ADVERTISEMENT

ಅಫೀಮು ಉತ್ಪಾದನೆ: ಅಫ್ಗಾನಿಸ್ತಾನವನ್ನು ಹಿಂದಿಕ್ಕಿದ ಮ್ಯಾನ್ಮಾರ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 0:30 IST
Last Updated 11 ಜನವರಿ 2024, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಾದಕ ವಸ್ತುಗಳ ಉತ್ಪಾದನೆ ಹಾಗೂ ಮಾರಾಟವನ್ನು ತಡೆಗಟ್ಟುವುದು ನಾಗರಿಕ ಪ್ರಪಂಚದ ಬಹುದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಕಾನೂನಿನ ಅಂಕೆಯಿಂದಲೂ ನುಸುಳಿ ಹೋಗುವ ಈ ‘ಅಮಲಿನ ಜಗತ್ತು’ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿದೆ. ಮಾದಕವಸ್ತುಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಫೀಮಿನ ಉತ್ಪಾದನೆ ಹಾಗೂ ಜಾಗತಿಕ ಮಟ್ಟದಲ್ಲಿ ಅದರ ಹಂಚಿಕೆ ಕುರಿತ ಕುತೂಹಲಕಾರಿ ಅಂಶಗಳು ಹೀಗಿವೆ.

2023ರಲ್ಲಿ ಮ್ಯಾನ್ಮಾರ್ ವಿಶ್ವದ ಪ್ರಮುಖ ಅಫೀಮು ಉತ್ಪಾದಕ ದೇಶ ಎನಿಸಿಕೊಂಡಿದೆ. ಈವರೆಗೆ ಅಫ್ಗಾನಿಸ್ತಾನವೇ ದೊಡ್ಡ ಪ್ರಮಾಣದಲ್ಲಿ ಅಫೀಮು ಉತ್ಪಾದನೆ ಮಾಡುತ್ತಿತ್ತು. ಆದರೆ ಮೊದಲ ಬಾರಿಗೆ ಮ್ಯಾನ್ಮಾರ್‌ ಅಫ್ಗಾನಿಸ್ತಾನವನ್ನು ಹಿಂದಿಕ್ಕಿದೆ. 

ADVERTISEMENT

ಯುನೈಟೆಡ್ ನೇಷನ್ಸ್ ಆಫೀಸ್‌ ಆನ್‌ ಡ್ರಗ್ಸ್ ಅಂಡ್ ಕ್ರೈಮ್ (UNODC) ಕಚೇರಿಯ ವರದಿಯನ್ವಯ, ತಾಲಿಬಾನ್‌ ಅಫ್ಗಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ 2022ರಲ್ಲಿ ಇಸ್ಲಾಮಿಕ್‌ ತತ್ವಗಳಿಗೆ ಅನುಗುಣವಾಗಿ ಮಾದಕವಸ್ತು ಉತ್ಪಾದನೆಗೆ ನಿಷೇಧ ಹೇರಿತ್ತು. ಅದರ ಪರಿಣಾಮ ಈ ಭಾಗದಲ್ಲಿ ಶೇ 95ರಷ್ಟು ಅಫೀಮು ಉತ್ಪಾದನೆ ಕುಸಿತಗೊಂಡಿದೆ. 

 2021ರಲ್ಲಿ ಮ್ಯಾನ್ಮಾರ್‌ನಲ್ಲಿ ಉಂಟಾದ ದಂಗೆಯಿಂದ ಆಂತರಿಕ ಕ್ಷೋಭೆ ಹೆಚ್ಚಾಯಿತು. ಜನರು ಜೀವನೋಪಾಯಕ್ಕಾಗಿ ಅಫೀಮಿಗೆ ಬಳಸಲಾಗುವ ಗಸಗಸೆಯ ಕೃಷಿಯತ್ತ ಮುಖ ಮಾಡಿದ್ದರು. ಇದರಿಂದ ರೈತರ ಆದಾಯದಲ್ಲಿ ಗಣನೀಯ ಏರಿಕೆ ಕಂಡಿತ್ತು. ಶೇ 75ಕ್ಕೂ ಹೆಚ್ಚಿನ ಲಾಭ ತಂದುಕೊಟ್ಟಿತ್ತು. 

