ADVERTISEMENT

ಯಾದಗಿರಿ: ಸರ್ಕಾರಿ ಸೌಲಭ್ಯ ವಂಚಿತ ಅಸಂಘಟಿತ ಕಾರ್ಮಿಕರು

ಜಿಲ್ಲೆಯಲ್ಲಿದ್ದಾರೆ ಅಸಂಘಟಿತ ಕಾರ್ಮಿಕರು; ಕಟ್ಟಡ, ಹಮಾಲಿ, ಕೃಷಿ ಚಟುವಟಿಕೆಗೂ ಸೈ

ಬಿ.ಜಿ.ಪ್ರವೀಣಕುಮಾರ
Published 18 ಜನವರಿ 2021, 2:41 IST
Last Updated 18 ಜನವರಿ 2021, 2:41 IST
ಯಾದಗಿರಿ ನಗರದ ಲಾಲ್‌ ಬಹದ್ದೂರು ಶಾಸ್ತ್ರಿ ವೃತ್ತದಲ್ಲಿ ಕೆಲಸಕ್ಕಾಗಿ ಕಾದು ಕೂತ ಕಾರ್ಮಿಕರು
ಯಾದಗಿರಿ ನಗರದ ಲಾಲ್‌ ಬಹದ್ದೂರು ಶಾಸ್ತ್ರಿ ವೃತ್ತದಲ್ಲಿ ಕೆಲಸಕ್ಕಾಗಿ ಕಾದು ಕೂತ ಕಾರ್ಮಿಕರು   

ಯಾದಗಿರಿ: ನಗರದ ಪ್ರಮುಖ ವೃತ್ತಗಳಲ್ಲಿ ಬೆಳಿಗ್ಗೆ 6 ರಿಂದ 10ರವರೆಗೆ ಕೆಲ ಮಂದಿ ಕೆಲಸಕ್ಕಾಗಿ ಕಾಯುತ್ತಾ ಕೂತಿರುತ್ತಾರೆ. ಯಾರಾದರೂ ಒಬ್ಬರು ಬೈಕ್‌ನಲ್ಲಿ ಅವರ ಬಳಿ ನಿಂತರೆ, ಅವರನ್ನು ಮುತ್ತಿಕೊಳ್ಳುತ್ತಾರೆ. ಕೆಲ ಹೊತ್ತಿನ ಮಾತುಕತೆ ನಡೆದು, ಅವರ ಜೊತೆ ತೆರಳುತ್ತಾರೆ.

ಇದು ನಗರದ ಲಾಲ್‌ಬಹದ್ದೂರ್‌ ಶಾಸ್ತ್ರಿ ವೃತ್ತ, ಸುಭಾಷಚಂದ್ರ ಬೋಸ್‌ ವೃತ್ತ, ಹತ್ತಿಕುಣಿ ಕ್ರಾಸ್‌ ಬಳಿ ನಿತ್ಯವೂ ಕಾಣಸಿಗುವ ದೃಶ್ಯ.

ಹಬ್ಬ, ರಜೆ ದಿನ ಹೊರತುಪಡಿಸಿ 50 ರಿಂದ 100 ಜನ ಮಂದಿ ಇಲ್ಲಿ ಕೆಲಸಕ್ಕಾಗಿ ನಿಲ್ಲುತ್ತಾರೆ. ಕಟ್ಟಡ ಕೆಲಸ, ಹಮಾಲಿ, ಕೃಷಿಚಟುವಟಿಕೆ, ಮನೆಯ ವಸ್ತುಗಳ ಸ್ಥಳಾಂತರ, ಸಿಮೆಂಟ್‌, ಗೊಬ್ಬರ ಇಳಿಸುವುದು ಹೀಗೆ ತಮಗೆ ಯಾವುದೇ ಕೆಲಸ ಒಪ್ಪಿಸಿದರೂ ಈ ಅಸಂಘಟಿತ ವಲಯದ ಕಾರ್ಮಿಕರು ಮಾಡುತ್ತಾರೆ.

