ಯಾದಗಿರಿ: ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಒಂದರಲ್ಲಿ ಇ–ಸಂಜೀವಿನಿ ಬಗ್ಗೆ ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿದ್ದು, ಇದು ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆರೋಗ್ಯದ ತೊಂದರೆಗಳಿಗೆ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಮಂತ್ರಾಲಯ, ರಾಷ್ಟ್ರೀಯ ಟೆಲಿ ಸಮಾಲೋಚಾನಾ ಸೇವೆ (ನ್ಯಾಷನಲ್ ಟೆಲಿ ಕನ್ಸಲ್‍ಟೇಷನ್ ಸರ್ವಿಸ್ ) ಎಂಬ ಹೆಸರಿನಲ್ಲಿ ಇ-ಸಂಜೀವಿನಿ ಲಿಂಕ್ ಆ್ಯಪ್ ಸಿದ್ದಪಡಿಸಿದೆ. ಇದರಲ್ಲಿ ಸುಳ್ಳು ವರದಿ ತಯಾರಿಸುವಂತೆ ಸಮುದಾಯ ಆರೋಗ್ಯ ಅಧಿಕಾರಿಗೆ ವೈದ್ಯಾಧಿಕಾರಿಯೊಬ್ಬರು ಹೇಳಿದ್ದು ಎನ್ನಲಾಗಿದ್ದು, ಇದು ಜಟಾಪಾಟಿಗೆ ಕಾರಣವಾಗಿದೆ.
ಸುಳ್ಳು ವರದಿ ತಯಾರಿಸುವಂತೆ ಹೇಳಿದ್ದ ವೈದ್ಯಾಧಿಕಾರಿಗೆ ಸಿಎಚ್‌ಒ ‘ಆ ರೀತಿ ಮಾಡಲು ಆಗುವುದಿಲ್ಲ’ ಎಂದು ಹೇಳಿದ್ದರಿಂದ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಲು ಶಿಫಾರಸು ಮಾಡಲು ತಯಾರಿ ನಡೆಸಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಇ–ಸಂಜೀವಿನಿ ಡಮ್ಮಿ ವರದಿ ತಯಾರಿ, ಗುರಿ ತಲುಪಿ ಎಂದು ಸೂಚಿಸಲಾಗಿದೆ. ಇದರಿಂದ ಈ ಸಂಜೀವಿನಿ ಬಗ್ಗೆ ಸಾರ್ವಜನಿಕರು ಸಂಶಯ ಪಡುವಂತೆ ಆರೋಗ್ಯ ಇಲಾಖೆ ಕಾರ್ಯ ಚಟುವಟಿಕೆ ನಡೆಯುತ್ತಿವೆ ಎನ್ನಲಾಗಿದೆ.
ಇದು ಒಂದು ಆಸ್ಪತ್ರೆ ವ್ಯಾಪ್ತಿಯಲ್ಲಿ ನಡೆದಿರುವ ಮಾಹಿತಿ ಹೊರ ಬಿದ್ದಿದ್ದು, ಇನ್ನೂ ಜಿಲ್ಲೆಯ 140ಕ್ಕೂ ಹೆಚ್ಚು ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಯಾವ ರೀತಿ ಇ–ಸಂಜೀವಿನಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎನ್ನುವ ಅನುಮಾನ ಉಂಟಾಗುತ್ತಿದೆ.
***
ಇ–ಸಂಜೀವಿನಿ ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ. ಈ ಬಗ್ಗೆ ಯಾರೇ ತಪ್ಪು ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು
- ಡಾ.ಇಂದುಮತಿ ಪಾಟೀಲ, ಡಿಎಚ್‌ಒ
***
ಕೋವಿಡ್ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ಹವಣೆ ಮಾಡಿದ್ದೇನೆ. ನನ್ನ ಬಗ್ಗೆ ಸಹಿಸದವರು ಇಲ್ಲದ ಕಾರಣಗಳನ್ನು ಹೇಳುತ್ತಾರೆ
- ಡಾ.ಯಶವಂತ, ಮಲ್ಹಾರ, ಪಿಎಚ್‌ಸಿ ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.