ADVERTISEMENT

ಯಾದಗಿರಿ | ಪ್ರವಾಸೋದ್ಯಮದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಜಿಲ್ಲೆ

ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಪ್ರಾಗೈತಿಹಾಸಿಕ, ಐತಿಹಾಸಿಕ ಪ್ರವಾಸಿ ತಾಣಗಳು

ಬಿ.ಜಿ.ಪ್ರವೀಣಕುಮಾರ
Published 27 ಸೆಪ್ಟೆಂಬರ್ 2024, 5:12 IST
Last Updated 27 ಸೆಪ್ಟೆಂಬರ್ 2024, 5:12 IST
ಯಾದಗಿರಿ ನಗರದಲ್ಲಿರುವ ಲುಂಬಿನಿ ಉದ್ಯಾನ
ಯಾದಗಿರಿ ನಗರದಲ್ಲಿರುವ ಲುಂಬಿನಿ ಉದ್ಯಾನ   

ಯಾದಗಿರಿ: ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಪ್ರಾಗೈತಿಹಾಸಿಕ, ಐತಿಹಾಸಿಕ ಪ್ರವಾಸಿ ತಾಣಗಳಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಪ್ರವಾಸಿ ತಾಣಗಳಿಗೆ ಸೂಕ್ತ ಸೌಲಭ್ಯ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ.

ಕೃಷ್ಣಾ ಮತ್ತು ಭೀಮಾ ನದಿಗಳು ಜಿಲ್ಲೆಯಲ್ಲಿ ಹರಿಯುತ್ತಿವೆ. ಯಾದಗಿರಿ ತಾಲ್ಲೂಕಿನ ಹತ್ತಿಕುಣಿ, ಸೌದಗಾರ್‌ ಬಳಿ ಎರಡು ಚಿಕ್ಕ ಜಲಾಶಯಗಳಿವೆ. ನಾರಾಯಣಪುರದಲ್ಲಿ ದೊಡ್ಡ ಜಲಾಶಯವಿದೆ.

ಕೋಟೆ ಸೇರಿದಂತೆ ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಆದರೆ, ಅವುಗಳನ್ನು ಜನರಿಗೆ ಪ್ರವಾಸಿ ತಾಣವಾಗಿ ರೂಪಿಸಿ ಅವುಗಳಿಂದ ಆದಾಯ ವೃದ್ಧಿಗೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದವರ ನಿರ್ಲಕ್ಷ್ಯದಿಂದ ಪ್ರವಾಸಿ ತಾಣಗಳು ಬೆಳಕಿಗೆ ಬರುತ್ತಿಲ್ಲ.

ADVERTISEMENT

ರಾಜ್ಯದ ಕೋಟೆಗಳಲ್ಲಿ ಅತಿ ದೊಡ್ಡದಾದ ಕೋಟೆಗಳಲ್ಲಿ ನಗರದ ಕೋಟೆಯೂ ಒಂದಾಗಿದೆ. ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಕೋಟೆಯು 850 ಮೀಟರ್ ಸುತ್ತಳತೆ, 500 ಮೀಟರ್ ಅಗಲ, 100 ಮೀಟರ್‌ ಎತ್ತರ ಪ್ರದೇಶವನ್ನು ಹೊಂದಿದೆ. ಕೋಟೆ ಸುತ್ತಮತ್ತಲಿನ ಪ್ರದೇಶದಲ್ಲಿ 7 ಅಗಸಿಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. ಆದರೆ, ಈಗ ಕೋಟೆ ಅವನತಿ ಅಂಚಿಗೆ ತಲುಪಿದೆ.

ಐದಾರು ವರ್ಷಗಳ ಹಿಂದೆ ₹4 ಕೋಟಿ ಹಣ ಬಿಡುಗಡೆಯಾದರೂ ಅರ್ಭಬರ್ಧ ಕೆಲಸ ಆಗಿದೆ. ಕ್ರಿಯಾ ಯೋಜನೆಗೆ ತಕ್ಕಂತೆ ಕಾಮಗಾರಿ ಆಗಿಲ್ಲ. ಇದರಿಂದ ಕೋಟೆ ನವೀಕರಣ ಸರಿಯಾಗಿ ಆಗಿಲ್ಲ. ಈಗ ಮತ್ತೆ ಅನುದಾನ ಮಂಜೂರಾಗಿದೆ.

ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬಸವಸಾಗರ ಜಲಾಶಯ ಅಥವಾ ನಾರಾಯಣಪುರ ಡ್ಯಾಂ ಲಕ್ಷಾಂತರ ರೈತರಿಗೆ ಜೀವ ನದಿ ಆಗಿದೆ. ಆದರೆ, ಉದ್ಯಾನ ನಿರ್ಮಿಸಿ ಅಲ್ಲಿ ಪ್ರವಾಸಿ ತಾಣವಾಗಿ ಮಾರ್ಪಡಿಸುವ ಕೆಲಸ ಇನ್ನೂ ಆರಂಭವಾಗಿಲ್ಲ.

