ADVERTISEMENT

Bank Jobs: ಸೆಂಟ್ರಲ್ ಬ್ಯಾಂಕಿನಲ್ಲಿ ಒಂದು ಸಾವಿರ ವ್ಯವಸ್ಥಾಪಕರ ಹುದ್ದೆಗಳು

ಆರ್.ಕೆ ಬಾಲಚಂದ್ರ
Published 12 ಜುಲೈ 2023, 23:30 IST
Last Updated 12 ಜುಲೈ 2023, 23:30 IST
   

ದೇಶದ ಪ್ರಮುಖ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೇಶಾದ್ಯಂತ ಒಂದು ಸಾವಿರ ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಅಧಿಸೂಚನೆ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳು ಜುಲೈ 17ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಮಿಡಲ್ ಮ್ಯಾನೇಜ್‌ ಮೆಂಟ್ ಸ್ಟೇಲ್ ll -ಗೆ ಸೇರಿದ ವ್ಯವಸ್ಥಾಪಕರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಂದು ಸಾವಿರ ಹುದ್ದೆಗಳ ಪೈಕಿ ಎಸ್‌ಸಿ ಅಭ್ಯರ್ಥಿಗಳಿಗೆ 150, ಎಸ್‌ಟಿ ವರ್ಗದವರಿಗೆ 75, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 270, ಆರ್ಥಿಕ ದುರ್ಬಲ ವರ್ಗದವರಿಗೆ 100 ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 405 ಹುದ್ದೆಗಳನ್ನು ಮೀಸಲಿಡಲಾಗಿದೆ.

ಅರ್ಹತೆಗಳು: ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಮತ್ತು ಸಿಎಐಐಬಿ (CAIIB) ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಗಮನಿಸಿ; ಉನ್ನತ ಅರ್ಹತೆ ಹೊಂದಿರುವ ಅಭ್ಯರ್ಥಿಗೆ ಆದ್ಯತೆ ನೀಡಲಾಗುವುದು.

ADVERTISEMENT

ಅನುಭವ: ರಾಷ್ಟ್ರೀಕೃತ/ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ/ಗ್ರಾಮೀಣ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಕನಿಷ್ಠ 3 ವರ್ಷಗಳ ಅನುಭವ ಅಥವಾ RRB/ ರಾಷ್ಟ್ರೀಕೃತ/ಖಾಸಗಿ ವಲಯದ ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿ ಕನಿಷ್ಠ 6 ವರ್ಷಗಳ ಅನುಭವ ಮತ್ತು MBA/MCA/ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ರಿಸ್ಕ್ ಮ್ಯಾನೇಜ್‌ಮೆಂಟ್ / ಖಜಾನೆ ನಿರ್ವಹಣೆ/ ವಿದೇಶಿ ವಿನಿಮಯ/ ವ್ಯಾಪಾರ ಹಣಕಾಸು/ CA/ICWA/CMA/CFA/PGDM/ ಭಾರತೀಯ ಬ್ಯಾಂಕಿಂಗ್ ಹಣಕಾಸು ಸಂಸ್ಥೆಯಿಂದ ಡಿಪ್ಲೊಮಾ ಪಡೆದಿರಬೇಕು.

ವಯೋಮಿತಿ: 2023ರ ಮೇ 31ಕ್ಕೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 32 ವರ್ಷ ಮೀರಿರಬಾರದು. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗದಲ್ಲಿ ನಿಯೋಜಿಸಬಹುದು. ಹಾಗಾಗಿ, ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸಿದ್ಧ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಬಾರದು.

ಅರ್ಜಿ ಶುಲ್ಕ: ಎಸ್ ಸಿ/ಎಸ್ ಟಿ/ ವರ್ಗದ ಮಹಿಳಾ ಅಭ್ಯರ್ಥಿಗಳು ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ ₹ 175 ಹಾಗೂ ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ₹850  ಶುಲ್ಕ ನಿಗದಿಪಡಿಸಲಾಗಿದೆ. ಇದರೊಂದಿಗೆ ನಿಗದಿತ ಶೇ 18 ಜಿಎಸ್‌ಟಿ ಪಾವತಿಸಬೇಕು.

ಲಿಖಿತ ದೃಢೀಕರಣ: ಕೈಬರಹದ ಘೋಷಣೆಯ ಪಠ್ಯ ಈ ರೀತಿಯಲ್ಲಿ ಬರೆದು ಅಪ್ಲೋಡ್ ಮಾಡಬೇಕು, (ಅಭ್ಯರ್ಥಿಯ ಹೆಸರು),ಈ ಮೂಲಕ ಅರ್ಜಿಯಲ್ಲಿ ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ.ನಿಜ ಮತ್ತು ಮಾನ್ಯವಾಗಿದೆ ಎಂದು ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಪೂರಕ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ.”

