ADVERTISEMENT

Bank Jobs: ಯೂನಿಯನ್ ಬ್ಯಾಂಕ್‌ನಲ್ಲಿ ಕನ್ನಡಿಗರಿಗೆ 300 ಹುದ್ದೆಗಳು

ಗಾಣಧಾಳು ಶ್ರೀಕಂಠ
Published 6 ನವೆಂಬರ್ 2024, 23:56 IST
Last Updated 6 ನವೆಂಬರ್ 2024, 23:56 IST
<div class="paragraphs"><p>ಯೂನಿಯನ್ ಬ್ಯಾಂಕ್‌</p></div>

ಯೂನಿಯನ್ ಬ್ಯಾಂಕ್‌

   
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(ಯುಬಿಐ), ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಕರ್ನಾಟಕಕ್ಕೆ 300 ಸ್ಥಾನಗಳಿಗೆ ನೇಮಕಾತಿ ನಡೆಯುತ್ತಿದೆ. ನೇಮಕಾತಿ ಪ್ರಕ್ರಿಯೆ ಕುರಿತ ವಿವರ ಇಲ್ಲಿದೆ.

ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕವೂ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ ಲೋಕಲ್ ಬ್ಯಾಂಕ್ ಆಫೀಸರ್ (ಎಲ್‌ಬಿಒ) ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಒಟ್ಟು 1500 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಇದರಲ್ಲಿ ಕರ್ನಾಟಕ್ಕೆ 300 ಸ್ಥಾನಗಳಿವೆ.  ಇವುಗಳಲ್ಲಿ ಸಾಮಾನ್ಯ ವರ್ಗದವರಿಗೆ 122, ಆರ್ಥಿಕ ದುರ್ಬಲ ವರ್ಗದವರಿಗೆ 30, ಒಬಿಸಿ ಅಭ್ಯರ್ಥಿಗಳಿಗೆ 81, ಎಸ್‌ಟಿ ಅಭ್ಯರ್ಥಿಗಳಿಗೆ 22 ಹಾಗೂ ಎಸ್‌ಸಿ ವರ್ಗದವರಿಗೆ 45 ಹುದ್ದೆಗಳನ್ನು ಮೀಸಲಿಡಲಾಗಿದೆ. ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಬಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಉಳಿದ ಹುದ್ದೆಗಳಿಗೂ ಆಯಾ ರಾಜ್ಯಗಳ ಭಾಷಾ ನಿಯಮ ಅನ್ವಯವಾಗಲಿದೆ.

ADVERTISEMENT

ಅರ್ಜಿ ಸಲ್ಲಿಕೆ ಪ್ರಕ್ರಿಯೆ:  ಅಕ್ಟೋಬರ್ 24ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.  ನವೆಂಬರ್ 13 ಅರ್ಜಿ ಸಲ್ಲಿಸಲು ಕೊನೆಯ ದಿನ. ಅಭ್ಯರ್ಥಿಗಳು www.unionbankofindia.co.in ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು‌. ನೆನಪಿಡಿ; ಅಭ್ಯರ್ಥಿಗಳು ಒಂದು ರಾಜ್ಯದ ಖಾಲಿ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ ಹಾಗೂ ಇತರ ಅಭ್ಯರ್ಥಿಗಳಿಗೆ: ₹850. ಪ.ಜಾ, ಪ.ಪಂ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಯೋಧರಿಗೆ ₹175. ನೋಂದಣಿ ನಂತರ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕ/ಇಂಟಿಮೇಷನ್ ಶುಲ್ಕ,/ ಬ್ಯಾಂಕ್ ವಹಿವಾಟು ಶುಲ್ಕಗಳನ್ನು ಅಭ್ಯರ್ಥಿಯು ಭರಿಸಬೇಕಾಗುತ್ತದೆ.

