ADVERTISEMENT

ಹುಣಸಗಿ: ಸಾಧನೆಯತ್ತ ಮುನ್ನಡೆದ ಸರ್ಕಾರಿ ಕಾಲೇಜು

ಹಾಸ್ಟೆಲ್, ಪ್ರಯೋಗಾಲಯ, ಗ್ರಂಥಾಲಯ ಕೊರತೆಯ ಮಧ್ಯೆಯೂ ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 5:48 IST
Last Updated 29 ಜೂನ್ 2024, 5:48 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಸುಸಜ್ಜಿತ ಸರ್ಕಾರಿ ಪದವಿ ಪೂರ್ವ ಕಾಲೇಜು
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಸುಸಜ್ಜಿತ ಸರ್ಕಾರಿ ಪದವಿ ಪೂರ್ವ ಕಾಲೇಜು   

ಕೊಡೇಕಲ್ಲ (ಹುಣಸಗಿ): ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಉತ್ತಮ ರೀತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚಿನ ಹಾಗೂ ಗುಣಮಟ್ಟದ ವ್ಯವಸ್ಥೆ ಕಲ್ಪಿಸುವಂತಾಗಲು ಇಲ್ಲಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯಸ್ಥೆಯಾಗುವುದು ಅಗತ್ಯ ಎಂದು ಇಲ್ಲಿಯ ಶಿಕ್ಷಣ ಪ್ರೇಮಿಗಳು ಹಾಗೂ ನಿವಾಸಿಗಳು ಹೇಳುತ್ತಾರೆ.

ಕೊಡೇಕಲ್ಲ ಗ್ರಾಮದಲ್ಲಿ 1992 ರಲ್ಲಿಯೇ ಅಂದಿನ ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಆರಂಭಿಸಿತು. ಅಂದಿನಿಂದ ಇಂದಿನವರೆಗೂ ಈ ಭಾಗದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಈ ಕಾಲೇಜು ಆಸರೆಯಾಗಿದೆ.

ಸದ್ಯ ಈ ಕಾಲೇಜನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 116 ಮಕ್ಕಳು ಹಾಗೂ ವಿಜ್ಞಾನ ವಿಭಾಗದಲ್ಲಿ 46 ಮಕ್ಕಳು ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ.

ADVERTISEMENT

‘ಪ್ರಥಮ ಪಿಯುಸಿಗೆ ಕಲಾ ವಿಭಾಗಕ್ಕೆ 46 ಹಾಗೂ ವಿಜ್ಞಾನ ವಿಭಾಗಕ್ಕೆ 33 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಈ ಭಾಗದಲಿಯೇ ವಿಜ್ಞಾನ ವಿಭಾಗಕ್ಕೆ ಹೆಚ್ಚು ಮಕ್ಕಳು ಆಸಕ್ತಿ ತೋರುತ್ತಾರೆ. ಆದರೆ, ಅಗತ್ಯ ಉಪನ್ಯಾಸಕರು ಹಾಗೂ ಕೊಠಡಿಗಳ ವ್ಯವಸ್ಥೆ ಇದ್ದರೂ ಸೂಕ್ತ ಪ್ರಯೋಗಾಲಯದ ವ್ಯವಸ್ಥೆ ಇಲ್ಲ’ ಎಂದು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದೂರಿದರು.

‘ಕಾಲೇಜಿನ ಪ್ರಾಚಾರ್ಯ ದಯಾನಂದ ಮಠ ಹಾಗೂ ಉಪನ್ಯಾಸಕರ ಪರಿಶ್ರಮದಿಂದಾಗಿ ಪ್ರತಿ ವರ್ಷ ಫಲಿತಾಂಶ ಚೆನ್ನಾಗಿ ಬರುತ್ತಿದೆ’ ಎಂದು ಕಾಲೇಜಿನ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಂಗನಾಥ ದೊರಿ ವರ್ಷ ವ್ಯಕ್ತಪಡಿಸಿದರು.