ADVERTISEMENT

ಹೊಲದಲ್ಲೂ ಕೃಷಿ ಕಾಯಕ: ಕೃಷಿ ಚಟುವಟಿಕೆಯಲ್ಲಿ ಬೆಳೆಗೆ ಗೊಬ್ಬರ ಹಾಕುವುದು, ಔಷಧಿ ಸಿಂಪಡಣೆ, ಒಡ್ಡು ನಿರ್ಮಾಣ ಹೀಗೆ ಕೃಷಿ ಕೆಲಸ ಮಾಡುವವರೂ ಇದ್ದಾರೆ. ಅವರಿಗೆ ಕಾರ್ಮಿಕರ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ಇಲ್ಲ. ಗುರುತಿನ ಚೀಟಿ ಇಲ್ಲ. ಇದರಿಂದ ಅವರಿಗೆ ಪರಿಹಾರ, ಸಹಾಯಧನ ಸೇರಿದಂತೆ ಯಾವ ಸೌಲಭ್ಯವೂ ಸಿಗುವುದಿಲ್ಲ.

ಬೆಳಿಗ್ಗೆ 6ರಿಂದ 10ರೊಳಗೆ ಕೆಲಸ ಸಿಗದಿದ್ದರೆ, 11ರವರೆಗೆ ಈ ಸ್ಥಳಗಳಲ್ಲಿ ಕೆಲಸಕ್ಕೆ ಕರೆದೊಯ್ಯುವ ವ್ಯಕ್ತಿಗಾಗಿ ಕಾಯುತ್ತಾರೆ. ಕೆಲವರು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಕೆಲಸ ಮಾಡುತ್ತಾರೆ. ಅದು ಮುಗಿದ ನಂತರ ಮಧ್ಯಾಹ್ನ ಅದೇ ಸ್ಥಳದಲ್ಲಿ ಕಾಯುವುದು ಮುಂದುವರಿಯುತ್ತದೆ.

ಯಾದಗಿರಿ ತಾಲ್ಲೂಕಿನ ಸುತ್ತಮುತ್ತಲಿನ ಹಳ್ಳಿಗಳ ಜನರು ಇಲ್ಲಿ ಬಂದು ಸೇರುತ್ತಾರೆ. ಅಲ್ಲದೆ ನಗರದ ಸಣ್ಣ ಮೊತ್ತದ ಬಾಡಿಗೆ ಮನೆಗಳಲ್ಲೂ ಅವರು ವಾಸಿಸುತ್ತಾರೆ. ಮಠ, ಮಂದಿರಗಳಲ್ಲೂ ಕೆಲವರು ಇದ್ದಾರೆ.

ಯಡ್ಡಳ್ಳಿ, ಇಬ್ರಾಂಹಿಪುರ, ನಾಯ್ಕಲ್‌, ಖಾನಾಪುರ, ನಾಲ್ವಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಕಾರ್ಮಿಕರು ಬಂದು ಆಯಾ ಪ್ರದೇಶಗಳಲ್ಲಿ ನಿಲ್ಲುತ್ತಾರೆ.

ದರ ನಿಗದಿ ಇಲ್ಲ: ಕೂಲಿಯಾಳುಗಳುತಾವು ಕೂಲಿ ದರ ನಿಗದಿ ಮಾಡಿಕೊಳ್ಳುವುದಿಲ್ಲ. ಬದಲಾಗಿ ಕೆಲಸಕ್ಕೆ ಕರೆದುಕೊಳ್ಳುವ ವ್ಯಕ್ತಿ ಕೂಲಿ ನಿಗದಿ ಮಾಡುತ್ತಾರೆ. ಒಬ್ಬರಿಗೆ ₹400ರಿಂದ ₹450ರ ತನಕ ಕೂಲಿ ಇದೆ.