ಫಲಕಗಳೇ ಇಲ್ಲ: ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿದ್ದರೂ ಅಲ್ಲಿಗೆ ತೆರಳಲು ಸೂಕ್ತ ರಸ್ತೆ, ಮಾರ್ಗದರ್ಶಕ ಫಲಗಳ ಕೊರತೆ ಎದ್ದು ಕಾಣುತ್ತಿದೆ. ಬಸ್‌ ನಿಲ್ದಾಣ ಸೇರಿ ಪ್ರಮುಖ ವೃತ್ತಗಳಲ್ಲಿ ಪ್ರವಾಸಿ ತಾಣಕ್ಕೆ ತೆರಳುವ ನಕ್ಷೆ ತೋರಿಸಿದರೆ ಪ್ರವಾಸಿಗಳು ತೆರಳಲು ಸಹಾಯವಾಗುತ್ತದೆ.

10 ತಿಂಗಳ ಹಿಂದೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಶಿರವಾಳ ಗ್ರಾಮಕ್ಕೆ ಭೇಟಿ ನೀಡಿದಾಗ ಒಂದು ತಿಂಗಳಲ್ಲಿ ಪ್ರವಾಸಿ ತಾಣಗಳಲ್ಲಿ ಫಲಕಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಿದ್ದರು. ಆದರೂ ಇಲ್ಲಿಯವರೆಗೆ ಅದು ಕೈಗೂಡಿಲ್ಲ.

ಜಿಲ್ಲೆಯು ಅನೇಕ ರಮಣೀಯ ತಾಣಗಳಾದ ಪಕ್ಷಿಧಾಮ, ದಬ್‌ದಭಿ ಫಾಲ್ಸ್, ವನಗಳು ಹಾಗೂ ಕೋಟೆಗಳನ್ನು ಹೊಂದಿದೆ. ಆದರೆ, ಅವುಗಳು ಪ್ರಚಾರದ ಕೊರತೆಯಿಂದಾಗಿ ಬೆಳಕಿಗೆ ಬಂದಿಲ್ಲ. ಅಲ್ಲದೇ ಪ್ರವಾಸಿಗರಿಗೆ ಸೂಕ್ತ ಸೌಲಭ್ಯಗಳು ಇಲ್ಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳನ್ನು ಹುದುಗಿಸಿಕೊಂಡಿದ್ದರೂ ಕತ್ತಲೆಯಲ್ಲಿವೆ.

ಪೂರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಎಂ.ಪಿ.ಚಪೆಟ್ಲಾ, ಭೀಮಶೇನರಾವ ಕುಲಕರ್ಣಿ, ನಾಮದೇವ ವಾಟ್ಕರ್‌

