ಹುಣಸಗಿ: ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಒಂದು ವಾರದಿಂದ ನೀರು ಹರಿದು ಬರುತ್ತಿದ್ದು, ರೈತರಿಗೆ ಹರ್ಷ ಉಂಟು ಮಾಡಿದೆ. ಯಾದಗಿರಿ, ಕಲಬುರ್ಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ರೈತರಿಗೆ ಈ ಜಲಾಶಯವು ಜೀವನಾಡಿಯಾಗಿದೆ.
ಮಳೆಯಾಶ್ರಿತ ಜಮೀನುಗಳಲ್ಲಿ ರೈತರು ಈಗಾಗಲೇ ಹೆಸರು, ತೊಗರಿ, ಹತ್ತಿ , ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಬಹುತೇಕ ರೈತರು ಭತ್ತ ನಾಟಿಗಾಗಿ ಜಮೀನನ್ನು ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
‘ಈಗಾಗಲೇ ಎರಡು ಬಾರಿ ಹೊಲ ಹದಗೊಳಿಸಿ, ಭತ್ತ ಬಿತ್ತನೆ ಮಾಡಿದ್ದೇವೆ. ಪ್ರತಿ ವರ್ಷ ಜುಲೈ ಎರಡನೇ ವಾರದಲ್ಲಿ ಕಾಲುವೆಗೆ ನೀರು ಹರಿಸಲಾಗುತಿತ್ತು. ಈ ಬಾರಿ ನಿರೀಕ್ಷೆಗಿಂತ ಮುಂಚಿತವಾಗಿ ಒಳ ಹರಿವು ಹೆಚ್ಚಿರುವ ಕಾರಣ ಕಾಲುವೆಯಲ್ಲಿ ಯಾವಾಗ ನೀರು ಲಭ್ಯವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಗುಳಬಾಳ ಗ್ರಾಮದ ರುದ್ರಗೌಡ ಪಾಟೀಲ ಮತ್ತು ಕಾಮನಟಗಿ ಗ್ರಾಮದ ರಂಗಪ್ಪ ಡಂಗಿ ತಿಳಿಸಿದರು.
‘ಕಳೆದ ವರ್ಷ ಜುಲೈ ಎರಡನೇ ವಾರದಿಂದ ನಾರಾಯಣಪುರ ಮತ್ತು ಆಲಮಟ್ಟಿ ಜಲಾಶಯಗಳಿಗೆ ನೀರು ಹರಿದು ಬರಲು ಆರಂಭವಾಗಿತ್ತು. ಪ್ರಸಕ್ತ ವರ್ಷ ವಾರದ ಮುಂಚೆಯೇ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಶುಕ್ರವಾರದವರೆಗೆ 1,344 ಕ್ಯೂಸೆಕ್ ನೀರು ಹರಿದು ಬಂದಿದ್ದು, 489.16 ಮೀಟರ್ (21 ಟಿಎಂಸಿ ಅಡಿ) ನೀರು ಸಂಗ್ರಹವಾಗಿದೆ. 6.27 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯವಿದೆ’ ಎಂದು ಜಲಾಶಯದ ವಿಭಾಗೀಯ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ ನಾಯ್ಕೋಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುವ ಪ್ರಮುಖ ಜಲಾಶಯವಾದ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ 10,539 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 69.461 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ’ ಎಂದು ನಿಗಮದ ಮೂಲಗಳು ತಿಳಿಸಿವೆ.
ಐಸಿಸಿ ಸಭೆ ಕರೆಯಲು ಒತ್ತಾಯ: ‘ಕೃಷ್ಣಾ ಅಚ್ಚುಕಟ್ಟು ಪ್ರದೇಶ ಮತ್ತು ಮಹಾರಾಷ್ಟ್ರದ ನದಿ ಪಾತ್ರದಲ್ಲಿ ಮಳೆ ಆಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸುವ ಕುರಿತಂತೆ ನೀರಾವರಿ ಸಲಹಾ ಸಮಿತಿಯು ಕೂಡಲೇ ಸಭೆ ಕರೆಯಬೇಕು. ಸಭೆ ನಡೆಯುವುದು ವಿಳಂಬವಾದಲ್ಲಿ ಸಂಬಂಧಿಸಿದ ಇಲಾಖೆಯ ಸಚಿವರೇ ನಿರ್ಣಯ ಕೈಗೊಂಡು ನಿಗದಿತ ಅವಧಿಯಂತೆ ಕಾಲುವೆಗಳಿಗೆ ನೀರು ಹರಿಸಲು ಕ್ರಮ ವಹಿಸಬೇಕು’ ಎಂದು ರೈತ ಮುಖಂಡರಾದ ಸಂಗನಗೌಡ ಪಾಟೀಲ ವಜ್ಜಲ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮಹಾದೇವಿ ಬೇವಿನಾಳ ಮಠ ಹಾಗೂ ರುದ್ರಣ್ಣ ಮೇಟಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.