ಬುತ್ತಿ ಕಟ್ಟಿಕೊಂಡು ಬರುವವರು ಕಡಿಮೆ. ಹೋಟೆಲ್‌ಗಳಲ್ಲಿ ತಿಂಡಿ, ಊಟ, ಚಹಾ ಸೇವನೆ ಮಾಡುತ್ತಾರೆ. ಉಳಿದ ಹಣವನ್ನು ಮನೆಗೆ ತಲುಪಿಸುತ್ತಾರೆ.

‘ಊರಲ್ಲಿ ಯಾವುದೇ ಕೆಲಸ ಇಲ್ಲ. ನಗರ ಪ್ರದೇಶಕ್ಕೆ ಬಂದರೆ ಒಂದಿಷ್ಟು ಕಾಸು ಸಂಪಾದನೆ ಆಗುತ್ತದೆ. ಇದರಿಂದ ಕುಟುಂಬ ನಿರ್ವಹಿಸಬಹುದು. ಕೆಲಸಕ್ಕೆ ಕರೆದೊಯ್ದದವರು ಊಟ, ಚಹಾ ಕೊಡುತ್ತಾರೆ. ಇಲ್ಲದಿದ್ದರೆ ನಾವೇ ಸ್ವಂತ ಖರ್ಚಿನಿಂದ ಊಟೋಪಚಾರ ಮಾಡಿಕೊಳ್ಳುತ್ತೇವೆ. ಹಲವಾರು ವರ್ಷಗಳಿಂದ ನಮ್ಮ ಜೀವನ ಹೀಗೇ ಸಾಗಿದೆ’ ಎನ್ನುತ್ತಾರೆ ದೊಡ್ಡ ಮುದ್ನಾಳ ತಾಂಡಾ ನಿವಾಸಿ ಸೀನು ಚಂದು ಜಾಧವ.

‘ಕಟ್ಟಡದ ಮಾಲಿಕರು ಬೇರೆ ತಾಲ್ಲೂಕುಗಳಿಗೆ ನಮ್ಮನ್ನು ಕರೆದೊಯ್ಯುತ್ತಾರೆ. ಗುರುಮಠಕಲ್‌ ಭಾಗದಲ್ಲಿ ಟೈಲ್ಸ್‌ ಹಾಕಲು ಈಚೆಗೆ ಹೋಗಿದ್ದೀವಿ. ಮಾಲಿಕರೇ ಎಲ್ಲ ಖರ್ಚು ನೋಡಿಕೊಂಡು, ನಮಗೆ ಹಣ ನೀಡಿದರು’ ಎಂದು ರಾಘವೇಂದ್ರ ಪತ್ತಾರ‍ ತಿಳಿಸಿದರು.

ಕಟ್ಟಡ ಕಾರ್ಮಿಕರ ಬದುಕು ಅತಂತ್ರ
ಸುರಪುರ:
ನಗರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ಇದ್ದಾರೆ. ಅಸಂಘಟಿತ ವಲಯಕ್ಕೆ ಸೇರುವ ಆ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಿತ್ಯದ ದುಡಿಮೆಯೇ ಅವರಿಗೆ ಮೂಲಾಧಾರ.

ಇಲ್ಲಿನ ಸರ್ದಾರ ವಲ್ಲಭಭಾಯ್‌ ವೃತ್ತದಲ್ಲಿ ಬೆಳಿಗ್ಗೆ 7 ಗಂಟೆಗೆ ಸೇರುವ ಕಾರ್ಮಿಕರು ತಮ್ಮನ್ನು ಕೆಲಸಕ್ಕೆ ಯಾರಾದರೂ ಕರೆಯುತ್ತಾರೆಯೇ ಎಂದು ಚಾತಕ ಪಕ್ಷಿಯಂತೆ ಕಾಯುತ್ತಾರೆ. ಮೇಸ್ತ್ರಿ ಕೈಯಲ್ಲಿ ಕೆಲಸ ಮಾಡುವ ಗಂಡು ಆಳುಗಳಿಗೆ ಕೂಲಿಯ ನಿಗದಿ ಇಲ್ಲ. ಅಲ್ಲೆ ಚೌಕಾಸಿ ಮಾಡಿ ಕೆಲಸಕ್ಕೆ ಕರೆದೊಯ್ಯುತ್ತಾರೆ. ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ದುಡಿಸಿಕೊಂಡು ₹350 ಅಥವಾ ₹400 ಕೂಲಿ ಕೊಟ್ಟು ಕಳಿಸುತ್ತಾರೆ. ಮರುದಿನದ ಕೆಲಸ ಸಿಕ್ಕರೆ ಸಿಕ್ಕಿತು, ಇಲ್ಲದಿದ್ದರೆ ಇಲ್ಲ ಎಂಬ ಸ್ಥಿತಿ ಕಾರ್ಮಿಕರದ್ದು.

