ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹೊಂದಬೇಕೆಂಬ ಲಕ್ಷಾಂತರ ಅಭ್ಯರ್ಥಿಗಳಿಗೆ ಸದ್ಯ ಮತ್ತೊಂದು ಅವಕಾಶ ಒದಗಿಬಂದಿದೆ. ನೇಮಕಾತಿಯ ಸ್ಪರ್ಧಾತ್ಮಕ ಯುಗದಲ್ಲಿ ಅದು ಪ್ರಶಂಸನೀಯ ವಿಷಯವೇ ಸರಿ ಹಾಗೂ ಭವಿಷ್ಯದಲ್ಲಿ ಔದ್ಯೋಗಿಕ ಭದ್ರತೆ ಬಯಸುವ ಅಭ್ಯರ್ಥಿಗಳಿಗೆ ಸೂಕ್ತ ಅವಕಾಶ. ಸದ್ಯ ಎಸ್‌ಬಿಐ ಪ್ರೊಬೇಷನರಿ ಆಫೀಸರ್ಸ್ (SBI PO)-2021, ಐಬಿಪಿಎಸ್ ಪ್ರೊಬೇಷನರಿ ಆಫೀಸರ್ಸ್ (IBPS PO)-2021 ಹಾಗೂ ಐಬಿಪಿಎಸ್ ಕ್ಲರ್ಕ್ (IBPS Clerk)-2021 ಪರೀಕ್ಷೆಗಳಿಗಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಮುಂಬರುವ ದಿನಗಳಲ್ಲಿ ಇನ್ನುಳಿದ ಬ್ಯಾಂಕಿಂಗ್ ಪರೀಕ್ಷೆಗಳಿಗಾಗಿ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ. ಹಾಗಾಗಿ ವಿದ್ಯಾರ್ಥಿಗಳು ಉತ್ತಮ ಪರೀಕ್ಷಾ ತಯಾರಿ ನಡೆಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಫಲರಾಗಬೇಕು.
ಪರೀಕ್ಷಾ ಅಧಿಸೂಚನೆ ಅವಲೋಕಿಸಿ
ಬ್ಯಾಂಕಿಂಗ್ ಪರೀಕ್ಷೆ ಎಂದಾಕ್ಷಣ ಅಧಿಸೂಚನೆ ಹೊರಡಿಸಿದ ಎಲ್ಲಾ ಪರೀಕ್ಷೆಗಳಿಗೂ ಅರ್ಜಿ ಸಲ್ಲಿಸದಿರಿ. ಇದರಿಂದ ನಿಮ್ಮ ಹಣ ಅದರಲ್ಲೂ ಮುಖ್ಯವಾಗಿ ನಿಮ್ಮ ಸಮಯ ಸಹ ವ್ಯರ್ಥ. ಸಾಕಷ್ಟು ಆತ್ಮವಿಶ್ವಾಸ ಹಾಗೂ ಅದಕ್ಕೆ ತಕ್ಕಂತೆ ಪ್ರಯತ್ನ ನಡೆಸಿ ಅಭ್ಯಾಸಿಸಿದಲ್ಲಿ ಒಂದಕ್ಕಿಂತ ಹೆಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದಿ ತಮಗೆ ಇಷ್ಟವಾದ ಉದ್ಯೋಗ ಆಯ್ದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲಿ ಯಾವುದೇ ಸಂಶಯವಿಲ್ಲ.
