ADVERTISEMENT

ದೆಹಲಿ ಪೊಲೀಸ್, ಸಿಎಪಿಎಫ್‌ನಲ್ಲಿ 4,187 ಎಸ್ಐ ಹುದ್ದೆಗಳು: ಪರೀಕ್ಷೆ ಹೇಗಿದೆ?

Manjunath C Bhadrashetti
Published 20 ಮಾರ್ಚ್ 2024, 23:30 IST
Last Updated 20 ಮಾರ್ಚ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (CAPF) ವಿವಿಧ ವಿಭಾಗಗಳಲ್ಲಿ ಹಾಗೂ ದೆಹಲಿ ಪೊಲೀಸ್ ವಿಭಾಗದಲ್ಲಿ (ಎಕ್ಸಿಕ್ಯೂಟಿವ್) ಖಾಲಿ ಇರುವ ಒಟ್ಟು 4,187 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಕೇಂದ್ರ 'ಸಿಬ್ಬಂದಿ ನೇಮಕಾತಿ ಆಯೋಗ’ (SSC) ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.

ದೇಶದ ಪ್ಯಾರಾ ಮಿಲಿಟರಿ ಪಡೆಗಳಲ್ಲಿ ಸಬ್‌ ಇನ್‌ಸ್ಪೆಕ್ಟರ್ ಮಟ್ಟದ ಹುದ್ದೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿರುವ ಪದವೀಧರ ಯುವಕ–ಯುವತಿಯರಿಗೆ ಸುವರ್ಣಾವಕಾಶ ಒದಗಿ ಬಂದಿದೆ.

ADVERTISEMENT

ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (CAPF) ವಿವಿಧ ವಿಭಾಗಗಳಲ್ಲಿ ಹಾಗೂ ದೆಹಲಿ ಪೊಲೀಸ್ ವಿಭಾಗದಲ್ಲಿ (ಎಕ್ಸಿಕ್ಯೂಟಿವ್) ಖಾಲಿ ಇರುವ ಒಟ್ಟು 4,187 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಕೇಂದ್ರ 'ಸಿಬ್ಬಂದಿ ನೇಮಕಾತಿ ಆಯೋಗ’ (SSC) ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.

ಸಿಎಪಿಎಫ್‌ನಲ್ಲಿ 4001 ಸಬ್ ಇನ್‌ಸ್ಪೆಕ್ಟರ್ (ಎಸ್‌ಐ ಜನರಲ್ ಡ್ಯೂಟಿ–ಜಿಡಿ) ಇದ್ದು, ದೆಹಲಿ ಪೊಲೀಸ್‌ ವಿಭಾಗದಲ್ಲಿ 186 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿವೆ. ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಸಿಎಪಿಎಫ್‌ನ 4,001 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಲ್ಲಿ ಮಹಿಳೆಯರಿಗೆ 308 ಹುದ್ದೆಗಳು ಮೀಸಲಿವೆ. ದೆಹಲಿ ಪೊಲೀಸ್‌ ವಿಭಾಗದಲ್ಲಿನ 186 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಲ್ಲಿ ಮಹಿಳೆಯರಿಗೆ 61 ಹುದ್ದೆಗಳು ಮೀಸಲಿವೆ.

ಈಗಾಗಲೇ ಮಾರ್ಚ್ 4ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಮಾರ್ಚ್ 28 ಅರ್ಜಿ ಸಲ್ಲಿಸಲು ಕಡೆಯ ದಿನ. ಅರ್ಜಿ ಶುಲ್ಕ ₹100 ಇದ್ದು, ಎಸ್‌ಸಿ, ಎಸ್‌ಟಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ಇಲ್ಲ. ಅರ್ಜಿ ಸಲ್ಲಿಸಲು 24 ದಿನ ಮಾತ್ರ ಅವಕಾಶ ಕೊಟ್ಟಿದ್ದಾರೆ.

ಕನಿಷ್ಠ 20 ವರ್ಷದಿಂದ ಗರಿಷ್ಠ 25ವರ್ಷದೊಳಗಿನ, ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು. ವೇತನ ಶ್ರೇಣಿ– ₹1.12 ಲಕ್ಷ. ಮಿಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಮೊದಲಿಗೆ ಕಂಪ್ಯೂಟರ್ ಅಧಾರಿತ ಸ್ಪರ್ಧಾತ್ಮಕ ಪರೀಕ್ಷೆ (ಸಿಬಿಟಿ) ನಂತರ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ.