ಬುತ್ತಿ ಕಟ್ಟಿಕೊಂಡು ಕೆಲಸದ ವಿರಾಮದ ಮಧ್ಯೆ ತಿಂದು ಸಂಜೆ ಸಿಕ್ಕ ಕೂಲಿಯಲ್ಲಿ ಅರ್ಧದಷ್ಟು ಮದ್ಯ ಸೇವಿಸಿ ಮನೆಗೆ ಹೋಗುವವವರ ಸಂಖ್ಯೆ ಹೆಚ್ಚು. ಮನೆಗೆ ನೀಡಿದ ₹100 ಅಥವಾ ₹200ರಲ್ಲಿ ಪತ್ನಿ ಸಂಸಾರ ತೂಗಿಸಬೇಕು.

‘ಈಚೆಗೆ ಕಟ್ಟಡ ಕಾರ್ಮಿಕರ ಸಂಘ ಅಸ್ತಿತ್ವವಕ್ಕೆ ಬಂದಿದ್ದು, ಎಲ್ಲ ಕಟ್ಟಡ ಕಾರ್ಮಿಕರನ್ನು ಸಂಘಟಿಸುವ ಕೆಲಸವಾಗುತ್ತಿದೆ. ಸಾಮಾಜಿಕ ಭದ್ರತಾ ಮಂಡಳಿಯಿಂದ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ’ ಎನ್ನತ್ತಾರೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ದೇವಪ್ಪ ನಗರಗುಂಡ.

‘ಸರ್ಕಾರ ಸಾಮಾಜಿಕ ಭದ್ರತಾ ಮಂಡಳಿಯ ಹಣವನ್ನು ಬೇರೆ ಕೆಲಸಕ್ಕೆ ಉಪಯೋಗಿಸಬಾರದು. 60 ವರ್ಷ ಮೇಲ್ಪಟ್ಟ ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ನೀಡಬೇಕು’ ಎನ್ನುತ್ತಾರೆ ಕಾರ್ಮಿಕ ಮುಖಂಡ ದೇವಿಂದ್ರಪ್ಪ ಪತ್ತಾರ.

ಕೂಲಿಗಾಗಿ ಕಾಯುವ ಪದ್ಧತಿ ಇಲ್ಲ
ಶಹಾಪುರ:
ನಗರ ಪ್ರದೇಶದಲ್ಲಿ ಕಟ್ಟಡ ಕೆಲಸ ನಿರ್ವಹಿಸುವ ಮೇಸ್ತ್ರಿ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಾರೆ. ಮನೆ, ಬಿಲ್ಡಿಂಗ್ ಹಾಗೂ ಗಾರೆ ಕೆಲಸಕ್ಕಾಗಿ ಕೂಲಿ ಕಾರ್ಮಿರಕರನ್ನು ಪೂರ್ವ ನಿಯೋಜನೆಯಂತೆ ಕೆಲಸಕ್ಕೆ ತೆರಳುತ್ತಾರೆ.

