ಮೆಟ್ರಿಕುಲೇಷನ್ ಅಥವಾ 10 ನೇ ತರಗತಿ ಮುಗಿಸಿ ವಿವಿಧ ಕೌಶಲ್ಯ ಹೊಂದಿರುವ ಯುವಕ–ಯುವತಿಯರಿಗೆ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) ದೊಡ್ಡ ಪ್ರಮಾಣದ ನೇಮಕಾತಿಗೆ ಚಾಲನೆ ನೀಡಲಾಗಿದೆ. ಸಿಆರ್‌ಪಿಎಫ್ ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಒಂದು ಬಹುದೊಡ್ಡ ಅರೆ ಸೇನಾಪಡೆಯಾಗಿದೆ.
ಸಿಆರ್‌ಪಿಎಫ್‌ನಲ್ಲಿ ‘ಟ್ರೇಡ್ಸ್‌ಮನ್’ ಕಾನ್‌ಸ್ಟೆಬಲ್ ಎಂಬ ಒಟ್ಟು 9,212 ಹುದ್ದೆಗಳಿಗೆ ಪುರುಷ ಮತ್ತು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ 9,105 ಹುದ್ದೆಗಳು –ಪುರುಷರಿಗೆ ಹಾಗೂ 107 ಹುದ್ದೆಗಳು ಮಹಿಳೆಯರಿಗೆ ಮೀಸಲಿವೆ. 11 ಹುದ್ದೆಗಳು ಪಯೋನಿಯರ್ಸ್ ವಿಭಾಗಕ್ಕೆ ಸಂಬಂಧಿಸಿವೆ. ಪಯೋನಿಯರ್ಸ್ ಹೊರತುಪಡಿಸಿ ಉಳಿದ ಎಲ್ಲ ಹುದ್ದೆಗಳು ರಾಜ್ಯವಾರು ಹಂಚಿಕೆಯಾಗಿವೆ.
ಅರ್ಜಿ ಸಲ್ಲಿಕೆ ಪ್ರಾರಂಭ
ಇದೇ ಮಾರ್ಚ್ 27 ರಿಂದ ಸಿಆರ್‌ಪಿಎಫ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಏಪ್ರಿಲ್ 25 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿರಲಿದೆ.
ಅರ್ಜಿ ಸಲ್ಲಿಕೆ ಶುಲ್ಕ ಏನಿದೆ?
ಸಾಮಾನ್ಯ, ಇಡಬ್ಲೂಎಸ್, ಒಬಿಸಿ ವರ್ಗದವರಿಗೆ ಅರ್ಜಿ ಶುಲ್ಕ ₹100 ಇದೆ. ಎಸ್‌ಸಿ/ಎಸ್‌ಟಿ ಹಾಗೂ ಮಹಿಳೆಯರಿಗೆ ಶುಲ್ಕ ವಿನಾಯಿತಿ ಇದೆ.
ಯಾವ ಯಾವ ಟ್ರೇಡ್‌ಗಳಿವೆ?
ಕಾನ್‌ಸ್ಟೆಬಲ್ ಡ್ರೈವರ್, ಗಾರ್ಡನರ್, ಕುಕ್, ವಾಶರ್, ಕ್ಲಿನರ್, ಫಿಟ್ಟರ್, ಬಗ್ಲರ್, ಟೈಲರ್, ಕಾಬ್ಲರ್, ಪೇಂಟರ್, ಕಾರ್‌ಪೇಂಟರ್, ಹೇರ್ ಡ್ರೆಸ್ಸರ್, ಸಫಾಯಿ ಕರ್ಮಚಾರಿ, ಬ್ರಾಸ್ ಬ್ಯಾಂಡ್ ಈ ರೀತಿಯ ಕೌಶಲ್ಯ ಆಧರಿತ ಹುದ್ದೆಗಳಿವೆ. ಎಲೆಕ್ಟ್ರೀಷಿಯನ್, ಮೋಟಾರ್ ಮೆಕಾನಿಕಲ್, ಪ್ಲಂಬರ್ ಇವು ಪಯೋನಿಯರ್ಸ್ ವಿಭಾಗಕ್ಕೆ ಸಂಬಂಧಿಸಿವೆ. ಎಸ್‌ಎಸ್‌ಎಲ್‌ಸಿ ಜೊತೆಗೆ ಸಂಬಂಧಿಸಿದ ವಿಭಾಗಗಳಲ್ಲಿನ ಅರ್ಹತಾ ಪ್ರಮಾಣಪತ್ರಗಳು, ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ನೇಮಕಾತಿ ಹೇಗೆ ನಡೆಯಲಿದೆ?
