ADVERTISEMENT

ಯಾದಗಿರಿ: ದೂರದೃಷ್ಟಿ ಸಮಸ್ಯೆ ತಂದೊಡ್ಡಿದ್ದ ಡಿಜಿಟಲ್‌ ಪರದೆ ಬಳಕೆ!

ಇಂದು ವಿಶ್ವ ಅಂಧತ್ವ ನಿವಾರಣೆ ದಿನಾಚರಣೆ

ಬಿ.ಜಿ.ಪ್ರವೀಣಕುಮಾರ
Published 10 ಅಕ್ಟೋಬರ್ 2024, 5:21 IST
Last Updated 10 ಅಕ್ಟೋಬರ್ 2024, 5:21 IST
ಯಾದಗಿರಿಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ನೇತ್ರ ತಪಾಸಣೆ 
ಯಾದಗಿರಿಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ನೇತ್ರ ತಪಾಸಣೆ    

ಯಾದಗಿರಿ: ಪಂಚೇಂದ್ರೀಯಗಳಲ್ಲಿ ಕಣ್ಣು ಬಹು ಮುಖ್ಯ ಅಂಗ. ಆದರೆ, ಬದಲಾದ ಕಾಲಮಾನದಲ್ಲಿ ಮೊಬೈಲ್‌, ಟಿವಿ, ಕಂಪ್ಯೂಟರ್‌, ಟ್ಯಾಬ್‌ ಸೇರಿದಂತೆ ಡಿಜಿಟಲ್‌ ಪರದೆ ಬಳಕೆ ಹೆಚ್ಚಿದಂತೆ ಚಿಕ್ಕಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ 97,013 ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗಿದ್ದು, ಇದರಲ್ಲಿ 1,291 ಮಕ್ಕಳಿಗೆ ದೃಷ್ಟಿದೋಷ ಸಮಸ್ಯೆ ಕಂಡು ಬಂದಿದ್ದು, ಅವರಿಗೆ ಕನ್ನಡಕ ವಿತರಿಸಬೇಕಾಗಿದೆ. ಪುಟ್ಟ ಮಕ್ಕಳಲ್ಲಿ ದೂರ ದೃಷ್ಟಿ ಸಮಸ್ಯೆ ಕಾಡುತ್ತಿದೆ ಎನ್ನುತ್ತಿವೆ ಆರೋಗ್ಯ ಇಲಾಖೆ ಮೂಲಗಳು.

ದೇಹದ ಅಂಗಗಳಲ್ಲಿ ಕಣ್ಣು ಕೂಡ ಅತಿ ಮುಖ್ಯವಾಗಿದೆ. ಕಣ್ಣು ಇದ್ದಾಗ ಮಾತ್ರ ಹೊರ ಜಗತ್ತು ನೋಡಲು ಸಾಧ್ಯ. ಆದರೆ, ಪ್ರಸ್ತುತ ದಿನಗಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಈ ವರ್ಷದ ಘೋಷ ವಾಕ್ಯ ನಿಮ್ಮ ಕಣ್ಣುಗಳನ್ನು ಪ್ರೀತಿಸಿ, ಮಕ್ಕಳೇ ಎನ್ನುವುದಾಗಿದೆ.

ADVERTISEMENT

ಕಣ್ಣಿನ ಸೋಂಕು, ವಿಟಮಿನ್ ಎ ಕೊರತೆ, ಅಪೌಷ್ಟಿಕತೆ, ಅಕ್ಷಿಪಟಲದ ಗಾಯ, ಅನುವಂಶಿಕ ನ್ಯೂನತೆ ಅಂಧತ್ವಕ್ಕೆ ಮೂಲ ಕಾರಣಗಳಾಗಿವೆ. ಪೌಷ್ಟಿಕ ಆಹಾರ, ಹಸಿರು ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ವಿಟಮಿನ್ ಎ ಕೊರತೆ ಕಡಿಮೆಯಾಗಲಿದೆ.

