ಯುಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3 ಸೇರಿದಂತೆ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನ ಕುರಿತ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ‘ವಾತ್ಸಲ್ಯ ಅಭಿಯಾನ’ಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ವಾತ್ಸಲ್ಯ ಅಭಿಯಾನ ಯೋಜನೆ ಬಾಲ ಸಂರಕ್ಷಣಾ ಯೋಜನೆ ಯಾಗಿದ್ದು, ಈ ಯೋಜನೆಯಡಿಯಲ್ಲಿ ಮಕ್ಕಳ ಸಂರಕ್ಷಣೆಗೆ ಸಂಬಂಧಪಟ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
ಏನಿದು ವಾತ್ಸಲ್ಯ ಅಭಿಯಾನ ?
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, 2009ಕ್ಕೂ ಮುನ್ನ ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದಂತೆ ಮೂರು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿತ್ತು. ಆ ಯೋಜನೆಗಳು ಹೀಗಿವೆ.
ಬಾಲ ನ್ಯಾಯ ಕಾರ್ಯಕ್ರಮ:
l ಇದು ಕಾನೂನಿನೊಂದಿಗೆ ಘರ್ಷಣೆಗೆ ಒಳಗಾಗಿರುವ ಬಾಲಾಪರಾಧಿಗಳ ಆರೈಕೆ ಮತ್ತು ಸಂರಕ್ಷಣೆ
l ಬೀದಿಬದಿಯ ಮಕ್ಕಳಿಗೆ ವಿವಿಧ ಸ್ವರೂಪದ ಸೌಕರ್ಯ ಕಲ್ಪಿಸುವುದು.
l ವಸತಿರಹಿತ ಮಕ್ಕಳಿಗೆ ಯೋಜನೆ
2010ರಲ್ಲಿ ಈ ಮೂರು ಕಾರ್ಯಕ್ರಮಗಳನ್ನು ವಿಲೀನಗೊಳಿಸಿ, ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆ ಎಂದು ಮರು ನಾಮಕರಣ ಮಾಡಲಾಯಿತು. ಆ ವರ್ಷ ದಿಂದಲೇ ಈ ಯೋಜನೆಯನ್ನು ಜಾರಿಗೆ ತರಲಾಯಿತು. 2017ರಲ್ಲಿ ಮತ್ತೆ ಈ ಯೋಜನೆಯನ್ನು ‘ಮಕ್ಕಳ ರಕ್ಷಣಾ ಸೇವೆಗಳು‘ ಎಂದು ಮರು ನಾಮಕರಣ ಮಾಡಲಾಯಿತು. 2021-22ರಲ್ಲಿ ಕೆಲವು ಮಾರ್ಪಾಡುಗಳನ್ನು ತಂದು ಈ ಯೋಜನೆಗೆ ‘ವಾತ್ಸಲ್ಯ ಅಭಿಯಾನ’ ಎಂದು ಮರು ನಾಮಕರಣ ಮಾಡಿ, ಜಾರಿಗೆ ತರಲಾಗಿದೆ.
ಪ್ರಸ್ತುತ ಯೋಜನೆಯ ರೂಪುರೇಷೆ
ಇದು ಭಾರತದಲ್ಲಿ ವಾಸಿಸುತ್ತಿರುವ ಮಕ್ಕಳ ಸಂರಕ್ಷಣೆಗೆ ಹಾಗೂ ಮಕ್ಕಳಿಗೆ ನೀಡುವ ವಿವಿಧ ಸೇವೆಗಳ ಯೋಜನೆ.
ಪರಿತ್ಯಜಿಸಲ್ಪಟ್ಟ ಅಥವಾ ಒಂಟಿ ಮಗುವಿನ ಆರೈಕೆಯ ಹೊಣೆಗಾರಿಕೆ ಹೊತ್ತುಕೊಂಡ ಕುಟುಂಬ ಆಧಾರಿತ (ಸಾಂಸ್ಥಿಕವಲ್ಲದ) ಆರೈಕೆಗಾಗಿ ಪ್ರತಿ ತಿಂಗಳು ಪ್ರತಿ ಮಗುವಿಗೆ ₹4000 ಅನುದಾನ ನೀಡಲಾಗುತ್ತದೆ.