ಬೇರೆ ಬೇರೆ ಮಹಾನಗರಗಳಲ್ಲಿ ಇದ್ದಂತೆ ನಗರದಲ್ಲಿ ನಿಗದಿತ ಸ್ಥಳದಲ್ಲಿ ಕೂಲಿ ಕೆಲಸಕ್ಕಾಗಿ ಕಾಯುವುದಿಲ್ಲ. ಆಯಾ ಪರಿಚಯಸ್ಥರಿಂದ ಕೂಲಿಯಾಳುಗಳನ್ನು ಕರೆದುಕೊಂಡು ಹೋಗಲಾಗುತ್ತಿದೆ.

‘ನಗರದಲ್ಲಿ ಸಾಕಷ್ಟು ಕೂಲಿ ಕಾರ್ಮಿಕರು ಸ್ವಂತ ದುಡಿಮೆ, ತಳ್ಳುಬಂಡಿಯಲ್ಲಿ ಹಣ್ಣು ಮಾರಾಟ, ಕೈ ಬಂಡಿಯ ಮೂಲಕ ಸಾಮಗ್ರಿ ಸಾಕಾಣಿಕೆ, ಕಲ್ಲಂಗಡಿ ಮಾರಾಟ ಹೀಗೆ ಹಲವು ಬಗೆಯ ಸ್ವಂತ ಕೆಲಸದಲ್ಲಿ ಮಗ್ನರಾಗಿದ್ದಾರೆ. ಮಹಿಳಾ ಕೂಲಿ ಕಾರ್ಮಿಕರು ಜಮೀನುಗಳಿಗೆ ಕೂಲಿ ಕೆಲಸಕ್ಕೆ ತೆರಳುತ್ತಾರೆ’ ಎಂದು ಕಾರ್ಮಿಕ ಮುಖಂಡರೊಬ್ಬರು ವಿವರಿಸಿದರು.

‘ತಾಲ್ಲೂಕಿನಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಭಾಗ್ಯ ಜೊತೆಗೆ ಕೃಷಿ ಹೊಂಡ ನಿರ್ಮಾಣದಿಂದ ರೈತರು ಸ್ವಾವಲಂಬಿಗಳ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಕೂಲಿ ಮಾಡಲು ಕೈ ತುಂಬಾ ಕೆಲಸವಿದೆ. ಇದರಿಂದ ಕೂಲಿ ಅರಸಿ ನಗರಕ್ಕೆ ಬರುವುದಿಲ್ಲ. ಗ್ರಾಮೀಣ ಪ್ರದೇಶದಿಂದ ಆಗಮಿಸಲು ನಿಗದಿಪಡಿಸಿದ ಅವಧಿಗೆ ಕೆಲಸಕ್ಕೆ ಹಾಜರಾಗಲು ಸಾರಿಗೆ ವ್ಯವಸ್ಥೆ ಇಲ್ಲ. ಪ್ರತ್ಯೇಕವಾಗಿ ಒಂದು ದಿನದ ಕೂಲಿಗಾಗಿ ಕಾಯುತ್ತಾ ಕುಳಿತುಕೊಳ್ಳುವುದಿಲ್ಲ’ ಎನ್ನುತ್ತಾರೆ ಕಾರ್ಮಿಕ ಮುಖಂಡ ದಾವಲಸಾಬ್ ನದಾಫ್.

ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಮರೀಚಿಕೆ
ಹುಣಸಗಿ:
ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಕಟ್ಟಡ ಕಾರ್ಮಿಕರು, ಹಮಾಲಿಗಳು, ಸೇರಿದಂತೆ ಅಸಂಘಟಿತ ಕಾರ್ಮಿಕರಿದ್ದು, ಅವರು ದುಡಿಮೆಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ.ಸಂಕಷ್ಟಗಳಲ್ಲಿಯೇ ಜೀವನ ಸವೆಸುತ್ತಿದ್ದಾರೆ.

ಅವರಿಗೆ ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿವೆ. ‘ಯಾವ ಸೌಲಭ್ಯಗಳು ಸಿಗುತ್ತವೆ ಎಂಬ ಮಾಹಿತಿಯೇ ನಮಗಿಲ್ಲ’ ಎಂದು ತಾಲ್ಲೂಕಿನ ಮಾರಲಬಾವಿ ಗ್ರಾಮದ ಕಟ್ಟಡ ಕಾರ್ಮಿಕ ಯಂಕಣ್ಣ ವಡ್ಡರ್ ಹೇಳುತ್ತಾರೆ.