ಡಯಾಬಿಟಿಕ್ ರೆಟಿನೋಪತಿ ಮತ್ತು ಗ್ಲಾಕೋಮದಂತಹ ಮೂಕ ರೋಗಗಳನ್ನು ನಿಯಮಿತವಾಗಿ ಪರೀಕ್ಷಿಸುವ ಮೂಲಕ ದೃಷ್ಟಿಯನ್ನು ಸಂರಕ್ಷಿಸಿಕೊಳ್ಳಬಹುದು. ವೈದ್ಯರ ಸಲಹೆ ಪಡೆಯದೆ ಯಾವುದೇ ಔಷಧಿಗಳನ್ನು ಕಣ್ಣಿಗೆ ಹಾಕಿಕೊಳ್ಳಬಾರದೆಂದು ನೇತ್ರ ತಜ್ಞರು ನೀಡುವ ಎಚ್ಚರಿಕೆಯಾಗಿದೆ.

ಯಾರಲ್ಲಿ ದೃಷ್ಟಿ ಸಮಸ್ಯೆ?:

60 ವರ್ಷ ವಯಸ್ಸಾದವರ ಕಣ್ಣಿಗೆ ಪೊರೆ ಬರುವುದು ಸಹಜ. ಆಧುನಿಕ ಜೀವನಶೈಲಿಯ ಪರಿಣಾಮದಿಂದ ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳು ಮನುಷ್ಯರನ್ನು ಕಾಡುತ್ತಿದ್ದು, ಈ ಎಲ್ಲಾ ರೋಗಗಳು ಕಣ್ಣಿನ ಮೇಲೆ ಪರಿಣಾಮ ಬೀರುತ್ತವೆ. ಹೃದ್ರೋಗಿಗಳಲ್ಲಿ ದೃಷ್ಟಿ ಸಮಸ್ಯೆ ಇರುತ್ತದೆ. ಡಯಾಬಿಟೀಸ್ ಅನ್ನು ನಿಯಂತ್ರಣ ಮಾಡಿದರೆ ಕಣ್ಣಿನ ದೃಷ್ಟಿ ಸಮಸ್ಯೆ ನಿಯಂತ್ರಿಸಲು ಸಾಧ್ಯ ಎಂದು ನೇತ್ರ ತಜ್ಞ ಡಾ.ಪ್ರದೀಪರೆಡ್ಡಿ ಹೇಳುತ್ತಾರೆ.

ನೇತ್ರದಾನ ಜಾಗೃತಿ ಕೊರತೆ:

ನಾಯಕ ನಟ ದಿ.ಪುನೀತ್‌ ರಾಜಕುಮಾರ ನಿಧನ ನಂತರ ಅವರ ಕಣ್ಣುಗಳು ಅಂಧರಿಗೆ ಬೆಳಕು ನೀಡಿದ್ದರಿಂದ ಜಿಲ್ಲೆಯ ಜನರೂ ಅಪ್ಪುವಿನಂತೆ ದಾನ ಮಾಡಲು ಮುಂದೆ ಬಂದಿದ್ದಾರೆ. 281 ಜನ ನೇತ್ರದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರೆ. ಲಕ್ಷಾಂತರ ಜನರಿರುವ ಜಿಲ್ಲೆಯಲ್ಲಿ ಕೇವಲ 200ಕ್ಕಿಂತ ಹೆಚ್ಚು ಜನರು ಹೆಸರು ನೋಂದಾಯಿಸಿರುವುದು ನೇತ್ರದಾನ ಜಾಗೃತಿ ಕಡಿಮೆ ಇರುವುದನ್ನು ತೋರಿಸುತ್ತದೆ. www.jeevansartkate.com ಹೆಸರು ನೋಂದಾಯಿಸಬಹುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