ವಾತ್ಸಲ್ಯ ಅಭಿಯಾನದ ಅಡಿ ಹಲವಾರು ಘಟಕಗಳು ಇವೆ. ಅವುಗಳೆಂದರೆ:
ಎ. ಶಾಸನೀಯ ಸಂಸ್ಥೆಗಳ ಕಾರ್ಯ ನಿರ್ವಹಣಾ ಸಾಮರ್ಥ್ಯ ಹೆಚ್ಚಳ: ಅಂದರೆ, ಮಕ್ಕಳ ರಕ್ಷಣೆಗಾಗಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಮಕ್ಕಳ ಹಕ್ಕುಗಳ ಆಯೋಗಗಳನ್ನು ಸ್ಥಾಪಿಸಲಾಗಿದ್ದು, ಈ ಆಯೋಗಗಳ ಸೂಕ್ತ ಕಾರ್ಯನಿರ್ವಹಣೆಗೆ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು ಎಂದು ಅರ್ಥ.
ಬಿ. ಮಕ್ಕಳಿಗೆ ವಿವಿಧ ಸೇವೆಗಳನ್ನು ಪೂರೈಸುತ್ತಿರುವ ಸೇವಾ ಸಂಸ್ಥೆಗಳ ಬಲವರ್ಧನೆ: ರಾಷ್ಟ್ರ ಮತ್ತು ರಾಜ್ಯಮಟ್ಟದ ಹಲವು ಸಂಸ್ಥೆಗಳು ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ವಿವಿಧ ಸೇವೆಗಳನ್ನು ಕಲ್ಪಿಸುತ್ತಿವೆ. ಈ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಉತ್ತಮಗೊಳಿಸಲು, ಸಂಸ್ಥೆಗಳ ಬಲವರ್ಧನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಸಿ. ಸಾಂಸ್ಥಿಕ ಆರೈಕೆ ಮತ್ತು ಸೇವೆಗಳನ್ನು ಮೇಲ್ದರ್ಜೆಗೆ ಏರಿಸುವುದು: ಜನನ ಮತ್ತು ಬಾಲ್ಯಾವಸ್ಥೆಯ ಸಂದರ್ಭದಲ್ಲಿ, ಸರ್ಕಾರದ ವಿವಿಧ ಸಂಸ್ಥೆಗಳು ಮಕ್ಕಳ ಆರೋಗ್ಯಕ್ಕೆ ಸಂಬಂಧಪಟ್ಟಂತೆ ವಿವಿಧ ರೀತಿಯ ಆರೈಕೆ ಮತ್ತು ಸೇವೆಗಳನ್ನು ಕಲ್ಪಿಸುತ್ತಿವೆ. ಪ್ರಸ್ತುತ ಕಲ್ಪಿಸುತ್ತಿರುವ ಸೇವೆ ಮತ್ತು ಆರೈಕೆಯನ್ನು ಉನ್ನತ ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಈ ಘಟಕ ಕಾರ್ಯನಿರ್ವಹಿಸುತ್ತದೆ.
ಡಿ. ತರಬೇತಿ ಮತ್ತು ಸಾಮರ್ಥ್ಯ ಅಭಿವೃದ್ಧಿ : ಮಕ್ಕಳ ಆರೈಕೆ ಸಂಬಂಧ ವಿವಿಧ ರೀತಿಯ ಸೇವೆಗಳನ್ನು ಕಲ್ಪಿಸುತ್ತಿರುವ ಸಂಸ್ಥೆಗಳ ಸಿಬ್ಬಂದಿಗೆ ತರಬೇತಿ ಮತ್ತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಕೇಂದ್ರದ ಪ್ರಸ್ತುತ ಮಾರ್ಗಸೂಚಿಗಳು
ಯಾವುದೇ ಸಂದರ್ಭದಲ್ಲೂ ಈ ಯೋಜನೆಯ ಹೆಸರನ್ನು ರಾಜ್ಯ ಸರ್ಕಾರಗಳು ಮಾರ್ಪಾಡು ಮಾಡುವಂತಿಲ್ಲ. ಮಾರ್ಪಾಡು ಮಾಡಿದರೆ, ಕೇಂದ್ರದಿಂದ ಸಿಗುತ್ತಿರುವ ಅನುದಾನ ತಕ್ಷಣವೇ ಸ್ಥಗಿತವಾಗುತ್ತದೆ.
ಈ ಯೋಜನೆ ಅಡಿಯಲ್ಲಿ ಕೇಂದ್ರ ಕಲ್ಪಿಸುತ್ತಿರುವ ಅನುದಾನವನ್ನು ‘ವಾತ್ಸಲ್ಯ ಯೋಜನೆ ಅನುಮೋದನಾ ಮಂಡಳಿ’ ಅನುಮೋದಿಸಬೇಕು. ಈ ಮಂಡಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುತ್ತಾರೆ.