ಯಾದಗಿರಿ ಕೋಟೆ
ವಡಗೇರಾ ತಾಲ್ಲೂಕಿನ ಸಂಗಮದಲ್ಲಿ ಇರುವ ಸಂಗಮನಾಥ ದೇವಾಲಯ
 ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದ ದೇಗುಲ ಸಂರಕ್ಷಣೆ ಇಲ್ಲದೆ ಹಾಳಾಗಿದೆ
ಸುರಪುರ ತಾಲ್ಲೂಕಿನ ವಾಗಣಗೇರಿಯ ಸುಪ್ರಸಿದ್ಧ ಕೋಟೆ
ಶಿರವಾಳ ಗ್ರಾಮದ ಎಲ್ಲಾ ದೇವಾಲಯಗಳ ಸಮಗ್ರ ಅಭಿವೃದ್ಧಿ ಮತ್ತು ಸಂರಕ್ಷಣೆ ಕಾಮಗಾರಿ ಕೈಗೆತ್ತಿಕೊಳ್ಳಲು ₹75 ಕೋಟಿ ಅನುದಾನ ಒದಗಿಸಲು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ  ದೊರಕಿದೆ. ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಪಡಿಸಲಾಗುವುದು
ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಪಟ್ಟಿ ಮಾಡಿ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಲಾಗಿದ್ದು ನಾಮಫಲಕಗಳು ಅಲ್ಲಿಂದಲೇ ಬರಲಿವೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸೂಕ್ತ ಕ್ರಮ ವಹಿಸಲಾಗುವುದು
ರಾಮಚಂದ್ರ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ
ಸುರಪುರ ಮತ್ತು ಪಕ್ಕದ ಹುಣಸಗಿ ತಾಲ್ಲೂಕು ಹಲವಾರು ಪ್ರವಾಸಿ ತಾಣಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ. ಪ್ರವಾಸೋದ್ಯಮ ಇಲಾಖೆ ಈ ತಾಣಗಳ ಬಗ್ಗೆ ಮುತುವರ್ಜಿ ವಹಿಸಬೇಕು
ರಾಜಶೇಖರ ವಿಭೂತಿ ಇತಿಹಾಸ ಲೇಖಕರು
ಧಾರ್ಮಿಕ ಮತ್ತು ಐತಿಹಾಸಿಕವಾಗಿ ಸಮೃದ್ಧಿಯಾಗಿರುವ ಸುರಪುರ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಬಗ್ಗೆ ಇಲ್ಲಿನ ಜನರು ಧ್ವನಿ ಎತ್ತುವ ಅವಶ್ಯಕತೆ ಇದೆ
ಶ್ರೀನಿವಾಸ ಜಾಲವಾದಿ ಸಾಹಿತಿ
ಇತಿಹಾಸವಿರುವ ಸಂಗಮದಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಇಲ್ಲ. ಬೋಟಿಂಗ್ ವ್ಯವಸ್ಥೆ ತೋಟದ ನಿರ್ಮಾಣ ಮಕ್ಕಳಿಗಾಗಿ ವ್ಯವಸ್ಥೆ ಶೌಚಾಲಯಗಳ ನಿರ್ಮಾಣವಾಗಬೇಕು
ಕರುಣೇಶ್ವರ ಸ್ವಾಮೀಜಿ ಸಂಗಮೇಶ್ವರ ದೇವಸ್ಥಾನದ ಪೀಠಾಧಿಪತಿ ಸಂಗಮ
ಗವಿ ಸಿದ್ದಲಿಂಗೇಶ್ವರಕ್ಕೆ ನಾವು ಕುಟುಂಬ ಸಮೇತ ಹಲವು ಬಾರಿ ಬಂದಿದ್ದೇವೆ. ಇಲ್ಲಿಗೆ ಬರುವ ರಸ್ತೆಯನ್ನು ಯಾಕೆ ಸುಧಾರಿಸುತ್ತಿಲ್ಲವೋ ತಿಳಿಯದು. ಜತೆಗೆ ಇಂತಹ ತಾಣಗಳಲ್ಲಿ ಬರುವವರಿಗೆ ಕನಿಷ್ಟ ಸೌಲಭ್ಯಗಳನ್ನು ಅಭಿವೃದ್ಧಿ ಮಾಡಿದರೆ ಚೆನ್ನ
ಗೀತಾ ಪಾಂಡುರಂಗ ಪ್ರವಾಸಿಗ
ಗುರುಮಠಕಲ್‌ ಪಟ್ಟಣದ ಹೊರವಲದಲ್ಲಿ ನಾರಾಯಣಪೇಟ್ ಹೋಗುವ ರಸ್ತೆಯಲ್ಲಿನ ಮಲ್ಲಾ ಕಾಡಿನಲ್ಲಿರುವ ಬಂಡಲೋಗು ಜಲಪಾತಕ್ಕೆ ನಡೆದುಕೊಂಡೆ ಹೋಗಬೇಕು. ಆದರೆ ದೂರದಿಂದ ಬರುವವರಿಗೆ ದಾರಿ ಎಲ್ಲಿದೆಎನ್ನುವುದು ತಿಳಿಯುತ್ತಿಲ್ಲ. ಫಲಕಗಳು ಅಳವಡಿಸಿದರೆ ಸಹಾಯವಾಗುತ್ತದೆ
ನರಸಿಂಹ ಸ್ಥಳೀಯ ಯುವಕ

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳು

ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಯಾದಗಿರಿ ತಾಲ್ಲೂಕಿನ ಮೈಲಾಪುರ ಮೈಲಾರಲಿಂಗೇಶ್ವರ ದೇವಾಲಯ ಹತ್ತಿಕುಣಿ ಸೌದಾಗರ್‌ ಜಲಾಶಯ ವರ್ಕನಳ್ಳಿ ಬಳಿಚಕ್ರ ಗುಹಾಂತರ ಚಿತ್ರಕಲೆ ಭೀಮಾ ನದಿ ಅಬ್ಬೆತುಮಕೂರು ವಿಶ್ವರಾಧ್ಯಾ ದೇವಸ್ಥಾನ ಶಹಾಪುರ ನಗರದ ಮಲಗಿರುವ ಬುದ್ಧ ಶಿರವಾಳ ಸಗರ ಗ್ರಾಮದ ಸೋಫಿ ಸರಮಸ್ತ ದರ್ಗಾ ನೂತನ ಶಿಲಾಯುಗದ ಪಳೆಯುಳಿಕೆಗಳು ಒಳಗೊಂಡಿರುವ ಗೋಗಿ ಭೀಮರಾಯನ ಗುಡಿಯ ಬಲಭೀಮ ಸೇನಾ ದೇವಸ್ಥಾನ ವನದುರ್ಗಾ ಕೋಟೆ ಸುರಪುರ ಕೋಟೆ ಟೈಲರ್ ಮಂಜಿಲ್ ಕುದುರೆ ಮುಖ ತಿಂಥಣಿ ಮೌನೇಶ್ವರ ದೇವಾಲಯವೇಣುಗೋಪಾಲಸ್ವಾಮಿ ದೇವಸ್ಥಾನ ಗುರುಮಠಕಲ್‌ನ ಖಾಸಾ ಮಠ ದಬ್‌ ದಭಿ ಜಲಪಾತ ಚಿಂತನಹಳ್ಳಿನ ಗವಿಸಿದ್ದಲಿಂಗೇಶ್ವರ ಗುಹೆ ದೇವಸ್ಥಾನ ಬಂಡಲೋಗ ಜಲಪಾತ ಹುಣಸಗಿ ತಾಲ್ಲೂಕಿನ ನಾರಾಯಣಪುರ ಆಣೆಕಟ್ಟು ಛಾಯಾ ಭಗವತಿ ದೇವಸ್ಥಾನ ಕೋಡೆಕಲ್ಲ ಬಸವಣ್ಣ ರಾಜನಕೋಳೂರು ಬುಡ್ಡರ ಮನೆಗಳು ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಸಂಗಮ ಸೇರಿದಂತೆ ಇನ್ನಿತರ ಪ್ರೇಕ್ಷಣೀಯ ತಾಣಗಳಿವೆ.