ಪ್ರತಿ ಕಿಲೋಗ್ರಾಂ ಅಫೀಮಿಗೆ ಬಳಸಲಾಗುವ ಗಸಗಸೆಗಳ ಸರಾಸರಿ ಬೆಲೆ 355 ಡಾಲರ್‌ಗಳಷ್ಟು ಏರಿಕೆಯಾಗಿದ್ದು,  ಕೃಷಿ ಪ್ರದೇಶವು ಶೇ18ರಷ್ಟು ವಿಸ್ತರಣೆಗೊಂಡಿದೆ. ಅಂದರೆ 47,000 ಹೆಕ್ಟೇರ್‌ ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತಿದೆ. 2001ರಿಂದ ಈವರೆಗೆ ಬೆಳೆಯುವ ಪ್ರಮಾಣ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. 

UNODC ಪ್ರಾದೇಶಿಕ ಪ್ರತಿನಿಧಿ ಜೆರೆಮಿ ಡಗ್ಲಾಸ್ ಅವರ ಪ್ರಕಾರ, ಮಿಲಿಟರಿ ಸ್ವಾಧೀನದ ಪರಿಣಾಮವಾಗಿ ಮ್ಯಾನ್ಮಾರ್‌ನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ರೈತರು ಅಫೀಮು ಕೃಷಿಯತ್ತ ಹೆಚ್ಚು ವಾಲಿದ್ದಾರೆ. ಮ್ಯಾನ್ಮಾರ್‌ನ ಗಡಿ ಪ್ರದೇಶಗಳಲ್ಲಿ, ವಿಶೇಷವಾಗಿ ಉತ್ತರ ರಾಜ್ಯಗಳಾದ ಶಾನ್ , ಚಿನ್ ಮತ್ತು ಕಚಿನ್ ರಾಜ್ಯಗಳಲ್ಲಿ ಕಾಣಬಹುದು. ಅತ್ಯಾಧುನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿ ಈ ಪ್ರಾಂತ್ಯದ ಕೃಷಿಕರು ಗಸಗಸೆ ಇಳುವರಿಯಲ್ಲಿ ಶೇ16ರಷ್ಟು ಹೆಚ್ಚಳ ಕಂಡಿದ್ದಾರೆ. 

ಮ್ಯಾನ್ಮಾರ್ ಮಿಲಿಟರಿ ಮತ್ತು ಸಶಸ್ತ್ರ ಜನಾಂಗೀಯ-ಅಲ್ಪಸಂಖ್ಯಾತ ಗುಂಪುಗಳ ನಡುವೆ ನಡೆಯುತ್ತಿರುವ ಸಂಘರ್ಷದ ಕಾರಣದಿಂದಾಗಿ ಅಫೀಮಿನ ಕೃಷಿ ಹೆಚ್ಚಳಗೊಳ್ಳುವ ಸಾಧ್ಯತೆಯಿದ್ದು, ಇದು ಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಪ್ರಯತ್ನಗಳಿಗೆ ಗಂಭೀರ ಸವಾಲುಗಳನ್ನು ಒಡ್ಡುತ್ತದೆ ಎಂದು ಡಗ್ಲಾಸ್ ಎಚ್ಚರಿಸಿದ್ದಾರೆ.

ಅಫೀಮು:

ಅಫೀಮು ಎಂಬುವುದು ಗಸಗಸೆ ಸಸ್ಯದಿಂದ ಪಡೆಯಲಾಗುವ ಒಂದು ಪ್ರಬಲ ಮಾದಕವಸ್ತು.  ಇದನ್ನು ವೈಜ್ಞಾನಿಕವಾಗಿ ಪಾಪವರ್ ಸೋಮ್ನಿಫೆರಮ್ ಎಂದು ಕರೆಯಲಾಗುತ್ತದೆ.

