ADVERTISEMENT

ಶ್ರೀಗಂಧ ಮರ ಬೆಳೆಸಿ ಆರ್ಥಿಕ ಸಬಲರಾಗಲು ಜಿ.ಪಂ ಸಿಇಒ ಅಮರೇಶ ನಾಯ್ಕ್ ಸಲಹೆ

ಶ್ರೀಗಂಧ ಮರ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 16:03 IST
Last Updated 5 ಡಿಸೆಂಬರ್ 2022, 16:03 IST
ಯಾದಗಿರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀಗಂಧ ಮರ ಆಧಾರಿತ ಕೃಷಿ ಅರಣ್ಯ ಮಾದರಿಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸಿಬ್ಬಂದಿ
ಯಾದಗಿರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀಗಂಧ ಮರ ಆಧಾರಿತ ಕೃಷಿ ಅರಣ್ಯ ಮಾದರಿಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸಿಬ್ಬಂದಿ   

ಯಾದಗಿರಿ : ರಾಜ್ಯದ ಅತಿ ಶ್ರೇಷ್ಠವಾದ ಮರ ಶ್ರೀಗಂಧ ಬೆಳೆಯುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ನಾಯ್ಕ್ ರೈತರಿಗೆ ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ, ಸಾಮಾಜಿಕ ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಶ್ರೀಗಂಧ ಮರ ಆಧಾರಿತ ಕೃಷಿ ಅರಣ್ಯ ಮಾದರಿಗಳ ಕಾರ್ಯಾಗಾರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀಗಂಧ ಮರಗಳನ್ನು ಬೆಳೆಯುವ ಮೂಲಕ ರೈತರು ತಮ್ಮ ಆದಾಯ ಮೂಲ ಹೆಚ್ಚಿಸಿಕೊಳ್ಳಬೇಕು. ಆರ್ಥಿಕವಾಗಿ ಸಬಲರಾಗಲು ಇದು ಅನುಕೂಲವಾಗಲಿದ್ದು, ಶ್ರೀಗಂಧ ಮರಗಳ ಕಳ್ಳತನ, ಅಕ್ರಮ ಸಾಗಣಿಕೆ ಹಾಗೂ ಸಂಗ್ರಹಣೆಯಲ್ಲಿ ತೊಡಗಿರುವ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿದೆ. ಕಳ್ಳತನ ಆದ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕೆಂದು ತಿಳಿಸಿದರು.

ADVERTISEMENT

ಕಲಬುರಗಿ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವೆಂಕಟೇಸನ್ ಮಾತನಾಡಿ, ಶ್ರೀಗಂಧದ ಮರದಿಂದ ಕನಿಷ್ಠ 15 ವರ್ಷಗಳ ನಂತರ ಮತ್ತು ಗರಿಷ್ಠ 100 ವರ್ಷಗಳವರೆಗೆ ಆದಾಯ ಪಡೆಯಬಹುದು. 15 ವರ್ಷಗಳಿಂದ 30 ವರ್ಷಗಳವರೆಗೆ ಬಲಿತ ಮರಗಳಿಂದ ಹೆಚ್ಚು ಆದಾಯ ಬರುವುದು. ಕಡಿತಲೆಗೆ ಪಕ್ವವಾಗಿರುವ ಮರಗಳ ಬಗ್ಗೆ ಮರವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ದೃಢೀಕರಿಸಿಕೊಂಡರೆ ಉತ್ತಮ ಎಂದು ಸಲಹೆ ನೀಡಿದರು.

ಸಾಮಾನ್ಯವಾಗಿ 5 ವರ್ಷ ಮೇಲ್ಪಟ್ಟ ಗಂಧದ ಮರಗಳ ಕಳ್ಳತನ ಆಗುವ ಸಾಧ್ಯತೆ ಇರುತ್ತದೆ. ಈ ಅವಧಿಯಲ್ಲಿ ಎಲ್ಲ ಶ್ರೀಗಂಧ ಬೆಳೆಗಾರರು ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಜೈವಿಕ ಬೇಲಿ, ಸಾಮಾಜಿಕ ಬೇಲಿ, ಸಿ.ಸಿ.ಕ್ಯಾಮೆರಾ, ರಾತ್ರಿ ವೇಳೆ ಕಾವಲುಗಾರ ವ್ಯವಸ್ಥೆ ಮಾಡಿಕೊಳ್ಳಬೇಕು. ಶ್ರೀಗಂಧ ಮರಗಳ ಕಳ್ಳತನ ಮಾಡಿದ ಕಳ್ಳರು ಪತ್ತೆಯಾದಲ್ಲಿ ಅವರ ವಿವರಗಳನ್ನು ತಮ್ಮೊಡನೆ ಇಟ್ಟುಕೊಳ್ಳಬೇಕು. ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘಕ್ಕೂ ಮಾಹಿತಿ ನೀಡಬೇಕೆಂದು ಹೇಳಿದರು.

ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಮರನಾರಾಯಣ ಮಾತನಾಡಿ, ಯಾವುದೇ ವ್ಯಕ್ತಿ 4 ಕೆಜಿಗಿಂತ ಹೆಚ್ಚಾಗಿ ಶ್ರೀಗಂಧ ಇಟ್ಟುಕೊಂಡರೆ ಅದು ಕಾನೂನಿಗೆ ವಿರುದ್ಧವಾಗಿರುತ್ತದೆ. ಇದು ಶಿಕ್ಷಾರ್ಹ ಅಪರಾಧವಾಗುತ್ತದೆ. ಇದಕ್ಕೆ 10 ವರ್ಷ ಜೈಲು ಶಿಕ್ಷೆಯಾಗುತ್ತದೆ ಎಂದರು.

ಸಲಹೆಗಾಗಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಜೊತೆಗೆ ಹಂಚಿಕೊಳ್ಳಬಹುದು. ಉಪಾಧ್ಯಕ್ಷ ಶರಣಪ್ಪ 94835 25099ಗೆ ಇಮೇಲ್ usharanappa44@gmail.com ಸಂಪರ್ಕಿಸಲು ಕೋರಿದರು.

ಈ ಸಂದರ್ಭದಲ್ಲಿ ಯಾದಗಿರಿ ಸಾಮಾಜಿಕ ಮತ್ತು ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಕೆ. ಬಗಾಯತ್, ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘ ಗೌರವ ಉಪಾಧ್ಯಕ್ಷ ಯು.ಶರಣಪ್ಪ, ಯಾದಗಿರಿ ಜಂಟಿ ಕೃಷಿ ನಿರ್ದೇಶಕ ಆಬಿದ್ ಎಸ್‌.ಎಸ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ, ಯಾದಗಿರಿ ಉಪ ವಿಭಾಗ ಪ್ರಾದೇಶಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ ಆಸದ್, ಸಾಮಾಜಿಕ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೀರಪ್ಪ ಇದ್ದರು.

***

ಕೃಷಿ ಪ್ರೋತ್ಸಾಹ ಯೋಜನೆ

ರೈತರು, ಹಾಗೂ ಸಂಘ ಸಂಸ್ಥೆಗಳನ್ನು ಅರಣ್ಯೀಕರಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವ ಹಾಗೂ ಅವರ ಸಹಕಾರ ಪಡೆಯುವ ದೃಷ್ಟಿಯಿಂದ ಸಾರ್ವಜನಿಕ ಸಹಭಾಗಿತ್ವದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಎಂಬ ಹೊಸ ಯೋಜನೆಯನ್ನು 2011-12ನೇ ಸಾಲಿನಿಂದ ಪ್ರಾರಂಭಿಸಲಾಗಿದೆ ಎಂದು ಕಲಬುರಗಿ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವೆಂಕಟೇಸನ್ ಹೇಳಿದರು.

ಈ ಕಾರ್ಯಕ್ರಮದ ಅನ್ವಯ ರೈತರು ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಕ್ಷೇತ್ರಗಳಿಂದ ಸಸಿಗಳನ್ನು ಪಡೆದು ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದರೆ ಪ್ರತಿ ಬದುಕುಳಿದ ಸಸಿಗೆ ಮೊದಲನೇ ವರ್ಷದ ಅಂತ್ಯದಲ್ಲಿ ₹35 ಹಾಗೂ ಎರಡನೇ ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ಕ್ರಮವಾಗಿ ₹40 ಹಾಗೂ 50 ಹೀಗೆ ಒಟ್ಟು ₹125 ಪ್ರೋತ್ಸಾಹ ಧನವನ್ನಾಗಿ ಪಾವತಿಸಲಾಗುತ್ತದೆ ಎಂದರು.

ಈ ರೀತಿ ಪಾವತಿಸುತ್ತಿರುವ ಪ್ರೋತ್ಸಾಹ ಧನದಿಂದ ರೈತರು ಸಸಿಗಳನ್ನು ಪಡೆಯಲು ಹಾಗೂ ನೆಡಲು ಖರ್ಚು ಮಾಡುವ ಹಣವನ್ನು ತುಂಬಿಕೊಳ್ಳಬಹುದಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಸಸಿಸಗಳನ್ನು ನೆಟ್ಟು ಬೆಳಸಿದ್ದಲ್ಲಿ ಗಣನೀಯವಾಗಿ ಪ್ರೋತ್ಸಾಹ ಧನ ಪಡೆಯಬಹುದಾಗಿದೆ. ಪ್ರೋತ್ಸಾಹ ಧನ ಪಡಿಯುವುದಲ್ಲದೇ ರೈತರು ಮರಗಳಿಂದ ಸಿಗುವಂತಹ ಹಣ್ಣುಗಳು, ಬೀಜ, ಮೇವು, ಉರುವಲು, ಕೋಲು, ಮರಮಟ್ಟು, ಇತ್ಯಾದಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.