‘ ನೇತ್ರದಾನದಿಂದ ನಮ್ಮ ನಂತರವೂ ಬೇರೊಬ್ಬರಿಗೆ ನೇತ್ರದಾನ ಮಾಡಿದರೆ ಆ ಕಣ್ಣುಗಳು ಮತ್ತೊಮ್ಮೆ ಜಗತ್ತನ್ನು ನೋಡುವ ಹಾಗೂ ಸುಂದರ ಪ್ರಕೃತಿಯನ್ನು ಕಾಣುವ ಸೌಲಭ್ಯ ಒದಗಿಸಿದಂತಾಗುತ್ತದೆ. ಈಗಾಗಲೇ ಹಲವಾರು ಭಾಗಗಳಲ್ಲಿ ತುರ್ತು ಸಂದರ್ಭಗಳಲ್ಲಿ ದೇಹದ ಅಂಗಾಂಗಗಳನ್ನು ದಾನ ಮಾಡುವುದನ್ನು ಕೇಳುತ್ತಿದ್ದೇವೆ. ಅದರಂತೆ ಕಣ್ಣು ಕೂಡ ದಾನ ಮಾಡುವುದು ಮುಖ್ಯವಾಗಿದೆ’ ಎಂದು ಸುರಪುರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ.ನಾಯಕ ತಿಳಿಸುತ್ತಾರೆ.

‘ಸದ್ಯ ಗುರುಮಠಕಲ್ ಸಿಎಚ್‌ಸಿಯಲ್ಲಿನ ನೇತ್ರ ತಪಾಸಣಾಧಿಕಾರಿ ಅಥವಾ ಸಹಾಯಕ ಹುದ್ದೆ ಖಾಲಿಯಿದೆ. ಸೈದಾಪುರದವರೇ ಹೆಚ್ಚುವರಿಯಾಗಿ ಇಲ್ಲಿಯೂ ನೋಡುತ್ತಾರೆ. ನೇತ್ರ ಸಂಬಂಧಿ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಯ ಸೌಲಭ್ಯ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿದೆ‘ ಎನ್ನುತ್ತಾರೆ ಪ್ರಭಾರ ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ.ಮಲ್ಲಪ್ಪ ಕಣಜಿಕರ್.

ಪೂರಕ ವರದಿ: ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ನಾಮದೇವ ವಾಟ್ಕರ್‌, ಎಂ‍.ಪಿ.ಚಪೆಟ್ಲಾ

