ ಗ್ರಾಮದಲ್ಲಿ ಸಮಸ್ಯೆ ನಿಯಂತ್ರಣಕ್ಕೆ ಬಂದು ಇನ್ನೂ ಒಂದುವಾರ ಮುಗಿಯುವ ಮುಂಚೆಯೇ ಅದೇ ಪಂಚಾಯಿತಿಯ ಬೂದೂರು ಗ್ರಾಮದಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಇದು ಕೇವಲ ಪಂಚಾಯಿತಿ ಮಾತ್ರವಲ್ಲ ತಾಲ್ಲೂಕು ಮತ್ತು ಜಿಲ್ಲಾಡಳಿತಗಳ ವೈಫಲ್ಯವೆಂದೇ ಕರೆಯಬೇಕಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂಜು ಅಳೆಗಾರ.
ಭಾನುವಾರ ರಾತ್ರಿ ಸಮಸ್ಯೆ ಬೆಳಕಿಗೆ ಬಂದಿದೆ. ಸೋಮವಾರ ಬೆಳಿಗ್ಗೆ ಪೈಪ್‌ಲೈನ್ ದುರಸ್ತಿ ಮಾಡಲಾಗುತ್ತಿದೆ. ಜತೆಗೆ ಗ್ರಾಮದಲ್ಲಿ ಧ್ವನಿವರ್ಧಕದ ಮೂಲಕ ನೀರು ಸೋಸಿ, ಕುದಿಸಿ, ಆರಿಸಿ ಕುಡಿಯುವಂತೆ ಮತ್ತು ಇತರೆ ಆರೋಗ್ಯಕ್ಕೆ ಸಂಬಂಧಿಸಿದ ಜಾಗೃತಿಯನ್ನು ಬಿತ್ತರಿಸಲಾಗುತ್ತಿದೆ. ಆದರೆ, ಸಮಸ್ಯೆಗೂ ಪೂರ್ವವೇ ಎಚ್ಚೆತ್ತುಕೊಂಡರೆ ಇನ್ನೂ ಉತ್ತಮವಲ್ಲವೇ? ಎನ್ನುವುದು ಗ್ರಾಮಸ್ಥ ಪಾಪಿರೆಡ್ಡಿ ಅವರ ಅಂಬೋಣ.
ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ತೆರಳಿದ್ದ ಟಿಎಚ್‌ಒ ಡಾ.ಹಣಮಂತರೆಡ್ಡಿ ಅವರು, ಪರಿಸ್ಥಿತಿಯ ಕುರಿತು ಪರಿಶೀಲಿಸಿ, ಜಲ ಮೂಲಗಳಿಂದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಜತೆಗೆ ಗ್ರಾಮದಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಆರಂಭಿಸಲಾಗಿದೆ.
'ಬೋರ್ 1, ಸಿಂಗಲ್ ಫೇಸ್ 3, ಕೈಪಂಪ್ 1, ಒಂದು ತೆರೆದ ಬಾವಿಗಳಿದ್ದು, ಕ್ಲೋರಿನೇಶನ್ ಕೆಲಸ ಮಾಡಲಾಗಿದೆ. ಪ್ರತಿ ಶನಿವಾರ ಕ್ಲೋರಿನೇಶನ್ ಮಾಡುತ್ತಿದ್ದೇವೆ ಮತ್ತು ಜುಲೈ 14 ರಂದು ಗ್ರಾಮದ ಎಲ್ಲಾ ಜಲ ಮೂಲಗಳ ನೀರಿನ ಮಾದರಿ ಪರೀಕ್ಷೆ ಮಾಡಿಸಿದಾಗ ಕುಡಿಯಲು ಯೋಗ್ಯವಾಗಿದ್ದವು' ಎಂದು ಪಿಡಿಒ ಭೀಮರಾಯ ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ ವಾಂತಿ-ಭೇದಿ ಪ್ರಕರಣಗಳು ಬೆನ್ನತ್ತಿವೆ. ಸಮಸ್ಯೆಯ ಪುನರಾವರ್ತನೆ ಆಡಳಿತ ವೈಫಲ್ಯದ ಕೈಗನ್ನಡಿಯಲ್ಲವೇ? ಕೇವಲ ಪಂಚಾಯಿತಿ ಮಾತ್ರವಲ್ಲ ಮತ್ತು ಜಿಲ್ಲಾಡಳಿತವನ್ನು ನೇರ ಹೊಣೆಯಾಗಿಸಲಿ. -ಲಲಿತಾ ಅನಪುರ ಬಿಜೆಪಿ ರಾಜ್ಯ ಕಾರ್ಯದರ್ಶಿ
ಸದ್ಯ ಕಾಕಲವಾರ ವಾಂತಿ-ಭೇದಿ ಸಮಸ್ಯೆಯ ನಂತರ ಈ ಪಂಚಾಯಿತಿಗೆ ನಿಯೋಜನೆಗೊಂಡಿರುವೆ. ಬೂದೂರು ಗ್ರಾಮದ ನೀರು ಮತ್ತು ಚರಂಡಿ ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರೊಂದಿಗೆ ಚರ್ಚಿಸಿ ಮೇಲಾಧಿಕಾರಿಗಳ ನಿರ್ದೇಶನದಂತೆ ಕ್ರಮವಹಿಸುವೆ
-ಭೀಮರಾಯ ಕಾಕಲವಾರ ಪಂಚಾಯಿತಿ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.