ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ ವಿಧಿ ವಿಜ್ಞಾನ ತಜ್ಞರೇ ಇಲ್ಲ!

ಜಿಲ್ಲಾಸ್ಪತ್ರೆ ಆರಂಭದಿಂದಲೂ ನೇಮಕವಾಗದ ಹುದ್ದೆ

ಬಿ.ಜಿ.ಪ್ರವೀಣಕುಮಾರ
Published 9 ಸೆಪ್ಟೆಂಬರ್ 2022, 19:31 IST
Last Updated 9 ಸೆಪ್ಟೆಂಬರ್ 2022, 19:31 IST
ಯಾದಗಿರಿ ಹೊಸ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮರಣೋತ್ತರ ಪರೀಕ್ಷಾ ಕೇಂದ್ರ (ಅಂಗರಚನಾಶಾಸ್ತ್ರ ವಿಭಾಗ)
ಯಾದಗಿರಿ ಹೊಸ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮರಣೋತ್ತರ ಪರೀಕ್ಷಾ ಕೇಂದ್ರ (ಅಂಗರಚನಾಶಾಸ್ತ್ರ ವಿಭಾಗ)   

ಯಾದಗಿರಿ: ಸರ್ಕಾರಿ ಜಿಲ್ಲಾಸ್ಪತ್ರೆ ಆರಂಭವಾದಗಲಿಂದಲೂ ವಿಧಿ ವಿಜ್ಞಾನ ತಜ್ಞರೇ ಇಲ್ಲ. ಇದರಿಂದ ಕೆಲ ಕ್ಷಿಷ್ಟಕರ ಪರಿಸ್ಥಿತಿಯಲ್ಲಿ ಕಲಬುರಗಿ ಜಿಲ್ಲೆಗೆ ವರದಿ ಕಳುಹಿಸುವ ಅನಿವಾರ್ಯತೆ ಇದೆ.

ಕೊಲೆ, ಆತ್ಮಹತ್ಯೆ, ಹಾವು ಕಡಿತ ಸೇರಿದಂತೆ ಇನ್ನಿತರ ಸೂಕ್ಷ್ಮ ಪ್ರಕರಣಗಳಲ್ಲಿ ವಿಧಿ ವಿಜ್ಞಾನ ತಜ್ಞರು ಇದ್ದರೆ ಸುಲಭವಾಗಿ ಕಾರಣ ಪತ್ತೆ ಹಚ್ಚಲು ಸಾಧ್ಯ. ಆದರೆ, ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಈ ಹುದ್ದೆ ಕೊರತೆ ಕಂಡು ಬರುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ತಜ್ಞರ ಪಾತ್ರ ‍ಪ್ರಮುಖ ಪಾತ್ರ ವಹಿಸುತ್ತದೆ.

ಠಾಣೆಗಳಿರುವಲ್ಲಿ ಪೋಸ್ಟ್‌ಮಾರ್ಟ್‌ಂ ಅವಶ್ಯ: ಜಿಲ್ಲೆಯಲ್ಲಿ 41 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 6 ಸಮುದಾಯ ಆರೋಗ್ಯ ಕೇಂದ್ರಗಳು, ಎರಡು ತಾಲ್ಲೂಕು ಆಸ್ಪತ್ರೆ, ಒಂದು ಜಿಲ್ಲಾಸ್ಪತ್ರೆ ಇದೆ. ಆದರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆ ಕಟ್ಟಡ ಇಲ್ಲದಿರುವುದು ಸಮಸ್ಯೆಯಾಗಿ ಬಯಲು ಪ್ರದೇಶಗಳಲ್ಲಿ ಪರೀಕ್ಷೆ ಮಾಡುವ ಪರಿಸ್ಥಿತಿ ಇದೆ.

ಯಾದಗಿರಿ ನಗರದಲ್ಲಿ ನಗರಠಾಣೆ, ಗ್ರಾಮಾಂತರ ಠಾಣೆ, ಸಂಚಾರ ಠಾಣೆ, ಮಹಿಳಾ ಠಾಣೆ ಪೊಲೀಸ್‌ ಠಾಣೆಗಳಿವೆ. ಗುರುಮಠಕಲ್‌, ಸೈದಾಪುರ, ಶಹಾಪುರ, ಗೋಗಿ, ಭೀಮರಾಯನಗುಡಿ, ಸುರಪುರ, ಹುಣಸಗಿ, ಕೋಡೆಕಲ್‌, ನಾರಾಯಣಪುರ, ವಡಗೇರಾ, ಕೆಂಭಾವಿ ವಲಯಗಳಲ್ಲಿ ಪೊಲೀಸ್‌ ಠಾಣೆಗಳಿವೆ. ಇಲ್ಲಿ ಆಗಾಗ ಅಪರಾಧ ಕೃತ್ಯಗಳು ಜರುತ್ತವೆ. ಇಂಥ ಕಡೆಗಳಲ್ಲಲ್ಲಿಯಾದರೂ ಮರಣೋತ್ತರ ಪರೀಕ್ಷಾ ಕೊಠಡಿಗಳು ಇರುವುದು ಅವಶ್ಯವಾಗಿದೆ ಎಂದು ವೈದ್ಯಕೀಯ ಮೂಲಗಳ ಅಭಿ‍ಪ‍್ರಾಯವಾಗಿದೆ.

