ADVERTISEMENT

ಯಾದಗಿರಿ। ಬಾರದ ಅಂಕಪಟ್ಟಿ : ಬಿ.ಇಡಿ ಪ್ರವೇಶಕ್ಕೆ ಪರದಾಟ

ಗುಲ್ಬರ್ಗಾ ವಿ.ವಿ. ಪದವಿ 6ಸೆಮಿಸ್ಟರ್‌ ಅಂಕಪಟ್ಟಿಗಾಗಿ ಕಾಯುವಿಕೆ, ಸರ್ಕಾರಿ ಸೀಟು ಕೈತಪ್ಪುವ ಆತಂಕ

ಬಿ.ಜಿ.ಪ್ರವೀಣಕುಮಾರ
Published 11 ಜನವರಿ 2023, 5:35 IST
Last Updated 11 ಜನವರಿ 2023, 5:35 IST
   

ಯಾದಗಿರಿ: ಬಿ.ಇಡಿ (ಪ್ರೌಢ ಶಿಕ್ಷಕರ ತರಬೇತಿ) ಕೋರ್ಸ್ ಪ್ರವೇಶ ಪಡೆಯಲು ಸರ್ಕಾರಿ ಕೋಟಾದ ಅರ್ಹ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಆಯಾ ಜಿಲ್ಲೆಗಳ ಡಯಟ್‌ಗಳಲ್ಲಿ ಆರಂಭವಾಗಿದೆ. ಆದರೆ, ದಾಖಲಾತಿ ಪರಿಶೀಲನೆ ವೇಳೆ ವಿದ್ಯಾರ್ಥಿಯ ಪ್ರಥಮ ದರ್ಜೆ ಪದವಿ ಪರೀಕ್ಷೆಗಳ (ಡಿಗ್ರಿ) ಮೂಲ ಅಂಕಪಟ್ಟಿಗಳು ಅವಶ್ಯವಾಗಿದ್ದು, ಗುಲಬರ್ಗಾ ವಿಶ್ವವಿದ್ಯಾಲಯ ಈವರೆಗೂ ನವೆಂಬರ್-ಡಿಸೆಂಬರ್ 2022 ರ ಪದವಿ 6 ನೇ ಸೆಮಿಸ್ಟರ್ ಫಲಿತಾಂಶ ಇನ್ನೂ ಪ್ರಕಟಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ.

ಕೋವಿಡ್‌ ಕಾರಣ ಶೈಕ್ಷಣಿಕ ತರಗತಿಗಳ ಆರಂಭದಲ್ಲಿ ಏರುಪೇರಾಗಿದ್ದು, ಈವರೆಗೂ ಸರಿಪಡಿಸಲಾಗದ್ದರಿಂದ ಈಗ ಬಿ.ಇಡಿ. ಮಾಡಲಿಚ್ಚಿಸಿದ 2022ನೇ ಸಾಲಿನ ಪದವೀಧರರು 6 ನೇ ಸೆಮಿಸ್ಟರ್‌ ಫಲಿತಾಂಶ ಪ್ರಕಟಿಸದಿರುವುದು ಹಾಗೂ ಮೂಲ ಅಂಕಪಟ್ಟಿಯಿಲ್ಲದ ಕಾರಣ ಮುಂದಿನ ಶೈಕ್ಷಣಿಕ ವರ್ಷದವರೆಗೂ ಕಾಯುವುದು ಅನಿವಾರ್ಯವಾಗಿದೆ.

ಕೋವಿಡ್‌ ನಂತರದಲ್ಲಿ ವಿಶ್ವವಿದ್ಯಾಲಯ ಹಾಗೂ ಇತರೆ ವೃತ್ತಿಪರ ತರಗತಿಗಳ ಶೈಕ್ಷಣಿಕ ತರಗತಿಗಳ ಅವಧಿಯಲ್ಲಿ ಮೂಡಿದ ಗೊಂದಲದಿಂದಾಗಿ ಬಿ.ಇಡಿ ಮಾಡಲಿಚ್ಛಿಸಿದ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಮ್ಯಾನೇಜ್ಮೆಂಟ್‌ ಸೀಟ್‌:

ಜಿಲ್ಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ಪದವಿ ಮುಗಿಸಿ ಬಿ.ಇಡಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ 6ನೇ ಸೆಮ್‌ನ ಅಂಕಪಟ್ಟಿ ಬಂದಿಲ್ಲ. ಇದರಿಂದ ಸರ್ಕಾರಿ ಸೀಟು ಕೈತಪ್ಪುವ ಭೀತಿ ಎದುರಾಗಿದೆ. ಮ್ಯಾನೇಜ್ಮೆಂಟ್‌ ಸೀಟ್‌ ಎರಡು ವರ್ಷಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಭರಿಸಬೇಕಾಗುತ್ತದೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ. ಈಗ ಮೌಲ್ಯಮಾಪನ ನಡೆಯುತ್ತಿದ್ದು, ಫಲಿತಾಂಶ ಬರಲು ತಡವಾಗುತ್ತಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ವಲಯದಲ್ಲಿ ಗಾಢವಾದ ಪ್ರಭಾವ ಬೀರುತ್ತದೆ.

