ADVERTISEMENT

ಕೆಂಭಾವಿ | ತಿಂಗಳಲ್ಲಿ ನಾಲ್ವರು ಮುಖ್ಯಾಧಿಕಾರಿಗಳ ಬದಲಾವಣೆ

ಪವನ ಕುಲಕರ್ಣಿ
Published 7 ಏಪ್ರಿಲ್ 2024, 6:50 IST
Last Updated 7 ಏಪ್ರಿಲ್ 2024, 6:50 IST
   

ಕೆಂಭಾವಿ: ಪಟ್ಟಣ ಪುರಸಭೆಯಾಗಿ 8 ವರ್ಷ ಕಳೆದಿವೆ. ಆದರೆ ಕಾಯಂ ಮುಖ್ಯಾಧಿಕಾರಿ ಇಲ್ಲದೆ ಅಭಿವೃದ್ಧಿಯಿಂದ ಕುಂಠಿತಗೊಂಡಿದೆ. ಕಳೆದ ಎರಡೂವರೆ ವರ್ಷಗಳಿಂದ ಚುನಾಯಿತಗೊಂಡ ಸದಸ್ಯರಿಗೆ ಅಧಿಕಾರವಿಲ್ಲದೇ ಇರುವ ಸಮಸ್ಯೆ ಒಂದೆಡೆಯಾದರೆ, ಕಾಯಂ ಮುಖ್ಯಾಧಿಕಾರಿಯಿಲ್ಲದೆ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ.

ಇತ್ತೀಚೆಗೆ ಪುರಸಭೆಗೆ ನಾಲ್ವರು ಮುಖ್ಯಾಧಿಕಾರಿಗಳು ಕೇವಲ ನಾಮ್‍ಕೆವಾಸ್ತೆ ಬಂದು ಹೋಗಿದ್ದಾರೆ. ಇದು ನಾಮಫಲಕದಲ್ಲಿ ಮಾತ್ರ ಅಧಿಕಾರಿಗಳ ಹೆಸರು ಗೋಚರವಾಗುತ್ತಿದೆ. 23 ವಾರ್ಡ್‌ಗಳಿರುವ ಪುರಸಭೆ ಜಿಲ್ಲೆಯಲ್ಲಿಯೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ಪಟ್ಟಣವಾಗಿದೆ. ಜನರು, ನಿತ್ಯ ದೈನಂದಿನ ಕೆಲಸ ಕಾರ್ಯಗಳಿಗೆ ನಿತ್ಯ ಪುರಸಭೆಗೆ ಅಲೆದಾಟ ನಡೆಸುತ್ತಿದ್ದು ಮುಖ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಸಿಬ್ಬಂದಿ ಏನೂ ಮಾಡಲಾಗದೆ ಕೈಚಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಕೆಲವು ದನಗಳಿಂದ ಚುನಾವಣೆ ನೆಪವೊಡ್ಡಿ ಮೂವರು ಮುಖ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಿದೆ. ಆದರೆ ಮೇಲಿಂದ ಮೇಲೆ ಮುಖ್ಯಾಧಿಕಾರಿಗಳ ವರ್ಗಾವಣೆ ಕುರಿತು ಇಲ್ಲಿನ ಜನರಲ್ಲಿ ಊಹಾಪೋಹಗಳು ಆರಂಭವಾಗಿವೆ. ಮುಖ್ಯಾಧಿಕಾರಿಗಳು ಮೇಲಿಂದ ಮೇಲೆ ಬದಲಾವಣೆ ಆಗುತ್ತಿದ್ದು, ಸಿಬ್ಬಂದಿಯ ಗೈರು ಹೆಚ್ಚಿದೆ. ಮಾರ್ಚ್‌ನಲ್ಲಿ ನಾಲ್ವರು ಮುಖ್ಯಾಧಿಕಾರಿಗಳು ಬದಲಾವಣೆ ಆಗಿದ್ದು, ಸರ್ಕಾರದ ನಡೆಯಿಂದ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರ ತವರೂರು: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಕ್ಷೇತ್ರಕ್ಕೆ ಒಳಪಟ್ಟಿರುವ ಪುರಸಭೆಯ ಕೇಂದ್ರ ಸ್ಥಾನ ಸಚಿವರ ತವರೂರು ಎಂದೇ ಕರೆಸಿಕೊಳ್ಳುತ್ತಿದೆ. ಶಾಸಕರಾದರೂ ಸಚಿವರಾದರೂ ದರ್ಶನಾಪುರ ಅವರು ಪಟ್ಟಣ ಅಬಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಆದರೆ ಅಧಿಕಾರಿಕಾರಿಗಳ ವರ್ಗಾವಣೆಯಿಂದಾಗಿ ಅಭಿವೃದ್ಧಿ ಕುಂಠಿತಗೊಳ್ಳುತ್ತಿವೆ. ಈಗ ಬೇಸಿಗೆ ಪ್ರಾರಂಭವಾಗಿದ್ದು, ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಅನುದಾನ ಬಳಕೆ ಯಾವ ರೀತಿ ಆಗುತ್ತಿದೆ ಎಂಬ ಮಾತುಗಳು ಜನರಿಂದ ಕೇಳಿ ಬರುತ್ತಿವೆ. ಜಿಲ್ಲಾಧಿಕಾರಿಗಳು ವಿಶೇಷ ಗಮನಹರಿಸಿ, ಇಲ್ಲಿ ಪುರಸಭೆಗೆ ಕಾಯಂ ಮುಖ್ಯಾಧಿಕಾರಿ ನೇಮಕ ಮಾಡಿ ಪಟ್ಟಣದ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದು ಜನರ ಬೇಡಿಕೆಯಾಗಿದೆ.

ಸರ್ಕಾರದಿಂದ ಪ್ರತಿವರ್ಷ ಪುರಸಭೆಗೆ ಕೋಟಿಗಟ್ಟಲೇ ಹಣ ಬರುತ್ತಿದ್ದು ಬಂದ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಜವಾಬ್ದಾರಿಯುತ ಅಧಿಕಾರಿ ಇಲ್ಲದಿರುವುದು ಬಂದ ಅನುದಾನ ದುರ್ಬಳಕೆ ಆಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತವೆ. ಕಳೆದ 15 ದಿನಗಳ ಹಿಂದಷ್ಟೇ ಹೊಸ ಮುಖ್ಯಾಧಿಕಾರಿ ಬಂದಿದ್ದು, ಅವರೆಷ್ಟು ದಿನ ಇರುತ್ತಾರೋ ಎಂಬ ಪ್ರಶ್ನೆ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.