ಹುಣಸಗಿ (ಯಾದಗಿರಿ ಜಿಲ್ಲೆ): ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಇದೇ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ್ದು, ಪಟ್ಟಣ ಪಂಚಾಯಿತಿ ಗದ್ದುಗೆ ಏರಲಿದೆ.
ಒಟ್ಟು 16 ಸ್ಥಾನಗಳಲ್ಲಿ 14 ಸ್ಥಾನಗಳು ಕಾಂಗ್ರೆಸ್ ಪಡೆದುಕೊಂಡು ಮೊದಲ ಪಟ್ಟಣ ಪಂಚಾಯಿತಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ.
ಬಿಜೆಪಿ ವಾರ್ಡ್ ನಂ 3 ಹಾಗೂ 5 ರಲ್ಲಿ ಮಾತ್ರ ಗೆಲುವು ಸಾಧಿಸಿ ಕೇವಲ 2 ಸ್ಥಾನಗಳನ್ನು ಗೆಲ್ಲುವ ಮೂಲಕ ತೃಪ್ತಿ ಪಟ್ಟುಕೊಂಡಿದೆ.
ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಡಿಸೆಂಬರ್ 27 ರಂದು ನಡೆದಿತ್ತು.
ಮತ ಎಣಿಕೆ ಆರಂಭದಲ್ಲಿ ವಾರ್ಡ್ ಸಂಖ್ಯೆ 1 ಹಾಗೂ 9 ರ ಫಲಿತಾಂಶ ಪ್ರಕಟವಾಗಿ ಎರಡು ಸ್ಥಾನಗಳು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗಲು ಪಟಾಕಿ ಸಿಡಿಸಿ ಗುಲಾಲು ಎರಚಿ ಸಂಭ್ರಮಿಸಿದರು. ಕೇವಲ ಎರಡು ತಾಸುಗಳಲ್ಲಿಯೇ ಎಲ್ಲ ಮತ ಎಣಿಕೆ ಕಾರ್ಯ ಮುಕ್ತಾಯವಾಯಿತು. ಬಸವೇಶ್ವರ ವೃತ್ತದಿಂದ ಮಹಾಂತಸ್ವಾಮಿ ವೃತ್ತದವರೆಗೆ ತೆರೆದ ವಾಹನದಲ್ಲಿ ಗೆದ್ದ ಅಭ್ಯರ್ಥಿಗಳ ಮೆರವಣಿಗೆ ನಡೆಯಿತು.
‘ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಪರಿಶ್ರಮ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲನಾಯಕ ಹೇಳಿದರು.
‘ಹುಣಸಗಿ ಪಟ್ಟಣದಲ್ಲಿ ನಡೆದ ಮೊದಲ ಚುನಾವಣಾ ಫಲಿತಾಂಶದಲ್ಲಿ 16 ಸ್ಥಾನಗಳಲ್ಲಿ 14 ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದು, ಅತ್ಯಂತ ಸಂತಸ ತಂದಿದೆ’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಮಾತನಾಡಿ, ‘ಪಟ್ಟಣ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಪ್ರತಿ ವಾರ್ಡ್‌ಗಳಲ್ಲಿಯೂ ಅತಿ ಹೆಚ್ಚು ಮತಗಳನ್ನು ಕಾಂಗ್ರೆಸ್‌ಗೆ ನೀಡಿದ್ದಾರೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲಾಗುವುದು’ ಎಂದು ಹೇಳಿದರು.
‘ನಮ್ಮ ಲೆಕ್ಕಾಚಾರದಲ್ಲಿ 13 ಸ್ಥಾನಗಳು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇವು. ಆದರೆ, ಇನ್ನೂ ಒಂದು ಸ್ಥಾನ ಹೆಚ್ಚು ಗೆಲ್ಲಿಸುವ ಮೂಲಕ ಪಟ್ಟಣದ ಜನತೆ ಬೋನಸ್ ನೀಡಿದ್ದಾರೆ’ ಎಂದು ಹೇಳಿದರು.
ಈ ಸಂದರ್ಭದಲಿ ಹಿರಿಯ ಮುಖಂಡ ನಾಗಣ್ಣ ದಂಡಿನ್, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಮುಖಂಡರಾದ ರಾಜಾ ಕುಮಾರನಾಯಕ, ಚನ್ನಯ್ಯಸ್ವಾಮಿ ಹಿರೇಮಠ, ಬಾಪುಗೌಡ ಪಾಟೀಲ, ಬಸವರಾಜ ಸಜ್ಜನ್, ಆರ್.ಎಂ.ರೇವಡಿ, ರವಿ ಮಲಗಲದಿನ್ನಿ, ಗೋಪಾಲ ದೊರೆ ಅಮಲಿಹಾಳ, ಗುಂಡಪ್ಪ ಸೊಲ್ಲಾಪುರ, ಗುಂಡು ಜಾಧವ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.