ಮೇಲೆ ತಿಳಿಸಿದ ಲಿಖಿತ ಘೋಷಣೆಯು ಅಭ್ಯರ್ಥಿಯ ಕೈ ಬರಹದಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಬೇಕು. ಕ್ಯಾಪಿಟಲ್ ಲೆಟರ್ಸ್‌ನಲ್ಲಿ ಇರಬಾರದು. ಇದನ್ನು ಬೇರೆಯವರು ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಬರೆದಿದ್ದರೆ, ಅರ್ಜಿಯನ್ನು ಅಮಾನ್ಯವೆಂದು ಪರಿಗಣಿಸಲಾ ಗುತ್ತದೆ. ಕ್ಯಾಪಿಟಲ್ ಲೆಟರಗಳಲ್ಲಿ ಹಾಕಿದ ಸಹಿಯನ್ನು ಸ್ವೀಕರಿಸಲಾಗುವುದಿಲ್ಲ. ಎಡ ಹೆಬ್ಬೆರಳಿನ ಗುರುತು ಸರಿಯಾಗಿ ಸ್ಕ್ಯಾನ್ ಮಾಡಬೇಕು ಮತ್ತು ಮಸುಕಾಗಿರಬಾರದು.

ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹದಲ್ಲಿ ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನ ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.

ನೇಮಕ ಹೇಗಿರುತ್ತದೆ?

ಆನ್‌ಲೈನ್ ಪರೀಕ್ಷೆ ಮತ್ತು ವೈಯಕ್ತಿಕ ಸ೦ದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಬ್ಯಾಂಕಿಂಗ್, (60 ಅಂಕ 60 ಪ್ರಶ್ನೆ) ಕಂಪ್ಯೂಟರ್ ಜ್ಞಾನ ಹಾಗೂ ಪ್ರಸ್ತುತ ಆರ್ಥಿಕ ಕ್ಷೇತ್ರದಲ್ಲಿನ ಬೆಳವಣಿಗೆ & ಸಾಮಾನ್ಯ ಅರಿವು (ತಲಾ 20 ಅಂಕಗಳ 20 ಪ್ರಶ್ನೆಗಳು) ಸಂಬಂಧಿಸಿದಂತೆ 100 ಅಂಕಗಳ 100 ಪ್ರಶ್ನೆಗಳು ಇರುತ್ತವೆ. ಉತ್ತರಿಸಲು 60 ನಿಮಿಷ ಸಮಯವಿರುತ್ತದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಮುಂಬರುವ ಆಗಸ್ಟ್‌ ಎರಡನೇ ಅಥವಾ ಮೂರನೇ ವಾರ ಪರೀಕ್ಷೆ ನಡೆಸುವ ಸಾಧ್ಯತೆ ಇರುತ್ತದೆ.

ನೇಮಕ ವಿಧಾನ: ಆನ್‌ಲೈನ್‌ ಪರೀಕ್ಷೆ ಮತ್ತು ಸಂದರ್ಶನದ ಮೂಲಕ. ಸಂದರ್ಶನದ ನಂತರ ಅಗತ್ಯವಿದ್ದರೆ ಗುಂಪು ಚರ್ಚೆ ನಡೆಸಲಾಗುತ್ತದೆ.

ವೇತನ: ₹48170- ₹ 69810

ಹೆಚ್ಚಿನ‌ಮಾಹಿತಿಗಾಗಿ ಸಂಪರ್ಕ ಕೊಂಡಿ: www.centralbankofindia.co.in

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೊಂಡಿ ಬಳಸಿ: https://ibpsonline.ibps.in/cbimmjun23/

ನೆನಪಿಡಿ

* ಎನ್‌ಬಿಎಫ್‌ಸಿ/ಸಹಕಾರಿಬ್ಯಾಂಕ್‌ಗಳು/ವಿಮಾ ವಲಯ/ಸರಕಾರದ ಹಣಕಾಸು ಸಂಸ್ಥೆಗಳ ರೆಗ್ಯುಲರ್ ಅಥವಾ ಅರೆಕಾಲಿಕ ಅಭ್ಯರ್ಥಿಗಳು ಅರ್ಹರಾಗುವುದಿಲ್ಲ.

* ಕ್ರೆಡಿಟ್, ಫಾರಿನ್ ಎಕ್ಸ್‌ಚೇಂಜ್ ಹಾಗೂ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡಿರುವ ಅಭ್ಯರ್ಥಿಗಳಿಗೆ ನೇಮಕದಲ್ಲಿ ಆದ್ಯತೆ ನೀಡಲಾಗುತ್ತದೆ.

* ಆಯ್ಕೆಯಾದ ಅಭ್ಯರ್ಥಿಗಳು ₹ 3 ಲಕ್ಷದ ಬಾಂಡ್ ಅನ್ನು ಬ್ಯಾಂಕಿಗೆ ಸೇರಿದ ದಿನಾಂಕದಿಂದ
3 ವರ್ಷಗಳ ಅವಧಿಗೆ ನೀಡಬೇಕು.

(ಲೇಖಕರು: ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.