ADVERTISEMENT

KPTCL, ವಿವಿಧ ಎಸ್ಕಾಂಗಳಲ್ಲಿ 2,984 JSA, JPM ಹುದ್ದೆಗಳು: ಇಲ್ಲಿದೆ ವಿವರ

ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನ

Manjunath C Bhadrashetti
Published 31 ಅಕ್ಟೋಬರ್ 2024, 0:45 IST
Last Updated 31 ಅಕ್ಟೋಬರ್ 2024, 0:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಅಡಿ ಕಾರ್ಯನಿರ್ವಹಿಸುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ಮತ್ತು ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಕೆಳ ಹಂತದ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.

ಕೆಪಿಟಿಸಿಲ್‌ ಹಾಗೂ ವಿವಿಧ ಎಸ್ಕಾಂಗಳಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳೂ ಸೇರಿ ಕಿರಿಯ ಸ್ಟೇಷನ್ ಪರಿಚಾರಕ (JSA) ಮತ್ತು ಜೂನಿಯರ್ ಪವರ್ ಮ್ಯಾನ್ (JPM) ಎಂಬ ಒಟ್ಟು 2,984 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ವೃಂದದ (224) ಹುದ್ದೆಗಳೂ ಸೇರಿವೆ.

ADVERTISEMENT

ವಿಶೇಷವೆಂದರೆ ಈ ಹುದ್ದೆಗಳಿಗೆ ಕರ್ನಾಟಕದಲ್ಲಿನ ಮಾನ್ಯತಾ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ತೇರ್ಗಡೆ ಅಥವಾ ಅದಕ್ಕೆ ತತ್ಸಮಾನವಾದ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿದವರು ಮಾತ್ರ ಅರ್ಜಿ ಸಲ್ಲಿಸಬೇಕು. ಸಿಬಿಎಸ್‌ಇ ಅಥವಾ ಇತರೆ ಬೋರ್ಡ್‌ ಪರೀಕ್ಷೆಗಳಿಂದ 10 ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸುವ ಹಾಗಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವವರೂ ಅರ್ಹರಲ್ಲ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು ಗರಿಷ್ಠ ಸಾಮಾನ್ಯ ಅಭ್ಯರ್ಥಿಗಳಿಗೆ 35, 2ಎ, 2ಬಿ, 3ಎ, 3ಬಿ 38, ಎಸ್‌.ಸಿ/ಎಸ್‌ಟಿ, ಪ್ರವರ್ಗ  1 ಅಭ್ಯರ್ಥಿಗಳಿಗೆ 40 ವರ್ಷಗಳು. ಮಾಜಿ ಸೈನಿಕರಿಗೂ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ ಸಾಮಾನ್ಯ, 2ಎ, 2ಬಿ, 3ಎ, 3ಬಿ, ಪ್ರವರ್ಗ  1 ಅಭ್ಯರ್ಥಿಗಳಿಗೆ ₹614, ಎಸ್‌.ಸಿ/ಎಸ್‌ಟಿ ₹378. ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಹ ಪುರುಷ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ನವೆಂಬರ್ 20ರವರೆಗೆ ಅರ್ಜಿ ಸಲ್ಲಿಸಬಹುದು.

ಒಂದು ಹುದ್ದೆಗೆ ಒಂದು ಅರ್ಜಿ ಮಾತ್ರ ಸಲ್ಲಿಸಬಹುದು. ಉದಾಹರಣೆಗೆ ಜೆಪಿಎಂ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಕೆಪಿಟಿಸಿಎಲ್ ಅಥವಾ ಯಾವುದೇ ಒಂದು ಎಸ್ಕಾಂಗೆ ಅನ್ವಯವಾಗುವಂತೆ ಅರ್ಜಿ ಸಲ್ಲಿಸಬೇಕು. ಜೆಎಸ್‌ಎ ಹುದ್ದೆಗಳು ಕೆಪಿಟಿಸಿಎಲ್‌ನಲ್ಲಿ ಮಾತ್ರ ಲಭ್ಯ ಇವೆ.

ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿ ತಿಳಿಯಲು https://kptcl.karnataka.gov.in/ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ವಿವರವಾದ ಅಧಿಸೂಚನೆ ನೋಡಿ.

ಆಯ್ಕೆ ವಿಧಾನ ಹೇಗಿದೆ?

ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೆ ಈ ಎರಡೂ ಹುದ್ದೆಗಳಿಗೂ ಮೊದಲು  ಸಹನ ಶಕ್ತಿ (ದೈಹಿಕ ಸಾಮರ್ಥ್ಯ) ಪರೀಕ್ಷೆ ಇರಲಿದೆ. ಸಹನ ಶಕ್ತಿ ಪರೀಕ್ಷೆ ಪಾಸಾದವರನ್ನು ಅವರು ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಯಾವುದೇ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ಇರುವುದಿಲ್ಲ.

ನೇಮಕವಾಗುವ ಅಭ್ಯರ್ಥಿಗಳಿಗೆ ಮೂರು ವರ್ಷ ಕಡ್ಡಾಯ ಬುನಾದಿ ತರಬೇತಿ ಇರಲಿದೆ. ಈ ಅವಧಿಯಲ್ಲಿ ಗರಿಷ್ಠ ₹21 ಸಾವಿರ ಮಾಸಿಕ ವೇತನ ಮಾತ್ರ ಸಿಗಲಿದೆ. ಆ ನಂತರ ಎರಡು ವರ್ಷ ಪ್ರೊಬೇಷನರಿ ಸಮಯ ಇರಲಿದೆ. ಅಲ್ಲಿಂದ ವೇತನ ಶ್ರೇಣಿ ₹28,550–₹63,000

ಸಹನ ಶಕ್ತಿ ಪರೀಕ್ಷೆ ಹೇಗಿರಲಿದೆ?

8 ಮೀಟರ್ ಎತ್ತರದ ವಿದ್ಯುತ್ ಕಂಬ ಹತ್ತಬೇಕು, 14 ಸೆಕೆಂಡುಗಳಲ್ಲಿ 100 ಮೀಟರ್ ಓಟ ಓಡಬೇಕು. 1 ನಿಮಿಷಕ್ಕೆ 5 ಬಾರಿ ಸ್ಕಿಪ್ಪಿಂಗ್ ಮಾಡಬೇಕು, 8 ಮೀಟರ್ ದೂರ ಶಾಟ್‌ಫುಟ್ ಎಸೆಯಬೇಕು ಹಾಗೂ 3 ನಿಮಿಷಗಳಲ್ಲಿ 800 ಮೀಟರ್ ಓಡಬೇಕು. ಇದರಲ್ಲಿ ಪ್ರತಿಯೊಬ್ಬರಿಗೂ ವಿದ್ಯುತ್ ಕಂಬ ಹತ್ತುವುದು ಕಡ್ಡಾಯ. ಇನ್ನುಳಿದ ಯಾವುದಾದರೂ ಎರಡರಲ್ಲಿ ಪಾಸಾಗಬೇಕು.

ಸ್ಪರ್ಧಾತ್ಮಕ ಪರೀಕ್ಷೆ ಇಲ್ಲ

ಈ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ಮೆರಿಟ್ ಕೈ ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದರು. ಆದರೆ, ಈ ಬಗ್ಗೆ ಇಲಾಖೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಸಾರಿ ನಿಗದಿತ ಮಾರ್ಗಸೂಚಿಗಳಂತೆ ನೇಮಕಾತಿ ನಡೆಯಲಿದ್ದು, ಮುಂದಿನ ಬಾರಿ ಸ್ಪರ್ಧಾತ್ಮಕ ಪರೀಕ್ಷೆ ಇಡುವ ಬಗ್ಗೆ ವಿಚಾರ ಮಾಡಲಾಗುತ್ತದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.