ನೇಮಕಾತಿಯು 5 ಹಂತಗಳಲ್ಲಿ ನಡೆಯಲಿದೆ. ಮೊದಲಿಗೆ ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ), ದೈಹಿಕ ಸಾಮರ್ಥ್ಯ ಪರೀಕ್ಷೆ (ಇಟಿ, ಪಿಎಸ್‌ಟಿ), ಟ್ರೇಡ್ ಪರೀಕ್ಷೆ, ಡಾಕ್ಯುಮೆಂಟ್ ವೆರಿಫಿಕೇಶನ್ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಮೊದಲ ಹಂತದ ಸಿಬಿಟಿಯಲ್ಲಿ 100 ಅಂಕಗಳಿಗೆ ಬಹುಆಯ್ಕೆಯ 100 ಪ್ರಶ್ನೆಗಳ ಒಂದು ಪತ್ರಿಕೆ ಮಾತ್ರ ಇರುತ್ತದೆ. 4 ತಪ್ಪು ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಮಟ್ಟದ ಸಿಲೇಬಸ್ ಅನ್ನು ಈ ಪರೀಕ್ಷೆ ಹೊಂದಿರುತ್ತದೆ. ಜುಲೈ 1ರಿಂದ ಜುಲೈ 13ರವರೆಗೆ ಈ ಪರೀಕ್ಷೆಗಳು ನಡೆಯಲಿದ್ದು ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಬೇಕಾದರೆ ಸಿಬಿಟಿಯಲ್ಲಿ ಕನಿಷ್ಠ ಶೇ 30 ಅಂಕಗಳನ್ನು ಪಡೆಯಲೇಬೇಕು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಸೂಚಿತ ಪರೀಕ್ಷಾ ಕೇಂದ್ರಗಳಲ್ಲಿ ಯಾವುದಾದರೂ ಮೂರನ್ನು ಆದ್ಯತಾನುಸಾರ ಆಯ್ಕೆ ಮಾಡಬೇಕು.
ಸಿಬಿಟಿಯಲ್ಲಿ 100 ಪ್ರಶ್ನೆಗಳ ವಿಂಗಡಣೆ
ವಿಷಯ–ಪ್ರಶ್ನೆಗಳ ಸಂಖ್ಯೆ– ಗರಿಷ್ಠ ಅಂಕಗಳು
ಸಾಮಾನ್ಯ ಜ್ಞಾನ ಹಾಗೂ ಗ್ರಹಿಕೆ ಸಾಮರ್ಥ್ಯ 25 25
ಪ್ರಚಲಿತ 25 25
ಬೇಸಿಕ್ ಗಣಿತ 25 25
ಇಂಗ್ಲಿಷ್–ಹಿಂದಿ ಭಾಷೆ 25 25
ವಯೋಮಿತಿ
ಟ್ರೇಡ್ಸ್‌ಮನ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಕನಿಷ್ಠ 21 ವರ್ಷ ವಯಸ್ಸನ್ನು ಪೂರೈಸಿರಬೇಕು ಮತ್ತು ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ಎಸ್.ಸಿ/ಎಸ್‌ಟಿ ಅವರಿಗೆ 5 ವರ್ಷ ಹಾಗೂ ಒಬಿಸಿ ಅವರಿಗೆ 3 ವರ್ಷ ವಯಸ್ಸಿನಲ್ಲಿ ಸಡಿಲಿಕೆ ಇದೆ.