ಸುರಪುರ ಸಮೀಪದ ತಿಮ್ಮಾಪುರ ಸರ್ಕಾರಿ ಶಾಲೆಯ ನೇತ್ರ ಸಮಸ್ಯೆ ಇರುವ ಮಕ್ಕಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು
ಜಿಲ್ಲೆಯಲ್ಲಿ ಅಂಧತ್ವ ನಿವಾರಣೆ ಭಾಗವಾಗಿ 10800 ಶಸ್ತ್ರಚಿಕಿತ್ಸೆ ಗುರಿ ಇದ್ದು 5086 ಶಸ್ತ್ರಚಿಕಿತ್ಸೆ ಮಾಡಲಾಗಿದೆ. 1 ರಿಂದ10ನೇ ತರಗತಿಯ 1.96 ಲಕ್ಷ ವಿದ್ಯಾರ್ಥಿಗಳ ನೇತ್ರ ತಪಾಸಣೆ ಗುರಿಯಲ್ಲಿ 97013 ಮಂದಿಗೆ ತಪಾಸಣೆ ಮಾಡಲಾಗಿದೆ
ಡಾ.ಮಲ್ಲಪ್ಪ ಕಣಜಿಕರ್‌ ಪ್ರಭಾರ ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ
ನೇತ್ರ ಸೂಕ್ಷ್ಮ ಅಂಗವಾಗಿ ನಿರ್ಲಕ್ಷ್ಯ ಮಾಡಬಾರದು. ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ಹೇಳುವ ಜಾಗರೂಕತೆಯನ್ನು ಪಾಲಿಸಬೇಕು. ಆಗ ಮಾತ್ರ ಕಣ್ಣಿನ ಆರೋಗ್ಯ ಸುಧಾರಿಸಲು ಸಾಧ್ಯ
ಡಾ.ಪ್ರದೀಪರೆಡ್ಡಿ ನೇತ್ರ ತಜ್ಞ
ನೇತ್ರದಾನ ಮತ್ತು ನೇತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಸದ್ಯ ನಮ್ಮ ತಾಲ್ಲೂಕಿನಲ್ಲಿ ಅಷ್ಟೇನು ಮಹತ್ವ ಸಿಕ್ಕಿಲ್ಲ. ಕಣ್ಣನ್ನು ಜ್ಞಾನದ ಹೆಬ್ಬಾಗಿಲು ಎನ್ನಲಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ಮಹತ್ವ ನೀಡುವತ್ತ ಸಂಬಂಧಿತ ಇಲಾಖೆ ಆದ್ಯತೆಯಲ್ಲಿ ವ್ಯವಸ್ಥೆ ಮಾಡಲಿ
ರಾಮುಲು ಸಿ.ಎನ್ ಗುರುಮಠಕಲ್ ನಾಗರಿಕ
ನೇತ್ರ ಪ್ರಮುಖ ಅಂಗ. ಜನರು ನಿರ್ಲಕ್ಷ್ಯ  ಮಾಡದೆ ಆಗಾಗ ತಪಾಸಣೆ ಮಾಡಿಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಜೀವನ ಪರ್ಯಂತ ಕಣ್ಣುಗಳನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು
ಡಾ. ರಾಜಾ ವೆಂಕಪ್ಪನಾಯಕ ಟಿಎಚ್‌ಒ ಸುರಪುರ
ನಿರಂತರ ಮೊಬೈಲ್ ಟಿವಿ ವೀಕ್ಷಣೆಯಿಂದ ಮಕ್ಕಳಲ್ಲಿ ದೂರದೃಷ್ಟಿಯ ಸಮಸ್ಯೆ ಉಂಟಾಗುತ್ತಿದೆ. ಪಾಲಕರು ಈ ಬಗ್ಗೆ ಗಮನ ಹರಿಸಬೇಕು. ಹಸಿರು ತರಕಾರಿ ನಿಯಮಿತವಾಗಿ ಸೇವಿಸಿದರೆ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ
ಶಮೀಮ ಅಹ್ಮದ್ ತಿಮ್ಮಾಪುರ ನೇತ್ರಾಧಿಕಾರಿ

