ADVERTISEMENT

ಗುರುಮಠಕಲ್ | ವಾಂತಿ-ಭೇದಿಗೆ ಮತ್ತೆ 12 ಜನ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:16 IST
Last Updated 23 ಜುಲೈ 2024, 16:16 IST
ಗುರುಮಠಕಲ್ ಹತ್ತಿರದ ಬೂದೂರು ಗ್ರಾಮದ ತಾತ್ಕಾಲಿಕ ಆರೋಗ್ಯ ಶಿಬಿರದಲ್ಲಿ ವಾಂತಿ-ಭೇದಿಯಿಂದ ಅಸ್ವಸ್ಥ  ಮಹಿಳೆಗೆ ಚಿಕಿತ್ಸೆ ನೀಡುತ್ತಿರುವುದು
ಗುರುಮಠಕಲ್ ಹತ್ತಿರದ ಬೂದೂರು ಗ್ರಾಮದ ತಾತ್ಕಾಲಿಕ ಆರೋಗ್ಯ ಶಿಬಿರದಲ್ಲಿ ವಾಂತಿ-ಭೇದಿಯಿಂದ ಅಸ್ವಸ್ಥ  ಮಹಿಳೆಗೆ ಚಿಕಿತ್ಸೆ ನೀಡುತ್ತಿರುವುದು   

ಗುರುಮಠಕಲ್: ಹತ್ತಿರದ ಕಾಕಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದೂರು ಗ್ರಾಮದಲ್ಲಿ ಮಂಗಳವಾರ ಮತ್ತೆ ವಾಂತಿ-ಭೇದಿಗೆ 12 ಜನ ಅಸ್ವಸ್ಥರಾಗಿದ್ದು, ಒಟ್ಟು 21 ಜನರಿಗೆ ಸಮಸ್ಯೆ ಕಾಡುತ್ತಿದೆ.

8 ಜನ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಉಳಿದಂತೆ ರಾಯಚೂರು ನಗರದ ರಿಮ್ಸ್ ಮತ್ತು ಯಾದಗಿರಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ತಲಾ ಒಬ್ಬರು, ಜಿಲ್ಲಾಸ್ಪತ್ರೆಯಲ್ಲಿ ಮೂವರು, ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾಲ್ವರು, ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಮೂವರು, ಬೂದೂರು ಗ್ರಾಮದ ತಾತ್ಕಾಲಿಕ ಆರೋಗ್ಯ ಶಿಬಿರದಲ್ಲಿ ಒಬ್ಬರು ಸೇರಿ 13 ಜನ ವೈದ್ಯಕೀಯ ಆರೈಕೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

‘ಗ್ರಾಮದ ಎಲ್ಲ ಚರಂಡಿಗಳ ಸ್ವಚ್ಛತೆ ಕಾರ್ಯ ನಡೆಸುತ್ತಿದ್ದು, ಚರಂಡಿ ನಿರ್ಮಾಣದ ಅಗತ್ಯ ಇರುವಲ್ಲಿ ಚರಂಡಿ ನಿರ್ಮಿಸುವ ನಿಟ್ಟಿನಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಲಾಗಿದೆ. ಸಮಸ್ಯಾತ್ಮಕ ಸ್ಥಳಗಳಲ್ಲಿ ಸ್ಥಳೀಯರ ಮನವೊಲಿಸಿ, ಚರಂಡಿ ನಿರ್ಮಾಣಕ್ಕೆ ಚಿಂತಿಸುತ್ತಿದ್ದೇವೆ’ ಎಂದು ಪಿಡಿಒ ಭೀಮರಾಯ ಹೇಳಿದರು.

ADVERTISEMENT

‘ಜಲ ಮೂಲಗಳ ನೀರಿನ ಮಾದರಿಯ ಪರೀಕ್ಷೆ ಮಾಡಿಸಿದಾಗ ನೀರು ಕುಡಿಯಲು ಯೋಗ್ಯವಾಗಿದ್ದು, ಜಲ ಮೂಲಗಳ ಬದಲಿಗೆ, ಗ್ರಾಮದಲ್ಲಿ ವಿವಿಧ ಬಡಾವಣೆಗಳಿಗೆ ಸರಬರಾಜಾಗುತ್ತಿರುವ ನಳಗಳಿಂದಲೂ ಮತ್ತೆ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ’ ಎಂದರು.

ಕಾಕಲವಾರ ಮತ್ತು ಬೂದೂರು ಗ್ರಾಮಗಳಲ್ಲಿ ಕಾಣಿಸಿಕೊಂಡ ವಾಂತಿ-ಭೇದಿ ಸಮಸ್ಯೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಆಸ್ಪತ್ರೆಯ ಖರ್ಚನ್ನು ಜಿಲ್ಲಾಡಳಿತ ಭರಿಸಲಿ ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.