ADVERTISEMENT

ಯಾದಗಿರಿ | ಪ್ರಧಾನಿ ಹೊಗಳಿದ್ದ ಅಂಗನವಾಡಿ ಕೇಂದ್ರಕ್ಕಿಲ್ಲ ಆಟದ ಮೈದಾನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 13:33 IST
Last Updated 6 ಸೆಪ್ಟೆಂಬರ್ 2024, 13:33 IST
ಸೈದಾಪುರ ಸಮೀಪದ ಕಡೇಚೂರು ಗ್ರಾಮದಲ್ಲಿರುವ 3ನೇ ಅಂಗನವಾಡಿ ಕೇಂದ್ರದ ಕೊಠಡಿಯಲ್ಲಿಯೇ ಮಕ್ಕಳು ಆಟವಾಡುತ್ತಿರುವುದು.
ಸೈದಾಪುರ ಸಮೀಪದ ಕಡೇಚೂರು ಗ್ರಾಮದಲ್ಲಿರುವ 3ನೇ ಅಂಗನವಾಡಿ ಕೇಂದ್ರದ ಕೊಠಡಿಯಲ್ಲಿಯೇ ಮಕ್ಕಳು ಆಟವಾಡುತ್ತಿರುವುದು.   

ಕಡೇಚೂರ(ಸೈದಾಪುರ): ಹಿಂದೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೊಗಳಿದ್ದ ಕಡೇಚೂರಿನ ಅಂಗನವಾಡಿ ಕೇಂದ್ರದಲ್ಲಿ ಹಲವು ಸಮಸ್ಯೆಗಳು ಕಾಡುತ್ತಿವೆ.

ಕಡೇಚೂರ ಗ್ರಾಮದಲ್ಲಿರುವ 3ನೇ ಅಂಗನವಾಡಿ ಕೇಂದ್ರದದಲ್ಲಿ 35 ಮಕ್ಕಳು ಕಲಿಯುತ್ತಾರೆ. ಈ ಮಕ್ಕಳ ಜೊತೆಯಲ್ಲಿ 10 ಗರ್ಭಿಣಿ, 10 ಬಾಣಂತಿಯರು, 6 ತಿಂಗಳಿಂದ 3 ವರ್ಷದೊಳಗಿನ 50 ಮಕ್ಕಳಿಗೆ ಆಧಾರವಾಗಿದೆ. ಇವರೆಲ್ಲರಿಗೂ ಪಾಠದ ಜೊತೆಯಲ್ಲಿ ಆಟವಾಡಲು ಉತ್ತಮ ಆಟದ ಮೈದಾನ ಒದಗಿಸಿ ಕೊಡುವಂತೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ಮೂರನೇ ಅಂಗನವಾಡಿ ಕೇಂದ್ರವಿರುವ ಪಕ್ಕದಲ್ಲಿ 1ಎಕರೆಗಿಂತ ಹೆಚ್ಚು ಸರ್ಕಾರಿ ಜಾಗವಿದೆ. ಆ ಜಾಗವನ್ನು ಈಗಾಗಲೇ ಗ್ರಾಮದ ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಶಿಕ್ಷಣಕ್ಕೆ ಭದ್ರ ಬುನಾದಿಯನ್ನು ಹಾಕಿ ಕೊಡುವ ಅಂಗನವಾಡಿ ಕೇಂದ್ರದ ಮಕ್ಕಳನ್ನು ದೈಹಿಕವಾಗಿ ಸದೃಢಗೊಳಿಸಲು ಪ್ರಮುಖವಾಗಿ ಆಟದ ಮೈದಾನದ ಅವಶ್ಯಕತೆ ಇದೆ. ಆದ್ದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿ ಕೂಡಲೇ ಮೈದಾನವನ್ನು ಒದಗಿಸಿ ಕೊಡಬೇಕು ಎಂಬುದು ಗ್ರಾಮದ ಶಿಕ್ಷಣ ಪ್ರೇಮಿ ನರಸಿಂಹ ಒತ್ತಾಯಿಸಿದರು.

ADVERTISEMENT

’ಕೆಕೆಆರಡಿಎಲ್ ಹಾಗೂ ಟಾಟಾ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಸಾಕಷ್ಟು ಆಟಿಕೆ ಸಾಮಾನುಗಳನ್ನು ನೀಡಿದ್ದಾರೆ. ಆದರೆ, ಅವುಗಳನ್ನು ಬಳಸಲು ಸ್ಥಳದ ಕೊರತೆಯಿದೆ. ಅಲ್ಲದೇ ಕೇಂದ್ರದ ಸುತ್ತಲೂ ತಿಪ್ಪೆ ಗುಂಡಿಗಳಿದ್ದು ನಿತ್ಯ ಕೆಟ್ಟ ವಾಸನೆ ಬರುತ್ತದೆ. ಕೇಂದ್ರದ ಮುಖ್ಯ ದ್ವಾರ ಚಂದಾಪುರ–ದುಪ್ಪಲ್ಲಿ ಮುಖ್ಯ ರಸ್ತೆಗೆ ಅಂಟಿಕೊಂಡಂತಿದೆ. ರಸ್ತೆಯಲ್ಲಿ ಸಾಕಷ್ಟು ವಾಹನಗಳು ಓಡಾಡುತ್ತವೆ. ಇದರಿಂದ ಮಕ್ಕಳು ಹೋಗಿ ಬರುವಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು ಇದೆ. ಕೇಂದ್ರದ ಹತ್ತಿರದಲ್ಲಿ ನಿರುಪಯುಕ್ತ ಶುದ್ಧ ಕುಡಿಯುವ ನೀರಿನ ಘಟಕವಿದೆ. ಅದನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಮೈದಾನ ಮಾಡಿ ಕೊಡಲು ಮನವಿ ಮಾಡಿದ್ದೇನೆ. ಆದ್ದರಿಂದ ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಅರ್ಜಿ ಕೊಟ್ಟಿದ್ದೇನೆ. ಆದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ ತಿಳಿಸಿದರು.

ಸೈದಾಪುರ ಸಮೀಪದ ಕಡೇಚೂರು ಗ್ರಾಮದಲ್ಲಿರುವ 3ನೇ ಅಂಗನವಾಡಿ ಕೇಂದ್ರದ ಕೊಠಡಿಯಲ್ಲಿ ಮಕ್ಕಳು ಆಟವಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.