ಮೊಬೈಲ್ ನೋಡುವುದರಿಂದ ಕಣ್ಣಿನ ದೃಷ್ಟಿ ಕಡಿಮೆ

ವಡಗೇರಾ: ‘ಮಕ್ಕಳು ಕಡಿಮೆ ಬೆಳಕಿನಲ್ಲಿ ಹಾಗೂ ಅತಿ ಸಮೀಪ ಪುಸ್ತಕಗಳನ್ನು ಹಿಡಿದುಕೊಂಡು ಓದುವುದಾಗಲಿ ಇಲ್ಲವೆ ಬರೆಯುವುದಾಗಲಿ ಅಥವಾ ಹೆಚ್ಚಿನ ಸಮಯವನ್ನು ಮೊಬೈಲ್ ನೋಡುವುದಾಗಲಿ ಮಾಡಿದರೆ ಮುಂಬರುವ ದಿನಗಳಲ್ಲಿ ಕಣ್ಣಿನ ದೃಷ್ಟಿ ಕಡಿಮೆಯಾಗುವ ಸಂಭವವಿದೆ‘ ಎನ್ನುತ್ತಾರೆ ವಡಗೇರಾ ಸಮುದಾಯ ಆರೋಗ್ಯ ಕೇಂದ್ರದ ನೇತ್ರ ಅಧಿಕಾರಿ ಶ್ರೀನಿವಾಸಗೌಡ. ‘ಸತ್ತ ನಂತರ ಮಣ್ಣಿನಲ್ಲಿ ಮಣ್ಣಾಗುವ ಕಣ್ಣುಗಳಿಂದ ಯಾರಿಗೂ ಪ್ರಯೋಜನವಿಲ್ಲ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ಕಣ್ಣುಗಳನ್ನು ದಾನ ಮಾಡಬೇಕು. ಇದರಿಂದ ಬೇರೆಯವರಿಗೆ ಪ್ರಯೋಜನವಾಗುತ್ತದೆ. ಹಾಗೆಯೇ ಮಕ್ಕಳಿಗೆ ಹಾಗೂ ಹಿರಿಯರಿಗೆ ದೃಷ್ಟಿದೋಷ ಉಂಟಾದರೆ ಕೂಡಲೇ ವೈದ್ಯರನ್ನುಕಾಣಬೇಕು. ಕಣ್ಣುಗಳು ತಿಕ್ಕುವುದಾಗಲಿ ಇಲ್ಲವೆ ಉಜ್ಜುವುದಾಗಲಿ ಮಾಡಬಾರದು. ಯಾವುದಕ್ಕೂ ಉದಾಸೀನತೆ ತೋರಬಾರದು‘ ಎಂದು ಅವರು ಹೇಳಿದರು. ‘ಈಗಾಗಲೇ ತಾಲ್ಲೂಕು ವ್ಯಾಪ್ತಿಯಲ್ಲಿ 66 ಜನ ನೇತ್ರದಾನ ಮಾಡಲು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ‘ ಎಂದು ಮಾಹಿತಿ ನೀಡಿದರು.

ಹುಣಸಗಿ: ನೇತ್ರದಾನಕ್ಕೆ ಬೇಕಿದೆ ಜಾಗೃತಿ

ಹುಣಸಗಿ: ತಾಲ್ಲೂಕಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಇದುವರೆಗೂ ನೇತ್ರ ತಪಾಸಣಾ ತಜ್ಞರು ಇಲ್ಲದೇ ಇರುವುದರಿಂದ ಗ್ರಾಮೀಣ ಭಾಗದ ರೋಗಿಗಳು ನಗರಗಳತ್ತ ಮುಖ ಮಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನೇತ್ರ ತಜ್ಞರನ್ನು ನೇಮಿಸುವುದು ಅಗತ್ಯವಾಗಿದೆ ಎಂದು ತಾಲ್ಲೂಕಿನ ನಾಗರಿಕರ ಒತ್ತಾಸೆಯಾಗಿದೆ. ಹುಣಸಗಿ ತಾಲ್ಲೂಕಿನ ಹಲವಾರು ಗ್ರಾಮ ಹಾಗೂ ಪಟ್ಟಣಗಳಲ್ಲಿ ನೇತ್ರ ಸಮಸ್ಯೆ ಕಂಡು ಬಂದಾಗ ನೇತ್ರ ತಪಾಸಣಾ ಶಿಬಿರಗಳಲ್ಲಿ ಸಮಸ್ಯೆ ಪರಿಹರಿಸಲು ಕೆಲವೊಂದು ಸಂಘ ಸಂಸ್ಥೆಯವರು ಆದ್ಯತೆ ನೀಡುತ್ತಿದ್ದಾರೆ. ಆದರೆ ವೈಯಕ್ತಿಕವಾಗಿ ಕೆಲವು ರೋಗಿಗಳು ತಕ್ಷಣಕ್ಕೆ ಸಮಸ್ಯೆಯಲ್ಲಿ ಕಲಬುರಗಿ ವಿಜಯಪುರ ಬಾಗಲಕೋಟೆಗೆ ತೆರಳುವುದು ಅನಿವಾರ್ಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಮಹಾದೇವಿ ಬೇನಾಳಮಠ ಚಂದ್ರಶೇಖರ ಬೋರಮಗುಂಡ ಅಸಮಾಧಾನ ವ್ಯಕ್ತಪಡಿಸಿದರು. ‘ಹುಣಸಗಿ ತಾಲ್ಲೂಕಿನಲ್ಲಿ ನೇತ್ರದಾನದ ಕುರಿತು ಜಾಗೃತಿ ಕಾರ್ಯ ಕೈಗೊಳ್ಳುವುದು ಅಗತ್ಯವಿದೆ. ತಾಲ್ಲೂಕು ಆದಾಗಿನಿಂದ ಇಲ್ಲಿಯವರೆಗೂ ಜಾಗೃತಿಯ ಕೊರತೆಯಿಂದಾಗಿ ಒಬ್ಬರು ನೇತ್ರದಾನಕ್ಕೆ ಮುಂದಾಗಿಲ್ಲ’ ಎಂದು ಸುರಪುರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ.ನಾಯಕ ಮಾಹಿತಿ ನೀಡಿದರು.