‘ಮಾರಲಬಾವಿ ಗ್ರಾಮ ಒಂದರಲ್ಲಿಯೇ 10 ರಿಂದ 15 ಮನೆಗಳಿದ್ದು, ಎಲ್ಲರೂ ಕಟ್ಟಡ ಕೆಲಸವನ್ನೇ ನಿರ್ವಹಿಸುತ್ತೇವೆ. ಗೌಂಡಿಗಳಿಗೆ ದಿನಕ್ಕೆ ₹500 ಸಿಗುತ್ತದೆ. ಆದರೆ, ತಿಂಗಳು ಪೂರ್ತಿ ಕೆಲಸ ಸಿಗುವುದಿಲ್ಲ. ಆಗ ಹೊಲಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತೇವೆ’ ಎನ್ನುತ್ತಾರೆ ಸುಭಾಸ ವಡ್ಡರ್ ಹೇಳಿದರು.

‘ನಮ್ಮ ಮಕ್ಕಳ ಮದುವೆಗಾಗಿ ಸರ್ಕಾರದಿಂದ ಧನ ಸಹಾಯ ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ, ಅದನ್ನು ಪಡೆದುಕೊಳ್ಳಲು ಹಲವಾರು ದಾಖಲಾತಿಗಳನ್ನು ಕೇಳುತ್ತಾರೆ. ನಾವು ಅನಕ್ಷರಸ್ಥರು. ಆದ್ದರಿಂದ ನಮಗೆ ಸರಿಯಾದ ರೀತಿಯಲ್ಲಿ ಅಧಿಕಾರಿಗಳು ತಿಳಿಸುವ ಕೆಲಸ ಮಾಡಬೇಕಿದೆ. ಮಗಳ ಮದುವೆ ಮಾಡಿ ವರ್ಷಗಳು ಕಳೆದರೂ ಇನ್ನೂ ನಮಗೆ ಆ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಕಟ್ಟಡ ಕಾರ್ಮಿಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗಯ್ಯ ಬಂಡಿವಡ್ಡರ್ ಹೇಳಿದರು.

‘ದಿನ ಪೂರ್ತಿ ಹಗಲು, ರಾತ್ರಿಯೆನ್ನದೇ 12 ಗಂಟೆಗೂ ಹೆಚ್ಚು ಕಾಲ ಕೆಲಸ ನಿರ್ವಹಿಸಲಾಗುತ್ತದೆ. ಆದರೆ, ದುಡಿದ ಹಣದಲ್ಲಿ ಬಹುತೇಕ ಭಾಗ ನಮ್ಮ ಸ್ವಂತ ಖರ್ಚಿಗೆ ಚಹಾ, ಉಪಾಹಾರ ಮತ್ತಿತರ ಖರ್ಚುಗಳಿಗೆ ಹೋಗುತ್ತದೆ’ ಎಂದು ವಜ್ಜಲ ಗ್ರಾಮದ ಪಲ್ಲೆಪ್ಪ ವಡ್ಡರ್ ತಿಳಿಸಿದರು.

ಹಳೆ ಗ್ರಾಹಕರಿಂದಲೆ ಹೊಸ ಕೆಲಸ
ಗುರುಮಠಕಲ್:
ತಾಲ್ಲೂಕಿನ ಕಟ್ಟಡ, ಕೂಲಿ ಕಾರ್ಮಿಕರಿಗೆ ಸಂಘಟನೆಗಳಾಗಲಿ, ಒಕ್ಕೂಟಗಳಾಗಲಿ ಅಥವಾ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ಇಲ್ಲ. ಒಂದೆಡೆ ಕೆಲಸ ಪೂರ್ಣಗೊಂಡಂತೆ ಇನ್ನೊಂದೆಡೆ ಕೆಲಸವನ್ನು ಮಾಡಲು ಸಿದ್ಧಗೊಂಡಿರುತ್ತಾರೆ. ಅದಕ್ಕೆ ಅವರ ಕೆಲಸದ ನೈಪುಣ್ಯತೆಯೇ ಅವರಿಗೆ ಹೊಸ ಕೆಲಸ ಕೊಡಿಸುವ ಐಡೆಂಟಿಟಿ.

