ADVERTISEMENT

ಯಾದಗಿರಿ | ಮತ ಎಣಿಕೆಗೆ ವಾರ: ಹಲವು ಲೆಕ್ಕಚಾರ

ಜೂ.4ರಂದು ರಾಯಚೂರು ಲೋಕಸಭೆ, ಸುರ‍ಪುರ ಉಪಚುನಾವಣೆ ಫಲಿತಾಂಶ

ಬಿ.ಜಿ.ಪ್ರವೀಣಕುಮಾರ
Published 29 ಮೇ 2024, 5:19 IST
Last Updated 29 ಮೇ 2024, 5:19 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಯಾದಗಿರಿ: ಇದೇ ಮೇ 7ರಂದು ರಾಯಚೂರು ಲೋಕಸಭೆ, ಸುರ‍ಪುರ ಉಪಚುನಾವಣೆ ನಡೆದಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶಕ್ಕೆ ಇನ್ನೂ ಒಂದು ವಾರ ಕಾಲ ಇದ್ದು, ಹಲವು ಲೆಕ್ಕಾಚಾರ ಶುರುವಾಗಿದೆ.

ಇದೇ ಪ್ರಥಮ ಬಾರಿಗೆ ಸುರಪುರ ಉಪಚುನಾವಣೆ ನಡೆದಿದ್ದು, ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಪೈಪೋಟಿಯಲ್ಲಿದ್ದರು. ಅದರಂತೆ ಲೋಕಸಭೆ ಚುನಾವಣೆ ಜೊತೆಗೆ ಉಪಚುನಾವಣೆ ರಂಗೇರಿತ್ತು.

ADVERTISEMENT

ಈ ಬಾರಿಯ ಲೋಕಸಭೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಸೇರಿ ಶೇ 65.11 ರಷ್ಟು ಮತದಾನವಾಗಿತ್ತು. 2019ರಲ್ಲಿ ಶೇ 58.34ರಷ್ಟು ಮತದಾನವಾಗಿತ್ತು. 2014ರಲ್ಲಿ ಶೇ 58.32 ರಷ್ಟು ಮತದಾನವಾಗಿತ್ತು.

ಸುರಪುರ ಉಪಚುನಾವಣೆಗೆ ಆರು ಜನ, ಲೋಕಸಭೆಗೆ ಎಂಟು ಜನ ಕಣದಲ್ಲಿದ್ದರು. ಸುರಪುರ ವಿಧಾನಸಭೆ ಚುನಾವಣೆಯಲ್ಲಿ ನರಸಿಂಹ ನಾಯಕ (ರಾಜೂಗೌಡ) (ಬಿಜೆಪಿ), ರಾಜಾ ವೇಣುಗೋಪಾಲ್ ನಾಯಕ (ಕಾಂಗ್ರೆಸ್), ಅಶೋಕ ಲಕ್ಷ್ಮಣ, ವೇಣುಗೋಪಾಲ ತಿಮ್ಮಣ್ಣ, ವೆಂಕಟಪ್ಪ ನಾಯಕ ಚಂದ್ರಶೇಖರ್ ನಾಯಕ, ಶಶಿಕುಮಾರ್ ಶಿವಪ್ಪ ಅವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು.

ರಾಯಚೂರು ಲೋಕಸಭೆ ಚುನಾವಣಾ ಕಣದಲ್ಲಿ ಬಿಜೆಪಿಯಿಂದ ರಾಜಾ ಅಮರೇಶ್ವರ ನಾಯಕ, ಕಾಂಗ್ರೆಸ್‌ನಿಂದ ಜಿ.ಕುಮಾರ ನಾಯಕ, ಬಿಎಸ್‌ಪಿಯ ಎಸ್‌.ನರಸಣ್ಣಗೌಡ ನಾಯಕ, ಕರ್ನಾಟಕ ರಾಷ್ಟ್ರ ಸಮಿತಿಯ ಬಸವಪ್ರಭು ಮೇದಾ, ಸೋಷಿಯಲ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ ಪಕ್ಷದ ರಾಮಲಿಂಗಪ್ಪ ಬಿ.ಎನ್‌., ಭಾರತೀಯ ಜನ ಸಾಮ್ರಾಟ ಪಕ್ಷದ ಮೇದಾರ ಶಾಮರಾವ, ಪಕ್ಷೇತರ ಅಭ್ಯರ್ಥಿಗಳಾದ ಅಮರೇಶ, ಯಲ್ಲಮ್ಮ ದಳಪ‍ತಿ ಕಣದಲ್ಲಿದ್ದರು.

ಹೀಗಾಗಲೇ ಆಯಾ ಪಕ್ಷದ ಅಭ್ಯರ್ಥಿಗಳು ಯಾವ ಗ್ರಾಮ, ಮತಕ್ಷೇತ್ರದಲ್ಲಿ ಎಷ್ಟು ಲೀಡ್‌ನಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಬೆಂಬಲಿಗರು ಅಂದಾಜಿಸಿದ್ದಾರೆ. ಜೊತೆಗೆ ಇಂಥವರೇ ಇಲ್ಲಿ ಗೆಲ್ಲುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ಯ ಎರಡು ಕಡೆ ಕಾಂಗ್ರೆಸ್‌, (ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ಉಪ ಚುನಾವಣೆ ನಡೆದಿದೆ) ಒಂದು ಕಡೆ ಜೆಡಿಎಸ್‌ ಶಾಸಕರು ಇದ್ದಾರೆ. ಹೀಗಾಗಿ ಯಾರಿಗೆ ಅನುಕೂಲವಾಗಿದೆ ಎನ್ನುವುದು ಜೂನ್‌ 4ರಂದು ಗೊತ್ತಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.