ಸದ್ಯ ಒಟ್ಟು ಎರಡೂ ವಿಭಾಗದಿಂದ ಒಟ್ಟು 8 ಕಾಯಂ ಉಪನ್ಯಾಸರು ಕಾರ್ಯನಿರ್ವಹಿಸುತ್ತಿದ್ದು, ಇಂಗ್ಲೀಷ್‌ ಹಾಗೂ ಜೀವಶಾಸ್ತ್ರ ಉಪನ್ಯಾಕರ ಕೊರತೆ ಇದೆ. ಅದರಂತೆ ಕಚೇರಿ ಕೆಲಸಗಳನ್ನು ನೋಡಿಕೊಂಡು ಹೋಗಲು ಎಫ್‌ಡಿಎ ಹಾಗೂ ಸೇವಕರ ಹುದ್ದೆಯೇ ಖಾಲಿ ಇವೆ.

ಗ್ರಂಥಾಲಯ, ಪ್ರಯೋಗಾಲಯ ಕೊರತೆ:

‘ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸುವಂತಾಗಲು ಹಾಗೂ ಸೂಕ್ತ ಸ್ಪರ್ಧಾತ್ಮಕ ಪರಿಕ್ಷೆ ಎದುರಿಸುವಂತಾಗಲು ಗ್ರಂಥಾಲಯ ಅಗತ್ಯ. ಆದರೆ, ಈ ಕಾಲೇಜಿನಲ್ಲಿ ಸೂಕ್ತ ಗ್ರಂಥಾಲಯ ಹಾಗೂ ವಿಷಯವಾರು ಪ್ರಯೋಗಾಲಯದ ವ್ಯವಸ್ಥೆ ಇಲ್ಲ’ ಎಂದು ವಿದ್ಯಾರ್ಥಿಗಳಾದ ಆಕಾಶ, ಪರಶುರಾಮ ಹೇಳಿದರು.

‘ವಿಜ್ಞಾನ ವಿಭಾಗದಲ್ಲಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೂಕ್ತ ಪ್ರಯೋಗಾಲದ ಸಮಸ್ಯೆ ಎದುರಿಸುವಂತಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಲಿ’ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಬಿರಾದಾರ ಅಸಮಾಧಾನ ವ್ಯಕ್ತಪಡಿಸಿದರು.

ಶುದ್ಧ ಕುಡಿಯುವ ನೀರು:

ಕೊಡೇಕಲ್ಲ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮಾಜಿ ಸಚಿವ ನರಸಿಂಹ ನಾಯಕ ಅವರು ಕಾಳಜಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ವಿದ್ಯಾರ್ಥಿಗಳಾದ ಮಹಾದೇವಿ, ಕವಿತಾ, ಜಯಶ್ರೀ ತಿಳಿಸಿದರು.

ಉತ್ತಮ ಫಲಿತಾಂಶ:

‘ಕಳೆದ ಎರಡು ವರ್ಷಗಳ ಫಲಿತಾಂಶ ಗಮನಿಸಿದಾಗ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿದೆ. ಪ್ರಸಕ್ತ ಸಾಲಿನಲ್ಲಿ ಕಲಾ ವಿಭಾಗದಲ್ಲಿ 194 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, ಅದರಲ್ಲಿ 169 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 29 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ ವರ್ಷದ ಈ ಕಾಲೇಜಿನ ವಿದ್ಯಾರ್ಥಿ ಸುರಪುರ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ‘ ಎಂದು ಉಪನ್ಯಾಸಕ ಮದಸೂಧನ ಕುಲಕರ್ಣಿ ಮಾಹಿತಿ ನೀಡಿದರು.

ರಂಗನಾಥ ದೊರೆ ಕಾಲೇಜು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ
ದಯಾನಂದ ಮಠ ಪ್ರಾಚಾರ್ಯ
ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಯೋಗಾಲಯ ಸಾಮಗ್ರಿ ಕೊರತೆ ಇದ್ದರೂ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಅಗತ್ಯ ವ್ಯವಸ್ಥೆ ನೀಡಿದಲ್ಲಿ ಇನ್ನೂ ಹೆಚ್ಚು ಅನುಕೂಲವಾಗಲಿದೆ
ರಂಗನಾಥ ದೊರೆ ಕಾಲೇಜು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ
ಕೊಡೇಕಲ್ಲ ಗ್ರಾಮದ ಸುತ್ತಮುತ್ತ ಸುಮಾರು 20 ಕ್ಕೂ ಹೆಚ್ಚು ಹಳ್ಳಿಗಳಿದ್ದು ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುತ್ತಾರೆ. ವಿದ್ಯಾರ್ಥಿಗಳ ಕಲಿಕಾಸಕ್ತಿ ಹೆಚ್ಚಾಗಿದೆ
ದಯಾನಂದ ಮಠ, ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.