ADVERTISEMENT

ವಡಗೇರಾ; ಮಾರ್ಚ್‌ನಲ್ಲಿ ಕಂದಾಯ ಸಚಿವರ ವಾಸ್ತವ್ಯ

ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಪೂರ್ವಭಾವಿ ಸಿದ್ದತಾ ಸಭೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 16:17 IST
Last Updated 22 ಫೆಬ್ರುವರಿ 2023, 16:17 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರಣ ಬುಧವಾರ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸ್ನೇಹಲ್.ಆರ್‌ ಪೂರ್ವಭಾವಿ ಸಿದ್ಧತೆ ಸಭೆ ನಡೆಸಿದರು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರಣ ಬುಧವಾರ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸ್ನೇಹಲ್.ಆರ್‌ ಪೂರ್ವಭಾವಿ ಸಿದ್ಧತೆ ಸಭೆ ನಡೆಸಿದರು   

ಯಾದಗಿರಿ: ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಎಂಬ ಘೋಷವಾಕ್ಯದಡಿ ಆಯೋಜಿಸಿರುವ ‘ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳಲ್ಲಿ ವಡಗೇರಾ ಗ್ರಾಮದಲ್ಲಿ ಕಂದಾಯ ಸಚಿವರು ಗ್ರಾಮ ವಾಸ್ತವ್ಯ ಹೂಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ನೇಹಲ್.ಆರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರಣ ಬುಧವಾರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಿದ್ಧತೆ ಸಭೆ ನಡೆಸಿ ಅವರು ಮಾತನಾಡಿದರು.

ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿ, ಸಮಸ್ಯೆಗಳಿಗೆ ಉನ್ನತ ಅಧಿಕಾರಿಗಳು ಖುದ್ದಾಗಿ ಸ್ಪಂದಿಸಲು ಹಾಗೂ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಅವರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಗ್ರಾಮ ವಾಸ್ತವ್ಯದಲ್ಲಿ ಅನುಸರಿಸಬೇಕೆಂದು ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಅಂದು ವಡಗೇರಾ ಗ್ರಾಮ ವಾಸ್ತವ್ಯದಲ್ಲಿ ವಿವಿಧ ಇಲಾಖೆಗಳು ತಮ್ಮ-ತಮ್ಮ ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಳಿಗೆಗಳನ್ನು ಆರಂಭಿಸಬೇಕು ಎಂದರು.

ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಹಾಗೂ ಅರ್ಹರು ಬಿಪಿಎಲ್ ಕಾರ್ಡ್ ಪಡೆಯದಿದ್ದಲ್ಲಿ ಅವರಿಗೆ ನಿಯಮಾನುಸಾರ ಸೌಲಭ್ಯ ಒದಗಿಸಲು ಆದೇಶಿಸುವುದು, ಗುಡಿಸಲು ರಹಿತ ವಾಸದ ನಿರ್ಮಾಣ ಗ್ರಾಮಗಳಿಗೆ ಭೇಟಿ ನೀಡಿದ ಸಮಯದಲ್ಲಿ ಗುಡಿಸಲುಗಳು ಇರುವ ವಾಸದ ಮನೆಗಳನ್ನು ಪತ್ತೆಹಚ್ಚಿ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳಡಿ ಮನೆಕಟ್ಟಲು ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗೆ ನಿರ್ದೇಶನ ನೀಡಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮರೇಶ ಆರ್ ನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿಡಿಪಿಐ ಶಾಂತಗೌಡ ಪಾಟೀಲ, ಪ್ರಭಾರಿ ಡಿಎಚ್‌ಒ ಡಾ.ಲಕ್ಷ್ಮೀಕಾಂತ ಒಂಟಿಪೀರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಭುದೊರೆ, ವಡಗೇರಾ ತಹಶೀಲ್ದಾರ್‌ ಸುರೇಶ ಅಂಕಲಗಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಬಸಪ್ಪ ಎಸ್ ತಳವಡಿ, ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ರಾಜು ದೇಶಮುಖ, ಜಂಟಿ ಕೃಷಿ ನಿರ್ದೇಶಕ ಅಬಿದ್ ಎಸ್, ಆರ್‌ಸಿಎಚ್ಒ ಡಾ.ಮಲ್ಲಪ್ಪ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

***

ಸವಲತ್ತುಗಳ ಬಗ್ಗೆ ಅರಿವು ಮೂಡಿಸಿ

ಪಹಣಿಯಲ್ಲಿನ ಲೋಪದೋಷಗಳು ಸರಿಪಡಿಸಲು ಕ್ರಮ ಕೈಗೊಳ್ಳುವುದು. ಗ್ರಾಮದಲ್ಲಿ ಪೌತಿ ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಲಂ 9 ರಿಂದ ತೆಗೆದು ನೈಜ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌ ಸೂಚಿಸಿದರು.

ಗ್ರಾಮದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸುವುದು ಮತ್ತು ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡುವುದು. ಗ್ರಾಮದಲ್ಲಿ ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನನ್ನು ಕಾಯ್ದಿರಿಸಲು ಕ್ರಮ ವಹಿಸುವುದು. ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವುದು. ಆಧಾರ್ ಕಾರ್ಡ್‌ನ ಅನೂಕೂಲತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಇನ್ನಿತರೆ ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು. ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕ್ರಮವಹಿಸಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.