ಪರೀಕ್ಷೆ ವಿಳಂಬ:

ಸೆಪ್ಟೆಂಬರ್–ಅಕ್ಟೋಬರ್‌ ತಿಂಗಳಿನಲ್ಲಿ ನಡೆಯಬೇಕಿದ್ದ ಪರೀಕ್ಷೆ ನವೆಂಬರ್‌–ಡಿಸೆಂಬರ್ ನಡೆದಿದ್ದು, ಇದರಿಂದ 6ನೇ ಸೆಮ್‌ ಫಲಿತಾಂಶ ವಿಳಂಬವಾಗಿದೆ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಒಂದು ವರ್ಷ ಕಾಲಹರಣ:

ಪರೀಕ್ಷೆಯ ಫಲಿತಾಂಶ ಬಾರದ ಕಾರಣ ವಿದ್ಯಾರ್ಥಿಗಳು ಒಂದು ವರ್ಷ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರೊದು ಫಲಿತಾಂಶ ಬಂದಿದಿಯೋ ಅವರು ಮಾತ್ರ ದಾಖಲಾತಿ ಪರಿಶೀಲನೆ ಮಾಡಿಕೊಂಡು ಕಾಲೇಜುಗಳಲ್ಲಿ ದಾಖಲಾತಿ ಪಡೆಯಲು ಅರ್ಹತೆ ಹೊಂದಿದ್ದಾರೆ. ಫಲಿತಾಂಶ ಬಾರದ ಕಾರಣ ಒಂದು ವರ್ಷ ಕಾಲಹರಣ ಮಾಡುವ ಪರಿಸ್ಥಿತಿ ಇದೆ. 5ನೇ ಸೆಮಿಸ್ಟರ್‌ ಪರೀಕ್ಷೆ ಫಲಿತಾಂಶ ಬಂದಿದ್ದರೂ ಮೂಲ ಅಂಕಪಟ್ಟಿ ಇನ್ನೂ ನೀಡಿಲ್ಲ.

ಮಂಗಳವಾರ ದಾಖಲಾತಿ ಪರಿಶೀಲನೆಗೆ ಹೋಗಿದ್ದ ನಮ್ಮ ಪರಿಚಯದ ವಿದ್ಯಾರ್ಥಿಯ ಮೂಲ ಅಂಕಪಟ್ಟಿಯಿಲ್ಲದ ಕಾರಣ ಸರ್ಕಾರಿ ಕೋಟಾದ ಬಿ.ಇಡಿ ಸೀಟ್‌ ಕೈತಪ್ಪಿತು. ಬುಧವಾರ ನನ್ನ ಮಗಳ ದಾಖಲಾತಿ ಪರಿಶೀಲನೆಯಿದೆ. ವಿ.ವಿ.ಯಿಂದ ಇನ್ನೂ 6ನೇ ಸೆಮ್‌ ಫಲಿತಾಂಶ ಪ್ರಕಟಿಸದ್ದು ಸಮಸ್ಯೆ

- ಮಾಧವರೆಡ್ಡಿ ಜಿ., ಪೋಷಕರು

ಗುಲ್ಬರ್ಗಾ ವಿ.ವಿ. ಇನ್ನೂ ನಮ್ಮ 5ನೇ ಸೆಮ್ ಅಂಕಪಟ್ಟಿ ನೀಡಿಲ್ಲ. 6ನೇ ಸೆಮ್‌ ಫಲಿತಾಂಶ ನೀಡಿಲ್ಲ. ಆದರೆ, ಬಿ.ಇಡಿ ಪ್ರವೇಶಕ್ಕೆ ದಾಖಲೆಗಳ ಪರಿಶೀಲನೆ ನಡೆದಿದೆ. ಮ್ಯಾನೇಜ್ಮೆಂಟ್‌ ಸೀಟ್‌ನಲ್ಲಿ ಬಿ.ಇಡಿ ಮಾಡಿದರೆ ಹೆಚ್ಚು ಹಣ ಬೇಕಾಗುತ್ತದೆ.

- ರಾಣಿ (ಹೆಸರು ಬದಲಿಸಲಾಗಿದೆ), ವಿದ್ಯಾರ್ಥಿನಿ

ಪದವಿ ಪೂರ್ಣಗೊಳಿಸುವ ಬಗ್ಗೆ ವಿದ್ಯಾರ್ಥಿಗಳು 6 ಸೆಮಿಸ್ಟರ್‌ ಅಂಕಪಟ್ಟಿ ತಂದರೆ ಮಾತ್ರ ದಾಖಲಾತಿ ಪರಿಶೀಲನೆ ಸಾಧ್ಯವಾಗಲಿದೆ. ಮೌಲ್ಯಮಾಪನ ಕಡೆಯಿಂದ ಬಾರ್‌ಕೋಡ್‌ ಇರುವ ಅಂಕಪಟ್ಟಿ ತಂದರೂ ಆಗುತ್ತದೆ

–ಶ್ರೀಶೈಲ್‌ ಬಿರಾದಾರ, ಡಯಟ್‌ ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.