ಖಾಲಿಯಿರುವ ನೇತ್ರ ತಪಾಸಣಾ ಸಹಾಯಕರ ಹುದ್ದೆ

ಗುರುಮಠಕಲ್: ಪಟ್ಟಣದಲ್ಲಿನ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ಲ್ಲಿನ ನೇತ್ರ ತಪಾಸಣಾಧಿಕಾರಿ ಅಥವಾ ನೇತ್ರ ತಪಾಸಣಾ ಸಹಾಯಕ ಹುದ್ದೆಯು ಖಾಲಿಯಿದ್ದು ಸದ್ಯ ಸೈದಾಪುರ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ‘ತಾಲ್ಲೂಕು ಕೇಂದ್ರವಾದ ಬಳಿಕ ನಮ್ಮ ಆಸ್ಪತ್ರೆ ಮೇಲ್ದರ್ಜೆಗೇರುತ್ತದೆ ಎನ್ನುವ ಕನಸಿತ್ತು. ಆದರೆ ಇನ್ನೂ ತಾಲ್ಲೂಕು ಆಸ್ಪತ್ರೆಯಾಗಲೇ ಇಲ್ಲ. ಸಾಮಾನ್ಯ ವೈದ್ಯಕೀಯ ಸೇವೆಗೂ ಬೇರೆಡೆಗೆ ಹೋಗುವ ಅನಿವಾರ್ಯತೆಯಿದೆ. ಶೀಘ್ರವೇ ಪಟ್ಟಣದ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಅಗತ್ಯ ಸಿಬ್ಬಂದಿ ಒದಗಿಸಲಿ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂಜು ಅಳೆಗಾರ ಮತ್ತು ಮಹಾದೇವ. ‘2024ರ ಜುಲೈ ತಿಂಗಳಲ್ಲಿ ಸಿಎಚ್‌ಸಿಯಲ್ಲಿ ಜರುಗಿದ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ 260ಕ್ಕೂ ಅಧಿಕ ಜನರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕಣ್ಣಿಗೆ ಸಂಬಂಧಿಸಿದಂತೆ ಸಾಮಾನ್ಯ ಸಮಸ್ಯೆಗಳನ್ನು ಸೈದಾಪುರದಿಂದ ವಾರಕ್ಕೆ ಮೂರುದಿನ ಅಥವಾ ಅಗತ್ಯಕ್ಕೆ ತಕ್ಕಂತೆ ಇಲ್ಲಿಗೆ ಬರುವ ನೇತ್ರ ತಪಾಸಣಾಧಿಕಾರಿ ಪರಿಶೀಲಿಸಿ ಚಿಕಿತ್ಸೆಗೆ ಶಿಫಾರಸ್ಸು ಮಾಡುತ್ತಾರೆ’ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದರು. ‘ತಾಲ್ಲೂಕಿನಲ್ಲಿ ಈವರೆಗೆ ಕೇವಲ 12 ಜನ ಮಾತ್ರ ನೇತ್ರದಾನಕ್ಕೆ ನೋಂದಾಯಿಸಿದ್ದಾರೆ. ನೇತ್ರದಾನದ ಮಹತ್ವ ಮತ್ತು ಅಗತ್ಯತೆ ಕುರಿತು ನಿರಂತರ ವ್ಯಾಪಕ ಪ್ರಚಾರದ ಕೊರತೆಯಿದೆ. ಇದರಿಂದ ಜನರಲ್ಲಿ ಜಾಗೃತಿಯಿಲ್ಲ. ಆರೋಗ್ಯ ಇಲಾಖೆಯು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಚ್ಚು ಮಹತ್ವ ನೀಡಿದರೆ ನೋಂದಾಯಿಸುವವರ ಸಂಖ್ಯೆಯೂ ಹೆಚ್ಚಲಿದೆ’ ಎನ್ನುತ್ತಾರೆ ಹಿರಿಯ ನಾಗರಿಕರೊಬ್ಬರು.

