ADVERTISEMENT

ಸ್ವಾವಲಂಬಿ ಬದುಕು ಕಟ್ಟಿಕೊಟ್ಟ ಬಿದಿರು..!

ರೈತರ ಮಿತ್ರನಾಗಿರುವ ಬಸವನಬಾಗೇವಾಡಿಯ ಈರಣ್ಣ ಮೇದಾರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2018, 16:30 IST
Last Updated 26 ಸೆಪ್ಟೆಂಬರ್ 2018, 16:30 IST
ನಿಚ್ಚಣಿಕೆ ತಯಾರಿಕೆಯಲ್ಲಿ ಈರಣ್ಣ ಮೇದಾರ
ನಿಚ್ಚಣಿಕೆ ತಯಾರಿಕೆಯಲ್ಲಿ ಈರಣ್ಣ ಮೇದಾರ   

ಬಸವನಬಾಗೇವಾಡಿ: ಬಿದಿರಿನಿಂದ ಪುಟ್ಟಿ, ನಿಚ್ಚಣಿಕೆ ಸೇರಿದಂತೆ ವಿವಿಧ ಪರಿಕರ ತಯಾರಿಸುತ್ತಿರುವ ಇಲ್ಲಿನ ಲಕ್ಷ್ಮೀ ನಗರದ ಈರಣ್ಣ ಮೇದಾರ ಇದರಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.

ಮನೆಯ ಹಿರಿಯರಿಂದ ಪರಂಪರಾಗತವಾಗಿ ಬಂದ ಉದ್ಯೋಗವನ್ನು ಈರಣ್ಣ ಮುಂದುವರೆಸಿದ್ದಾರೆ. 25 ವರ್ಷಗಳಿಂದ ಇವರು ಬಿದಿರಿನಿಂದ ತಯಾರಿಸುವ ವಸ್ತುಗಳಿಗೆ ಬಲು ಬೇಡಿಕೆ. ಇವರ ಕೈಯಲ್ಲಿ ತಯಾರಾದ ಪರಿಕರಗಳು ತಾಲ್ಲೂಕು ಸೇರಿದಂತೆ, ಜಿಲ್ಲೆಯ ವಿವಿಧ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯ.

ರೈತ ಸ್ನೇಹಿಯಂತೆ ಕೆಲಸ ಮಾಡುತ್ತಿರುವ ಇವರು, ಹೆಚ್ಚಿನ ಲಾಭ ನಿರೀಕ್ಷಿಸದೆ ರೈತರ ಈರುಳ್ಳಿ ಬಳತ ನಿರ್ಮಾಣಕ್ಕೆ ಅಗತ್ಯವಿರುವ ಬಿದಿರಿನ ಬಂಬು, ನಿಚ್ಚಣಿಕೆ. ಕುರಿ ದೊಡ್ಡಿಯ ಬಿದಿರಿನ ತಟ್ಟಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಹೆಚ್ಚಿನ ರೈತರು ಇವರ ಬಳಿ ಬರುವುದು ವಿಶೇಷ.

ADVERTISEMENT

ತಮ್ಮ ಕುಟುಂಬದ ಸದಸ್ಯರೊಂದಿಗೆ ಈರಣ್ಣ ತಯಾರಿಸುತ್ತಿರುವ ಬಿದಿರಿನ ಪುಟ್ಟಿಗಳು ಜಿಲ್ಲೆಯ ವಿವಿಧೆಡೆ ನಡೆಯುವ ವಾರದ ಸಂತೆಯಲ್ಲಿ ಮಾರಾಟವಾಗುತ್ತಿವೆ. ವಿಜಯಪುರ ಸೇರಿದಂತೆ ವಿವಿಧೆಡೆಯ ವ್ಯಾಪಾರಸ್ಥರು ಇವರ ಬಳಿಗೆ ಬಂದು ಬಿದಿರಿನ ಪುಟ್ಟಿಯನ್ನು ಖರೀದಿಸುತ್ತಿದ್ದಾರೆ.

ಇವುಗಳಲ್ಲದೇ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮಂಚ, ಟೇಬಲ್ ಸೇರಿದಂತೆ ವಿವಿಧ ವಸ್ತುಗಳನ್ನು ತಯಾರಿಸುವಲ್ಲೂ ಈರಣ್ಣ ಎತ್ತಿದ ಕೈ.

ವಿವಿಧ ಪರಿಕರಗಳ ತಯಾರಿಕೆಗೆ ಅಗತ್ಯವಿರುವ ಬಿದಿರನ್ನು ಲಕ್ಷ್ಮೇಶ್ವರದ ಮಾರುಕಟ್ಟೆಯಲ್ಲಿ ಖರೀದಿಸುತ್ತಾರೆ. ಒಂದು ಬಿದಿರಿನ ಬೊಂಬು ₹ 30ರಿಂದ ₹ 50ರವರೆಗೆ ಸಿಗುತ್ತದೆ. ಒಂದು ಬಾರಿ ಮಾರುಕಟ್ಟೆಗೆ ತೆರಳಿದರೆ ಒಂದು ಸಾವಿರಕ್ಕಿಂತ ಹೆಚ್ಚು ಬಿದಿರನ್ನು ಖರೀದಿಸುತ್ತಾರೆ. ಒಮ್ಮೆ ಖರೀದಿ ನಡೆದರೆ, ಮೂರು ತಿಂಗಳವರಗೆ ಕಾಯಕ ನಿರಾತಂಕ.

ಕುಟುಂಬದ ಸದಸ್ಯರೊಂದಿಗೆ ದಿನಕ್ಕೆ 10ರಿಂದ 15 ಪುಟ್ಟಿಗಳನ್ನು ತಯಾರಿಸುತ್ತಿದ್ದಾರೆ ಈರಣ್ಣ. ಒಂದು ಪುಟ್ಟಿಗೆ ಆಕಾರಕ್ಕೆ ತಕ್ಕಂತೆ ₹ 20ರಿಂದ ₹ 50ಕ್ಕೆ ಮಾರಾಟವಾಗುತ್ತದೆ. ದಿನಕ್ಕೆ 5ರಿಂದ 6 ತಯಾರಾಗುವ ನಿಚ್ಚಣಿಕೆಗಳು ಒಂದಕ್ಕೆ ₹ 400ರಿಂದ ₹ 600ರವರೆಗೆ ಮಾರಾಟವಾಗುತ್ತಿವೆ.

‘ಇದು ನಮ್ಮ ಶ್ರಮಕ್ಕೆ ತಕ್ಕ ಆದಾಯ ಎನಿಸದಿದ್ದರೂ; ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ. ಸ್ವಯಂ ಉದ್ಯೋಗದಲ್ಲಿ ಇರುವ ತೃಪ್ತಿ ಇನ್ನೊಂದು ಉದ್ಯೋಗದಲ್ಲಿ ಇಲ್ಲ’ ಎನ್ನುತ್ತಾರೆ ಈರಣ್ಣ.

ಸಂಪರ್ಕ ಸಂಖ್ಯೆ: 9448751516

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.