ಪ್ರವಾಸಿ ತಾಣ ಅನುದಾನದಲ್ಲಿ ತಾರತಮ್ಯ

ಶಹಾಪುರ: ತಾಲ್ಲೂಕಿನಲ್ಲಿ ಹಲವಾರು ಇತಿಹಾಸ ವೈಭವ ಸಾರುವ ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸಲು ವಿಫಲ ಅವಕಾಶವಿದೆ. ಶಿರವಾಳ ಅಭಿವೃದ್ಧಿ ಪಡಿಸಿದಂತೆ ಉಳಿದ ಪ್ರವಾಸಿ ತಾಣಗಳಿಗೆ ಅನುದಾನ ಒದಗಿಸುವಲ್ಲಿ ಸಚಿವರು ತಾರತಮ್ಯ ನೀತಿ ಅನುಸರಿದ್ದಾರೆ ಇತಿಹಾಸ ತಜ್ಞ ಭಾಸ್ಕರರಾವ ಮುಡಬೂಳ ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಬುದ್ದ ಮಲಗಿದ ದೃಶ್ಯ(ಸ್ಲಿಪಿಂಗ್ ಬುದ್ದ) ದಿಗ್ಗಿ ಅಗಸಿ ಕೋಟೆ ವಿಭೂತಿಹಳ್ಳಿಯ ಕಾಲ ನಿರ್ಣಯ ಕಲ್ಲುಗಳು ವಜ್ರ ನಿಕ್ಷೇಪ ದೊರೆತ ಬಗ್ಗೆ ಕುರುಹು ಇರುವ ತಾಲ್ಲೂಕಿನ ಕೊಳ್ಳುರ ಗ್ರಾಮದ ಕೃಷ್ಣಾ ನದಿ ತಟದ ವೃಂದಾವನ ಗಡ್ಡೆ ಹೀಗೆ ಇನ್ನೂ ಹೆಚ್ಚಿನ ಇತಿಹಾಸ ಸಾರುವ ಸ್ಮಾರಕಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕಾಗಿತ್ತು ಎಂದು ಅವರು ಸಲಹೆ ಮಾಡಿದ್ದಾರೆ.

ಶಿರವಾಳ ದೇವಾಲಯಗಳ ಅಭಿವೃದ್ಧಿಗೆ ₹75ಕೋಟಿ

ಶಹಾಪುರ: ಕಲ್ಯಾಣ ಚಾಳುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ತಾಲ್ಲೂಕಿನ ಶಿರವಾಳ ಗ್ರಾಮವು ಕ್ರಿ.ಶ 1ನೇ ಶತಮಾನಕ್ಕೆ ಸೇರಿದ ಶಾತವಾಹನರ ಕಾಲದ ಶಾಸನಗಳು ಲಭ್ಯವಾಗಿದ್ದು ಪ್ರಮುಖ ವ್ಯಾಪಾರಿ ಕೇಂದ್ರವು ಆಗಿತ್ತು. ಅಲ್ಲದೆ ರಾಷ್ಟ್ರಕೂಟರ ಕಾಲದಲ್ಲಿಯೂ ಮುಖ್ಯ ಪಟ್ಟಣವಾಗಿತ್ತು. ಇಂಥ ಮಹತ್ವ ಸಾರುವ ಶಿರವಾಳ ದೇವಾಲಯಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ₹75ಕೋಟಿ ಅನುದಾನ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಅದರಲ್ಲಿ ಪ್ರಥಮ ಹಂತವಾಗಿ ₹15ಕೋಟಿ ಅನುಮೋದನೆಯನ್ನು ಕಾನೂನು ನ್ಯಾಯ ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಒದಗಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ದಕ್ಷಿಣದ ವಾರಣಾಸಿ ಎಂದು ಕರೆಯಲ್ಪಡುವ ಪವಿತ್ರ ಕ್ಷೇತ್ರ ಶಿರವಾಳ ಶಾಸನಗಳಲ್ಲಿ ‘ಸಿರಿಹೊಳಲು’ ಎಂದು ಕರೆಯಲಾಗಿದೆ. ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಾಚೀನ ಸ್ಮಾರಕಗಳು ಇಂದಿಗೂ ಉಳಿದುಕೊಂಡಿವೆ. ಅವುಗಳಲ್ಲಿ 34 ದೇವಾಲಯಗಳು ಐದಕ್ಕೂ ಹೆಚ್ಚು ಬಾವಿಗಳಿವೆ. ಒಳಭಾಗದಲ್ಲಿ ರಾಮಾಯಣ ಮಹಾಭಾರತ ಭಾಗವತ ಮತ್ತು ಪಂಚತಂತ್ರ ಕಥನ ಶಿಲ್ಪಗಳು ಒಳಗೊಂಡಿದೆ. ಅಲ್ಲದೆ ಶಿರವಾಳದ ಏಳು ದೇವಾಲಯಗಳು ರಾಷ್ಟ್ರಕೂಟರ ಕಾಲದಲ್ಲಿ ರಚನೆಯಾಗಿವೆ ಎಂದು ಶಿಲಾ ಶಾಸನಗಳ ತಜ್ಞ ಮೋನಪ್ಪ ಶಿರವಾಳ ಹೇಳುತ್ತಾರೆ. ‘ರಾಜ್ಯದ ಕಲೆ ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಅಲ್ಲದೆ ಮುಂದಿನ ಯುವ ಪೀಳಿಗೆಗೆ ಸಂರಕ್ಷಿಸದಂತೆ ಆಗುತ್ತದೆ. ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದರಿಂದ ಅಧಿಕ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕಲಿವೆ. ನಿರುದ್ಯೋಗ ಸಮಸ್ಯೆ ಬಗೆಹರಿಸಿದಂತೆ ಆಗುತ್ತದೆ ಎಂದು ವರ್ಷದ ಹಿಂದೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಶಿರವಾಳ ಗ್ರಾಮಕ್ಕೆ ಭೇಟಿ ನೀಡಿದಾಗ ಮಾಜಿ ಶಾಸಕ ಗುರು ಪಾಟೀಲ ನೇತೃತ್ವದಲ್ಲಿ ಹಾಗೂ ಗ್ರಾಮಸ್ಥರು ಕೂಡಿ ಮನವಿ ಸಲ್ಲಿಸಿದ್ದೇವು’ ಎನ್ನುತ್ತಾರೆ ಗ್ರಾಮದ ಮುಖಂಡ ಮರೆಪ್ಪ ಪ್ಯಾಟಿ.

ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಬೇಕಿದೆ ಆಸಕ್ತಿ

ಹುಣಸಗಿ: ರಾಜ್ಯದಲ್ಲಿ ಅತ್ಯಂತ ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ ಪ್ರವಾಸಿ ತಾಣವಾಗಿ ಇನ್ನೂ ರೂಪುಗೊಂಡಿಲ್ಲ. ಬಸವಸಾಗರ ಜಲಾಶಯದ ಮುಂಭಾಗದಲ್ಲಿ ನೂರಾರು ಎಕರೆ ಹಾಗೂ ಸಾಕಷ್ಟು ಸ್ಥಳಾವಕಾಶವಿದೆ. ಆದರೆ ಜಲಾಶಯ ವೀಕ್ಷಣೆ ಜೊತೆಯಲ್ಲಿ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಕ್ ಗಾರ್ಡನ್ ಸೇರಿದಂತೆ ಬಣ್ಣದ ಕಾರಂಜಿ ಅಳವಡಿಸುವ ಕುರಿತಂತೆ ಹಲವಾರು ವರ್ಷಗಳಿಂದಲೂ ಈ ಭಾಗದ ಪ್ರವಾಸಿಗರಿಂದ ಬೇಡಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದು ಇಂದಿಗೂ ಯಾವುದೇ ಯೋಜನೆ ಕಾರ್ಯಗತವಾಗಿಲ್ಲ. ಇದು ಬೇಸರದ ಸಂಗತಿ ಆಗಿದೆ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ್ ಬಿರಾದಾರ್ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಿಸಬೇಕಿದೆ. ‘ರಾಜ್ಯ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಹಾಗೂ ಇತಿಹಾಸ ಪ್ರಸಿದ್ಧ ಛಾಯಾ ಭಗವತಿ ದೇವಿಯ ದೇವಸ್ಥಾನ ಕೃಷ್ಣಾ ನದಿಯ ತಟದಲ್ಲಿದ್ದು ಇಲ್ಲಿ ಪ್ರತಿ ವರ್ಷವೂ ಅಕ್ಷಯ ತೃತೀಯ ಸಂದರ್ಭದಲ್ಲಿ ಉತ್ಸವ ಆಚರಿಸಲಾಗುತ್ತದೆ. ಇಲ್ಲೂ ಸಹಿತ ಯಾವುದೇ ಹೇಳಿಕೊಳ್ಳುವ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ’ ಎಂದು ಸ್ಥಳೀಯ ನಿವಾಸಿ ಪ್ರಮೋದ್‌ ಹೇಳಿದರು. 

