ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಮೂಲ ವೃಂದದ ಹಾಗೂ ಹೈದರಾಬಾದ್ ಕರ್ನಾಟಕ ವೃಂದದ ‘ಗ್ರೂಪ್ ಸಿ’ ವಿಭಾಗದ ಒಟ್ಟು 76 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ (Motor Vehicle Inspector-MVI) ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.
ಆನ್‌ಲೈನ್ ಅರ್ಜಿ ಸಲ್ಲಿಕೆ ಏಪ್ರಿಲ್ 22 ರಿಂದ ಆರಂಭವಾಗಲಿದ್ದು ಮೇ 21 ಕಡೆಯ ದಿನವಾಗಿರಲಿದೆ. ಅರ್ಹ ಪುರುಷ, ಮಹಿಳೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ₹600, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ₹300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹50 ಹಾಗೂ ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ 1, ವಿಶೇಷ ಚೇತನರಿಗೆ ಶುಲ್ಕ ವಿನಾಯಿತಿ ಇದೆ.
ಕನಿಷ್ಠ 18 ವರ್ಷ ವಯಸ್ಸು ಪೂರೈಸಿರುವವರು ಗರಿಷ್ಠ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹ. 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಟಿ ಮತ್ತು ಪ್ರವರ್ಗ 1, ವಿಶೇಷ ಚೇತನರಿಗೆ 5 ವರ್ಷ ಸಡಿಲಿಕೆ ಇದೆ.
ಎಸ್‌ಎಸ್‌ಎಲ್‌ಸಿ/10 ನೇ ತರಗತಿ ಜೊತೆಗೆ ಮೂರು ವರ್ಷದ ಆಟೊಮೊಬೈಲ್ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹ. ಇದರ ಜೊತೆಗೆ ಡಿಪ್ಲೊಮಾ ಇನ್ ಮೆಕಾನಿಕಲ್ ಎಂಜಿನಿಯರಿಂಗ್, ಡಿಪ್ಲೊಮಾ ಇನ್ ಆಟೊಮೊಬೈಲ್ ಎಂಜಿನಿಯರಿಂಗ್ ನಲ್ಲಿ ಬಿಇ ಅಥವಾ ಬಿ.ಟೆಕ್ ಮಾಡಿದವರೂ ಅರ್ಜಿ ಸಲ್ಲಿಸಬಹುದು. ಜೊತೆಗೆ ಚಾಲನಾ ಪರವಾನಗಿ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.
ಪುರುಷರು ಕನಿಷ್ಠ 168 ಸೆಂ.ಮೀ ಹಾಗೂ ಮಹಿಳೆಯರು 157 ಸೆಂ.ಮೀ ಎತ್ತರದ ಜೊತೆ ಇತರೆ ಅಗತ್ಯ ದೈಹಿಕ ಮಾನದಂಡಗಳನ್ನು ಹೊಂದಿರಬೇಕು.
ಇದು ಸಿ–ಗ್ರೂಪ್ ವೇತನ ಶ್ರೇಣಿ ಹೊಂದಿದ್ದು ₹62 ಸಾವಿರವರೆಗೆ ವೇತನ ಲಭಿಸಲಿದೆ.
–––––––––––
ನೇಮಕಾತಿ ಪ್ರಕ್ರಿಯೆ ಹೇಗಿರಲಿದೆ?
ಈ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದ್ದು ಸಂದರ್ಶನ ಇರುವುದಿಲ್ಲ. ಕನ್ನಡ ಕಡ್ಡಾಯ ಭಾಷೆ ಪರೀಕ್ಷೆ ಜೊತೆ ಎರಡು ಪತ್ರಿಕೆಗಳ ಬಹುಆಯ್ಕೆ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾಗುತ್ತದೆ. ನಂತರ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಇರಲಿದೆ. ಆ ನಂತರ ಮೆರಿಟ್ ಆಧಾರದ ಮೇಲೆ ಮೀಸಲು ಅನ್ವಯ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
ಪರೀಕ್ಷೆ ಹೇಗಿರಲಿದೆ?
ಮೊದಲು ಕನ್ನಡ ಕಡ್ಡಾಯ ಭಾಷೆ ಪರೀಕ್ಷೆ ಎದುರಿಸಬೇಕಾಗುತ್ತದೆ. 150 ಅಂಕಗಳ ಈ ಪರೀಕ್ಷೆಯಲ್ಲಿ ಕನಿಷ್ಠ ಶೇ 35 ಅಂಕಗಳನ್ನು ಪಡೆಯುವುದು ಕಡ್ಡಾಯ. ಎರಡನೇಯದಾಗಿ ಬಹು ಆಯ್ಕೆಯ ಎರಡು ಪತ್ರಿಕೆಗಳ ಪರೀಕ್ಷೆ. ಇದರಲ್ಲಿ ಮೊದಲ ಪತ್ರಿಕೆ ಒಂದೂವರೆ ಗಂಟೆಯದ್ದಾಗಿದ್ದು 100 ಪ್ರಶ್ನೆಗಳಿಗೆ 100 ಅಂಕಗಳನ್ನು ಹೊಂದಿರುತ್ತದೆ. ಎರಡನೇ ಪತ್ರಿಕೆ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಹಾಗೂ ಸಾಮಾನ್ಯ ಕಂಪ್ಯೂಟರ್ ಜ್ಞಾನ ಎಂಬ ಮೂರು ಭಾಗಗಳನ್ನು ಹೊಂದಿರುತ್ತದೆ. ಒಟ್ಟು 100 ಪ್ರಶ್ನೆಗಳಿಗೆ 100 ಅಂಕಗಳು. ಅವಧಿ ಎರಡು ಗಂಟೆ. ಪ್ರತಿ ನಾಲ್ಕು ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ.
ಪೇಪರ್–1ರ ಪರೀಕ್ಷಾ ಪಠ್ಯಕ್ರಮ ಹೀಗಿದೆ
ಪ್ರಚಲಿತ ಘಟನೆಗಳು, ದೈನಂದಿನ ಗ್ರಹಿಕೆಯ ವಿಷಯಗಳು, ಭಾರತದ ಸಂವಿಧಾನ, ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಇತಿಹಾಸ, ಕರ್ನಾಟಕಕ್ಕೆ ಸಂಬಂಧಿಸಿದಂತೆ ಭಾರತದ ಭೂಗೋಳ ವಿಷಯಗಳು, ರಾಜ್ಯ ಮತ್ತು ಪ್ರಾದೇಶಿಕ ಆಡಳಿತದ ಕುರಿತ ವಿಷಯಗಳು, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಒಳಗೊಂಡಂತೆ ಕರ್ನಾಟಕದ ಆರ್ಥಿಕತೆಯ ಅಭಿವೃದ್ಧಿ ಕುರಿತ ವಿಷಯಗಳು, ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು.
****
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.