ವಯೋಮಿತಿ :  ಕನಿಷ್ಠ 20 ವರ್ಷ‌ಗರಿಷ್ಠ 30 ವರ್ಷಗಳು(01/10/2024ಕ್ಕೆ ಅನ್ವಯ). ಸರ್ಕಾರದ ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳಷ್ಟು ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಶೈಕ್ಷಣಿಕ ಅರ್ಹತೆ:  ಒಂದು ಕಾಲದಲ್ಲಿ ಕಾಮರ್ಸ್ ಪದವಿ ಓದಿದವರಿಗೆ, ಕೃಷಿ ಪದವಿ ಅಧ್ಯಯನ ಮಾಡಿದವರಿಗಷ್ಟೇ ಬ್ಯಾಂಕ್‌ನಲ್ಲಿ ಉದ್ಯೋಗ ಎನ್ನುವಂತಿತ್ತು. ಆದರೆ ಇಂದು ಬದಲಾಗಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೂ ಕಲೆ(ಆರ್ಟ್ಸ್), ವಾಣಿಜ್ಯ(ಕಾಮರ್ಸ್), ವಿಜ್ಞಾನ(ಸೈನ್ಸ್) ಅಥವಾ ಇನ್ನಾವುದೇ ವಿಷಯಗಳಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಸಲ್ಲಿಸಬಹುದು.

ಪರೀಕ್ಷಾ ವಿಧಾನ: ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆಯಬೇಕು. ವಸ್ತುನಿಷ್ಠ ಮಾದರಿ ಹಾಗೂ ಡಿಸ್ಕ್ರಿಪ್ಟಿವ್‌ ಮಾದರಿ ಪ್ರಶ್ನೆಗಳಿರುತ್ತವೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪ್ರಶ್ನೆಗಳಿರುತ್ತವೆ. ಕನ್ನಡದಲ್ಲಿ ಪರೀಕ್ಷೆ ಇರುವುದಿಲ್ಲ.

ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ/ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲಾ ಕೇಂದ್ರಗಳಲ್ಲಿ ಆನ್‌ಲೈನ್ ಪರೀಕ್ಷಾ ಕೇಂದ್ರಗಳಿವೆ.

ವೇತನಶ್ರೇಣಿ: ಇದು ಬ್ಯಾಂಕ್ ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್‌-1 ಹುದ್ದೆ. ವೇತನ ಶ್ರೇಣಿ ₹48,480 ರಿಂದ ₹85,920. ಇದಲ್ಲದೆ ಬ್ಯಾಂಕ್‌ ಹೆಚ್ಚುವರಿಯಾಗಿ, ವಿಶೇಷ ಭತ್ಯೆ, ತುಟ್ಟಿ ಭತ್ಯೆ, ಮನೆ ಬಾಡಿಗೆಯಂತಹ ಇತರೆ ಸೌಲಭ್ಯಗಳೂ ದೊರೆಯಲಿವೆ.  

ಅಪರೂಪದ ಅವಕಾಶ: ಸಾಮಾನ್ಯವಾಗಿ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಬ್ಯಾಂಕ್ ಅಧಿಕಾರಿಗಳ‌ ಹುದ್ದೆಗಾಗಿ ನಡೆಸುವ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಿಲಿಮ್ಸ್, ಮೇನ್ಸ್ ಹಾಗೂ ಸಂದರ್ಶನವೆಂಬ ಮೂರು ಹಂತಗಳಿರುತ್ತವೆ. ಆದರೆ, ಈ ಬ್ಯಾಂಕಿಂಗ್ ನೇಮಕಾತಿಯಲ್ಲಿ ಮುಖ್ಯ ಪರೀಕ್ಷೆ ಮಾತ್ರ ನಡೆಸಲಾಗುತ್ತಿದ್ದು, ಸಂದರ್ಶನ ಹಂತದ ಆಯ್ಕೆ ನಡೆಯುವುದು ಖಚಿತವಾಗಿಲ್ಲ. ಮುಖ್ಯ ಪರೀಕ್ಷೆಯಲ್ಲಿ‌ ಆಯ್ಕೆಯಾಗುವ ಅಭ್ಯರ್ಥಿಗಳ ಸಂಖ್ಯೆ ಮೇಲೆ ಇದು ನಿರ್ಧಾರವಾಗುತ್ತದೆ. ಹಾಗಾಗಿ ಕನ್ನಡಿಗರು ಈ‌ ಅವಕಾಶವನ್ನು ಬಳಸಿಕೊಳ್ಳಬೇಕು ಎನ್ನುತ್ತಾರೆ  ಎಂದು ಬ್ಯಾಂಕಿಂಗ್ ಪರೀಕ್ಷೆ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕ ಮಡಿಕೇರಿಯ ಆರ್.ಕೆ.ಬಾಲಚಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.