‘ಒಂದು ಮನೆ ಕೆಲಸ ಮಾಡುವಾಗಲೇ ಅದನ್ನು ನೋಡಲು ಬರುವ ಮಾಲೀಕರ ಗುರುತಿನವರು ನಮ್ಮ ಕೆಲಸ ಇಷ್ಟವಾದರೆ ಇತರರಿಗೂ ಹೇಳುತ್ತಾರೆ. ಹಾಗೆ ಹೇಳಿದ್ದೆ ನಮಗೆ ಹೊಸ ಕೆಲಸ ಹುಡುಕಿಕೊಂಡು ಬರಲು ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಮೇಸ್ತ್ರಿ ಭೀಮಪ್ಪವರು.

ಬುನಾದಿಯ ಕೆಲಸದ ನಂತರ ಅದು ಸರಿಯಾಗಿ ಕೂಡುವವರೆಗೆ, ಪಿಲ್ಲರ್ ಕೆಲಸ ಮುಗಿಸಿದ ನಂತರ ಅವುಗಳಿಗೆ ನೀರುಣಿಸುವಾಗ ಹೀಗೆ ಕೆಲಸದ ನಡುವೆ ಕೆಲ ದಿನಗಳು ಬಿಡುವು ಸಿಗುತ್ತದೆ. ಹಾಗೆ ಬಿಡುವಿನ ಸಮಯದಲ್ಲಿ ಕಟ್ಟಡ ಕಟ್ಟಬೇಕೆಂದವರ ಜೊತೆ ಮಾತನಾಡಿ, ಇನ್ನೊಂದೆಡೆ ಕೆಲಸವನ್ನು ಖಾತರಿ ಮಾಡಿಕೊಳ್ಳುತ್ತಾರೆ. ಮಾತುಕತೆಯ ಸಮಯದಲ್ಲಿ ಎಷ್ಟು ಜನರನ್ನು ತಾವು ಕರೆಯಬೇಕು ಎನ್ನುವುದು ನಿರ್ಧಾರವಾಗುತ್ತದೆ.

‘ನಿವೇಶನ, ಕಟ್ಟಡದ ಮಾದರಿ, ಎಷ್ಟು ಜನರನ್ನು ಕರೆತರಬೇಕು ಎನ್ನುವುದನ್ನು ತಿಳಿದುಕೊಂಡ ನಂತರ ಹಣದ ಮಾತುಕತೆ ನಡೆಯುತ್ತದೆ. ಒಮ್ಮೊಮ್ಮೆ ಮನೆ ಕಟ್ಟಿಸುವವರೆ ಕೆಲಸಕ್ಕೆ ಕೂಲಿಗಳನ್ನು ಕರೆದಿರುತ್ತಾರೆ. ಇನ್ನೂ ಕೆಲವೊಮ್ಮೆ ಮೇಸ್ತ್ರಿಗಳೇ ಕೂಲಿಗಳನ್ನು ಕರೆತರಲು ತಿಳಿಸುವುದುಂಟು. ಒಟ್ಟಾರೆ ನಮಗೆ ಮತ್ತು ಮಾಲೀಕರಿಗೆ ಅನುಕೂಲವಾಗುವಂತೆ ಮಾತು ಮುಗಿಸಿ ಕೆಲಸವನ್ನು ಸಂಪಾದಿಸುತ್ತೇವೆ’ ಎಂದು ರಾಮು ಮಾಹಿತಿ ನೀಡಿದರು.