ವೇತನ ಶ್ರೇಣಿ ಏನಿದೆ?
ವೇತನಶ್ರೇಣಿ ₹21,700–69,100ವರೆಗೆ ಇದ್ದು ಇಲಾಖೆ ಕಾಲಕಾಲಕ್ಕೆ ನಿಯಮಾನುಸಾರ ಹೆಚ್ಚಿಸುವ ವೇತನ ಇತರೆ ಭತ್ಯೆಗಳು ಸೇರುತ್ತವೆ.
ಟ್ರೇಡ್ಸ್‌ಮನ್ ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್ ಜನರಲ್ ಡ್ಯೂಟಿ ನಡುವಿನ ವ್ಯತ್ಯಾಸ
ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುವವರನ್ನು ಮುಖ್ಯವಾಗಿ ಕಾನ್‌ಸ್ಟೇಬಲ್ ಜನರಲ್ ಡ್ಯೂಟಿ ಹಾಗೂ ಟ್ರೇಡ್ಸ್‌ಮನ್ ಎಂದು ವಿಂಗಡಿಸಲಾಗಿರುತ್ತದೆ. ಇದರ ವ್ಯತ್ಯಾಸವನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ತಿಳಿದುಕೊಳ್ಳಬೇಕಾಗುತ್ತದೆ. ಟ್ರೇಡ್ಸ್‌ಮನ್ ಕೆಲಸಕ್ಕೆ ಸೇರಬೇಕೆಂದರೆ ಸೂಚಿಸಿದ ಕ್ಷೇತ್ರದಲ್ಲಿ ಈ ಮೊದಲೇ ಅರ್ಹತಾ ಪ್ರಮಾಣಪತ್ರ ಮತ್ತು ಕನಿಷ್ಠ ಒಂದು ವರ್ಷ ಕೌಶಲ್ಯವನ್ನು ಹೊಂದಿರಬೇಕಾಗುತ್ತದೆ ಹಾಗೂ ಪ್ರಾಯೋಗಿಕ ಪರೀಕ್ಷೆ ಎದುರಿಸಬೇಕಾಗುತ್ತದೆ. ಇನ್ನು, ಕಾನ್‌ಸ್ಟೇಬಲ್ ಜನರಲ್ ಡ್ಯೂಟಿಯು ನೇರ ನೇಮಕಾತಿಯಾಗಿದ್ದು, ಕನಿಷ್ಠ ವಿದ್ಯಾರ್ಹತೆಯನ್ನು ಮುಗಿಸಿ, ನಿಯಮಾನುಸಾರ ಪರೀಕ್ಷೆಗಳನ್ನು ತೇರ್ಗಡೆಯಾದವರು ಸಿಆರ್‌ಪಿಎಫ್‌ನಲ್ಲಿ ಕಾನ್‌ಸ್ಟೇಬಲ್ ಜನರಲ್ ಡ್ಯೂಟಿಯಲ್ಲಿ (ಯೋಧ) ಸೇವೆ ಸಲ್ಲಿಸುತ್ತಾರೆ.
ವೆಬ್‌ಸೈಟ್‌ಗೆ ಭೇಟಿ ನೀಡಿ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ, ಹುದ್ದೆಗಳ ವರ್ಗೀಕರಣ, ಟ್ರೇಡ್ ಪರೀಕ್ಷೆ ಮಾನದಂಡಗಳೇನು? ಇಟಿ–ಪಿಎಸ್‌ಟಿ ಅರ್ಹತಾ ಮಾನದಂಡಗಳ ಬಗ್ಗೆ ಹಾಗೂ ಇತರೆ ಹೆಚ್ಚಿನ ಮಾಹಿತಿ ಬಗ್ಗೆ ಆಸಕ್ತರು https://crpf.gov.in/recruitment ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.