ಸುರಪುರ: ನೇತ್ರ ತಜ್ಞರು ಇಲ್ಲ

ಸುರಪುರ:ತಾಲ್ಲೂಕು ಸರ್ಕಾರಿ ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೇತ್ರ ತಜ್ಞರಿಲ್ಲ. ತಾಲ್ಲೂಕಿನಲ್ಲಿ ಖಾಸಗಿ ನೇತ್ರ ತಜ್ಞರೂ ಇಲ್ಲ. ಹೀಗಾಗಿ ನೇತ್ರ ತಪಾಸಣೆಗೆ ರೋಗಿಗಳು ಪಕ್ಕದ ಶಹಾಪುರ ಯಾದಗಿರಿ ಇಲ್ಲವೇ ಕಲಬುರಗಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಆದರೂ ತಾಲ್ಲೂಕಿನ ಆರೋಗ್ಯ ಇಲಾಖೆ ನೇತ್ರ ಚಿಕಿತ್ಸೆಯ ಬಗ್ಗೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪ್ರತಿವರ್ಷ ಎರಡು ಸಲ ಖಾಸಗಿ ಸಂಸ್ಥೆಯ ನೆರವಿನಿಂದ ನಗರದಲ್ಲಿ ಉಚಿತ ನೇತ್ರ ಶಸ್ತç ಚಿಕಿತ್ಸೆ ಏರ್ಪಡಿಸುತ್ತಿದೆ. ಜೂನ್ ತಿಂಗಳಲ್ಲಿ ಜನಹಿತ ಐಕೇರ್ ಹಿಂದುಪುರ ಅವರ ನೆರವಿನೊಂದಿಗೆ 581 ಜನರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ತಾಲ್ಲೂಕಿನಲ್ಲಿ ಇದುವರೆಗೆ 1500 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೆ ಅರ್ಹರಾದ ರೋಗಿಗಳನ್ನು ಗುರುತಿಸಲಾಗಿದೆ. ಅವರನ್ನು ಆದ್ಯತೆಯ ಮೇರೆಗೆ ಯಾದಗಿರಿಗೆ ಕಳಿಸಲಾಗುತ್ತಿದೆ. ವರ್ಷಕ್ಕೆ ಒಂದು ಬಾರಿ ತಾಲ್ಲೂಕಿನ ಪ್ರತಿ ಶಾಲೆಗೆ ಭೇಟಿ ನೀಡಿ ಮಕ್ಕಳ ನೇತ್ರ ತಪಾಸಣೆ ಮಾಡಲಾಗುತ್ತಿದೆ. ದೋಷವಿರುವ ಮಕ್ಕಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.