ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಕರ್ನಾಟಕ ಸಹಕಾರ ಇಲಾಖೆಯಲ್ಲಿನ ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದೆ. ಸಹಕಾರ ಇಲಾಖೆಯ 100 ‘ಸಹಕಾರ ಸಂಘಗಳ ನಿರೀಕ್ಷಕರ’ (Co-operative Inspectors-CI) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಇದರಲ್ಲಿ ಕರ್ನಾಟಕ ಉಳಿಕೆ ಮೂಲ ವೃಂದದ 47 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದದ 53 ಹುದ್ದೆಗಳು ಸೇರಿ ಒಟ್ಟು 100 ಹುದ್ದೆಗಳಿವೆ. ಎರಡಕ್ಕೂ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಮಾರ್ಚ್ 30ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಇದೇ ಏಪ್ರಿಲ್ 30 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ ಶುಲ್ಕ ₹600, 2ಎ, 2ಬಿ 3ಎ, 3ಬಿ ಅಭ್ಯರ್ಥಿಗಳಿಗೆ ₹300 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹50 ಇದ್ದು ಎಸ್‌ಸಿ, ಎಸ್‌ಟಿ, ಅಂಗವಿಕಲ ಹಾಗೂ ಪ್ರವರ್ಗ 1ರ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ವಯೋಮಿತಿ : ಅರ್ಜಿ ಸಲ್ಲಿಸಲು ವಯೋಮಿತಿ ಕನಿಷ್ಠ 18 ವರ್ಷ– ಗರಿಷ್ಠ 35 ವರ್ಷಗಳು. 2ಎ, 2ಬಿ 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಎಸ್‌ಸಿ, ಎಸ್‌ಟಿ, ಅಂಗವಿಕಲ ಹಾಗೂ ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷದವರೆಗೆ ವಯೋಮಿತಿ ವಿಸ್ತರಿಸಲಾಗಿದೆ.
ವಿದ್ಯಾರ್ಹತೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಿ.ಎಸ್ಸಿ (ಕೃಷಿ), ಬಿ.ಎಸ್ಸಿ (ಮಾರ್ಕೆಟಿಂಗ್), ಬಿ.ಎಸ್ಸಿ ಕೋಆಪ್‌ರೇಟಿವ್, ಬಿ.ಕಾಂ, ಬಿಬಿಎ/ಬಿಬಿಎಂ ಪದವಿಗಳಲ್ಲಿ ಯಾವುದಾದರೂ ಒಂದನ್ನು ಬೇಸಿಕ್ ವಿದ್ಯಾರ್ಹತೆಯಾಗಿ ಹೊಂದಿರಬೇಕು.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಗರಿಷ್ಠ ₹52 ಸಾವಿರದವರೆಗೆ ವೇತನ ಶ್ರೇಣಿ ಇದೆ. ಸರ್ಕಾರ ಕಾಲಕಾಲಕ್ಕೆ ನೀಡುವ ಇತರೆ ಭತ್ಯೆಗಳು ಸೇರುತ್ತವೆ.
ಆಯ್ಕೆ ವಿಧಾನ ಹೇಗೆ?: ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಪದವಿ ಮಟ್ಟದ ಪಠ್ಯಮಗಳನ್ನು ಆಧರಿಸಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿರುತ್ತದೆ.
ಅದಕ್ಕೂ ಮುನ್ನ ಅಭ್ಯರ್ಥಿಗಳು ಕನ್ನಡ ಕಡ್ಡಾಯ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಈಗಾಗಲೇ ಕೆಪಿಎಸ್‌ಸಿಯ ಕನ್ನಡ ಕಡ್ಡಾಯ ಪರೀಕ್ಷೆ ಪಾಸಾದವರು ಮತ್ತೆ ಇದನ್ನು ಬರೆಯುವ ಅಗತ್ಯ ಇಲ್ಲ.