ಈ ಅಧ್ಯಕ್ಷರ ನೇತೃತ್ವದಲ್ಲಿ ರಾಜ್ಯ ಸರ್ಕಾರದಿಂದ ಪ್ರಸ್ತಾಪಿಸಿರುವ ಯೋಜನೆಗಳ ರೂಪುರೇಷೆ, ಪ್ರಮುಖ ಉದ್ದೇಶಗಳು ಮತ್ತು ಅನುದಾನದ ಮೊತ್ತವನ್ನು ಪರಾಮರ್ಶಿಸಿದ ನಂತರ ಅನುಮೋದನಾ ಮಂಡಳಿ ಅನುದಾನದ ಹಣವನ್ನು ಬಿಡುಗಡೆ ಮಾಡುತ್ತದೆ.
ಯೋಜನೆಯಡಿಯಲ್ಲಿ ಶೇ60ರಷ್ಟು ಅನುದಾನದ ಮೊತ್ತವನ್ನು ಕೇಂದ್ರ ಸರ್ಕಾರ ಭರಿಸಿದರೆ, ಉಳಿದ ಮೊತ್ತವನ್ನು ರಾಜ್ಯ ಸರ್ಕಾರಗಳು ಭರಿಸತಕ್ಕದ್ದು. ಈ ಅನುಪಾತ ಬಹುತೇಕ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುತ್ತದೆ. ಆದರೆ ಎಂಟು ಈಶಾನ್ಯ ರಾಜ್ಯಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ 90:10 ರ ಅನುಪಾ ತದಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.
ಬಾಲಾಪರಾಧಿ ನ್ಯಾಯ ಕಾಯ್ದೆಯ ಅಡಿಯಲ್ಲಿ ಉಲ್ಲೇಖಿಸಿರುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಜಿಲ್ಲಾಮಟ್ಟದಲ್ಲಿ 24X7 ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
ಅಂತರರಾಷ್ಟ್ರೀಯ ಹಾಗೂ ದೇಶೀಯ ಮಟ್ಟದಲ್ಲಿ ದತ್ತು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣಗೊಳಿಸುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಮಟ್ಟದ ದತ್ತು ಪ್ರಕ್ರಿಯೆ ಕೇಂದ್ರಗಳ ನಿರ್ವಹಣೆಯನ್ನು ಈ ಯೋಜನೆ ಅಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಮಾನಸಿಕವಾಗಿ ಅಸ್ವಸ್ಥವಾಗಿರುವ ಮಕ್ಕಳ ಆರೈಕೆ ಮತ್ತು ಸಂರಕ್ಷಣೆ ಉದ್ದೇಶದಿಂದ ಪ್ರತ್ಯೇಕ ವಸತಿ ನಿಲಯಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಇದಲ್ಲದೆ ಜನನದ ನಂತರ ಲೈಂಗಿಕ ಅಲ್ಪಸಂಖ್ಯಾತರಾಗಿ ಪರಿವರ್ತನೆಯಾಗುವ ಮಕ್ಕಳನ್ನು ಕುಟುಂಬಗಳು ನಿರ್ಲಕ್ಷಿಸುತ್ತಿದ್ದು, ಈ ಕಾರಣದಿಂದ, ಅಂಥ ಮಕ್ಕಳ ಆರೈಕೆಗಾಗಿ ಪ್ರತ್ಯೇಕ ವಸತಿ ನಿಲಯಗಳನ್ನು ಯೋಜನೆ ಅಡಿಯಲ್ಲಿ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳಿಗೆ, ಶಾಲಾ ಶಿಕ್ಷಣ ನೀಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ, ವಿಶೇಷ ಶಿಕ್ಷಕರನ್ನು, ಶುಶ್ರೂಷಕಿಯರನ್ನು ಕಲ್ಪಿಸಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮೂಲಕ ಅವರಿಗೆ ವೃತ್ತಿಪರ ಬದುಕಿಗೆ ಬೇಕಾಗುವ ಕೌಶಲಗಳು, ಬ್ರೈಲ್‌ಲಿಪಿ ಮತ್ತು ಸಂಜ್ಞೆ ಭಾಷೆಗಳನ್ನು ಕಲಿಸುವ ಕುರಿತು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಾರೆ, ಮಕ್ಕಳಿಗೆ ಸಿಗಬೇಕಾದ ಸವಲತ್ತುಗಳನ್ನು ಕಲ್ಪಿಸಿ, ಸರ್ಕಾರ ಪ್ರಜ್ಞಾವಂತ ಸಮಾಜ ನಿರ್ವಹಿಸಬೇಕಾದ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.