ಪ್ರವಾಸಿ ತಾಣಗಳಲ್ಲಿಲ್ಲ ಸೌಲಭ್ಯ

ವಡಗೇರಾ: ಅಭಿವೃದ್ದಿಯಲ್ಲಿ ಹಿಂದುಳಿದ ತಾಲ್ಲೂಕು ಕೇಂದ್ರವೆಂಬ ಹಣೆ ಪಟ್ಟಿ ಹೊಂದಿದ ವಡಗೇರಾ ತಾಲ್ಲೂಕಿನಲ್ಲಿ ಅನೇಕ ಐತಿಹಾಸಿಕ ದೇವಾಲಯಗಳು ಹಾಗೂ ಮನೆಗಳು ಇರುವ ಯಾದಗಿರಿ ಜಿಲ್ಲೆಯಲ್ಲಿಯೇ ಪ್ರಖ್ಯಾತಿ ಹೊಂದಿದೆ. ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಸಂಗಮದ ಸಂಗಮೇಶ್ವರ ದೇವಾಲಯ ಹಯ್ಯಾಳ (ಬಿ) ಹಯ್ಯಾಳಲಿಂಗೇಶ್ವರ ದೇವಸ್ಥಾನ ಹಾಲಗೇರಾ ಗ್ರಾಮದಲ್ಲಿ ಇರುವ ಹಾಲಗೇರಾ ಯಲ್ಲಮ್ಮ ದೇವಸ್ಥಾನ ಜೀತಾಮಿತ್ರರ ನಡುಗಡ್ಡೆ ವಡಗೇರಾ ಪಟ್ಟಣದಲ್ಲಿ ಇರುವ ಸಂಜೀವಿನಿ ಮೂರ್ತಿ (ದೇವಾಲಯ) ಹೀಗೆ ಇನ್ನೂ ಅನೇಕ ದೇವಾಲಯಗಳು ಇವೆ. ಇವೆಲ್ಲವು ಒಂದೊಂದು ಐತಿಹಾಸಿಕ ಹಿನ್ನೆಲೆ ಹೊಂದಿವೆ. ಸಂಗಮದಲ್ಲಿ ಇರುವ ಸಂಗಮನಾಥ ದೇವಾಲಯಕ್ಕೆ1900 ವರ್ಷಗಳ ಇತಿಹಾಸವಿದೆ. ಇಲ್ಲಿ ಬಾದಾಮಿ ಚಾಲುಕ್ಯರು ತಪಸ್ಸು ಮಾಡಿ ಪಲ್ಲಕ್ಕಿ ಸೇವೆ ನಾಟ್ಯ ಸೇವೆ ಮಾಡಿ ಹೋಗಿದ್ದಾರೆ. ತಮ್ಮ ಭೇಟಿಯ ಅಂಗವಾಗಿ ಈ ದೇವಸ್ಥಾನದ ನಿರ್ವಹಣೆಗಾಗಿ ನೂರಾರು ಎಕರೆ ಜಮೀನು ಕೊಟ್ಟಿದ್ದಾರೆ. ಇನ್ನೂ ಬೆಂಡೆಬೆಂಬಳಿ ಹಾಗೂ ಕೋಡಾಲ್ ಗ್ರಾಮದಲ್ಲಿರುವ ಮನೆಗಳು ಸುಮಾರು 200 ವರ್ಷಗಳ ಹಿಂದೆ ಕಟ್ಟಿದ ಬೃಹದಾಕರದ ಮನೆಗಳು ಕಲೆ ಹಾಗೂ ಶಿಲ್ಪ ಕಲೆಗೆ ಖ್ಯಾತಿ ಹೊಂದಿವೆ. ಇಂದಿಗೂ ಅವು ತಮ್ಮ ಶೃಂಗಾರ ಕಳೆದುಕೊಂಡಿಲ್ಲ. ಸರ್ಕಾರದ ಹಾಗೂ ಪ್ರವಾಸೋದ್ಯಮ ಇಲಾಖೆಯವರು ಇತ್ತ ಕಡೆ ಗಮನ ಹರಿಸಿ ಈ ಐತಿಹಾಸಿಕ ದೇವಸ್ಥಾನಗಳು ಹಾಗೂ ಮನೆಗಳನ್ನು ಸಂರಕ್ಷಿಸಿ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಪರಿವರ್ತಿಸಿದಾಗ ಮಾತ್ರ ಮುಂಬರುವ ಸಮುದಾಯಕ್ಕೆ ಅಧ್ಯಯನ ಕೇಂದ್ರಗಳಾಗುತ್ತವೆ. ಇಲ್ಲದಿದ್ದರೆ ಇವೆಲ್ಲವೂ ಇತಿಹಾಸದ ಪುಟ ಸೇರಿದರೆ ಅಚ್ಚರಿಯಿಲ್ಲ.