ಗಸಗಸೆ ಕಾಳುಗಳನ್ನು ಅದರ ಲ್ಯಾಟೆಕ್ಸ್‌ಗಾಗಿ(ರಬ್ಬರ್‌ನಿಂದ ಬರುವ ಹಾಲಿನ ರೀತಿ) ಬೆಳೆಸಲಾಗುತ್ತದೆ. ಇದು ಮಾರ್ಫಿನ್ ಮತ್ತು ಕೊಡೈನ್ ಸೇರಿದಂತೆ ಹಲವಾರು ಆಲ್ಕಲಾಯ್ಡ್‌ಗಳನ್ನು ಹೊಂದಿರುತ್ತದೆ. ಈ ಆಲ್ಕಲಾಯ್ಡ್‌ಗಳು ನೋವುನಿವಾರಕ ಮತ್ತು ನಿದ್ರಾಜನಕ ಗುಣಲಕ್ಷಣಗಳನ್ನು ಹೊಂದಿವೆ. ವಿವಿಧ ಒಪಿಯಾಡ್ ಔಷಧಿಗಳ (ಒಪಿಯಾಡ್‌ಗಳು ಎಂದರೆ ಅಫೀಮು ಗಸಗಸೆ ಸಸ್ಯದಲ್ಲಿ ಕಂಡುಬರುವ ನೈಸರ್ಗಿಕ ಪದಾರ್ಥಗಳಿಂದ ಪಡೆಯುವ ಔಷಧಿಗಳ ಒಂದು ವರ್ಗ) ಉತ್ಪಾದನೆಯಲ್ಲಿ ಅಫೀಮು ಅತ್ಯವಶ್ಯಕ ವಸ್ತುವಾಗಿದೆ.

ಆದರೆ ಅಫೀಮು ಕುಖ್ಯಾತವಾಗಿರುವುದು ಅದರ ದುರುಪಯೋಗಕ್ಕಾಗಿ ಮತ್ತು ವ್ಯಸನಕಾರಿ ಅಂಶಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಗಳಿಂದಾಗಿ. ಹೆರಾಯಿನ್‌ನಂಥ ಕಾನೂನುಬಾಹಿರವಾಗಿ ಉತ್ಪಾದಿಸಲಾಗುವ ಒಪಿಯಾಡ್‌ಗಳನ್ನು ಕೂಡಾ ಅಫೀಮಿನಿಂದಲೇ ಪಡೆಯಲಾಗುತ್ತದೆ.

ಗೋಲ್ಡನ್ ಟ್ರಯಾಂಗಲ್

ಗೋಲ್ಡನ್ ಟ್ರಯಾಂಗಲ್ ಆಗ್ನೇಯ ಏಷ್ಯಾದ ಒಂದು ಪ್ರದೇಶವಾಗಿದ್ದು, ಅಕ್ರಮ ಮಾದಕವಸ್ತು ಉತ್ಪಾದನೆಯ(ವಿಶೇಷವಾಗಿ ಅಫೀಮು)  ಪ್ರಮುಖ ಕೇಂದ್ರವಾಗಿದೆ. ಈ ಪ್ರದೇಶವು ಮ್ಯಾನ್ಮಾರ್ (ಬರ್ಮಾ), ಲಾವೋಸ್ ಮತ್ತು ಥಾಯ್ಲೆಂಡ್‌ಗೂ ಸೇರಿದೆ. ಚಾರಿತ್ರಿಕವಾಗಿಯೂ ಈ ದೇಶಗಳು ಅಫೀಮು ಗಸಗಸೆಗಳ ಪ್ರಮುಖ ಉತ್ಪಾದಕ ದೇಶಗಳಾಗಿದ್ದು, ಗೋಲ್ಡನ್ ಟ್ರಯಾಂಗಲ್ ಪ್ರಪಂಚದ ಹೆರಾಯಿನ್ ಪೂರೈಕೆಯ ಪ್ರಮುಖ ಮೂಲವಾಗಿದೆ.