ಆದರೆ ನಿರಂತರವಾಗಿ ಪ್ರತಿವರ್ಷ ಪರೀಕ್ಷೆಗಳಿಗೆ ಹಾಜರಾಗಿ ವೈಫಲ್ಯತೆ ಹೊಂದಿದ ನಂತರ ಇದು ಕಡೆಯ ಅವಕಾಶ ಎಂಬ ಕಾರಣಕ್ಕೆ ಕ್ಲರ್ಕ್ ಜೊತೆಗೆ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ. ಅಭ್ಯರ್ಥಿಯದ್ದು ಕ್ಲರ್ಕ್ ಪರೀಕ್ಷೆಗೆ ಕೊನೆಯ ಅವಕಾಶ ಇರುವಂತಹ ಸಂದರ್ಭದಲ್ಲಿ ಹೆಚ್ಚಿನ ಕ್ಲಿಷ್ಟತೆ ಇರುವ ಪ್ರೊಬೇಷನರಿ ಆಫೀಸರ್ಸ್ ಹುದ್ದೆಗಳಿಗೂ ಕೂಡ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ. ಅಭ್ಯರ್ಥಿಯು ಕ್ಲರ್ಕ್ ಪರೀಕ್ಷೆಗೆ ತನ್ನ ಕೊನೆಯ ಅವಕಾಶವನ್ನು ಸಮಂಜಸವಾಗಿ ಬಳಸಿಕೊಳ್ಳಬೇಕೇ ಹೊರತು ಪ್ರೊಬೇಷನರಿ ಆಫೀಸರ್ಸ್ ಪರೀಕ್ಷೆಗಳಿಗೂ ಸಹ ಅರ್ಜಿ ಸಲ್ಲಿಸಿ ಅಭ್ಯಾಸ ನಡೆಸಿದಾಗ ಸಹಜವಾಗಿಯೇ ಎರಡು ಪರೀಕ್ಷೆಗಳ ಕ್ಲಿಷ್ಟತೆಯ ಮಟ್ಟ ಬೇರೆ ಬೇರೆಯಾಗಿರುವುದರಿಂದ ಸಂಪೂರ್ಣ ಒಂದೇ ಪರೀಕ್ಷೆಯ ಮೇಲೆ ನಿಮ್ಮ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ದೊರಕಿದ ಎಲ್ಲಾ ಅವಕಾಶಗಳು ಕೈತಪ್ಪುವ ಸಂಭವವಿರುತ್ತದೆ ಹಾಗೂ ಇದು ಅವರವರ ವೈಯಕ್ತಿಕ ಆತ್ಮವಿಶ್ವಾಸದ ಮೇಲೆಯೂ ಕೂಡ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಕ್ಲರ್ಕ್ ಪರೀಕ್ಷೆಗಳಿಗೆ ವೇಗದ ಹಾಗೂ ಪ್ರೊಬೇಷನರಿ ಆಫೀಸರ್ಸ್ ಪರೀಕ್ಷೆಗಳಿಗೆ ನಿಖರತೆಯ ಅವಶ್ಯಕತೆ ಇರುತ್ತದೆ. ಅದನ್ನೆಲ್ಲ ಗಮನಿಸಿ ಅಭ್ಯರ್ಥಿಯು ನಿಮ್ಮ ಪ್ರಯತ್ನ ವ್ಯರ್ಥವಾಗದಂತಹ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಒಳಿತು.
ವಯಸ್ಸಿನ ಮಿತಿಯನ್ನು ಅಧಿಸೂಚನೆಯಲ್ಲಿ ಪರಿಶೀಲಿಸಿ
ಕೆಲವೊಂದು ಅಭ್ಯರ್ಥಿಗಳು ಹಲವಾರು ವರ್ಷಗಳಿಂದ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಹಾಜರಾಗಿ ಮೇನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ವಿಫಲಗೊಂಡಿರುತ್ತಾರೆ ಹಾಗೂ ಹಿಂದಿನ ವರ್ಷಗಳ ಅಧಿಸೂಚನೆಯಲ್ಲಿನ ವಯಸ್ಸಿನ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ನಾವು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂಬ ತಪ್ಪು ನಿರ್ಧಾರಕ್ಕೆ ಬಂದಿರುತ್ತಾರೆ. ಆದರೆ ವಾಸ್ತವ ಏನೆಂದರೆ ಪ್ರಸಕ್ತ ವರ್ಷದ ಅಧಿಸೂಚನೆಯನ್ನು ಗಮನಿಸಿದಾಗ ಅಭ್ಯರ್ಥಿಯ ವಯಸ್ಸಿನ ಮಿತಿಯನ್ನು ನಿಗದಿತ ದಿನಾಂಕಕ್ಕೆ ಅನ್ವಯವಾಗುವಂತೆ ಸ್ಪಷ್ಟವಾಗಿ ಉಲ್ಲೇಖಿಸಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೇವಲ ಒಂದು ದಿನಾಂಕದ ಅಂತರದಿಂದಲೂ ಸಹ ಅಭ್ಯರ್ಥಿಗೆ ಪ್ರಸಕ್ತ ವರ್ಷದಲ್ಲಿ ಪರೀಕ್ಷೆ ಬರೆಯುವ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪರೀಕ್ಷೆಗೆ ನಾವು ವಯೋಮಿತಿ ಕಾರಣದಿಂದಾಗಿ ಅರ್ಹರಲ್ಲ ಎಂದು ಕೇವಲ ಅಂದಾಜಿಸುವ ಬದಲು ಒಮ್ಮೆ ಅಧಿಸೂಚನೆಯನ್ನು ಪರಿಶೀಲಿಸಿ ಹಾಗೂ ನಿಮ್ಮಲ್ಲಿ ಇನ್ನೂ ಪರೀಕ್ಷೆ ತೆಗೆದುಕೊಳ್ಳುವ ಇಚ್ಛೆಯಿದ್ದಲ್ಲಿ ದೊರೆತ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.