ನಿರ್ಲಕ್ಷ್ಯಕ್ಕೆ ಒಳಗಾದ ಐತಿಹಾಸಿಕ ತಾಣಗಳು

ಸುರಪುರ: ಎರಡು ಶತಮಾನಕ್ಕೂ ಹೆಚ್ಚು ಕಾಲ ಅಭೂತಪೂರ್ವ ರಾಜ್ಯಭಾರ ನಡೆಸಿದ ಇಲ್ಲಿನ ಗೋಸಲ ವಂಶದ ಅರಸರಿಂದ ತಾಲ್ಲೂಕು ಐತಿಹಾಸಿಕವಾಗಿ ಸಮೃದ್ಧವಾಗಿದೆ. ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಅದ್ಭುತ ಪ್ರವಾಸಿ ತಾಣವಾಗಬೇಕಿದ್ದು ತಪ್ಪಿಹೋಗಿದೆ. ಸುರಪುರದಿಂದ 9 ಕಿ.ಮೀ ಅಂತರದಲ್ಲಿರುವ ವಾಗಣಗೇರಿಯಲ್ಲಿ ಅರಸರು ಅಬೇಧ್ಯ ಕೋಟೆ ನಿರ್ಮಿಸಿದ್ದಾರೆ. 18 ಎಕರೆ ವಿಶಾಲವಾಗಿರುವ ಈ ಕೋಟೆ ನೆಲಮಟ್ಟದಿಂದ 250 ಅಡಿ ಎತ್ತರದಲ್ಲಿದೆ. ಮೊಘಲ ದೊರೆಗೆ ಈ ಕೋಟೆ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಆತನ ಕೊನೆ ಯುದ್ಧವಾಯಿತು ಎಂದು ಐತಿಹ್ಯ ಹೇಳುತ್ತದೆ. ದಕ್ಷಿಣ ಭಾರತದ ಅತಿದೊಡ್ಡ ಬೋನ್ಹಾಳ ಕೆರೆಯನ್ನು 17ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಮೆಡೋಸ್‌ ಟೇಲರ್ ಈ ಕೆರೆಯನ್ನು ನವೀಕರಿಸಿದ. 600 ಎಕರೆ ವಿಶಾಲವಾದ ಈ ಕೆರೆ ಈಗ ಪಕ್ಷಿಧಾಮವಾಗಿದೆ. ರುಕ್ಮಾಪುರದ ಅನಂತನಬಗಡಿ ಎಂಬಲ್ಲಿ ನಾಲ್ವಡಿ ರಾಜಾ ವೆಂಕಟಪ್ಪನಾಯಕನಿಂದ ಸೋತ ಬ್ರಿಟಿಷ್ ಕ್ಯಾಪ್ಟನ್ ನ್ಯೂರ‍್ರಿ ಸಮಾಧಿ ಇದೆ. ಒಂದು ಬಾಗಿಲು ತೆಗೆದರೆ ಏಳು ಬಾಗಿಲು ತೆಗೆಯುವ ಟೇಲರ್ ಮಂಜಿಲ್ ಆಕರ್ಷಕವಾಗಿದೆ. ಇತಿಹಾಸ ಸಾರುವ ಫಾಲನ್ ಬಂಗ್ಲಾ ಅಳಿವನ ಅಂಚಿನಲ್ಲಿದೆ. ಕಲ್ಯಾಣ ಚಾಲುಕ್ಯರು ನಿರ್ಮಿಸಿದ ಹೆಮ್ಮಡಗಿ ಬಸವಣ್ಣ ದೇವಾಲಯ ಪುರಾತನ ವೆಂಕಟಾಪುರ ಬಸವಣ್ಣ ದೇಗುಲ ನೆಲಮಾಳಿಗೆ ತಿಮ್ಮಪ್ಪ ದೇಗುಲ ಶೆಳ್ಳಗಿ ಮಂಟಪ ತಿಂಥಣಿ ಮೌನೇಶ್ವರ ದೇವಸ್ಥಾನ 17 ನೇ ಶತಮಾನದಲ್ಲಿ ಇಲ್ಲಿನ ಅರಸರು ಕಟ್ಟಿಸಿದ ವೇಣುಗೋಪಾಲಸ್ವಾಮಿ ದೇಗುಲ ಎಲ್ಲವೂ ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಾಗಿವೆ. ಹಾವಿನಾಳ ಕಲ್ಲಯ್ಯನ ದೇವಸ್ಥಾನ ಲಕ್ಷ್ಮೀಶನ ದೇವಪುರ ಈಗಿನ ಗೋಲ್ಡನ್ ಕೇವ್ ಬುದ್ಧವಿಹಾರ ಸಾಲುಮರದ ತಿಮ್ಮಕ್ಕನ ಉದ್ಯಾನ ಆಕರ್ಷಕ ವಿನ್ಯಾಸದ ಬಾವಿಗಳು ಕೈಬೀಸಿ ಕರೆಯುವ ಬೆಟ್ಟಗುಡ್ಡಗಳ ಸಾಲು ಇತರ ಹಲವಾರು ತಾಣಗಳು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ. ಪುರಾತತ್ವ ಇಲಾಖೆ ಈ ತಾಣಗಳನ್ನು ರಕ್ಷಿಸಬೇಕು. ಪ್ರವಾಸೋದ್ಯಮ ಇಲಾಖೆ ಈ ಎಲ್ಲ ತಾಣಗಳಲ್ಲಿ ಸೌಕರ್ಯ ಕಲ್ಪಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂಬುದು ಇಲ್ಲಿನ ಜನರ ಆಪೇಕ್ಷೆಯಾಗಿದೆ.