ಪರೀಕ್ಷಾ ಕೇಂದ್ರ ಹೇಗಿರಬೇಕು: ಸೂಕ್ತ ಮರಣೋತ್ತರ ಪರೀಕ್ಷಾ ಕೊಠಡಿ ಇಲ್ಲದಿದ್ದರಿಂದ ಬಯಲಿನಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಬಯಲಿನಲ್ಲಿ ಮಾಡುವುದು ಕೂಡ ಅಷ್ಟೆ ಅವೈಜ್ಞಾನಿಕವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ತುರ್ತು ಸಂದರ್ಭಗಳಲ್ಲಿ ಹೊರತು ಪಡಿಸಿ ಬೆಳಿಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ಮಾತ್ರ ಪರೀಕ್ಷೆ ಮಾಡಬಹುದು. ಒಂದು ವೇಳೆ ರಾತ್ರಿ ವೇಳೆ ಮಾಡಿದರೆ ಸೂರ್ಯನ ಬೆಳಕು ಇರುವಷ್ಟೆ ವಿದ್ಯುತ್‌ ದೀಪಗಳ ಬೆಳಕು ಇರುಬೇಕು ಎನ್ನುವುದು ವೈದ್ಯರ ಮಾತಾಗಿದೆ.

‘20X12 ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ನಾಲ್ಕು ಗೋಡೆಗಳಲ್ಲಿ 1,000 ವ್ಯಾಟ್ಸ್‌ ದೀಪ‍ಗಳು ಆಳವಡಿಸಬೇಕು. ಸೂಕ್ಷ್ಮ ಪ್ರಕರಣಗಳಲ್ಲಿ ವಿಡಿಯೊ ಚಿತ್ರಕರಣ ಮಾಡಬೇಕು.ಸೂಕ್ತ ನೀರಿನ ವ್ಯವಸ್ಥೆ ಇರಬೇಕು. ಕಾಬೋರ್ಡ್‌, ಟೇಬಲ್‌, ಫ್ರಿಜ್ಡ್‌, ವಿದ್ಯುತ್‌ ಜನರೇಟರ್‌, ಇಬ್ಬರು ಅಟೆಂಡರ್‌, ಸಂಬಂಧಿಸಿದ ವೈದ್ಯರು ಇರಬೇಕು. ಇದು ಸೂಕ್ತ ಮರಣೋತ್ತರ ಪರೀಕ್ಷಾ ಕೇಂದ್ರವಾದಗಲಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸದ ವೈದ್ಯರೋಬ್ಬರು.

ಪರೀಕ್ಷಾ ಕೇಂದ್ರಕ್ಕೆ ₹12 ಲಕ್ಷ: ಮರಣೋತ್ತರ ಪರೀಕ್ಷಾ ಕೇಂದ್ರ ಒಂದಕ್ಕೆ ₹10ರಿಂದ 12 ಲಕ್ಷ ಖರ್ಚಾಗಲಿದೆ ಈಚೆಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಅಂದಾಜುಪಟ್ಟಿ ನೀಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

***

ಯಾದಗಿರಿ ಜಿಲ್ಲಾಸ್ಪತ್ರೆಯಾದಗಲಿಂದಲೂ ವಿಧಿ ವಿಜ್ಞಾನ ತಜ್ಞರು ಬಂದಿಲ್ಲ. ಖಾಲಿಯೇ ಉಳಿದಿದೆ. ಸದ್ಯಕ್ಕೆ ಇಬ್ಬರು ಎಂಬಿಬಿಎಸ್‌ ವೈದ್ಯರು ಕಾರ್ಯನಿರ್ಹಿಸುತ್ತಿದ್ದಾರೆ. ಅವಶ್ಯವಿದ್ದರೆ ನಮ್ಮ ಗಮನಕ್ಕೆ ತಂದರೆ ಸೂಕ್ತ ಕ್ರಮಕೈಗೊಳ್ಳುತ್ತೇವೆ.
–ಡಾ.ನೀಲಮ್ಮ ರೆಡ್ಡಿ, ಶಸ್ತ್ರಚಿಕಿತ್ಸಕರು, ಜಿಲ್ಲಾಸ್ಪತ್ರೆ

***

ಜಿಲ್ಲೆಯಲ್ಲಿ ವಿಧಿ ವಿಜ್ಞಾನ ತಜ್ಞರು ಒಬ್ಬರು ಇಲ್ಲ. ಹಿಂದೆ ಶಹಾಪುರ ಆಸ್ಪತ್ರೆಯಲ್ಲಿ ಇದ್ದರು. ಅವಧಿ ಮುಗಿದಿದ್ದರಿಂದ ಗುತ್ತಿಗೆ ನವೀಕರಣ ಆಗಿಲ್ಲ. ವೈದ್ಯಕೀಯ ಕಾಲೇಜು ನಂತರ ಸಮಸ್ಯೆ ಪರಿಹಾರ ಸಿಗಲಿದೆ.
–ಡಾ.ಗುರುರಾಜ ಹಿರೇಗೌಡ್ರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.