ದೈಹಿಕ ಪರೀಕ್ಷೆ ಮಾನದಂಡಗಳು, ಪರೀಕ್ಷಾ ವಿಧಾನ, ಹುದ್ದೆಗಳ ವರ್ಗೀಕರಣ, ಅರ್ಜಿ ಸಲ್ಲಿಸಲು ಇತರೆ ಹೆಚ್ಚಿನ ಮಾಹಿತಿಗಾಗಿ ssc.gov.in ಅಥವಾ  ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಈ ಹಿಂದೆ SSC ಕೆಲ ಪತ್ರಿಕೆಗಳಲ್ಲಿ ಪ್ರಕಟಿಸಿದ ವೆಬ್‌ಸೈಟ್ ವಿಳಾಸ ತಪ್ಪಿದೆ. ಇಲ್ಲಿ ಸೂಚಿಸಿರುವ ವೆಬ್‌ಸೈಟ್ ಮೂಲಕ ಹೋಗಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಸಿಎಪಿಎಫ್‌ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಪರೀಕ್ಷೆ ಹೇಗಿರಲಿದೆ?

ಸಿಎಪಿಎಫ್‌ ಹಾಗೂ ದೆಹಲಿ ಪೊಲೀಸ್ ವಿಭಾಗದಲ್ಲಿನ ಹುದ್ದೆಗಳಿಗೆ ಒಟ್ಟಿಗೆ ಪರೀಕ್ಷೆ ಇರಲಿದೆ. ಮೂರು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಮೊದಲಿಗೆ ಸಿಬಿಟಿ ಮಾದರಿಯ (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಬಹು ಆಯ್ಕೆಯ ಸ್ಪರ್ದಾತ್ಮಕ ಪರೀಕ್ಷೆ ಇರಲಿದೆ. ಇದರಲ್ಲಿ ಎರಡು ಪತ್ರಿಕೆಗಳು ಇವೆ. ಪ್ರತಿ ಪತ್ರಿಕೆಯು 2 ಗಂಟೆಯ ಅವಧಿ ಇದ್ದು ತಲಾ 200 ಅಂಕಗಳನ್ನು ಹೊಂದಿರುತ್ತದೆ. ತಲಾ ನಾಲ್ಕು ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ.

ಗಮನಿಸಬೇಕಾದ ಸಂಗತಿ ಎಂದರೆ ಇದು ಕರ್ನಾಟಕದಲ್ಲಿ ನಡೆಯುವ ಪಿಎಸ್‌ಐ ಪರೀಕ್ಷೆ ಹಾಗೇ ಪರೀಕ್ಷಾ ಕ್ರಮ ಹೊಂದಿಲ್ಲ. ಅಂದರೆ ವಿವರಣಾತ್ಮಕ ಪತ್ರಿಕೆ ಇರುವುದಿಲ್ಲ. ಎರಡೂ ಪತ್ರಿಕೆಗಳೂ ಬಹುಆಯ್ಕೆಯ ಮಾದರಿಯ ಪತ್ರಿಕೆಗಳಾಗಿರುತ್ತವೆ.

ಪರೀಕ್ಷೆಯ ಕಟ್ ಅಫ್ ಅಂಕಗಳ ಆಧಾರದ ಮೇಲೆ ಮೆರಿಟ್ ಅನುಗುಣವಾಗಿ ಮುಂದಿನ ಹಂತಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಎರಡನೇ ಹಂತ ದೈಹಿಕ ಸಹಿಷ್ಣುತೆ ಹಾಗೂ ದೇಹದಾರ್ಡ್ಯತೆ ಪರೀಕ್ಷೆ. ಈ ಪರೀಕ್ಷೆ ಪಾಸಾದ ಬಳಿಕ ವಿವರವಾದ ವೈದ್ಯಕೀಯ ಪರೀಕ್ಷೆ ಪೂರೈಸಬೇಕಾಗುತ್ತದೆ.

ಕನ್ನಡದಲ್ಲಿ ಪರೀಕ್ಷೆ ಇಲ್ಲ

ಈ ಹುದ್ದೆಗಳಿಗೆ ಕನ್ನಡ ಸೇರಿದಂತೆ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಇಲ್ಲ. ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ‍ಪರೀಕ್ಷೆ ಬರೆಯಬೇಕಾಗುತ್ತದೆ. ಟೇಬಲ್‌ನಲ್ಲಿ ತೋರಿಸಿದ ಪರೀಕ್ಷಾ ವಿಷಯಗಳ ಪಠ್ಯಕ್ರಮವನ್ನು ಅಧಿಸೂಚನೆಯಲ್ಲಿ ವಿವರವಾಗಿ ನೋಡಿಕೊಳ್ಳಬೇಕು. ಮೇ ಮಧ್ಯದಲ್ಲಿ ಸಿಬಿಟಿ ಪರೀಕ್ಷೆಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.