ಮಾಹಿತಿ ಕೊರತೆ: ‘ಕಾರ್ಮಿಕರಿಗೆ ಉಚಿತವಾಗಿ ಲೇಬರ್ ಕಾರ್ಡ್ ಮಾಡಿಸಿಕೊಡಲು ತಿರುಗಾಡಿದ್ದೇನೆ. ಕಾರ್ಮಿಕರಲ್ಲಿ ಮಾಹಿತಿಯ ಕೊರತೆಯಿದೆ. ಅವರಿಗೆ ಇಲಾಖೆಯಿಂದ ಜಾಗೃತಿಯನ್ನು ಮೂಡಿಸುವಲ್ಲಿ ವಿಫಲವಾಗಿದೆ. ಅವರಿಗೆ ಮೊದಲು ಜಾಗೃತಿಯ ಅವಶ್ಯಕತೆಯಿದೆ ಎಂದು ನನಗೆ ತಿಳಿದಿದ್ದು’ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದು ಸಾಮಾಜಿಕ ಕಾರ್ಯಕರ್ತ ಮಹಾದೇವ ಎಂಟಿಪಲ್ಲಿ.

ಸೌಲಭ್ಯದ ಬಗ್ಗೆ ಮಾಹಿತಿ ಇಲ್ಲ
ವಡಗೇರಾ:
ತಾಲ್ಲೂಕಿನ 500 ರಿಂದ 600 ಜನರು ಅಸಂಘಟಿತ ಕಟ್ಟಡ ಕೂಲಿ ಕಾರ್ಮಿಕರು ಇದ್ದಾರೆ. ಆದರೆ, ಅವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗದೆ ವಂಚಿತರಾಗಿದ್ದಾರೆ.

ತಾಲ್ಲೂಕು ಕೇಂದ್ರದಲ್ಲಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಯಾವುದೇ ಕಾರ್ಮಿಕರ ಸಂಘ ಇಲ್ಲ. ತಮ್ಮ ತಮ್ಮ ಮೇಸ್ತ್ರಿಗಳ ಮೂಲಕ ಕಟ್ಟಡ ನಿರ್ಮಾಣ ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ಮನೆ ನಿರ್ಮಿಸುವ ಮಾಲೀಕ ಎಲ್ಲಾ ಕೂಲಿಯವರನ್ನು ಮೇಸ್ತ್ರಿಗೆ ಒಪ್ಪಿಸುರುತ್ತಾನೆ.

ಹೊಸ ತಾಲ್ಲೂಕು ಕೇಂದ್ರವಾಗಿ ಸುಮಾರು 3 ವರ್ಷ ಕಳೆದರೂ ಇನ್ನೂ ಕಾರ್ಮಿಕರ ಇಲಾಖೆ ಆರಂಭಿಸದೆ ಕಾರ್ಮಿಕರಿಗೆ ಇಲಾಖೆಯಿಂದ ಯಾವುದೇ ಮಾಹಿತಿ ಮತ್ತು ಸೌಲಭ್ಯ ಪಡೆಯಲು ಹಳೆ ಕೇಂದ್ರಕ್ಕೆ ಅಲೆಯಬೇಕು.

ಕೆಲವರು ದಲ್ಲಾಳಿಗಳ ಮೂಲಕ ಹಣ ಕೊಟ್ಟು ಕಾರ್ಡ್ ಮಾಡಿಸಿದರೂ ಅವುಗಳ ಉಪಯೋಗ ಗೊತ್ತಿರದೆ ಮನೆಯಲ್ಲೇ ಇಟ್ಟಿದ್ದಾರೆ. ಅವುಗಳ ಬಗ್ಗೆ ಮಾಹಿತಿ ನೀಡಬೇಕು. ಇಲಾಖೆಯಿಂದ ಉಳಿದವರಿಗೆ ಕಾರ್ಡ್‌ ಮಾಡಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ,ಎಂ.ಪಿ.ಚಪೆಟ್ಲಾ,ದೇವಿಂದ್ರಪ್ಪ ಬಿ ಕ್ಯಾತನಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.