ಸ್ಪರ್ಧಾತ್ಮ ಕ ಪರೀಕ್ಷೆ : ಸ್ಪರ್ಧಾತ್ಮಕ ಪರೀಕ್ಷೆಗೆ ಎರಡು ಪತ್ರಿಕೆಗಳಿರುತ್ತವೆ. ಪ್ರತಿ ಪತ್ರಿಕೆಯಲ್ಲಿ 100 ಅಂಕಗಳ 100 ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ. ಮೊದಲ ಪತ್ರಿಕೆಗೆ ಒಂದೂವರೆ ಗಂಟೆ, ಎರಡನೇ ಪತ್ರಿಕೆ 2 ಗಂಟೆ ಸಮಯ ನಿಗದಿಪಡಿಸಲಾಗಿದೆ.
ಪ್ರತಿ ನಾಲ್ಕು ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ. ಅಭ್ಯರ್ಥಿಗಳು ಎರಡೂ ಪತ್ರಿಕೆಗಳಿಗೂ ಹಾಜರಾಗುವುದು ಕಡ್ಡಾಯ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಪರೀಕ್ಷೆಗೆ ನೀಡುವ ಪ್ರಶ್ನೆಗಳು ಈ ಪಠ್ಯಕ್ರಮಗಳನ್ನು ಆಧರಿಸಿರುತ್ತವೆ.
ಪತ್ರಿಕೆ 1 : ಸಾಮಾನ್ಯ ಜ್ಞಾನ - 100 ಅಂಕಗಳು
l ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ
l ಸಾಮಾನ್ಯ ವಿಜ್ಞಾನ ವಿಷಯಗಳು
l ಸಾಮಾನ್ಯ ಭೂಗೋಳ ಶಾಸ್ತ್ರ ವಿಷಯಗಳು
l ಸಮಾಜ ವಿಜ್ಞಾನ ವಿಷಯಗಳು
l ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಯ ಇತಿಹಾಸದ ವಿಷಯಗಳು
l ಭಾರತದ ಮತ್ತು ಕರ್ನಾಟಕದ ಇತಿಹಾಸ
l ಭಾರತದ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ
l ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು (ಎಸ್ಸೆಸ್ಸೆಲ್ಸಿ ಮಟ್ಟದ್ದು)
l ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳು
l ಸ್ವಾತಂತ್ರ್ಯಾನಂತರದಲ್ಲಿ ಕರ್ನಾಟಕದ ಭೂಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆ ವಿಷಯಗಳು
l ಕರ್ನಾಟಕದ ಅರ್ಥ ವ್ಯವಸ್ಥೆ, ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ, ಪ್ರಸ್ತುತ ಸ್ಥಿತಿಗತಿಗಳು
l ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು
l ಕರ್ನಾಟಕದ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳು
l ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು
l ಬೌದ್ಧಿಕ ಸಾಮರ್ಥ್ಯದ ವಿಷಯಗಳು
ಪತ್ರಿಕೆ 2: ವಿಷಯಗಳು
l ಸಾಮಾನ್ಯ ಕನ್ನಡ, ಗರಿಷ್ಠ ಅಂಕ 35
l ಸಾಮಾನ್ಯ ಇಂಗ್ಲಿಷ್, ಗರಿಷ್ಠ ಅಂಕ 35
l ಕಂಪ್ಯೂಟರ್ ಜ್ಞಾನ, ಗರಿಷ್ಠ ಅಂಕಗಳು 30.
ಸಹಕಾರಿ ಸಂಘಗಳ ನಿರೀಕ್ಷಕರ ಹುದ್ದೆಗಳ ವರ್ಗೀಕರಣ ಹಾಗೂ ವಿವರವಾದ ಅಧಿಸೂಚನೆ ಪರಿಶೀಲನೆ ಹಾಗೂ ಅರ್ಜಿ ಸಲ್ಲಿಸಲು www.kpsc.kar.nic.in ಜಾಲತಾಣಕ್ಕೆ ಭೇಟಿ ನೀಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.