ಮಲೆನಾಡು ನೆನಪಿಸುವ ತಾಲ್ಲೂಕಿನ ತಾಣಗಳು ‌

ಗುರುಮಠಕಲ್: ತಾಲ್ಲೂಕಿನ ಧಬ್ ಧಬಿ ಜಲಪಾತದಲ್ಲಿ ನಿರಿನ ಹರಿವು ಹೆಚ್ಚಿದ್ದು ಧುಮ್ಮಿಕ್ಕುವ ಜಲರಾಶಿ ಮತ್ತು ನೀರಿನ ಧುಮ್ಮಿಕ್ಕುವ ಸದ್ದು ಪ್ರವಾಸಿಗರ ಮನಸ್ಸನ್ನು ಸೆಳೆಯುತ್ತಿದೆ. ನೆರೆಯ ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಂದ ಪ್ರವಾಸಿಗರೂ ವಾರಾಂತ್ಯಕ್ಕೆ ಬರುತ್ತಲೇ ಇದ್ದಾರೆ. ಆದರೆ ಬರುವವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ವ್ಯವಸ್ಥೆಗಳು ಮಾತ್ರ ಸಿಗದು ಮಹೇಶ ಮತ್ತು ವೆಂಕಟೇಶ ಹೇಳುತ್ತಾರೆ. ತಾಲ್ಲೂಕಿನ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರವಾದ ಗವಿಸಿದ್ದಲಿಂಗೇಶ್ವರ ಜಲಪಾತ ಮತ್ತು ದೇವಸ್ಥಾನವು ಸದಾ ಪ್ರವಾಸಿಗರಿಂದ ಗಿಜಗುಡುತ್ತದೆ. ಬೇಸಿಗೆಯಲ್ಲೂ ಬತ್ತದ ನೀರಿನಿಂದಾಗಿ ಇಲ್ಲಿ ಸದಾ ತಂಪು ವಾತಾವರಣವಿರುತ್ತದೆ. ಜಲಪಾತದ ಸುತ್ತಲೂ ಕೆಲವು ಅಭಿವೃದ್ಧಿ ಕಾರ್ಯಗಳಾಗಿವೆ. ಇಲ್ಲಿಗೆ ಬರುವ ಮುಖ್ಯರಸ್ತೆಯನ್ನು ಸುಧಾರಿಸಬೇಕಿದೆ. ದೇವಸ್ಥಾನದ ಸುತ್ತಲೂ ನಿರ್ಮಿಸಿದ ಸಿಮೆಂಟ್ ಮೂರ್ತಿಗಳು ಕಲ್ಯಾಣ ಮಂಟಪದಿಂದ ಕ್ಷೇತ್ರದ ಸೌಂದರ್ಯೀಕರಣ ಮತ್ತು ಪ್ರವಾಸಿಗರಿಗೆ ಅನುಕೂಲವಾಗಿದೆ. ಆದರೆಬರುವ ಮಹಿಳೆಯರಿಗಾಗಿ ಶೌಚಾಲಯ ಮತ್ತು ಗ್ರೀನ್ ರೂಂ ನಿರ್ಮಿಸಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದು ಕಲಬುರಗಿಯ ಪ್ರವಾಸಿಗರಾದ ನೀಲಿಮಾ ವರ್ಷಾ ಪ್ರದೀಪ ಹಾಗೂ ಪ್ರೇಮಕುಮಾರ. ಗುರುಮಠಕಲ್ ಪಟ್ಟಣದ ಆಣತಿ ದೂರದಲ್ಲಿನ ಮಲ್ಲಾ ಕಾಡು ಪ್ರದೇಶದ ಒಳಗೆ ಬಂಡಲೋಗು ಜಲಪಾತವು ಮಳೆಗಾಲದಲ್ಲಿ ಪ್ರವಾಸಿಗರ ಮತ್ತು ಚಾರಣ ಪ್ರಿಯರ ಅಚ್ಚುಮೆಚ್ಚಿನ ತಾಣವಾಗುತ್ತಿದೆ. ಆದರೆ ಇಲ್ಲಿಒಗೆ ಬರುವವರಿಗೆ ಸೂಕ್ತ ಮಾರ್ಗದರ್ಶನಕ್ಕೆ ಕನಿಷ್ಟ ದಾರಿ ತೋಉವ ಫಲಕಗಳಾದರೂ ಅಳವಡಿಸದಿರುವುದು ವಿಪರ್ಯಾಸ ಎನ್ನುತ್ತಾರೆ ಶ್ರೀಕಾಂತ. ನನಸಾಗುವುದೇ ಜನತೆಯ ಕನಸು: ಗುರುಮಠಕಲ್ –ನಜರಾಪುರ ಮಾರ್ಗ ಮಧ್ಯದ ಧಬ್ ಧಬಿ ಜಲಪಾತವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಮಾಡುವ ಕುರಿತು ಹತ್ತು ವರ್ಷಗಳ ಹಿಂದೆಯೇ ₹1 ಕೋಟಿ ಬಿಡುಗಡೆಯಾಗಿತ್ತು. ಆದರೆ ಅರಣ್ಯ ಪ್ರದೇಶದಲ್ಲಿರುವುದರಿಂದ ಸೂಕ್ತ ಯೋಜನೆ ತಯಾರಾಗುವ ಹಂತದಲ್ಲೇ ಯೋಜನೆಯು ಕೊನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.