‘ಗೋಲ್ಡನ್ ಟ್ರಯಾಂಗಲ್’ ಪದವು 20ನೇ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿಕೊಂಡಿದ್ದು ಈ ಪ್ರದೇಶವು ಅಫೀಮು ಕೃಷಿ ಮತ್ತು ಹೆರಾಯಿನ್ ಉತ್ಪಾದನೆಯ ಪ್ರಮುಖ ಕೇಂದ್ರವಾಗಿತ್ತು. ಕಾನೂನು ಜಾರಿಯಿಂದಾಗಿ ಈ ಪ್ರದೇಶದಲ್ಲಿ ಇವುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಪ್ರಯತ್ನಗಳು ನಡೆದಿವೆ. ಆದರೂ ರಾಜಕೀಯ ಅಸ್ಥಿರತೆ, ಜನಾಂಗೀಯ ಸಂಘರ್ಷ ಮತ್ತು ಬಡತನದಿಂದಾಗಿ ಮಾದಕ ವಸ್ತುಗಳ ಉತ್ಪಾದನೆ ಹಾಗೂ ಸಾಗಣೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. 

ಗೋಲ್ಡನ್ ಕ್ರೆಸೆಂಟ್

ಗೋಲ್ಡನ್ ಕ್ರೆಸೆಂಟ್ ಅಫೀಮು ಮತ್ತು ಹೆರಾಯಿನ್ ಅಕ್ರಮ ಉತ್ಪಾದನೆಗೆ ಸಂಬಂಧಿಸಿದ ಮತ್ತೊಂದು ಪ್ರದೇಶವಾಗಿದೆ. ಆಗ್ನೇಯ ಏಷ್ಯಾದಲ್ಲಿ ನೆಲೆಗೊಂಡಿರುವ ಗೋಲ್ಡನ್ ಟ್ರಯಾಂಗಲ್‌ಗೆ ವ್ಯತಿರಿಕ್ತವಾಗಿ ಗೋಲ್ಡನ್ ಕ್ರೆಸೆಂಟ್ ದಕ್ಷಿಣ ಏಷ್ಯಾದಲ್ಲಿದೆ. ಇದು ಅಫ್ಗಾನಿಸ್ತಾನ, ಇರಾನ್ ಮತ್ತು ಪಾಕಿಸ್ತಾನಕ್ಕೆ ಸಂಬಂಧಪಟ್ಟ ಪ್ರದೇಶವಾಗಿದೆ. ಅಫೀಮು ಗಸಗಸೆ ಕೃಷಿಯು ಹೆರಾಯಿನ್ ಉತ್ಪಾದನೆಗೆ ಪ್ರಮುಖ ಮೂಲವಾಗಿದೆ.

ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಮ್ (UNODC)

ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಮ್ (ಯುಎನ್‌ಒಡಿಸಿ) ಯುನೈಟೆಡ್ ನೇಷನ್ಸ್‌ನಡಿ ಬರುವ ವಿಶೇಷ ಸಂಸ್ಥೆಯಾಗಿದೆ. ಇದು ಡ್ರಗ್ಸ್‌, ಅಪರಾಧ, ಭ್ರಷ್ಟಾಚಾರ, ಭಯೋತ್ಪಾದನೆಗೆ ಸಂಬಂಧಿಸಿದ ಸಮಸ್ಯೆಗಳನ್ನು  ಪರಿಹರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. 

 1997ರಲ್ಲಿ ಯುನೈಟೆಡ್ ನೇಷನ್ಸ್ ಡ್ರಗ್ ಕಂಟ್ರೋಲ್ ಪ್ರೋಗ್ರಾಂ (UNDCP) ಮತ್ತು ಯುನೈಟೆಡ್ ನೇಷನ್ಸ್ ಸೆಂಟರ್ ಫಾರ್ ಇಂಟರ್‌ನ್ಯಾಷನಲ್‌ ಕ್ರೈಮ್ ಪ್ರಿವೆನ್ಶನ್ ವಿಲೀನದ ಮೂಲಕ ಸ್ಥಾಪಿತಗೊಂಡಿತು. 

ಇದರ ಪ್ರಧಾನ ಕಚೇರಿ ವಿಯೆನ್ನಾದಲ್ಲಿದೆ.  20 ಪ್ರಾದೇಶಿಕ ಕಚೇರಿಗಳನ್ನು ಒಳಗೊಡಿದೆ. ನ್ಯೂಯಾರ್ಕ್‌ ಮತ್ತು ಬ್ರಸೆಲ್ಸ್‌ನಲ್ಲಿ ಇದರ ಸಂಪರ್ಕ ಕಚೇರಿಗಳು ಇವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.