ಗುರುಮಠಕಲ್ (ಯಾದಗಿರಿ ಜಿಲ್ಲೆ): ನಿರಂತರ ಸುರಿದ ಮಳೆಯಿಂದ ಮನೆಯ ಗೋಡೆ ಕುಸಿದು ವೃದ್ಧೆ ಮೃತಪಟ್ಟಿದ್ದು, ಒಬ್ಬರಿಗೆ ಗಾಯಗಳಾದ ಘಟನೆ ಗುರುವಾರ ತಡರಾತ್ರಿ ಜರುಗಿದೆ.
ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ ಗುಂಜಲಮ್ಮ ಚಂದಪ್ಪ ಅಮ್ಮಣ್ಣೋರ (58) ಮೃತಪಟ್ಟಿದ್ದು, ಚಂದ್ರಮ್ಮ ಅವರ ಸಹೋದರ ಚಂದ್ರಪ್ಪನಿಗೆ ಗಾಯಗಳಾಗಿವೆ.
ಘಟನೆಯ ವಿವರ:
ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ಮೃತ ಗುಂಜಲಮ್ಮ ತಮ್ಮ ಸಹೋದರ ಚಂದ್ರಪ್ಪ ಚಂದಪ್ಪ ಅಮ್ಮಣ್ಣೋರ ಜೊತೆಗೆ ವಾಸಿಸುತ್ತಿದ್ದರು. ಸಹೋದರನ ಇಬ್ಬರು ಪುತ್ರರು ನೆರೆಯ ತೆಲಂಗಾಣದ ಹೈದರಾಬಾದ್ ನಗರಕ್ಕೆ ಗುಳೆ ಹೋಗಿದ್ದಾರೆ.
ಚಿಂತನಹಳ್ಳಿ ಗ್ರಾಮದಲ್ಲಿ ಮನೆ ಕಟ್ಟಲು ಅಡಿಪಾಯ ಹಾಕಿದ್ದಾರೆ. ಆದರೆ, ಹಣದ ಸಮಸ್ಯೆಯಿಂದ ಮನೆ ಕಟ್ಟಲಾಗಿರಲಿಲ್ಲ. ಪೇಚಿಂಗ್ ಕಲ್ಲಿನಿಂದ ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೀನ್‌ಶೆಡ್‌ನ ಚಾವಣಿಯ ಕಚ್ಚಾ ಮನೆಯಲ್ಲೇ ಅವರು ವಾಸಿಸುತ್ತಿದ್ದರು.
ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಗುರುವಾರ ರಾತ್ರಿ ಪೇಚಿಂಗ್ ಕಲ್ಲಿನ ಗೋಡೆ ಕುಸಿದ ಪರಿಣಾಮ ಗುಂಜಲಮ್ಮ (58) ಮೃತಪಟ್ಟಿದ್ದು, ಅವರ ತಮ್ಮನಾದ ಚಂದ್ರಪ್ಪರ ಹಣೆ ಮತ್ತು ಬಲಗೈಗೆ ಗಾಯಗಳಾಗಿವೆ. ಚಂದ್ರಪ್ಪ ಅವರು ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ ಎಂದು ಸ್ಥಳೀಯ ನಿವಾಸಿ ನಾಗೇಶ ಗದ್ದಗಿ ತಿಳಿಸಿದರು.
ಶುಕ್ರವಾರ ತಹಶೀಲ್ದಾರ್ ನೀಲಪ್ರಭಾ ಬಬಲಾದ, ಪಿಡಿಒ ಮತ್ತು ಕಂದಾಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸತತ ಮಳೆಯಿಂದ ಗೋಡೆ ಕುಸಿದು ಚಿಂತನಹಳ್ಳಿ ಗ್ರಾಮದ ಗುಂಜಲಮ್ಮ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಶೀಘ್ರ ಪರಿಹಾರ ಒದಗಿಸಲು ಕ್ರಮವಹಿಸುವೆನೀಲಪ್ರಭಾ ಬಬಲಾದ, ತಹಶೀಲ್ದಾರ್, ಗುರುಮಠಕಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.