ADVERTISEMENT

‘ಭೂಮಿತಾಯಿ ಒಡಲಿಗೆ ಮುಂಗಾರು ಬೀಜ ನೀಡುತ್ತಿರುವೆವು’

ಮಳೆರಾಯ ಕೈಹಿಡಿಯಲೆಂದು ಹರಕೆ; ಉತ್ತಮ ಫಸಲಾಗಲೆಂಬ ಕೋರಿಕೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 15:17 IST
Last Updated 8 ಜೂನ್ 2024, 15:17 IST
ಗುರುಮಠಕಲ್ ತಾಲ್ಲೂಕಿನ ಎಂ.ಟಿ.ಪಲ್ಲಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಮುಂಗಾರು ಬಿತ್ತನೆಯಲ್ಲಿ ತೊಡಗಿದ ರೈತ ಕುಟುಂಬ
ಗುರುಮಠಕಲ್ ತಾಲ್ಲೂಕಿನ ಎಂ.ಟಿ.ಪಲ್ಲಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಮುಂಗಾರು ಬಿತ್ತನೆಯಲ್ಲಿ ತೊಡಗಿದ ರೈತ ಕುಟುಂಬ    

ಗುರುಮಠಕಲ್: ಕಳೆದ ವರ್ಷ ಮುಂಗಾರು ಮಳೆಯು ಸಮಯಕ್ಕೆ ಬಾರದೆ ಮತ್ತು ನಂತರದಲ್ಲಿ ಬಿಡದಂತೆ ಜಿಟಿಜಿಟಿ ಸುರಿದು ಬೆಳೆ ಹಾನಿಯಾಗಿತ್ತು. ಈ ವರ್ಷವಾದರೂ ಮಳೆರಾಯ ಚೆಲ್ಲಾಟವಾಡದೆ ನಮ್ಮ ಕೈಹಿಡಿಯಲಿ. ಮಾಡಿದ ಸಾಲವೆಲ್ಲ ತೀರಿಸುವಂತೆ ಹರಸಲಿ ಎನ್ನುವ ಬೇಡಿಕೆಯೊಂದಿಗೆ ಭೂಮಿತಾಯಿ ಒಡಲಿಗೆ ಬೀಜ ನೀಡುತ್ತಿದ್ದೇವೆ’ ಎನ್ನುವ ರೈತಾಪಿ ವರ್ಗ ಮುಂಗಾರು ಬಿತ್ತನೆಗೆ ಚಾಲನೆ ನೀಡಿದೆ.

‘ರೋಹಿಣಿ ಮಳೆ ಆಶಾದಾಯಕವಾಗಿ ಕಂಡಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಕಳೆದೆ ಎರಡ್ಮೂರು ವರ್ಷಗಳಿಂದ ವರುಣನ ಅವಕೃಪೆಯಿಂದ ನಿರೀಕ್ಷಿತ ಫಸಲು ಸಿಗದೆ ಕಂಗಾಲಾಗಿದ್ದೆವು. ಈಗಲಾದರೂ ನಮ್ಮ ಕಷ್ಟ ದೂರಾಗಲಿ’ ಎನ್ನುತ್ತಾರೆ ಯುವ ರೈತ ಪ್ರಸಾದ.

ಕೃಷಿ ಇಲಾಖೆ ಸನ್ನದ್ದ: ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಹಂಚಿಕೆ ಮಾಡುತ್ತಿದ್ದು, ಹಂತ-ಹಂತವಾಗಿ ಇಲಾಖೆಯಿಂದ ಬೀಜದ ದಾಸ್ತಾನು ಪೂರೈಕೆ ಮಾಡುತ್ತಿದೆ. ಅವಶ್ಯವಿದ್ದಲ್ಲಿ ಹೆಚ್ಚುವರಿ ದಾಸ್ತಾನು ವ್ಯವಸ್ಥೆ ಮಾಡಿ ರೈತರ ಬೇಡಿಕೆಯನ್ನು ಪೂರೈಸಲು ಯತ್ನಿಸುವುದಾಗಿ ಗುರುಮಠಕಲ್ ಹಾಗೂ ಕೊಂಕಲ್ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿ ಭರವಸೆ ನೀಡಿದರು.

ADVERTISEMENT

ಡಿಎಪಿ ಕೊರತೆ: ಸರಬರಾಜು ವ್ಯತ್ಯಯದಿಂದ ತಾಲ್ಲೂಕಿನಲ್ಲಿ ಡಿಎಪಿ ಕೊರತೆ ಉಂಟಾಗಿದ್ದು, ಕೆಲ ರೈತರು ನೆರೆಯ ತೆಲಂಗಾಣದ ನಾರಾಯಣಪೇಟದಿಂದ ಖರೀದಿಸುತ್ತಿದ್ದಾರೆ. ಕೃಷಿ ಇಲಾಖೆ ಮೂಡಿಸುತ್ತಿರುವ ಜಾಗೃತಿಯಂತೆ ಕೆಲ ರೈತರು ಇತರ ಗೊಬ್ಬರವನ್ನೂ ಖರೀದಿಸುತ್ತಿದ್ದಾರೆ.

'ಈಗಾಗಲೇ ಡಿಎಪಿಗಾಗಿ ಹಣ ಪಾವತಿಸಿದ್ದು, ಅವರು ನಮಗೆ ಸರಬರಾಜು ಮಾಡಿದ ಕೂಡಲೇ ರೈತರಿಗೆ ಮಾರಾಟ ಮಾಡುತ್ತೇವೆ. ಜತೆಗೆ ಡಿಎಪಿಗೆ ಬದಲಾಗಿ ವಿವಿಧ ಗೊಬ್ಬರವನ್ನೂ ರೈತರು ಬಳಸಬಹುದು ಎಂದು ರಸಗೊಬ್ಬರ ಮಾರಾಟಗಾರರೊಬ್ಬರು ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.